ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಫೆಬ್ರವರಿ 8ರಂದು ರೆಪೋ ದರವನ್ನು ಏರಿಸಿದೆ. ಇದಾದ ಬೆನ್ನಲ್ಲೇ ಹಲವಾರು ಸಂಸ್ಥೆಗಳು ಸಾಲದ ಬಡ್ಡಿದರ ಮತ್ತು ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡಲು ಆರಂಭಿಸಿದೆ. ಈಗಾಗಲೇ ಐಸಿಐಸಿಐ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರ ಏರಿಸಿದೆ.
ಈ ನಡುವೆ ಆಕ್ಸಿಸ್ ಬ್ಯಾಂಕ್ ಕೂಡಾ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ತನ್ನ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಆಕ್ಸಿಸ್ ಬ್ಯಾಂಕ್ ಹೆಚ್ಚಿಸಿದೆ. ಈ ನೂತನ ದರವು ಫೆಬ್ರವರಿ 11, 2023ರಿಂದ ಜಾರಿಗೆ ಬರಲಿದೆ ಎಂದು ಕೂಡಾ ಆಕ್ಸಿಸ್ ಬ್ಯಾಂಕ್ ಮಾಹಿತಿ ನೀಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸತತ ಆರನೇ ಬಾರಿ ರೆಪೋ ದರವನ್ನು ಹೆಚ್ಚಿಸಿದೆ. ಸತತ ಹತ್ತು ತಿಂಗಳ ಕಾಲ ಅಂದರೆ 2022ರ ಏಪ್ರಿಲ್‌ವರೆಗೆ ರೆಪೋದರವನ್ನು ಸ್ಥಿರವಾಗಿರಿಸಿದ್ದ ಆರ್‌ಬಿಐ ಹಣದುಬ್ಬರವನ್ನು ಹತೋಟಿಗೆ ತರುವ ಪ್ರಯತ್ನದಲ್ಲಿ ರೆಪೋದರವನ್ನು ಆರು ಬಾರಿ ಏರಿಸಿದೆ. ಮೇ ತಿಂಗಳಿನಲ್ಲಿ 40 ಮೂಲಾಂಕ ಏರಿಸಲಾಗಿದೆ.

ಅದಾದ ಬಳಿಕ ಜೂನ್‌ನಲ್ಲಿ ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಅದಾದ ಬಳಿಕ ಡಿಸೆಂಬರ್‌ನಲ್ಲಿ 35 ಮೂಲಾಂಕ ಹೆಚ್ಚಿಸಲಾಗಿದೆ. ಈಗ 25 ಮೂಲಾಂಕ ಏರಿಸಲಾಗಿದೆ. ಆಕ್ಸಿಸ್ ಬ್ಯಾಂಕ್‌ನ ನೂತನ ಎಫ್‌ಡಿ ಬಡ್ಡಿದರ ತಿಳಿಯಲು ಮುಂದೆ ಓದಿ...
ಆಕ್ಸಿಸ್ ಬ್ಯಾಂಕ್‌ನ ನೂತನ ಬಡ್ಡಿದರ
ಆಕ್ಸಿಸ್ ಬ್ಯಾಂಕ್‌ನಲ್ಲಿ ಎಫ್‌ಡಿ ಬಡ್ಡಿದರವನ್ನು ಏರಿಕೆ ಮಾಡಿದ ಬಳಿಕ, 7 ದಿನದಿಂದ 10 ವರ್ಷದ ಡೆಪಾಸಿಟ್ ಮೇಲೆ ಶೇಕಡ 3.50ರಿಂದ ಶೇಕಡ 7.00ರಷ್ಟು ಬಡ್ಡಿದರ ಸಾಮಾನ್ಯ ನಾಗರಿಕರಿಗೆ ಲಭ್ಯವಾಗಲಿದೆ. ಹಿರಿಯ ನಾಗರಿಕರಿಗೆ ಶೇಕಡ 6.00ರಿಂದ ಶೇಕಡ 7.75ರಷ್ಟು ಬಡ್ಡಿದರ ಲಭ್ಯವಾಗಲಿದೆ. ಇನ್ನು 2 ವರ್ಷದಿಂದ 30 ತಿಂಗಳ ಎಫ್‌ಡಿ ಮೇಲೆ ಶೇಕಡ 8.01ರಷ್ಟು ಹಿರಿಯ ನಾಗರಿಕರಿಗೆ, ಶೇಕಡ 7.26ರಷ್ಟು ಬಡ್ಡಿದರ ಲಭ್ಯವಾಗಲಿದೆ.
ಬ್ಯಾಂಕ್ ಪ್ರಸ್ತುತ 7ರಿಂದ 45 ದಿನಗಳ ಎಫ್‌ಡಿ ಮೇಲೆ ಶೇಕಡ 3.50ರಷ್ಟು ಬಡ್ಡಿದರ ನೀಡುತ್ತದೆ. 46 ದಿನದಿಂದ 60 ದಿನಗಳ ಎಫ್‌ಡಿ ಮೇಲೆ ಶೇಕಡ 4.00ರಷ್ಟು ಬಡ್ಡಿದರ ಲಭ್ಯವಾಗಲಿದೆ. 61 ದಿನಗಳಿಂದ 3 ತಿಂಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 4.50ರಷ್ಟು ಬಡ್ಡಿದರ ಲಭ್ಯವಾಗಲಿದೆ. 3 ತಿಂಗಳಿನಿಂದ 6 ತಿಂಗಳ ಎಫ್‌ಡಿ ಮೇಲೆ ಶೇಕಡ 4.75ರಷ್ಟು ಬಡ್ಡಿದರ ಲಭ್ಯವಾಗಲಿದೆ.
ಆಕ್ಸಿಸ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ 6ರಿಂದ 9 ತಿಂಗಳ ಎಫ್‌ಡಿ ಮೇಲೆ ಶೇಕಡ 5.75ರಷ್ಟು ಬಡ್ಡಿದರ ನೀಡಲಿದೆ. 9ರಿಂದ 12 ತಿಂಗಳ ಎಫ್‌ಡಿ ಮೇಲೆ ಶೇಕಡ 6.00ರಷ್ಟು ಬಡ್ಡಿದರ ಸಿಗಲಿದೆ. 1 ವರ್ಷದಿಂದ 1 ವರ್ಷ 24 ದಿನಗಳ ಎಫ್‌ಡಿ ಮೇಲೆ ಶೇಕಡ 6.75ರಷ್ಟು ಬಡ್ಡಿದರ ಸಿಗಲಿದೆ. 1 ವರ್ಷ 25 ದಿನದಿಂದ 13 ತಿಂಗಳ ಎಫ್‌ಡಿ ಮೇಲೆ ಶೇಕಡ 7.10ರಷ್ಟು ಬಡ್ಡಿದರವನ್ನು ಆಕ್ಸಿಸ್ ಬ್ಯಾಂಕ್ ನೀಡುತ್ತದೆ.


Click it and Unblock the Notifications