ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೇಫ್ ಡೆಪಾಸಿಟ್ ಲಾಕರ್‌ಗಳ ಒಪ್ಪಂದಗಳ ಬಗ್ಗೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದು, ಒಪ್ಪಂದಗಳನ್ನು ನವೀಕರಿಸಿಕೊಳ್ಳಲು 2023ರ ಡಿಸೆಂಬರ್ 31ರ ಗಡುವು ನೀಡಿದೆ. ಹೀಗಾಗಿ ಅದಕ್ಕೂ ಮೊದಲು ಬ್ಯಾಂಕ್ ಲಾಕರ್ ಖಾತೆದಾರರು ಪರಿಷ್ಕೃತ ಒಪ್ಪಂದಕ್ಕೆ ಸಹಿ ಮಾಡಿ ಅದನ್ನು ತಮ್ಮ ಬ್ಯಾಂಕ್ ಶಾಖೆಗಳಿಗೆ ಸಲ್ಲಿಸಬೇಕಾಗುತ್ತದೆ.
ಪರಿಷ್ಕೃತ ಒಪ್ಪಂದಗಳಿಗೆ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಇನ್ನೂ ಸಹಿ ಹಾಕದಿರುವುದರಿಂದ ಗಡುವನ್ನು ಆರ್‌ಬಿಐ ಡಿಸೆಂಬರ್ 31ಕ್ಕೆ ಮುಂದೂಡಿದೆ. ನವೀಕರಣ ಪ್ರಕ್ರಿಯೆ ಮತ್ತು ಬ್ಯಾಂಕ್‌ಗಳ ಜವಾಬ್ದಾರಿಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ನವೀಕರಣ ಪ್ರಕ್ರಿಯೆ ಮತ್ತು ಬ್ಯಾಂಕ್‌ಗಳ ಜವಾಬ್ದಾರಿಗಳು:
ನವೀಕರಣ ಪ್ರಕ್ರಿಯೆಗಾಗಿ ಹೊಸ ಅಥವಾ ಪೂರಕವಾದ ಸ್ಟ್ಯಾಂಪ್ ಅಗ್ರಿಮೆಂಟ್ ಕಾರ್ಯಗತಗೊಳಿಸಲು ಅನುಕೂಲವಾಗುವಂತೆ, ಬ್ಯಾಂಕ್‌ಗಳು ಸ್ಟಾಂಪ್ ಪೇಪರ್‌ಗಳನ್ನು ಜೋಡಿಸುವುದು, ಅಗ್ರಿಮೆಂಟ್‌ಗಳ ಎಲೆಕ್ಟ್ರಾನಿಕ್ ಎಕ್ಸಿಕ್ಯೂಶನ್, ಫ್ರಾಂಕಿಂಗ್, ಇ-ಸ್ಟಾಂಪಿಂಗ್ ಮುಂತಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಬ್ಯಾಂಕ್‌ಗಳು ಕಾರ್ಯಗತಗೊಳಿಸಿದ ನಂತರ ಒಪ್ಪಂದದ ಪ್ರತಿಯನ್ನು ಗ್ರಾಹಕರಿಗೆ ಒದಗಿಸಬೇಕಾಗುತ್ತದೆ. ಲಾಕರ್ ಹಂಚಿಕೆಯ ಸಮಯದಲ್ಲಿ, ಬ್ಯಾಂಕುಗಳು ಗ್ರಾಹಕರೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಇದಕ್ಕೆ ಬ್ಯಾಂಕ್ ಹಾಗೂ ಗ್ರಾಹಕರೂ ಇಬ್ಬರೂ ಸಹಿ ಮಾಡಬೇಕಾಗುತ್ತದೆ.
ಲಾಕರ್ ಬಾಡಿಗೆದಾರರಿಗೆ ನಕಲಿ ಪ್ರತಿಯನ್ನು ಒದಗಿಸುವಾಗ, ಲಾಕರ್ ಇರುವ ಶಾಖೆಯ ಬ್ಯಾಂಕ್‌ನಲ್ಲಿ ಈ ಅಗ್ರಿಮೆಂಟ್‌ನ ಮೂಲ ಒಪ್ಪಂದ ಪ್ರತಿ ಇರಬೇಕು.
ಬ್ಯಾಂಕ್‌ಗೆ ಭದ್ರತೆ ಹೊಣೆಗಾರಿಕೆ
ಆರ್‌ಬಿಐ ಪ್ರಕಾರ, ಲಾಕರ್‌ಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ. ಅಗ್ನಿ ಅವಘಡ, ಕಳ್ಳತನ, ದರೋಡೆ, ಡಕಾಯಿತಿ, ನಿರ್ಲಕ್ಷ್ಯ ಮತ್ತು ಕಟ್ಟಡ ಕುಸಿತದಂತಹ ಘಟನೆಗಳನ್ನು ತಡೆಯಲು ಬ್ಯಾಂಕುಗಳು ತಮ್ಮ ಸ್ವಂತ ನ್ಯೂನತೆಗಳು ಉಂಟಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಹಾನಿಯ ಹೊಣೆಗಾರಿಕೆ
ಪ್ರವಾಹ, ಸಿಡಿಲು, ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳಿಂದ ಲಾಕರ್‌ನಲ್ಲಿರುವ ಯಾವುದೇ ಹಾನಿ ಅಥವಾ ವಸ್ತುಗಳ ನಷ್ಟಕ್ಕೆ ಬ್ಯಾಂಕುಗಳು ಜವಾಬ್ದಾರರಾಗಿರುವುದಿಲ್ಲ. ಆದರೆ ಬ್ಯಾಂಕುಗಳು ತಮ್ಮ ಲಾಕರ್ ವ್ಯವಸ್ಥೆಯನ್ನು ಇಂತಹ ದುರಂತಗಳಿಂದ ರಕ್ಷಿಸುವಲ್ಲಿ ಸೂಕ್ತ ಕಾಳಜಿಯನ್ನು ವಹಿಸಬೇಕಾಗುತ್ತದೆ. ಗ್ರಾಹಕರ ತಪ್ಪಿನಿಂದ ಅಥವಾ ನಿರ್ಲಕ್ಷ್ಯದಿಂದ ಲಾಕರ್‌ನಲ್ಲಿರುವ ವಸ್ತುಗಳಿಗೆ ಯಾವುದೇ ನಷ್ಟ ಅಥವಾ ಹಾನಿ ಉಂಟಾದರೆ ಅದಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ಆರ್‌ಬಿಐ ಹೇಳಿದೆ.
ಪರಿಹಾರ ಮತ್ತು ಗ್ರಾಹಕರ ಹಕ್ಕುಗಳು
ಲಾಕರ್‌ನ ಲ್ಲಿರುವ ವಸ್ತುಗಳು ಕಳೆದುಹೋದರೆ ಅಥವಾ ನಷ್ಟ ಉಂಟಾಗಿ ಇವುಗಳಿಗೆ ಬ್ಯಾಂಕುಗಳು ಜವಾಬ್ದಾರರೆಂದು ಕಂಡುಬಂದರೆ, ಅವರು ಗ್ರಾಹಕರಿಗೆ ಪರಿಹಾರವನ್ನು ಒದಗಿಸಬೇಕಾಗುತ್ತದೆ.
ಲಾಕರ್‌ಗಳು ಮತ್ತುಅವುಗಳಿರುವ ಪ್ರದೇಶದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಬ್ಯಾಂಕಿನ ಕರ್ತವ್ಯವಾಗಿದೆ. ಸಹಿ ಮಾಡಿರುವ ಲಾಕರ್ ಆಗ್ರಿಮೆಂಟ್ ನಲ್ಲಿರುವ ಗ್ರಾಹಕ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಗ್ರಾಹಕರಿಗೆ ಬ್ಯಾಂಕ್ ಮಾಹಿತಿ ನೀಡಬೇಕಾಗುತ್ತದೆ.


Click it and Unblock the Notifications