ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ವ್ಯಕ್ತಿಯು ತನ್ನ ಆದಾಯದಲ್ಲಿ ಕೊಂಚ ಮೊತ್ತವನ್ನು ಉಳಿತಾಯ ಮಾಡಲು ಸಹಾಯಕವಾದ ಯೋಜನೆಯೇ ಪ್ರಾವಿಡೆಂಟ್ ಫಂಡ್ ಖಾತೆಯಾಗಿದೆ. ಬಹುತೇಕ ಸಂಸ್ಥೆಗಳಲ್ಲಿ ತಮ್ಮ ಉದ್ಯೋಗಿಗಳಿಗೆ ಪಿಎಫ್ ಖಾತೆ ತೆರೆಯಲಾಗುತ್ತದೆ. ಈ ಹಣವನ್ನು ನಮ್ಮ ಉದ್ಯೋಗ ಜೀವನದ ಕೊನೆಯಲ್ಲಿ ಬಳಸಬಹುದು. ಹಾಗೆಯೇ ಕಷ್ಟ ಸಂದರ್ಭದಲ್ಲಿಯೂ ವಿತ್‌ಡ್ರಾ ಮಾಡಿಕೊಳ್ಳಬಹುದು. ಅಂದರೆ ಕಷ್ಟ ಕಾಲಕ್ಕೆ ಆಗುವ ಉಳಿತಾಯವೆಂದರೂ ತಪ್ಪಾಗಲಾರದು.
ನಮ್ಮ ಮೂಲ ಆದಾಯದಿಂದ ಕಡಿತವಾಗುವ ಈ ಪ್ರಾವಿಡೆಂಟ್ ಫಂಡ್ ಮೊತ್ತದ ಮೇಲೆ ಕೇಂದ್ರ ಸರ್ಕಾರವು ಬಡ್ಡಿದರವನ್ನು ಜಮೆ ಮಾಡುತ್ತದೆ. ಪ್ರತಿ ವರ್ಷವೂ ಬಡ್ಡಿದರ ಜಮೆ ಮಾಡಲಾಗುತ್ತದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಪಿಎಫ್ ಬಡ್ಡಿದರ ಶೇಕಡ 8.1ರಷ್ಟಿದೆ. ನೀವು ಶೀಘ್ರವಾಗಿ ವಿತ್‌ಡ್ರಾ ಮಾಡಲು ಸಾಧ್ಯವಾಗುವ ಉಳಿತಾಯ ಮೊತ್ತಗಳ ಪೈಕಿ ಪಿಎಫ್ ಕೂಡಾ ಒಂದಾಗಿದೆ. ನೀವು ಮದುವೆಗಾಗಿಯೂ ಕೂಡಾ ನಿಮ್ಮ ಇಪಿಎಫ್‌ಒ ಖಾತೆಯ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳುಬಹುದು. ಅದು ಕೂಡಾ ಸರಳವಾಗಿ. ಆದರೆ ಷರತ್ತುಗಳನ್ನು ತಿಳಿಯುವುದು ಮುಖ್ಯ, ಈ ಬಗ್ಗೆ ಇಲ್ಲಿದೆ ಮಾಹಿತಿ....

ವಿವಾಹವಾಗುವುದಾದರೆ ಮೊತ್ತ ವಿತ್‌ಡ್ರಾ ಅವಕಾಶ
ಇತ್ತೀಚಿನ ಪಿಎಫ್ ವಿತ್‌ಡ್ರಾ ರೆಗ್ಯೂಲೇಷನ್ ಪಿಎಫ್ ಖಾತೆದಾರರು ತಮ್ಮ ಪಿಎಫ್ ಖಾತೆಯಿಂದ ಮದುವೆ ಸಂದಭದಲ್ಲಿ ಬರುವ ಖರ್ಚುಗಳ ನಿರ್ವಹಣೆಗಾಗಿ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವನ್ನು ನೀಡಿದೆ. ಆದರೆ ಈ ಖಾತೆಯನ್ನು ಹೊಂದಿರುವವರ ವಿವಾಹವಾಗಿದ್ದರೆ ಮಾತ್ರ ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿರುತ್ತದೆ. ಹಾಗೆಯೇ ಖಾತೆದಾರರ ಪುತ್ರ, ಪುತ್ರಿ, ಸಹೋದರ, ಸಹೋದರಿಯ ವಿವಾಹವಾದರೂ ಪಿಎಫ್ ವಿತ್‌ಡ್ರಾ ಮಾಡಬಹುದು. ಆದರೆ ನೀವು ಈ ಸೌಲಭ್ಯವನ್ನು ಹೂಡಿಕೆ ಪಿಎಫ್ ಖಾತೆ ತೆರೆದು 7 ವರ್ಷವಾಗುವವರೆಗೂ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.
ಎಷ್ಟು ಮೊತ್ತ ವಿತ್‌ಡ್ರಾ ಮಾಡಿಕೊಳ್ಳಬಹುದು?
ನೀವು ಮದುವೆ ವೇಳೆ ಪಿಎಫ್ ಮೊತ್ತ ವಿತ್‌ಡ್ರಾ ಮಾಡುವ ಅವಕಾಶವಿದೆ ಎಂದಾದರೂ ಕೂಡಾ ಎಷ್ಟು ಮೊತ್ತ ವಿತ್‌ಡ್ರಾ ಮಾಡುವ ಅವಕಾಶವಿದೆ ಎಂಬ ಪ್ರಶ್ನೆ ಹುಟ್ಟುತ್ತದೆ. ಸದಸ್ಯರು ಒಟ್ಟು ಮೊತ್ತದ ಶೇಕಡ 50ರಷ್ಟು ಮೊತ್ತವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ಇದು ಬಡ್ಡಿದರ ಸೇರಿ ಅನ್ವಯವಾಗುತ್ತದೆ. ಆದರೆ ಪಿಎಫ್ ಖಾತೆಗೆ 7 ವರ್ಷವಾಗಿರಬೇಕಾಗುತ್ತದೆ. ಇನ್ನು ಶಿಕ್ಷಣ ಹಾಗೂ ವಿವಾಹಕ್ಕಾಗಿ ಮೂರು ಬಾರಿ ಮಾತ್ರ ವಿತ್‌ಡ್ರಾ ಮಾಡಿಕೊಳ್ಳುವ ಅವಕಾಶವಿದೆ. ನೀವು ಮನೆಯಲ್ಲಿಯೇ ಕೂತು ಪಿಎಫ್ ಮೊತ್ತ ವಿತ್‌ಡ್ರಾ ಮಾಡಬಹುದು. 72 ಗಂಟೆಯಲ್ಲಿ ಮೊತ್ತ ಲಭ್ಯವಾಗಲಿದೆ.
ಟಿಡಿಎಸ್ ಬಗ್ಗೆ ತಿಳಿದಿರಲಿ
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಯಿಂದ ವಿತ್‌ಡ್ರಾ ಮಾಡುವ ಮೊತ್ತದ ಮೇಲಿನ ಟಿಡಿಎಸ್ ಅನ್ನು ಸರ್ಕಾರವು ಶೇಕಡ 30ರಿಂದ ಶೇಕಡ 20ಕ್ಕೆ ಇಳಿಕೆ ಮಾಡುತ್ತದೆ ಎಂದು 2023-2024ರ ಹಣಕಾಸು ವರ್ಷದ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ ಟಿಡಿಎಸ್ ಎಲ್ಲರಿಗೂ ಕೂಡಾ ಅನ್ವಯವಾಗುವುದಿಲ್ಲ, ಮುಖ್ಯವಾಗಿ ಪ್ಯಾನ್ ಕಾರ್ಡ್ ಅನ್ನು ಯಾರ ಪಿಎಫ್ ಖಾತೆಗೆ ಲಿಂಕ್ ಮಾಡಿರುವುದಿಲ್ಲವೋ ಅವರಿಗೆ ವಿಧಿಸಲಾಗುತ್ತದೆ.
ಆನ್‌ಲೈನ್‌ನಲ್ಲಿ ಪಿಎಫ್ ಚೆಕ್ ಮಾಡಿ
ಹಂತ 1: epfindia.gov.in ಖಾತೆಗೆ ಲಾಗಿನ್ ಆಗಿ
ಹಂತ 2: ಯುಎಎನ್ ಸಂಖ್ಯೆ, ಪಾಸ್‌ವರ್ಡ್, ಕ್ಯಾಪ್ಚಾ ಕೋಡ್ ನಮೂದಿಸಿ
ಹಂತ 3: ಇ-ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ
ಹಂತ 4: ಎಲ್ಲ ಮಾಹಿತಿಯನ್ನು ಫೈಲ್ ಮಾಡಿದ ಬಳಿಕ ಹೊಸ ಪೇಜ್ ಕಾಣಲಿದೆ
ಹಂತ 5: ಈಗ ಮೆಂಬರ್ ಐಡಿಯನ್ನು ತೆರೆಯಿರಿ
ಹಂತ 6: ಇಪಿಎಫ್ ಖಾತೆಯಲ್ಲಿನ ಸಂಪೂರ್ಣ ಮೊತ್ತದ ವಿವರ ನಿಮಗೆ ಲಭ್ಯವಾಗಲಿದೆ


Click it and Unblock the Notifications