ಈರುಳ್ಳಿ ಬೆಲೆ ಹಾಗೂ ಟೊಮೆಟೊ ಬೆಲೆ ಏರಡೂ ಕೂಡಾ ದೇಶದಲ್ಲಿ ಏರಿಕೆಯಾಗುತ್ತಿದೆ. ಈರುಳ್ಳಿಯು ದೇಶದಲ್ಲಿ ಸ್ಥಳೀಯವಾಗಿ ಲಭ್ಯವಾಗುವಂತೆ ಮಾಡಲು ಈಗ ಸರ್ಕಾರವೊಂದು ಕ್ರಮವನ್ನು ಕೈಗೊಂಡಿದೆ. ಕೇಂದ್ರ ಸರ್ಕಾರವು ಮಾರ್ಚ್ 2024 ರವರೆಗೆ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿದೆ.
ಅಕಾಲಿಕ ಮಳೆ ಮತ್ತು ಪೂರೈಕೆ ಅಡಚಣೆಗಳಂತಹ ಕಾರಣದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಗಳು ಭಾರೀ ಪ್ರಮಾಣದಲ್ಲಿ ಅಧಿಕವಾಗುತ್ತಾ ಸಾಗುತ್ತಿದೆ. ಈ ಅಗತ್ಯ ಆಹಾರ ಪದಾರ್ಥದ ಬೆಲೆ ಏರಿದಂತೆ ಕಳವಳವೂ ಅಧಿಕವಾಗಿದೆ. ಈ ನಡುವೆ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ.

ಸುದ್ದಿ ಸಂಸ್ಥೆ ಐಎಎನ್‌ಎಸ್ ವರದಿಯ ಪ್ರಕಾರ, ಇತರ ದೇಶಗಳಿಗೆ ಆ ದೇಶಗಳಿಂದ ಈರುಳ್ಳಿ ಅಗತ್ಯದ ಮನವಿಯ ಆಧಾರದ ಮೇಲೆ ಸರ್ಕಾರವು ಈರುಳ್ಳಿಯನ್ನು ರಫ್ತು ಮಾಡಲು ಅವಕಾಶವನ್ನು ನೀಡುತ್ತದೆ ಎಂದು ಡಿಜಿಎಫ್‌ಟಿ ಹೇಳಿದೆ.
"ಉಚಿತವಾಗಿ ಈರುಳ್ಳಿ ರಫ್ತು ನೀತಿಯನ್ನು ಮಾರ್ಚ್ 31, 2024 ರವರೆಗೆ ನಿಷೇಧಿಸಲಾಗಿದೆ," ಎಂದು ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಟಿಎಫ್) ಅಧಿಸೂಚನೆಯಲ್ಲಿ ತಿಳಿಸಿದೆ. ಈ ಅಧಿಸೂಚನೆಗೂ ಮುನ್ನ ಲೋಡಿಂಗ್ ಆರಂಭಿಸಿದ್ದ ಈರುಳ್ಳಿ ಸಾಗಣೆಯನ್ನು ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ಸೇರಿಸಲಾಗಿದೆ.
ಇದಲ್ಲದೆ ಶಿಪ್ಪಿಂಗ್ ಬಿಲ್ ಸಲ್ಲಿಸಿದ್ದರೆ, ಈರುಳ್ಳಿಯನ್ನು ಲೋಡ್ ಮಾಡಲು ಭಾರತೀಯ ಬಂದರುಗಳಲ್ಲಿ ಹಡಗುಗಳನ್ನು ಈಗಾಗಲೇ ನಿಲ್ಲಿಸಿದ್ದರೆ, ಈ ಅಧಿಸೂಚನೆಯ ಮೊದಲು ಅವುಗಳ ರಫ್ತು ಪ್ರಮಾಣ ನಿಗದಿ ಮಾಡಲಾಗಿದ್ದರೆ, ರಫ್ತಿಗೆ ಅವಕಾಶವನ್ನು ನೀಡಲಾಗುತ್ತದೆ.
ರಫ್ತಿನ ಮೇಲೆ ಶುಲ್ಕ
ಕೇಂದ್ರವು ಡಿಸೆಂಬರ್ 31 ರವರೆಗೆ ಈರುಳ್ಳಿ ಬೆಲೆಗಳನ್ನು ನಿಯಂತ್ರಿಸಲು ಪ್ರತಿ ಟನ್‌ಗೆ 800 ಯುಎಸ್ ಡಾಲರ್‌ರ ಕನಿಷ್ಠ ರಫ್ತು ಶುಲ್ಕವನ್ನು ವಿಧಿಸಿದೆ. ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಫ್ತುಗಳನ್ನು ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಫ್ತಿನ ಮೇಲೆ ಸುಂಕವನ್ನು ಸರ್ಕಾರವು ವಿಧಿಸಿದೆ.
ಕೇಂದ್ರವು ಈ ಹಿಂದೆ ಡಿಸೆಂಬರ್ 31, 2023 ರವರೆಗೆ ಈರುಳ್ಳಿ ರಫ್ತಿನ ಮೇಲೆ ಶೇಕಡ 40 ರಷ್ಟು ರಫ್ತು ಸುಂಕವನ್ನು ವಿಧಿಸಿದೆ. ದೇಶದಲ್ಲಿ ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸುವ ಪ್ರಯತ್ನಗಳಲ್ಲಿ ಇದು ಕೂಡಾ ಒಂದಾಗಿದೆ. ಆಗಸ್ಟ್ 19 ಹಣಕಾಸು ಸಚಿವಾಲಯವು ಈ ಅಧಿಸೂಚನೆಯನ್ನು ಹೊರಡಿಸಿದೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಈಗಾಗಲೇ ಸಂಗ್ರಹಿಸಿರುವ 5 ಲಕ್ಷ ಟನ್‌ಗಳಿಗಿಂತ ಅಧಿಕವಾಗಿ, 2 ಲಕ್ಷ ಟನ್ ಈರುಳ್ಳಿಯನ್ನು ಬಫರ್‌ಗಾಗಿ ಸಂಗ್ರಹಿಸಲು ಕೇಂದ್ರವು ನಿರ್ಧರಿಸಿದೆ.
ಒಂದು ಪ್ಲೇಟ್ ಊಟದ ದರವೂ ಏರಿಕೆ!
ನವೆಂಬರ್‌ನಲ್ಲಿ ಈರುಳ್ಳಿ ಮತ್ತು ಟೊಮೆಟೊ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕ್ರಿಸಿಲ್‌ನ ಇತ್ತೀಚಿನ ಮಾಸಿಕ ಆಹಾರದ ಪ್ಲೇಟ್ ಬೆಲೆಯ ಪ್ರಕಾರ, ಮನೆಯಲ್ಲಿ ತಯಾರಿಸಿದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಥಾಲಿಗಳು (ಆಹಾರ ಪ್ಲೇಟ್) ದುಬಾರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಬೆಲೆ ಏರಿಕೆಯಾಗಿದೆ.
ಅನಿಯಮಿತ ಮಳೆಯ ಕಾರಣದಿಂದಾಗಿ ಖಾರಿಫ್ ಸೀಸನ್‌ನಲ್ಲಿ ಕಡಿಮೆ ಉತ್ಪಾದನೆಯಿಂದಾಗಿ ಈರುಳ್ಳಿ ಮತ್ತು ಟೊಮೆಟೊ ಬೆಲೆಗಳಲ್ಲಿ ಕ್ರಮವಾಗಿ ಶೇಕಡ 58 ಮತ್ತು ಶೇಕಡ 35 ರಷ್ಟು ಏರಿಕೆಯಾಗಿದೆ. ಸಸ್ಯಾಹಾರಿ ಥಾಲಿಯ ಬೆಲೆಯು ವರ್ಷಕ್ಕೆ ಶೇಕಡ 9 ರಷ್ಟು ಏರಿಕೆಯಾಗಿದೆ. ಮನೆಯಲ್ಲಿ ಥಾಲಿಯನ್ನು ತಯಾರಿಸುವ ಸರಾಸರಿ ವೆಚ್ಚವನ್ನು ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಭಾರತದಲ್ಲಿ ಆಹಾರ ತಯಾರಿಕ ವೆಚ್ಚದ ಆಧಾರದ ಮೇಲೆ ಲೆಕ್ಕ ಹಾಕಲಾಗಿದೆ.


Click it and Unblock the Notifications