ಬೆಂಗಳೂರು, ಅ. 18: ಚಿನ್ನ ನಾನಾ ರೀತಿಯ ಅವಕಾಶಗಳನ್ನು ಕೊಡಬಲ್ಲ ಅಮೂಲ್ಯ ವಸ್ತು. ಒಡವೆಗಳಾಗಿ ಧರಿಸಲು ಚಿನ್ನ ನಮ್ಮ ಭಾರತೀಯರಿಗೆ ಫೇವರಿಟ್. ಹಾಗೆಯೇ, ಚಿನ್ನ ಅಡ ಇಟ್ಟು ಸಾಲ ಪಡೆಯುವುದೂ ಬಹಳ ಸುಲಭ. ಇದಲ್ಲದೇ ಹೂಡಿಕೆಯಾಗಿಯೂ ಚಿನ್ನ ಈಗ ಎಲ್ಲರ ನೆಚ್ಚಿನ ವಸ್ತುವಾಗಿದೆ. ಹೂಡಿಕೆಯಾಗಿ ಆನ್‌ಲೈನ್‌ನಲ್ಲಿ ಜನರು ಡಿಜಿಟಲ್ ರೂಪದಲ್ಲಿ ಚಿನ್ನವನ್ನು ಕೊಳ್ಳುವುದು ಹೆಚ್ಚಾಗಿದೆ. ಈಗ ಚಿನ್ನವನ್ನು ಲೀಸ್ ಆಗಿ ನೀಡಿ ಒಳ್ಳೆಯ ಲಾಭ ಮಾಡಿಕೊಳ್ಳುವ ಅವಕಾಶವೂ ಸಿಕ್ಕಿದೆ.
ಸೇಫ್‌ಗೋಲ್ಡ್ ಎಂಬ ಆನ್‌ಲೈನ್ ಡಿಜಿಟಲ್ ಕಂಪನಿ ಇದೀಗ ಗೇಯ್ನ್ಸ್ ಎಂಬ ಹೊಸ ಸೇವೆಯನ್ನು ಆರಂಭಿಸಿದೆ. ಡಿಜಿಟಲ್ ಗೋಲ್ಡ್ ಖರೀದಿಸುವ ಜನರಿಗೆ ಉತ್ತಮ ರಿಟರ್ನ್ಸ್ ನೀಡುವ ಸ್ಕೀಮ್‌ನ ಅವಕಾಶ ತೆರೆದಿಟ್ಟಿದೆ.
ಒಡವೆ ಅಂಗಡಿಯವರಿಗೆ ಚಿನ್ನವನ್ನು ಲೀಸ್‌ಗೆ ಇತ್ತು, ಕೊನೆಯಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಹೆಚ್ಚುವರಿ ಚಿನ್ನದ ಸಮೇತ ರಿಟರ್ನ್ ಪಡೆಯುವ ಸ್ಕೀಮ್ ಇದು. ಈ ಸೇವೆಯ ವಿವರ ಇಲ್ಲಿದೆ.
ಡಿಜಿಟಲ್ ಗೋಲ್ಡ್ ಲೀಸ್ ಹೇಗೆ?
ಸೇಫ್‌ಗೋಲ್ಡ್ ವೆಬ್‌ಸೈಟ್ ಮತ್ತು ಆ್ಯಪ್‌ನಲ್ಲಿ ನೀವು ಖರೀದಿಸುವ ಡಿಜಿಟಲ್ ಚಿನ್ನವನ್ನು ನಿಮಗೆ ಬೇಕಾದ ಆಭರಣ ಅಂಗಡಿಯವರೆಗೆ ನಿರ್ದಿಷ್ಟ ಅವಧಿಯವರೆಗೆ ಲೀಸ್‌ಗೆ ನೀಡಬಹುದು. ಲೀಸ್ ಅವಧಿಯನ್ನು ನೀವೇ ನಿರ್ಧರಿಸಬಹುದು. ನಿಮ್ಮ ಲೀಸ್ ಅವಧಿಯ ಆಧಾರದ ಮೇಲೆ ನಿಮ್ಮ ಚಿನ್ನದ ಮೇಲೆ ರಿಟರ್ನ್ ಸಿಗುತ್ತದೆ. ಸೇಫ್‌ಗೋಲ್ಡ್‌ನಲ್ಲಿ ಪಟ್ಟಿ ಮಾಡಲಾಗುವ ಸಣ್ಣ ಒಡವೆ ಅಂಗಡಿಯವರು ವಿಶ್ವಾಸಾರ್ಹವೆಂದು ಖಾತ್ರಿ ಮಾಡಲಾಗಿದೆ ಎಂದು ಈ ಕಂಪನಿ ಹೇಳುತ್ತದೆ.
ಆದರೆ ನಿಮಗೆ ಬೇಕಾದಷ್ಟು ಚಿನ್ನವನ್ನು ಲೀಸ್‌ಗೆ ಕೊಡಲು ಆಗುವುದಿಲ್ಲ. ಈ ಯೋಜನೆಯಲ್ಲಿ ಕನಿಷ್ಠ 0.5 ಗ್ರಾಮ್‌ನಿಂದ ಗರಿಷ್ಠ 20 ಗ್ರಾಂವರೆಗೆ ಮಾತ್ರ ಡಿಜಿಟಲ್ ಗೋಲ್ಡ್ ಅನ್ನು ಲೀಸ್‌ಗೆ ಕೊಡಬಹುದು. ಲೀಸ್ ಅವಧಿ 30 ದಿನಗಳಿಂದ 364 ದಿನಗಳವರೆಗೆ ನಿಮಗೆ ಬೇಕಿದ್ದನ್ನು ಆರಿಸಿಕೊಳ್ಳಬಹುದು.
"ಬಹುತೇಕ ಲೀಸ್‌ಗಳ ಅವಧಿ 90ರಿಂದ 180 ದಿನಗಳವರೆಗೆ ಇರುತ್ತದೆ. ಇಲ್ಲಿ ಒಂದು ವರ್ಷಕ್ಕೆ ಶೇ. 3-6ರಷ್ಟು ರಿಟರ್ನ್ ಅನ್ನು ನಿರೀಕ್ಷಿಸಬಹುದು. ಪ್ರತೀ ದಿನವೂ ನಿರ್ದಿಷ್ಟ ರಿಟರ್ನ್ ಲೆಕ್ಕವಾಗುತ್ತಾ ಹೋಗುತ್ತದೆ. ತಿಂಗಳಿಗೊಮ್ಮೆ ಗ್ರಾಹಕರ ಡಿಜಿಟಲ್ ಗೋಲ್ಡ್ ಖಾತೆಗೆ ಜಮೆ ಮಾಡುತ್ತಾ ಹೋಗಲಾಗುತ್ತದೆ. ಗ್ರಾಹಕರಿಗೆ ಸಿಗುವ ರಿಟರ್ನ್ ಹಣದ ರೂಪದ ಬದಲು ಚಿನ್ನದ ರೂಪದಲ್ಲೇ ಇರುತ್ತದೆ. ಲೀಸ್ ಅವಧಿ ಮುಗಿದ ಬಳಿಕ ನೀವು ಲೀಸ್ ಆಗಿ ಇತ್ತ ಚಿನ್ನ ಹಾಗೂ ಗಳಿಸಿದ ರಿಟರ್ನ್ ಇವೆಲ್ಲವೂ ಗ್ರಾಹಕರ ಖಾತೆಗೆ ಹೋಗಿ ಸೇರುತ್ತದೆ" ಎಂದು ಸೇಫ್‌ಗೋಲ್ಡ್ ಪ್ಲಾಟ್‌ಫಾರ್ಮ್‌ನ ಸ್ಥಾಪಕ ಮತ್ತು ಎಂಡಿ ಗೌರವ್ ಮಾಥುರ್ ಹೇಳಿದ್ದಾರೆ.
ಲೆಕ್ಕಾಚಾರ ಹೀಗೆ
ಒಂದು ವೇಳೆ ಒಬ್ಬ ಗ್ರಾಹಕ 10 ಗ್ರಾಮ್ ಚಿನ್ನವನ್ನು 3 ತಿಂಗಳ ಅವಧಿಗೆ ಒಡವೆ ಅಂಗಡಿಗೆ ಲೀಸ್ ಆಗಿ ನೀಡುತ್ತಾರೆಂದು ಇಟ್ಟುಕೊಳ್ಳಿ. ಅವರಿಗೆ ವಾರ್ಷಿಕ ರಿಟರ್ನ್ ಶೇ. 3ರಷ್ಟು ಇರುತ್ತದೆ. ಅಂದರೆ ಮೂರು ತಿಂಗಳ ಅವಧಿಯ ಬಳಿಕ ಆ ಗ್ರಾಹಕರಿಗೆ 10 ಗ್ರಾಂ ಚಿನ್ನದ ಜೊತೆಗೆ 75 ಮಿಲಿಗ್ರಾಮ್ ಚಿನ್ನವೂ ಅಕೌಂಟ್‌ಗೆ ಸೇರುತ್ತದೆ.
ಲೆಕ್ಕ ಹೀಗೆ: ಒಂದು ವರ್ಷಕ್ಕೆ ಶೇ. 3ರಷ್ಟು ರಿಟರ್ನ್. ಅಂದರೆ 10 ಗ್ರಾಂಗೆ ಒಂದು ವರ್ಷದಲ್ಲಿ (12 ತಿಂಗಳು) 300 ಮಿಲಿಗ್ರಾಂ ರಿಟರ್ನ್ ಬರುತ್ತದೆ. ಇದನ್ನು 3 ತಿಂಗಳಿಗೆ ಪರಿವರ್ತಿಸಿದರೆ 75 ಮಿಲಿಗ್ರಾಂ ಆಗುತ್ತದೆ.
ಅಪಾಯಗಳೂ ಇವೆ
ಡಿಜಿಟಲ್ ಗೋಲ್ಡ್ ಅನ್ನು ಲೀಸ್ ಆಗಿ ನೀಡುವ ಸ್ಕೀಮ್‌ನಲ್ಲಿ ಐದು ಪ್ರಮುಖ ರಿಸ್ಕ್‌ಗಳಿರುವುದನ್ನು ಸ್ವತಃ ಸೇಫ್‌ಗೋಲ್ಡ್ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.
ಮೊದಲನೆಯದು, ಡಿಜಿಟಲ್ ಗೋಲ್ಡ್ ಲೀಸಿಂಗ್ ಸೇವೆ ಅಧಿಕೃತವಾಗಿರುವಂಥದ್ದಲ್ಲ. ಅಂದರೆ ಯಾವುದೇ ಪ್ರಾಧಿಕಾರದ ನಿಬಂಧನೆಗಳಿಗೆ ಒಳಪಟ್ಟಿರುವುದಿಲ್ಲ. ಒಂದು ವೇಳೆ ವಂಚನೆಯಾದರೆ ಸೆಬಿ ಅಥವಾ ಆರ್‌ಬಿಐನಂತರ ಸಂಸ್ಥೆಗೆ ಮನವಿ ಮಾಡಲು ಆಗುವುದಿಲ್ಲ. ಹೀಗಾಗಿ, ನಿಮ್ಮ ರಿಸ್ಕ್ ಮೇಲೆ ಲೀಸ್‌ಗೆ ಹಾಕಬಹುದು.
ಎರಡನೆಯದು, ನೀವು ಲೀಸ್‌ಗೆ ಕೊಟ್ಟ ಬಳಿಕ ಅವಧಿ ಮುಗಿಯುವವರೆಗೂ ಏನೂ ಮಾಡುವಂತಿಲ್ಲ. ಅಂದರೆ ಲೀಸ್ ಅವಧಿಗೆ ಮುನ್ನ ನೀವು ನಿಮ್ಮ ಚಿನ್ನವನ್ನು ಮಾರಾಟ ಮಾಡುವುದಾಗಲೀ, ಲೀಸ್ ರದ್ದು ಮಾಡುವುದಾಗಲೀ ಸಾಧ್ಯವಾಗುವುದಿಲ್ಲ. ಒಡವೆ ಅಂಗಡಿಯವರಿಗೆ ಯಾವಾಗ ಬೇಕಾದರೂ ಲೀಸ್ ಅನ್ನು ರದ್ದು ಮಾಡುವ ಅವಕಾಶ ಇರುತ್ತದೆ. ಒಂದು ವೇಳೆ ಅಂಗಡಿಯವರೇ ಲೀಸ್ ಅನ್ನು ರದ್ದು ಮಾಡಿದಾಗ ನೀವು ಕೊಟ್ಟಿದ್ದ ಪ್ರಮಾಣದ ಡಿಜಿಟಲ್ ಚಿನ್ನದ ಜೊತೆಗೆ, ಆ ಅವಧಿಯವರೆಗೆ ಜಮೆಯಾಗಿದ್ದ ಹೆಚ್ಚುವರಿ ಚಿನ್ನವೂ ಸೇರಿ ನಿಮ್ಮ ಅಕೌಂಟ್‌ಗೆ ಜಮೆಯಾಗುತ್ತದೆ.
ಮೂರನೆಯದು, ಒಡವೆ ಅಂಗಡಿಯವ ಮೋಸ ಮಾಡಿದರೆ ನ್ಯಾಯ ಸಿಗುತ್ತದೆ ಎಂದು ಖಾತ್ರಿ ಇಲ್ಲ. ಆದರೆ, ಒಡವೆ ಅಂಗಡಿಯವರಿಂದ ಬ್ಯಾಂಕ್ ಗ್ಯಾರಂಟಿಯನ್ನು ಪಡೆದುಕೊಳ್ಳಲಾಗುತ್ತದೆ. ಹೀಗಾಗಿ, ಇಂಥ ವಂಚನೆಗೆ ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಅವಕಾಶ ಕಡಿಮೆ ಎಂದು ಸೇಫ್‌ಗೋಲ್ಡ್ ವೆಬ್‌ಸೈಟ್ ಸ್ಪಷ್ಟಪಡಿಸಿದೆ.
ನಾಲ್ಕನೆಯದು ಬೆಲೆ ವಿಚಾರ. ನಿಮಗೆ ಈ ಲೀಸ್‌ನಿಂದ ದುಡ್ಡು ಬದಲು ಚಿನ್ನವೇ ರಿಟರ್ನ್ ಅಗಿ ಸಿಗುತ್ತದೆ. ಒಂದು ವೇಳೆ ಚಿನ್ನದ ಬೆಲೆ ತಗ್ಗಿದರೆ ನಿಮ್ಮ ಒಟ್ಟಾರೆ ಚಿನ್ನದ ಮೌಲ್ಯವೂ ಕಡಿಮೆ ಆಗುತ್ತದೆ. ಹೀಗಾಗಿ, ನಿಮಗೆ ನಷ್ಟವೆನಿಸಬಹುದು. ಇದೊಂದು ರೀತಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲಾಗಿದೆ ಎಂದು ಭಾವಿಸಬಹುದು.
ಐದನೆಯದು ಯಾವುದೇ ಗ್ಯಾರಂಟಿ ಇಲ್ಲದಿರುವುದು. ನೀವು ಲೀಸ್‌ಗೆ ಕೊಟ್ಟಿರುವ ಡಿಜಿಟಲ್ ಗೋಲ್ಡ್ ವಾಪಸ್ ಬರುತ್ತದೆ ಎಂದಾಗಲೀ ರಿಟರ್ನ್ ಬರುತ್ತದೆ ಎಂದಾಗಲೀ ಸೇಫ್‌ಗೋಲ್ಡ್ ಖಾತ್ರಿ ಪಡಿಸುವುದಿಲ್ಲ.
ಜಿಎಂಎಸ್ ಸ್ಕೀಮ್
ಕೇಂದ್ರ ಸರ್ಕಾರ 2015ರಲ್ಲಿ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ (ಜಿಎಂಎಸ್) ಹೊರತಂದಿತ್ತು. ಇದರಲ್ಲಿ ವಾರ್ಷಿಕ ಶೇ. 2..25ರಿಂದ 2.50ರಷ್ಟು ಆದಾಯ ಸಿಗುತ್ತದೆ. ಈ ಸ್ಕೀಮ್ ಪ್ರಕಾರ ಯಾವ ವ್ಯಕ್ತಿ ಬೇಕಾದರೂ ತಮ್ಮ ಭೌತಿಕ ಚಿನ್ನವನ್ನು ಬ್ಯಾಂಕುಗಳಿಗೆ ಲೀಸ್ ರೂಪದಲ್ಲಿ ನೀಡಬೇಕು. ಬ್ಯಾಂಕ್‌ನವರು ಈ ಒಡವೆಯನ್ನು ಆಭರಣ ತಯಾರಕರಿಗೆ ಲೀಸ್‌ಗೆ ಕೊಡುತ್ತಾರೆ. ಲೀಸ್ ಅವಧಿ ಮುಗಿದ ಬಳಿಕ ಜನರ ಆ ಚಿನ್ನವು ಗೋಲ್ಡ್ ಕಾಯಿನ್ ರೂಪದಲ್ಲಿ ಹಿಂದಿರುಗುತ್ತದೆ. ಜೊತೆಗೆ ನಿರ್ದಿಷ್ಟ ರಿಟರ್ನ್ ಕೂಡ ಸಿಗುತ್ತದೆ. ಆದರೆ, ಈ ಯೋಜನೆಗೆ ಜನರಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ.
ಇದರ ಜೊತೆಗೆ ಕೇಂದ್ರ ಸರಕಾರ ಸೋವರೀನ್ ಗೋಲ್ಡ್ ಬಾಂಡ್ ಸ್ಕೀಮ್ ಅನ್ನೂ ನಡೆಸುತ್ತಿದೆ. ಎಂಟು ವರ್ಷಗಳವರೆಗೆ ಚಿನ್ನವನ್ನು ಅಡ ಇಟ್ಟರೆ ವರ್ಷಕ್ಕೆ 2.5% ಬಡ್ಡಿ ಜಮೆಯಾಗುತ್ತದೆ.


Click it and Unblock the Notifications