For Quick Alerts
ALLOW NOTIFICATIONS  
For Daily Alerts

ಸಿಗರೇಟ್ ನಿಂದ ಅಕ್ಕಿ, ಬೇಳೆ ತನಕ ಎಲ್ಲ ದುಬಾರಿ; ಲಾಕ್ ಡೌನ್ ಪ್ರಭಾವ ರೀ..

|

"ಒಂದು ಸಿಗರೇಟ್ ಗೆ 30 ರುಪಾಯಿನಾ?" -ಹೀಗೊಂದು ಅಚ್ಚರಿ, ಉದ್ಗಾರದ ಜತೆಗೆ ಆ ಅಂಗಡಿಯವರ ಜತೆಗೆ 'ಗುಡ್ ರಿಟರ್ನ್ಸ್ ಕನ್ನಡ' ಮಾತುಕತೆ ಶುರುವಾಯಿತು. ಕೆಲವು ವಸ್ತುಗಳನ್ನು ಬೇಕೆಂತಲೆ ಒಂದಕ್ಕೆರಡು ಬೆಲೆಗೆ ಮಾರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಅಂಗಡಿ ಮಾಲೀಕರನ್ನು ಮಾತನಾಡಿಸಲಾಯಿತು.

"17 ರುಪಾಯಿಯ ಸಿಗರೇಟ್ 30 ರುಪಾಯಿಗೆ ಒಂದರಂತೆ ಮಾರುತ್ತಿದ್ದದ್ದು ಹೌದು. ಏಕೆಂದರೆ, ನಮಗೆ 165 ರುಪಾಯಿಗೆ ಒಂದು ಪ್ಯಾಕ್ ನಂತೆ ಮಾರುತ್ತಿದ್ದ ಸಪ್ಲೈಯರ್ ಏಕಾಏಕಿ 250 ರುಪಾಯಿಗೆ ಬೆಲೆ ಏರಿಸಿದರು. ನಮಗೆ ಸಿಗರೇಟ್ ನಿಂದ ದೊಡ್ಡ ಲಾಭ ಇಲ್ಲ. ಆದರೆ ಸಿಗರೇಟ್ ಇದೆ ಅಂತ ಬರೋರು ಇನ್ನೂ ನಾಲ್ಕು ವಸ್ತುಗಳನ್ನು ಖರೀದಿ ಮಾಡ್ತಾರೆ ಅನ್ನೋ ಕಾರಣಕ್ಕೆ ಸಿಗರೇಟ್ ಮಾರ್ತಿದ್ದೀವಿ.

"ನಮಗೇ 250 ರುಪಾಯಿಗೆ ಸಿಗರೇಟ್ ಸಿಗುವಾಗ ಅದನ್ನು 300 ರುಪಾಯಿಗೆ ಮಾರುವಂತಾಗಿದೆ. ಅದು ಕೂಡ ಕೆಲವು ದಿನ. ಬಹಳ ಜನ ಗ್ರಾಹಕರಿಗೆ ನಮ್ಮ ಮೇಲೆ ಸಿಟ್ಟು. ಸರಕು ಇಟ್ಟುಕೊಂಡು ಒಂದಕ್ಕೆರಡು ಲಾಭ ಮಾಡಿಕೊಳ್ಳುತ್ತಿದ್ದೀವಿ ಅನ್ನೋ ಗುಮಾನಿ. ಆ ಕಾರಣಕ್ಕೆ ಈಗ ಸಿಗರೇಟ್ ಮಾರುವುದನ್ನೇ ನಿಲ್ಲಿಸಿದ್ದೀವಿ" ಅಂದರು ಆ ವ್ಯಕ್ತಿ.

5 ರುಪಾಯಿ ಪ್ಯಾಕೆಟ್ ಈಗ 10ಕ್ಕೆ

5 ರುಪಾಯಿ ಪ್ಯಾಕೆಟ್ ಈಗ 10ಕ್ಕೆ

ಸಿಗರೇಟ್ ಮಾತ್ರ ಅಲ್ಲ, ತಂಬಾಕು ಪದಾರ್ಥಗಳೆಲ್ಲವನ್ನೂ ಒಂದಕ್ಕೆ ಎರಡು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. 5 ರುಪಾಯಿಗೆ ಒಂದು ಪ್ಯಾಕೆಟ್ ನಂತೆ ಮಾರುತ್ತಿದ್ದದ್ದು 10 ರುಪಾಯಿಗೆ ಒಂದು ಎಂಬಂತೆ ಮಾರಲಾಗುತ್ತದೆ. ಮೊದಲೇ ಹೇಳಿದ ಹಾಗೆ ಪೂರೈಕೆ ಇಲ್ಲ. ಆದರೆ ಅದೆಷ್ಟು ಮಂದಿ, ಅದೆಷ್ಟು ಸಲ ಬಂದು ಕೇಳ್ತಾರೋ? ನಮ್ಮ ಹತ್ತಿರ ಮಧು ಥರದ ತಂಬಾಕು ಪದಾರ್ಥಗಳು ಸದ್ಯಕ್ಕೆ ಸಿಗುತ್ತಿವೆ. ಆದರೆ ಬೆಲೆ ಜಾಸ್ತಿ ಇದೆ. ಕೆಲವರು ನಮ್ಮ ಜತೆ ಜಗಳ ಆಡ್ತಾರೆ, ಕೂಗಾಡ್ತಾರೆ, ಕಂಪ್ಲೇಂಟ್ ಮಾಡ್ತೀವಿ ಅಂತಾರೆ. ಆ ಮೇಲೆ ಇನ್ನೊಂದು ಅಂಗಡಿಗೆ ಹೋಗಿ ವಿಚಾರಿಸಿದ ಮೇಲೆ ಅಲ್ಲೂ ಅದೇ ರೇಟ್ ಇದೆ ಎಂದು ಗೊತ್ತಾದ ಮೇಲೆ ಸುಮ್ಮನಾಗ್ತಾರೆ.

ಅಡುಗೆ ಎಣ್ಣೆ, ಸಕ್ಕರೆಯೂ ದುಬಾರಿ

ಅಡುಗೆ ಎಣ್ಣೆ, ಸಕ್ಕರೆಯೂ ದುಬಾರಿ

ಅಡುಗೆಗೆ ಬಳಸುವ ಎಣ್ಣೆ, ಸಕ್ಕರೆ ಮತ್ತಿತರ ಆಹಾರ ಪದಾರ್ಥಗಳ ಬೆಲೆಯಲ್ಲೂ ಏರಿಕೆ ಆಗಿದೆ. ಎಪಿಎಂಸಿ ಮಾರ್ಕೆಟ್ ಗೆ ಯಾವುದೇ ಸಪ್ಲೈ ಸರಿಯಾಗಿ ಆಗ್ತಿಲ್ಲವಂತೆ. ಆ ಕಾರಣಕ್ಕೆ ಸಾಮಾನ್ಯ ದಿನಗಳನ್ನು ಇರುವ ಬೆಲೆಗಿಂತ ಸ್ವಲ್ಪ ಹೆಚ್ಚಿಗೆ ಇಡಲಾಗಿದೆ. ಸಾಗಾಟವೇ ಕಷ್ಟವಾಗಿದೆ. ಒಂದು ವೇಳೆ ಅಕ್ಕಿ, ಬೇಳೆ, ಗೋಧಿ, ಸಕ್ಕರೆ ಅಂತ ಬಂದರೂ ಅವುಗಳನ್ನು ಗೋದಾಮಿಗೆ ಇಡುವುದಕ್ಕೆ ಸಹ ಜನರಿಲ್ಲ. ಹೋಲ್ ಸೇಲ್ ಅಂಗಡಿಗಳವರು ಬಹಳ ಮಂದಿ ತೆಗೆದಿಲ್ಲ. ಕೆಲವು ದೊಡ್ಡ ಪ್ರಮಾಣದ ರೀಟೇಲರ್ಸ್ ತಮ್ಮ ಹತ್ತಿರ ಇರುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರೇ ಹೆಚ್ಚಿನ ಬೆಲೆಗೆ ಮಾರುತ್ತಾರೆ. ಅಷ್ಟು ಹಣ ಕೊಟ್ಟು ತಂದ ಮೇಲೆ, ಅದರ ಮೇಲೆ ಲಾಭ ಇಟ್ಟುಕೊಂಡು ಮಾರಬೇಕಲ್ಲವಾ? ಆದ್ದರಿಂದ ಬೆಲೆ ಹೆಚ್ಚಾಗುತ್ತದೆ.

ಬಿಸ್ಕತ್, ಪಾಪ್ ಕಾರ್ನ್, ಮ್ಯಾಗಿ ನೂಡಲ್ಸ್ ಸಿಕ್ಕಾಪಟ್ಟೆ ಖರೀದಿ

ಬಿಸ್ಕತ್, ಪಾಪ್ ಕಾರ್ನ್, ಮ್ಯಾಗಿ ನೂಡಲ್ಸ್ ಸಿಕ್ಕಾಪಟ್ಟೆ ಖರೀದಿ

ಮ್ಯಾಗಿ ನೂಡಲ್ಸ್, ಲೇಸ್ ಚಿಪ್ಸ್, ಬಿಸ್ಕತ್, ಪಾಪ್ ಕಾರ್ನ್, ಬಿಸಿ ನೀರು ಹಾಕಿಕೊಂಡು ಕುಡಿಯುವ ಸೂಪ್... ಇಂಥವಕ್ಕೆ ಸಿಕ್ಕಾಪಟ್ಟೆ ಡಿಮ್ಯಾಡ್ ಇದೆ. ಮುಂಚೆ ಎರಡರಿಂದ ಮೂರು ತೆಗೆದುಕೊಂಡು ಹೋಗುತ್ತಿದ್ದರು. ಈಗ ಹತ್ತತ್ತು ಖರೀದಿ ಮಾಡ್ತಾರೆ. ಎಲ್ಲರಲ್ಲೂ ಒಂದು ಆತಂಕ ಕಾಣುತ್ತಿದೆ. ಈಗ ಸಿಗುತ್ತಿದೆ, ಇದು ಕೂಡ ಸಿಗದಿದ್ದರೆ ಏನು ಮಾಡೋದು ಎಂಬ ಗಾಬರಿ ಅದು. ನಾವು ಕೂಡ ತಿಂಗಳ ಕೊನೆ ಹೊತ್ತಿಗೆ ಹೊಸ ಸರಕು ಖರೀದಿ ಮಾಡುತ್ತಿದ್ದೀವಿ. ಅದರಲ್ಲೂ ಯುಗಾದಿ ಹಬ್ಬದಲ್ಲಿ ಆಗಬೇಕಿದ್ದ ಮಾರಾಟ ಕೈ ಕೊಟ್ಟಿತು. ಜತೆಗೆ ಮಾರ್ಕೆಟ್ ನಲ್ಲೇ ಬೆಲೆ ಜಾಸ್ತಿ ಆಗಿರುವುದರಿಂದ ಇಂಥ ಸಮಯದಲ್ಲಿ ಖರೀದಿಸಿ ತಂದರೆ ಹೆಚ್ಚಿನ ಬೆಲೆಗೆ ಮಾರಲೇಬೇಕು. ಈ ತಿಂಗಳ ದಿನಸಿ ಬಿಲ್ ನಲ್ಲಿ ಹತ್ತರಿಂದ ಹದಿನೈದು ಪರ್ಸೆಂಟ್ ವ್ಯತ್ಯಾಸ ಆಗಬಹುದು.

ಸರ್ಕಾರದ ಭರವಸೆಯಂತೆ ಇಲ್ಲ ವಾಸ್ತವ

ಸರ್ಕಾರದ ಭರವಸೆಯಂತೆ ಇಲ್ಲ ವಾಸ್ತವ

ಅಗತ್ಯ ವಸ್ತುಗಳ ಪೂರೈಕೆಗೆ ಏನೂ ಸಮಸ್ಯೆ ಆಗಲ್ಲ ಅಂತ ಸರ್ಕಾರದಿಂದ ಹೇಳಿದ್ದಾರೆ. ಆದರೆ ವಾಸ್ತವ ಹಾಗಿಲ್ಲ. ಡ್ರೈವರ್ ಗಳು ಕೆಲಸಕ್ಕೆ ಬರ್ತಿಲ್ಲ. ಒಂದು ವೇಳೆ ಬಂದರೂ ದೂರದ ಊರುಗಳು ಅಂದರೆ ಒಪ್ತಿಲ್ಲ. ಅದಕ್ಕೆ ಏನು ಕಾರಣ ಅಂದರೆ, ಮಧ್ಯೆ ಊಟ- ತಿಂಡಿ ಎಲ್ಲೂ ಸಿಗಲ್ಲ. ಇನ್ನು ಹಳ್ಳಿಗಳಲ್ಲಿ ಜನರಿಗೆ ಹೊರಗಿನವರನ್ನು ಕಂಡರೆ ಅಸಾಧ್ಯ ಸಿಟ್ಟು. ಯಾವುದೋ ಕಾರಣಕ್ಕೆ ರಸ್ತೆ ಪಕ್ಕ ಲಾರಿ ನಿಲ್ಲಿಸಿದ್ದರೂ ಜಗಳಕ್ಕೇ ಬರ್ತಾರೆ. ಇನ್ನೊಂದು ಕಡೆ ಪೊಲೀಸರ ಭಯ. ಇವೆಲ್ಲದರ ಜತೆಗೆ ತಮಗೇ ಕೊರೊನಾ ಬಂದುಬಿಟ್ಟರೆ ಗತಿ ಏನು ಎಂಬ ಆತಂಕ ಕೂಡ ಸೇರಿಕೊಂಡಿದೆ ಎಂದು ಮಾತು ಮುಗಿಸಿದರು. ಆ ಅಂಗಡಿ ಮಾಲೀಕ.

English summary

Cigarette To Rice, Pulses Become Dearer; Lock Down Is The Reason

Due to Corona virus lock down in India cigarette to rice, pulses become dearer. Here is the reality check.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X