ನೀವು ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್ ಹೂಡಿಕೆ ಮಾಡುತ್ತೀರಾ? ಸೆಬಿಯು 2023ರ ಮಾ.31ರೊಳಗೆ ಎಲ್ಲ ಡಿಮ್ಯಾಟ್ ಹಾಗೂ ಟ್ರೇಡಿಂಗ್ ಖಾತೆದಾರರಿಗೆ ನಾಮಿನಿಯನ್ನು ಸೇರಿಸುವುದನ್ನು ಕಡ್ಡಾಯಗೊಳಿಸಿ ಗಡುವು ವಿಧಿಸಿದೆ. ಒಂದು ವೇಳೆ ಈ ಗಡುವಿನೊಳಗೆ ನಾಮಿನಿಯನ್ನು ಸೇರಿಸದಿದ್ದರೆ ಖಾತೆಗಳು ಸ್ಥಗಿತಗೊಳ್ಳಲಿವೆ. ಹಾಗಾದರೆ, ನಿಮ್ಮ ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಸೇರಿಸುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಡಿಮ್ಯಾಟ್ ಖಾತೆಯ ನಾಮಿನೇಷನ್‌ನ್ನು ಮಾಡಿಸಿಕೊಳ್ಳುವುದಕ್ಕೆ ಮಾ.31 ಕೊನೆಯ ದಿನವಾಗಿದೆ. ಯಾವ ಹೂಡಿಕೆದಾರರು ಈ ಗಡುವನ್ನು ಪೂರೈಸುವುದಿಲ್ಲವೋ ಅಂಥವರ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆಯು ಡೆಬಿಟ್‌ಗಾಗಿ ಸ್ಥಗಿತಗೊಳ್ಳುತ್ತದೆ. ಈ ಹಿಂದೆ ನಾಮಿನೇಷನ್ ಡೆಡ್‌ಲೈನ್ 2022ರ ಮಾರ್ಚ್ ಆಗಿತ್ತು. ಆದರೆ, ಸೆಬಿ(Sebi)ಯು ಈ ಗಡುವನ್ನು ಒಂದು ವರ್ಷ ವಿಸ್ತರಣೆ ಮಾಡಿದೆ. ಹಲವು ಸ್ಟಾಕ್ ಹೋಲ್ಡರ್‌ಗಳ ಮನವಿ ಹಾಗೂ ಕೋರಿಕೆ ಮೇರೆಗೆ ಗಡುವು ವಿಸ್ತರಣೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಸೆಬಿಯು ಅಸ್ತಿತ್ವದಲ್ಲಿರುವ ಎಲ್ಲ ಅರ್ಹ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆದಾರರು 2021ರ ಜುಲೈನೊಳಗೆ ನಾಮಿನೇಷನ್ ಮಾಡಿಸಿಕೊಳ್ಳುವಂತೆ ವಿನಂತಿಸಿತ್ತು. 2021ರ ಜುಲೈನಲ್ಲಿ ಹೊರಡಿಸಿದ್ದ ಸುತ್ತೋಲೆ ಪ್ರಕಾರ ನಾಮಿನಿ ವಿವರಗಳನ್ನು ಈಗಾಗಲೇ ಸಲ್ಲಿಸಿದ ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೆ ಮರು ಸಲ್ಲಿಕೆ ಮಾಡುವುದು ಅವರ ಆಯ್ಕೆಗೆ ಬಿಟ್ಟಿದ್ದು ಅಥವಾ ಐಚ್ಛಿಕವಾಗಿದೆ.
ಆದರೆ ಇನ್ನು ಕೂಡ ನಾಮಿನಿಯ ವಿವರ ಸಲ್ಲಿಕೆ ಮಾಡದವರು ಹಾಗೂ ಸಲ್ಲಿಕೆ ಮಾಡಬಯಸುವವರು ಸ್ಟಾಕ್ ಬ್ರೋಕರ್‌ಗಳು ಅಥವಾ ಅಂಥಹ ಸೇವೆ ಒದಗಿಸುವ ಠೇವಣಿ ಪಾಲುದಾರರಡಿ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಎರಡು ಅಂಶದ ದೃಢೀಕರಣ ಲಾಗಿನ್ ಮೂಲಕ ಅದನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.
ಡಿಮ್ಯಾಟ್ ಖಾತೆಗೆ ನಾಮಿನಿಯನ್ನು ಸೇರಿಸುವ ವಿಧಾನ ಹೇಗೆ?
ಹಂತ-1 ನಿಮ್ಮ ಡಿಮ್ಯಾಟ್ ಖಾತೆಗೆ ಪ್ರವೇಶಿಸಿ.
ಹಂತ 2: ಪ್ರೊಫೈಲ್ ಸೆಗ್‌ಮೆಂಟ್‌ನ ನಾಮಿನಿ ಡಿಟೇಲ್ಸ್ ಪೇಜ್‌ನಿಂದ 'ಮೈ ನಾಮಿನಿ' ಆಯ್ಕೆ ಮಾಡಿ.
ಹಂತ 3: add ನಾಮಿನಿ ಅಥವಾ 'opt-out' ಆಯ್ಕೆ ಮಾಡಿ.
ಹಂತ 4: ನಾಮಿನಿ ವಿವರಗಳನ್ನು ಭರ್ತಿ ಮಾಡಿ ಹಾಗೂ ನಾಮಿನಿಯ ಗುರುತಿನ ದಾಖಲೆಯನ್ನು ಅಪ್‌ಲೋಡ್ ಮಾಡಿ. ದಾಖಲೆಯನ್ನು ಅಪ್‌ಲೋಡ್ ಮಾಡಿದ ಬಳಿಕ ನಾಮಿನಿಗೆ ನೀವು ನೀಡಬಯಸುವ ಷೇರಿನ ಪ್ರಮಾಣವನ್ನು ಪರ್ಸಂಟೇಜ್ ಫೀಲ್ಡ್‌ನಲ್ಲಿ ನಮೂದಿಸಿ.
ಹಂತ 5: ನಿಮ್ಮ ಆಧಾರ್ ಒಟಿಪಿಯನ್ನು ಬಳಸಿಕೊಂಡು ದಾಖಲೆಗೆ ನಿಮ್ಮ ಡಿಜಿಟಲ್ ಸಹಿ ಮಾಡಿ.
ಹಂತ 6: ನಾಮಿನಿಯ ವಿವರಗಳನ್ನು ಪರಿಶೀಲಿಸಲಾಗುತ್ತದೆ ಹಾಗೂ ಆ ಬಳಿಕ 24ರಿಂದ 48 ಗಂಟೆಯೊಳಗೆ ಡಿಮ್ಯಾಟ್ ಖಾತೆಗೆ ಸೇರ್ಪಡೆಗೊಳಿಸಲಾಗುತ್ತದೆ.


Click it and Unblock the Notifications