ಬಜಾಜ್ ಫೈನಾನ್ಸ್ ಸಂಸ್ಥೆ ತನ್ನ ಚಿನ್ನದ ಮೇಲಿನ ಸಾಲಕ್ಕೆ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಇದೀಗ ಅದು ನೀಡುವ ಸಾಲಗಳು ವಾರ್ಷಿಕ ಶೇ. 9.50 ಬಡ್ಡಿ ದರದಿಂದ ಆರಂಭವಾಗುತ್ತವೆ.
ಚಿನ್ನದ ಮಾರುಕಟ್ಟೆ ದರದ ಆಧಾರದ ಮೇಲೆ ನೀವು ಇಡುವ ಒಡವೆಗೆ ನಿರ್ದಿಷ್ಟ ಮೊತ್ತದ ಸಾಲವನ್ನು ನೀಡಲಾಗುತ್ತದೆ. ಗೃಹ ಸಾಲ, ವೈಯಕ್ತಿಕ ಸಾಲಗಳಿಗಿಂತ ಗೋಲ್ಡ್ ಲೋನ್‌ಗೆ ಬಡ್ಡಿ ದರ ಕಡಿಮೆ ಇರುತ್ತದೆ. ಚಿನ್ನ ಮೈಮೇಲಿನ ಆಭರಣಕ್ಕೆ ಚಂದ, ಹಾಗೆಯೇ ನಮ್ಮ ಹಣಕಾಸಿನ ಆಪದ್ಬಾಂಧವ ಕೂಡ ಹೌದು. ಕಷ್ಟ ಬಂದಾಗ ಚಿನ್ನ ಅಡ ಇಟ್ಟು ಹಣ ಪಡೆಯಬಹುದು. ಚಿನ್ನದ ಮೇಲಿನ ಸಾಲಕ್ಕೆ ಬಡ್ಡಿಯೂ ಕಡಿಮೆಯೇ, ಮನೆ ಪತ್ರ, ಸಂಬಳದ ಸ್ಟೇಟ್ಮೆಂಟ್ ಇತ್ಯಾದಿ ಯಾವ ರಗಳೆಯೂ ಇಲ್ಲದಂತೆ ಕೆಲವೇ ನಿಮಿಷಗಳಲ್ಲಿ ಸರಾಗವಾಗಿ ಸಾಲ ಪ್ರಾಪ್ತಿಯಾಗುತ್ತದೆ.
ಬ್ಯಾಂಕ್‌ಗಳಲ್ಲಿ ಸಾಮಾನ್ಯವಾಗಿ ಕೆಲವೇ ಲಕ್ಷಗಳವರೆಗೆ ಮಾತ್ರ ಚಿನ್ನದ ಮೇಲೆ ಸಾಲಗಳನ್ನು ಪಡೆಯಬಹುದು. ಆದರೆ, ಬಜಾಜ್ ಫೈನಾನ್ಸ್ ಸಂಸ್ಥೆಯಲ್ಲಿ ನೀವು ಅಗತ್ಯ ಪ್ರಮಾಣದ ಚಿನ್ನವನ್ನು ಒತ್ತೆ ಇಟ್ಟು 2 ಕೋಟಿ ರೂಪಾಯಿಯವರೆಗೂ ಸಾಲ ಪಡೆಯಬಹುದು.

ಸಂಸ್ಥೆ ಹೇಳಿಕೊಂಡಿರುವ ಪ್ರಕಾರ, ನೀವು ಒಂದು ವರ್ಷದ ಅವಧಿಯಲ್ಲಿ ನಿರ್ದಿಷ್ಟ ಮೊತ್ತದ ಸಾಲ ತೀರಿ ನಿರ್ದಿಷ್ಟ ಪ್ರಮಾಣದ ಒಡವೆಯನ್ನು ಬಿಡಿಸಿಕೊಳ್ಳುವ ಅವಕಾಶ ಇರುತ್ತದೆ. ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಹೇಳಲಾಗಿದೆ.
ಬಜಾಜ್ ಫೈನಾನ್ಸ್‌ನಲ್ಲಿ ಜಿವೆಲರಿ ಲೋನ್ ತೆಗೆದುಕೊಳ್ಳುವವರು ಕನಿಷ್ಠ 21 ವರ್ಷ ವಯಸ್ಸು ದಾಟಿರಬೇಕು. 70 ವರ್ಷ ವಯೋಮಿತಿಯೂ ಇದೆ. ಚಿನ್ನ ಕನಿಷ್ಠ 22 ಕ್ಯಾರಟ್‌ನಷ್ಟಾದರೂ ಶುದ್ಧವಾಗಿರಬೇಕು.
ಬಜಾಜ್ ಫೈನ್‌ಸರ್ವ್‌ನ ಸಾಲಕ್ಕಾಗಿ ಆನ್‌ಲೈನ್‌ನಲ್ಲೂ ಅರ್ಜಿ ಹಾಕಬಹುದು. ವೆಬ್‌ಸೈಟ್‌ನಲ್ಲಿ ಇರುವ ಫಾರ್ಮ್ ಅನ್ನು ಭರ್ತಿ ಮಾಡಿ ಅಪ್‌ಡೇಟ್ ಮಾಡಿದಾಗ ಕಂಪನಿಯ ಪ್ರತಿನಿಧಿಯೊಬ್ಬರು ನಿಮ್ಮನ್ನು ಸಂಪರ್ಕಿಸಿ ಮುಂದಿನ ಕ್ರಮಗಳನ್ನು ಸೂಚಿಸುತ್ತಾರೆ.

ಅಥವಾ ಈ ಹಣಕಾಸು ಸಂಸ್ಥೆಯ ಯಾವುದಾದರೂ ಶಾಖೆಗೆ ಹೋಗಿ ಅಲ್ಲಿ ಸಾಲಕ್ಕೆ ಅರ್ಜಿ ಪಡೆದು ತುಂಬಿಸಬಹುದು. ಭಾರತದಾದ್ಯಂತ ಬಜಾಜ್ ಫೈನಾನ್ಸ್‌ನ 300ಕ್ಕೂ ಹೆಚ್ಚು ಶಾಖೆಗಳಿವೆ.


Click it and Unblock the Notifications