ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲ್ ಮಾಡುವ ಕೊನೆಯ ದಿನಾಂಕವು ಸಮೀಪವಾಗುತ್ತಿದೆ. ಆದಾಯ ತೆರಿಗೆ ಪಾವತಿ ಮಾಡುವವರು ಹಣಕಾಸು ವರ್ಷ 2021-22ರ ಆದಾಯ ತೆರಿಗೆ ರಿಟರ್ನ್ ಅನ್ನು ಕೊನೆಯ ದಿನಾಂಕಕ್ಕೂ ಮುನ್ನ ಫೈಲ್ ಮಾಡಿದರೆ ಒಳಿತು. ಇಲ್ಲವಾದರೆ ದಂಡ ಪಾವತಿಸಬೇಕಾಗುತ್ತದೆ.
ಸಂಬಳ ಪಡೆಯುವವರು ಮತ್ತು ಯಾವುದೇ ಸಂಸ್ಥೆಯ ಮಾಲೀಕತ್ವವನ್ನು ಹೊಂದಿರುವವರು ಜುಲೈ 31ರ ಒಳಗೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲ್ ಮಾಡಬೇಕಾಗುತ್ತದೆ. ನಾವು ಕೊನೆಯ ದಿನಾಂಕಕ್ಕೂ ಮುನ್ನ ಐಟಿಆರ್ ಫೈಲ್ ಮಾಡಿದರೆ ನಮಗೆ ಹಲವು ಪ್ರಯೋಜನವಾಗಲಿದೆ. ಅವಧಿಗೂ ಮುನ್ನ ಫೈಲ್ ಮಾಡದಿದ್ದರೆ, ಕೆಲವು ತೊಂದರೆಗಳು ಕೂಡಾ ಉಂಟಾಗುತ್ತದೆ.
ಇನ್ನು ಯಾರು ಆದಾಯ ತೆರಿಗೆ ಪಾವತಿ ಮಾಡುತ್ತಾರೋ ಅವರು ಅಕ್ಟೋಬರ್ 31 ಐಟಿಆರ್ ಸಲ್ಲಿಕೆಯೆ ಕೊನೆಯ ದಿನಾಂಕವಾಗಿದೆ. ನಾವು ಯಾವಗಲೂ ಕೊನೆಯ ದಿನಾಂಕಕ್ಕೂ ಮುನ್ನ ಐಟಿಆರ್ ಫೈಲ್ ಮಾಡುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತೇವೆ. ಆದರೆ ಇದರಿಂದ ಆಗುವ ಪ್ರಯೋಜನಗಳು ನಿಮಗೆ ತಿಳಿದಿದೆಯೇ, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ದಂಡ ತಪ್ಪುತ್ತದೆ
ನೀವು ಸಮಯಕ್ಕೆ ಸರಿಯಾಗಿ ಅಥವಾ ಕೊನೆಯ ದಿನಾಂಕಕ್ಕೂ ಮುನ್ನ ಐಟಿಆರ್ ಫೈಲ್ ಮಾಡದಿದ್ದರೆ ನೀವು 10,000 ರೂಪಾಯಿ ದಂಡ ಪಾವತಿ ಮಾಡಬೇಕಾಗುತ್ತದೆ. ಹಾಗೆಯೇ ಆದಾಯ ತೆರಿಗೆ ನಿಯಮದಂತೆ ಯಾವುದಾದರೂ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಇನ್ನು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 234A ಅಡಿಯಲ್ಲಿ ಐಟಿಆರ್ ವಿಳಂಬವಾದರೆ ತೆರಿಗೆಯ ಮೇಲೆ ಬಡ್ಡಿ ಬೀಳುವ ಸಾಧ್ಯತೆ ಕೂಡಾ ಇದೆ.
ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಿ
ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಮಯಕ್ಕೆ ಸರಿಯಾಗಿ ಸಲ್ಲಿಕೆ ಮಾಡದಿದ್ದರೆ, ಆದರೆ ತೆರಿಗೆ ಇಲಾಖೆಯು ನಿಮಗೆ ನೋಟಿಸ್ ಕಳಿಸುತ್ತಿದೆ. ಇದು ನೀವು ಕಾನೂನಾತ್ಮಕವಾಗಿ ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತದೆ. ನೀವು ನೋಟಿಸ್‌ಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ನಿಮ್ಮ ಪ್ರತಿಕ್ರಿಯೆಯು ಆದಾಯ ತೆರಿಗೆ ಇಲಾಖೆಗೆ ಸಮಂಜಸವಲ್ಲ ಎಂದು ಅನಿಸಿದರೆ, ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಸುಲಭವಾಗಿ ಸಾಲ ಲಭ್ಯ
ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸರಿಯಾದ ಸಮಯಕ್ಕೆ ಸಲ್ಲಿಕೆ ಮಾಡಿದ್ದರೆ, ನಿಮಗೆ ಸಾಲವು ಸುಲಭವಾಗಿ ಲಭ್ಯವಾಗಲಿದೆ. ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಮಾಡುವಾಗ ನೀವು ಬ್ಯಾಂಕಿಗೆ ಐಟಿಆರ್ ಸ್ಟೇಟ್‌ಮೆಂಟ್ ಅನ್ನು ಕೂಡಾ ನೀಡಬೇಕಾಗುತ್ತದೆ. ಯಾವುದೇ ಸಾಮಾನ್ಯ ಸಾಲಕ್ಕೆ ಆದಾಯ ತೆರಿಗೆ ರಿಟರ್ನ್ ಪ್ರಮುಖ ಆಧಾರವಾಗಿದೆ. ಯಾರು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಿಲ್ಲವೋ ಅವರು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲವನ್ನು ಪಡೆಯಲು ಕಷ್ಟವಾಗಲಿದೆ.
ನಷ್ಟದ ಬಗ್ಗೆ ತಿಳಿಯಿರಿ
ಆದಾಯ ತೆರಿಗೆ ನಿಯಮಗಳು ನಿಗದಿತ ದಿನಾಂಕದ ಮೊದಲು ಐಟಿಆರ್ ಸಲ್ಲಿಸುವ ಸಂದರ್ಭದಲ್ಲಿ ಮುಂದಿನ ಹಣಕಾಸು ವರ್ಷಕ್ಕೆ ನಷ್ಟವನ್ನು ಫಾರ್ವರ್ಡ್ ಮಾಡಲು ಅನುಮತಿಸುತ್ತದೆ. ಇದು ತೆರಿಗೆದಾರರಿಗೆ ಭವಿಷ್ಯದ ಆದಾಯದ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಅವಕಾಶ ನೀಡುತ್ತದೆ. ನೀವು ಸಮಯಕ್ಕೆ ಸರಿಯಾಗಿ ಐಟಿಆರ್ ಫೈಲ್ ಮಾಡದಿದ್ದರೆ ಈ ನಿಮಗೆ ತೊಂದರೆ ಉಂಟಾಗಲಿದೆ.
ತ್ವರಿತ ವೀಸಾ ಲಭ್ಯ
ಬಹುತೇಕ ರಾಯಭಾರ ಕಚೇರಿಗಳಲ್ಲಿ ನೀವು ವೀಸಾಕ್ಕಾಗಿ ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಐಟಿಆರ್ ಸ್ಟೇಟ್‌ಮೆಂಟ್ ಅನ್ನು ಕೂಡಾ ಸಲ್ಲಿಕೆ ಮಾಡಬೇಕಾಗುತ್ತದೆ. ನಿಮ್ಮ ತೆರಿಗೆ ಪಾವತಿಯಲ್ಲಿ ಯಾವುದೇ ತೊಂದರೆ ಇಲ್ಲವಾದರೆ ನಿಮಗೆ ವೀಸಾ ಸುಲಭವಾಗಿ ಲಭ್ಯವಾಗಬಹುದು.


Click it and Unblock the Notifications