ಹೂಡಿಕೆ ವಿಚಾರಕ್ಕೆ ಬಂದಾಗ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಎಂದಿಗೂ ಕೂಡಾ ಒಂದು ಉತ್ತಮ ಹಾಗೂ ಜನಪ್ರಿಯ ಆಯ್ಕೆಯಾಗಿದೆ. ಇತರೆ ಆಯ್ಕೆಗಳಿಗಿಂತ ಕೊಂಚ ಸುರಕ್ಷತೆ ಹಾಗೂ ಸ್ಥಿರವಾದ ರಿಟರ್ನ್ ಅನ್ನು ಎಫ್‌ಡಿ ಹೊಂದಿದೆ. ಆದರೆ ನಾವು ಹೂಡಿಕೆ ಮಾಡುವಾಗ ಎಂದಿಗೂ ಕೂಡಾ ಬಡ್ಡಿದರ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಎಲ್ಲಿ ಆಕರ್ಷಕ ಬಡ್ಡಿದರ ಇರುತ್ತದೆಯೋ ಆ ಬ್ಯಾಂಕ್‌ನ ಎಫ್‌ಡಿಗೆ ಹೂಡಿಕೆ ಮಾಡಲು ಜನರು ಇಷ್ಟಪಡುತ್ತಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಜೂನ್‌ನಲ್ಲಿ ಮತ್ತೆ ಸ್ಥಿರವಾಗಿರಿಸಿದೆ. ಆರ್‌ಬಿಐ ರೆಪೋ ದರದಲ್ಲಿ ಸ್ಥಿರತೆ ಕಾಯ್ದುಕೊಂಡ ಬಳಿಕ ಹಲವಾರು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಪರಿಷ್ಕರಣೆ ಮಾಡುತ್ತಿದೆ. ಮೇ ತಿಂಗಳಲ್ಲಿ ಹಾಗೂ ಜೂನ್ ತಿಂಗಳಿನಲ್ಲಿ ಹಲವಾರು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಪರಿಷ್ಕರಣೆ ಮಾಡಿದೆ. ಜೂನ್ ತಿಂಗಳಿನಲ್ಲಿ ಎಫ್‌ಡಿ ಬಡ್ಡಿದರ ಪರಿಷ್ಕರಣೆ ಮಾಡಿದ ಬ್ಯಾಂಕುಗಳ ವಿವರ ಇಲ್ಲಿದೆ ಮುಂದೆ ಓದಿ....

ಐಡಿಬಿಐ ಬ್ಯಾಂಕು
ಐಡಿಬಿಐ ಬ್ಯಾಂಕು ಇತ್ತೀಚೆಗೆ ಎಫ್‌ಡಿ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಈ ಪರಿಷ್ಕೃತ ಬಡ್ಡಿದರವು 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಮಾತ್ರ ಅನ್ವಯವಾಗುತ್ತದೆ. ಈ ಪರಿಷ್ಕೃತ ಬಡ್ಡಿದರವು ಜೂನ್ 14, 2023ರಿಂದ ಜಾರಿಗೆ ಬರುತ್ತದೆ. ಸಾಮಾನ್ಯ ನಾಗರಿಕರಿಗೆ ಬ್ಯಾಂಕ್ ಶೇಕಡ 3ರಿಂದ ಶೇಕಡ 6.80ರವರೆಗೆ ಬಡ್ಡಿದರ ನೀಡುತ್ತದೆ. ಈ ಬಡ್ಡಿದರಗಳು ಎಫ್‌ಡಿ ಅವಧಿಯ ಮೇಲೆ ಅವಲಂಭಿತವಾಗಿರುತ್ತದೆ. ಅಮೃತ ಮಹೋತ್ಸವ ಎಫ್‌ಡಿಗೆ ಬ್ಯಾಂಕು ಸುಮಾರು ಶೇಕಡ 7.15ರಷ್ಟು ಬಡ್ಡಿದರ ನೀಡುತ್ತದೆ.
ಆರ್‌ಬಿಎಲ್ ಬ್ಯಾಂಕು
ಜೂನ್ 1, 2023ರಿಂದ ಜಾರಿಗೆ ಬರುವಂತೆ ಆರ್‌ಬಿಎಲ್ ಬ್ಯಾಂಕು ಫಿಕ್ಸಿಡ್ ಡೆಪಾಸಿಟ್‌ಗಳ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಈ ಬ್ಯಾಂಕು ಈಗ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಶೇಕಡ 3.50ರಿಂದ ಶೇಕಡ 7.80ರಷ್ಟು ಬಡ್ಡಿದರವನ್ನು ನೀಡುತ್ತದೆ. ಬಡ್ಡಿದರ ಪರಿಷ್ಕರಣೆ ಮಾಡಿದ ಬಳಿಕ ಗರಿಷ್ಠ ಬಡ್ಡಿದರ ಶೇಕಡ 7.80ರಷ್ಟಿದೆ. ಈ ಬಡ್ಡಿದರವು 15 ತಿಂಗಳಿನಿಂದ 24 ತಿಂಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಅನ್ವಯವಾಗುತ್ತದೆ.
ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕು (ಎಸ್‌ಎಫ್‌ಬಿ)
2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲಿನ ಬಡ್ಡಿದರವನ್ನು ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕು (ಎಸ್‌ಎಫ್‌ಬಿ) ಪರಿಷ್ಕರಣೆ ಮಾಡಿದೆ. ಈ ನೂತನ ಬಡ್ಡಿದರವು ಜೂನ್ 14, 2023ರಿಂದ ಜಾರಿಗೆ ಬರುತ್ತದೆ. ಸಾಮಾನ್ಯ ಜನರಿಗೆ ಬ್ಯಾಂಕ್‌ನಲ್ಲಿ ಶೇಕಡ 4.50ರಿಂದ ಶೇಕಡ 9ರಷ್ಟು ಬಡ್ಡಿದರ ನೀಡಲಾಗುತ್ತದೆ. ಬ್ಯಾಂಕ್‌ನಲ್ಲಿರುವ ಗರಿಷ್ಠ ಬಡ್ಡಿದರ ಶೇಕಡ 9 ಆಗಿದೆ. 1001 ದಿನಗಳ ಎಫ್‌ಡಿಗೆ ಈ ಬಡ್ಡಿದರವನ್ನು ನೀಡಲಾಗುತ್ತದೆ.
ಪಿಎನ್‌ಬಿ
ಪಿಎನ್‌ಬಿ ವೆಬ್‌ಸೈಟ್ ಪ್ರಕಾರ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಏಕ-ಅವಧಿಯ ಎಫ್‌ಡಿ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಿದೆ. ಜೂನ್ 1, 2023 ರಿಂದ, ಪರಿಷ್ಕೃತ ದರಗಳು ಜಾರಿಯಲ್ಲಿರುತ್ತವೆ. ಪಿಎನ್‌ಬಿ ಈಗ ಸಾಮಾನ್ಯ ನಾಗರಿಕರಿಗೆ ಶೇಕಡ 3.50ರಿಂದ ಶೇಕಡ 6.80 ರವರೆಗಿನ ಆಕರ್ಷಕ ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 4ರಿಂದ ಶೇಕಡ 7.55 ಮತ್ತು ಸೂಪರ್ ಹಿರಿಯ ನಾಗರಿಕರಿಗೆ ಶೇಕಡ 4.30ರಿಂದ ಶೇಕಡ 8.5 ರವರೆಗೆ ಬಡ್ಡಿಯನ್ನು ನೀಡುತ್ತದೆ.
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕು
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಜೂನ್ 1, 2023 ರಿಂದ ಬೇರೆ ಬೇರೆ ಅವಧಿಗಳ ಎಫ್‌ಡಿ ಮೇಲಿನ ಬಡ್ಡಿದರವನ್ನು ಪರಿಷ್ಕರಣೆ ಮಾಡುತ್ತಿದೆ. ಉಜ್ಜೀವನ್ ಎಸ್‌ಎಫ್‌ಬಿ ಈಗ ಎಫ್‌ಡಿ ಮೇಲೆ ಶೇಕಡ 3.75ರಿಂದ ಶೇಕಡ 8.25ರಷ್ಟು ಬಡ್ಡಿದರವನ್ನು ನೀಡುತ್ತದೆ.
ಇಂಡಸ್‌ಇಂಡ್ ಬ್ಯಾಂಕು
ಇಂಡಸ್‌ಇಂಡ್ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಬಡ್ಡಿದರವನ್ನು ಪರಿಚಯಿಸಿದೆ. ಈ ಬಡ್ಡಿದರವು ಜೂನ್ 2, 2023 ರಿಂದ ಜಾರಿಗೆ ಬರುತ್ತದೆ. ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇಕಡ 3.50ರಿಂದ ಶೇಕಡ 7.75ರವರೆಗೆ ಬಡ್ಡಿದರವನ್ನು ನೀಡುತ್ತದೆ. 1 ವರ್ಷ ಆರು ತಿಂಗಳಿನಿಂದ ಎರಡು ವರ್ಷದ ಅವಧಿಗೆ ಶೇಕಡ 7.75ರಷ್ಟು ಬಡ್ಡಿದರ ಬ್ಯಾಂಕ್ ನೀಡುತ್ತದೆ. ಇದು ಗರಿಷ್ಠ ಬಡ್ಡಿದರವಾಗಿದೆ. ಹಿರಿಯ ನಾಗರಿಕರಿಗೆ ಶೇಕ 4ರಿಂದ ಶೇಕಡ 8.25ರವರೆಗೆ ಬಡ್ಡಿದರವಿದೆ.


Click it and Unblock the Notifications