ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ತಾನು ನೀಡುವ ಗೃಹ ಸಾಲಗಳ ಮೇಲಿನ ಬಡ್ಡಿಯನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಗೊಳಿಸಿದೆ. ಇದೀಗ ಬಿಒಬಿಯ ಗೃಹ ಸಾಲದ ಬಡ್ಡಿ ಶೇ. 8.25ಕ್ಕೆ ಇಳಿದಂತಾಗಿದೆ. ಜೊತೆಗೆ ಗೃಹ ಸಾಲ ನೀಡಲು ನಿಗದಿಯಾಗಿರುವ ಪ್ರೋಸಸಿಂಗ್ ಶುಲ್ಕವನ್ನು ಮನ್ನಾ ಮಾಡಿದೆ. ಆದರೆ ಈ ಆಫರ್ ಇರುವುದು ಸೀಮಿತ ಅವಧಿಗೆ ಮಾತ್ರ. ಇನ್ನು, ಬ್ಯಾಂಕ್ ಆಪ್ ಬರೋಡಾದ ಗೃಹ ಸಾಲದ ಬಡ್ಡಿ ದರ ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಕಡಿಮೆ ಇದೆ.
ಎಸ್‌ಬಿಐ, ಎಚ್‌ಡಿಎಫ್‌ಸಿ ಮೊದಲಾದ ಇತರ ಬ್ಯಾಂಕುಗಳು ನೀಡುವ ಗೃಹ ಸಾಲಕ್ಕೆ ಶೇ. 8.40 ಬಡ್ಡಿ ದರ ಇದೆ. ಬ್ಯಾಂಕ್ ಆಫ್ ಬರೋಡಾ ತಾನು ಬಡ್ಡಿ ದರ ಇಳಿಸಿರುವುದನ್ನು ಶುಕ್ರವಾರ ಪ್ರಕಟಿಸಿದೆ. ನಾಳೆ ಸೋಮವಾರದಿಂದ ಹೊಸ ದರ ಅನುಷ್ಠಾನಕ್ಕೆ ಬರಲಿದ್ದು, ಡಿಸೆಂಬರ್ ಅಂತ್ಯದವರೆಗೂ ಈ ಆಫರ್ ಇದೆ.
"ಹೋಮ್ ಲೋನ್ ಇಂಟರೆಸ್ಟ್ ರೇಟ್ ನಮ್ಮ ಉದ್ಯಮದಲ್ಲೇ ಅತ್ಯಂತ ಕಡಿಮೆಯದ್ದಾಗಿದೆ. ಬಡ್ಡಿದರದಲ್ಲಿ 25 ಬೇಸಿಕ್ ಪಾಯಿಂಟ್ಸ್ ಕಡಿಮೆ ಮಾಡಿರುವುದರ ಜೊತೆಗೆ ಪ್ರೋಸೆಸಿಂಗ್ ಶುಲ್ಕವನ್ನು ಸಂಪೂರ್ಣವಾಗಿ ತೆಗೆದಿದ್ದೇವೆ" ಎಂದು ಬ್ಯಾಂಕ್ ಆಫ್ ಬರೋಡಾದ ಜನರಲ್ ಮ್ಯಾನೇಜರ್ ಎಚ್ ಡಿ ಸೋಲಂಕಿ ಹೇಳಿದ್ದಾರೆ.

"ಈ ವರ್ಷ ಹೋಮ್ ಲೋನ್‌ಗಳಲ್ಲಿ ಬಹಳ ಬೆಳವಣಿಗೆ ಕಾಣುತ್ತಿದ್ದೇವೆ. ಹಲವು ನಗರಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಗ್ರಾಹಕರ ಆತ್ಮವಿಶ್ವಾಸ ಹೆಚ್ಚಿದ್ದು, ಪರಿಣಾಮವಾಗಿ ಗೃಹ ಮಾರಾಟ ಹೆಚ್ಚಾಗುತ್ತಿದೆ. ಈ ಹೆಚ್ಚುತ್ತಿರುವ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಲು ಹೊಸ ಬಡ್ಡಿ ದರ ಸಹಾಯವಾಗಬಹುದು ಎಂದು ನಿರೀಕ್ಷಿಸಿದ್ದೇವೆ" ಎಂದು ಸೋಳಂಕಿ ತಿಳಿಸಿದ್ದಾರೆ.
ಎಸ್‌ಬಿಐ, ಎಚ್‌ಡಿಎಫ್‌ಸಿ ಬಡ್ಡಿ ದರ
ಕಳೆದ ತಿಂಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕುಗಳು ಹಬ್ಬದ ಕೊಡುಗೆಯಾಗಿ ಬಡ್ಡಿ ದರಗಳನ್ನು ಕಡಿಮೆ ಮಾಡಿದ್ದವು. ಈ ಎರಡೂ ಬ್ಯಾಂಕುಗಳು ಶೇ. 25 ಬೇಸಿಸ್ ಪಾಯಿಂಟ್ಸ್‌ನಷ್ಟು ಕಡಿಮೆ ಮಾಡಿ ಬಡ್ಡಿ ದರವನ್ನು ಶೇ. 8.40ಕ್ಕೆ ಇಳಿಸಿವೆ. ಈ ಬ್ಯಾಂಕುಗಳು ಕೊಟ್ಟಿರು ವಾಫರ್ 2023ರ ಜನವರಿ ಅಂತ್ಯದವರೆಗೂ ಇದೆ.
ಭಾರತದಲ್ಲಿ ಹಲವು ಬ್ಯಾಂಕುಗಳು ಗೃಹ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿರುವುದು ಹೌದು. ಆದರೆ, ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಮಾತ್ರ ಹೆಚ್ಚಾಗಿವೆ. ಇನ್ನು, ಬ್ಯಾಂಕ್ ಠೇವಣಿಗಳ ಮೇಲೆ ನೀಡಲಾಗುವ ಬಡ್ಡಿ ದರಗಳನ್ನು ಹೆಚ್ಚಿಸಲಾಗಿದೆ. ಬ್ಯಾಂಕುಗಳಿಗೆ ಬಂಡವಾಳದ ಅಗತ್ಯತೆ ಹೆಚ್ಚಿರುವುದರಿಂದ ಠೇವಣಿಗೆ ಹೆಚ್ಚು ಬಡ್ಡಿ ಆಫರ್ ಕೊಟ್ಟು ಜನರಿಂದ ಹಣದ ಹರಿವು ಬರಬಹುದು ಎಂಬ ನಿರೀಕ್ಷೆಯಲ್ಲಿದೆ. ಹಾಗೆಯೇ, ಗೃಹ ಸಾಲದ ಬಡ್ಡಿ ಕಡಿಮೆ ಮಾಡಿರುವುದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪುಷ್ಟಿ ಸಿಗುವ ನಿರೀಕ್ಷೆ ಇದೆ.


Click it and Unblock the Notifications