ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ ಸಾಲದ ಬಡ್ಡಿದರವನ್ನು ಏರಿಸುವುದಾಗಿ ಘೋಷಣೆ ಮಾಡಿದೆ. ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಆಧಾರದಲ್ಲಿ ಬ್ಯಾಂಕ್ ಆಫ್ ಬರೋಡಾ ತನ್ನ ಬಡ್ಡಿದರವನ್ನು ಹೆಚ್ಚಿಸಿದೆ. ಇತ್ತೀಚೆಗೆ ಫೆಬ್ರವರಿ 8ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಸಿದೆ. ಇದಾದ ಬಳಿಕ ಹಲವಾರು ಬ್ಯಾಂಕ್‌ಗಳು ಬಡ್ಡಿದರ ಏರಿಸುತ್ತಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು 25 ಮೂಲಾಂಕ ಹೆಚ್ಚಿಸಿದೆ, ಪ್ರಸ್ತುತ ರೆಪೋ ದರ ಶೇಕಡ 6.50 ಆಗಿದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೊಸ ಬಡ್ಡಿದರವನ್ನು ಉಲ್ಲೇಖಿಸಿದೆ. ಈ ಹೊಸ ಬಡ್ಡಿದರವು ಫೆಬ್ರವರಿ 12, 2023ರಿಂದ ಜಾರಿಗೆ ಬರಲಿದೆ ಎಂದು ಕೂಡಾ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಎಲ್ಲ ಅವಧಿಯ ಸಾಲದ ಬಡ್ಡಿದರವನ್ನು ಅಂದರೆ ಎಂಸಿಎಲ್‌ಆರ್ ಅನ್ನು 5 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಬ್ಯಾಂಕ್‌ನ ಓವರ್‌ನೈಟ್ ಎಂಸಿಎಲ್‌ಆರ್ ಶೇಕಡ 7.85ರಿಂದ ಶೇಕಡ 7.90ಕ್ಕೆ ಏರಿಸಲಾಗಿದೆ. ಈ ನಡುವೆ ಒಂದು ತಿಂಗಳ ಎಂಸಿಎಲ್‌ಆರ್ ಶೇಕಡ 8.15ರಿಂದ ಶೇಕಡ 8.20ಕ್ಕೆ ಏರಿಕೆಯಾಗಿದೆ.

ಇನ್ನು ಆರು ತಿಂಗಳ ಎಂಸಿಎಲ್‌ಆರ್ ಅಥವಾ ಸಾಲದ ಬಡ್ಡಿದರವು ಶೇಕಡ 8.40ರಿಂದ ಶೇಕಡ 8.55ಕ್ಕೆ ತಲುಪಿದೆ. ಇನ್ನು ಮೂರು ತಿಂಗಳ ಎಂಸಿಎಲ್‌ಆರ್ ಶೇಕಡ 8.25ರಿಂದ ಶೇಕಡ 8.30ಕ್ಕೆ ತಲುಪಿದೆ. ಒಂದು ವರ್ಷದ ಎಂಸಿಎಲ್‌ಆರ್ ಶೇಕಡ 8.55ಕ್ಕೆ ಏರಿಸಲಾಗಿದೆ.
ಇಎಂಐ ಮೇಲೆ ಪ್ರಭಾವ
ಎಂಸಿಎಲ್‌ಆರ್ ಏರಿಕೆ ಮಾಡುವುದರಿಂದಾಗಿ ಕಾರ್ಪೋರೇಟ್ ಸಾಲದಾತರು ಸೇರಿದಂತೆ ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ಎಸ್‌ಎಂಇಗೆ ನೀಡುವ ಸಾಲದ ಮೇಲೆ ಪ್ರಭಾವ ಉಂಟಾಗಲಿದೆ. ಇನ್ನು ಈ ಸಾಲದ ಬಡ್ಡಿದರ ಏರಿಕೆಯ ಪ್ರಭಾವ ಸಾಲ ಪಡೆದವರ ಮಾಸಿಕ ಇಎಂಐ ಮೇಲೆ ಪರಿಣಾಮ ಬೀರಲಿದೆ. ಪ್ರತಿ ತಿಂಗಳ ಇಎಂಐ ಏರಿಕೆಯಾಗಲಿದೆ. ಈ ಹಿಂದೆಯೂ ಹಲವಾರು ಬಾರಿ ಬ್ಯಾಂಕ್ ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ.
ಈ ಹಿಂದೆ ಒಟ್ಟು ಆರು ಬಾರಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಏರಿಸಿದೆ. ಸತತ ಹತ್ತು ತಿಂಗಳ ಕಾಲ ಅಂದರೆ 2022ರ ಏಪ್ರಿಲ್‌ವರೆಗೆ ರೆಪೋದರವನ್ನು ಸ್ಥಿರವಾಗಿರಿಸಿದ್ದ ಆರ್‌ಬಿಐ ಹಣದುಬ್ಬರವನ್ನು ಹತೋಟಿಗೆ ತರುವ ಪ್ರಯತ್ನದಲ್ಲಿ ರೆಪೋದರವನ್ನು ಆರು ಬಾರಿ ಏರಿಸಿದೆ. ಮೇ ತಿಂಗಳಿನಲ್ಲಿ 40 ಮೂಲಾಂಕ ಏರಿಸಲಾಗಿದ್ದು, ಅದಾದ ಬಳಿಕ ಜೂನ್‌ನಲ್ಲಿ ಆರ್‌ಬಿಐ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಅದಾದ ಬಳಿಕ ಡಿಸೆಂಬರ್‌ನಲ್ಲಿ 35 ಮೂಲಾಂಕ ಹೆಚ್ಚಿಸಲಾಗಿದೆ. ಈಗ 25 ಮೂಲಾಂಕ ಏರಿಸಲಾಗಿದೆ.


Click it and Unblock the Notifications