ದೀಪಾವಳಿ ಹಬ್ಬದ ವೇಳೆ, ಅದರಲ್ಲೂ ಧನತೇರಸ್ (ಧನಲಕ್ಷ್ಮೀ ಹಬ್ಬ) ಸಂದರ್ಭದಲ್ಲಿ ಚಿನ್ನ ಖರೀದಿಸುವುದು ಬಹಳ ಒಳ್ಳೆಯದು ಎಂದು ಭಾವಿಸಲಾಗುತ್ತದೆ. ಹೀಗಾಗಿ, ದೀಪಾವಳಿ ಹಬ್ಬ ಬಂತೆಂದರೆ ಭಾರತದಲ್ಲಿ ಚಿನ್ನಕ್ಕೆ ಒಳ್ಳೆಯ ಬೇಡಿಕೆ ಇರುತ್ತದೆ.
ಧನತೇರಸ್ ದಿನದಂದು ಭಾರತೀಯರು, ಅದರಲ್ಲೂ ಹೆಚ್ಚಾಗಿ ಮಹಿಳೆಯರು ಹೊಸ ಚಿನ್ನದ ಆಭರಣ ಕೊಳ್ಳಲು ಬಯಸುತ್ತಾರೆ. ಹಲವು ಕಂಪನಿಗಳಲ್ಲಿ ದೀಪಾವಳಿ ಉಡುಗೊರೆಯಾಗಿ ಉದ್ಯೋಗಿಗಳಿಗೆ ಚಿನ್ನದ ನಾಣ್ಯಗಳನ್ನು ಕೊಡುವುದುಂಟು. ಉತ್ತರ ಭಾರತೀಯರ ಒಡೆತನದ ಕಂಪನಿಗಳಲ್ಲಿ ಇಂಥ ಗಿಫ್ಟ್ ಹೆಚ್ಚು.
ಭಾರತದಲ್ಲಿ ಚಿನ್ನಕ್ಕೆ ಹೆಚ್ಚಿನ ತೆರಿಗೆ ಇದೆ. ಹೀಗಾಗಿ, ಚಿನ್ನದ ಮೂಲ ಬೆಲೆಗಿಂತ ಹೆಚ್ಚು ಹಣ ತೆತ್ತು ಚಿನ್ನವನ್ನು ಕೊಳ್ಳಬೇಕಾಗುತ್ತದೆ. ದುಬೈಗೆ ಹೋಗುವ ಭಾರತೀಯರು ಸಾಮಾನ್ಯವಾಗಿ ಜೊತೆಯಲ್ಲಿ ಚಿನ್ನವನ್ನೂ ಕೊಂಡು ತರುತ್ತಾರೆ. ಕಾರಣ, ದುಬೈನಲ್ಲಿ ಚಿನ್ನಕ್ಕೆ ತೆರಿಗೆ ಇರುವುದಿಲ್ಲ. ಹಾಗಂತ ದುಬೈನಿಂದ ನೀವು ಮನಸೋಯಿಚ್ಛೆ ಚಿನ್ನ ತರಲು ಆಗುವುದಿಲ್ಲ. ಕೆಲ ಮಿತಿ, ನಿರ್ಬಂಧಗಳಿವೆ.

ಕಸ್ಟಮ್ಸ್ ತೆರಿಗೆ ಪ್ರಾಧಿಕಾರವಾದ ಸಿಬಿಐಸಿ ಪ್ರಕಾರ, ದುಬೈನಲ್ಲಿ 6 ತಿಂಗಳಿಗೂ ಹೆಚ್ಚು ಕಾಲ ನೆಲಸಿದ್ದ ಭಾರತೀಯ ಮೂಲದವರು ಅಲ್ಲಿಂದ ಚಿನ್ನ ತರುವುದಾದರೆ ಕಸ್ಟಮ್ಸ್ ಸುಂಕವಾಗಿ ಶೇ. 12.5 ಮತ್ತು ಸಾಮಾಜಿಕ ಕಲ್ಯಾಣ ಸರ್ಚಾರ್ಜ್ ಆಗಿ ಶೇ. 1.25ರಷ್ಟು ತೆರಿಗೆಯನ್ನು ನೀಡಬೇಕಾಗುತ್ತದೆ. ಬೇರೆಯವರೆಲ್ಲರೂ ದುಬೈನಿಂದ ಭಾರತಕ್ಕೆ ಚಿನ್ನ ತಂದರೆ 38.5ರಷ್ಟು ಕಸ್ಟಮ್ಸ್ ಡ್ಯೂಟಿ ಪಾವತಿಸಬೇಕಾಗುತ್ತದೆ.
ದುಬೈನಲ್ಲಿ 22 ಕೆರಟ್ ಚಿನ್ನದ ಬೆಲೆ 10 ಗ್ರಾಂಗೆ 1847 ಡಿರಾಂ ಇದೆ. ರೂಪಾಯಿ ಲೆಕ್ಕದಲ್ಲಿ ಸುಮಾರು 41-42 ಸಾವಿರ ರೂಪಾಯಿ ಆಗುತ್ತದೆ. ಭಾರತದಲ್ಲಿ 46 ಸಾವಿರ ರೂ ಇದೆ. ಶೇ. 38ರಷ್ಟು ಕಸ್ಟಮ್ಸ್ ಸುಂಕ ಪಾವತಿಸಿದರೆ ಬೆಲೆ 60 ಸಾವಿರ ಸಮೀಪಕ್ಕೆ ಹೋಗಿಬಿಡುತ್ತದೆ.

ತೆರಿಗೆ ತಪ್ಪಿಸಲು ಅವಕಾಶ ಇದೆ:
ಅಲ್ಲದೇ, ದುಬೈನಿಂದ ಒಬ್ಬ ವ್ಯಕ್ತಿ ಒಂದು ಕೆಜಿಗಿಂತ ಹೆಚ್ಚು ಚಿನ್ನ ತರುವಂತಿಲ್ಲ. ಅಷ್ಟು ತಂದರೆ ಸುಂಕ ಕಟ್ಟಬೇಕಾಗುತ್ತದೆ. ಆದರೆ, ಸುಂಕ ಇಲ್ಲದೇ ಚಿನ್ನ ತರುವ ಅವಕಾಶವೂ ಇದೆ. ದುಬೈನಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಇರುವ ಪುರುಷರು 20 ಗ್ರಾಂಗಳಿಗಿಂತ ಹೆಚ್ಚು ಚಿನ್ನವನ್ನು ತರುವಂತಿಲ್ಲ. ಅಥವಾ ಆ ಚಿನ್ನದ ಬೆಲೆ 50 ಸಾವಿರ ರೂ ಮೀರಬಾರದು.
ಇನ್ನು, ಮಹಿಳಾ ಪ್ರಯಾಣಿಕರಾದರೆ 40 ಗ್ರಾಮ್‌ಗಳವರೆಗೆ ಚಿನ್ನವನ್ನು ದುಬೈನಿಂದ ಸಾಗಿಸಿ ತರಬಹುದು. 1 ಲಕ್ಷ ರೂವರೆಗಿನ ಮೌಲ್ಯದ ಚಿನ್ನ ತರುವ ಅವಕಾಶ ಇದೆ. ಇದನ್ನು ಮೀರಿದರೆ ಕಸ್ಟಮ್ಸ್ ಡ್ಯೂಟಿ ಪಾವತಿಸಬೇಕಾಗುತ್ತದೆ.


Click it and Unblock the Notifications