ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಅಧಿಕ ಪಿಂಚಣಿ ಪಡೆಯುವ ಯೋಜನೆಗೆ ಅರ್ಜಿ ಸಲ್ಲಿಕೆ ಗಡುವನ್ನು ಮತ್ತೆ ವಿಸ್ತರಣೆ ಮಾಡಿದೆ. ಈ ಹಿಂದೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 26 ಆಗಿತ್ತು. ಆದರೆ ಎಲ್ಲ ಅರ್ಹ ಜನರಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ಗಡುವನ್ನು ಜುಲೈ 11, 2023ಕ್ಕೆ ವಿಸ್ತರಣೆ ಮಾಡಲಾಗಿದೆ. ಈ ಹಿಂದೆ ಹಲವಾರು ಬಾರಿ ಗಡುವು ವಿಸ್ತರಿಸಲಾಗಿದೆ.
ಜೂನ್ 26, 2023ರಂದು ಇಪಿಎಫ್‌ಒ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಈ ಹೇಳಿಕೆಯ ಪ್ರಕಾರ ಇಪಿಎಸ್ ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿಯನ್ನು ಸಲ್ಲಿಸಲು ಉದ್ಯೋಗಿಗಳಿಗೆ ನೀಡುವ ಅಂತಿಮ ಅವಕಾಶ ಇದಾಗಿದೆ. ಹೆಚ್ಚಿನ ವೇತನದ ಆಧಾರದ ಮೇಲೆ ಪಿಂಚಣಿ ಪಡೆಯಲು, ಅರ್ಜಿಯನ್ನು 15 ದಿನಗಳಲ್ಲಿ ಸಲ್ಲಿಸಬೇಕು. ಹೆಚ್ಚುವರಿಯಾಗಿ, ಪತ್ರಿಕಾ ಪ್ರಕಟಣೆಯಲ್ಲಿ ಉದ್ಯೋಗದಾತರಿಗೆ ಸಂಬಳದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲು ಮೂರು ತಿಂಗಳುಗಳ ಅವಕಾಶ ನೀಡುವುದಾಗಿ ತಿಳಿಸಿದೆ.

ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಗಡುವನ್ನು ಈವರೆಗೆ ಇಪಿಎಫ್‌ಒ ಹಲವಾರು ಬಾರಿ ವಿಸ್ತರಣೆ ಮಾಡಿದೆ. "ಪಿಂಚಣಿಗೆ ಅರ್ಜಿ ಸಲ್ಲಿಸುವವರಿಗೆ ಕೆಲವೊಂದು ಸಮಸ್ಯೆಗಳು ಉಂಟಾಗಿದೆ, ಆದ್ದರಿಂದ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಇನ್ನೂ 15 ದಿನಗಳ ಅವಕಾಶವನ್ನು ನೀಡಲಾಗುತ್ತದೆ. ಈ ಗಡುವು ವಿಸ್ತರಣೆ ಬಳಿಕ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11.07.2023 ಆಗಿದೆ," ಎಂದು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.
ಒಟ್ಟು ಮೂರು ಬಾರಿ ಗಡುವು ವಿಸ್ತರಣೆ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇದು ಮೂರನೇ ಬಾರಿಗೆ ಅಧಿಕ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಣೆ ಮಾಡಿದೆ. 2022ರ ನವೆಂಬರ್‌ರ 4ರಂದು ಸುಪ್ರೀಂ ಕೋರ್ಟ್ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಗಡುವನ್ನು ಮಾರ್ಚ್ 3ರವರೆಗೆ ನಿಗದಿ ಪಡಿಸಿದೆ. ಅದಾದ ಬಳಿಕ ಇಪಿಎಫ್‌ಒ ಈ ಗಡುವನ್ನು ಮೇ 3ರವರೆಗೆ ವಿಸ್ತರಣೆ ಮಾಡಿದೆ. ಅದಾದ ಬಳಿಕ ಮತ್ತೆ ಜೂನ್ 26ರವರೆಗೆ ಗಡುವು ವಿಸ್ತರಣೆಡ ಮಾಡಲಾಗಿತ್ತು. ಈಗ ನೂತನ ಗಡುವು ಜುಲೈ 11 ಆಗಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಗಡುವನ್ನು ನಿಗದಿಪಡಿಸಿದ ನಂತರ ಅರ್ಹ ಉದ್ಯೋಗಿಗಳಿಗೆ ಆನ್‌ಲೈನ್ ಅರ್ಜಿ ಸೌಲಭ್ಯವನ್ನು ಮತ್ತೆ ಆರಂಭ ಮಾಡಲು ಇಪಿಎಫ್‌ಒ ಬಹಳ ಸಮಯ ತೆಗೆದುಕೊಂಡ ಕಾರಣ ಮೊದಲ ಬಾರಿಗೆ ಗಡುವು ವಿಸ್ತರಣೆ ಮಾಡಲಾಗಿದೆ. ಈ ಸೌಲಭ್ಯವನ್ನು ಫೆಬ್ರವರಿಯಲ್ಲಿ ಮತ್ತೆ ಆರಂಭ ಮಾಡಲಾಗಿದೆ. ಆ ಹೊತ್ತಿಗಾಗಲೇ ಗಡುವು ನಿರ್ಧರಿಸಿ ಮೂರು ತಿಂಗಳುಗಳು ಆಗಿದ್ದವು.
ಇನ್ನು ಹಲವಾರು ಉದ್ಯೋಗಿಗಳಿಗೆ ಅಧಿಕ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವುದೇ ಬೇಡವೇ ಎಂಬ ಗೊಂದಲಗಳು ಇದೆ. ಇದೇ ಕಾರಣದಿಂದಾಗಿ ಮತ್ತೆ ಈಗ ಗಡುವು ವಿಸ್ತರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಚಂದಾದಾರರು ಆಯ್ಕೆಯನ್ನು ಮಾಡಲು ಸಮಯವಕಾಶ ನೀಡಲಾಗಿದೆ.
ಇಪಿಎಸ್ ಅಧಿಕ ಪಿಂಚಣಿ ಯೋಜನೆಯ ಅರ್ಹತೆ
ಸುಪ್ರೀಂ ಕೋರ್ಟ್ ತೀರ್ಪು ಮತ್ತು ಇಪಿಎಫ್‌ಒ ಸುತ್ತೋಲೆಯ ಪ್ರಕಾರ, ಕೆಳಗಿನ ಉದ್ಯೋಗಿಗಳು ಹೆಚ್ಚಿನ ವೇತನದ ಮೇಲೆ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
* ಏಪ್ರಿಲ್ 2014ರಿಂದ 5000 ರೂಪಾಯಿ ಅಥವಾ 6500 ರೂಪಾಯಿ ಮಿತಿಯನ್ನು ಮೀರಿದ ಮೂಲ ವೇತನದ ಮೇಲೆ ಕೊಡುಗೆ ನೀಡಿದ ಉದ್ಯೋಗಿಗಳು ಮತ್ತು ಉದ್ಯೋಗದಾತರು.
* ಏಪ್ರಿಲ್ 1, 2014 ರ ಮೊದಲು ಹೆಚ್ಚಿನ ವೇತನದ ಮೇಲೆ ಪಿಂಚಣಿಗಾಗಿ ಯಾರು ಜಂಟಿ ಆಯ್ಕೆ ಮಾಡಿಲ್ಲ ಅವರು ಅರ್ಹರು.
* ಏಪ್ರಿಲ್ 1, 2014 ಕ್ಕಿಂತ ಮೊದಲು ಇಪಿಎಫ್/ ಇಪಿಎಸ್ ಸದಸ್ಯರಾಗಿದ್ದ ಉದ್ಯೋಗಿ ಮತ್ತು ಏಪ್ರಿಲ್ 1, 2014 ರಂದು ಅಥವಾ ನಂತರ ಸದಸ್ಯರಾಗಿ ಮುಂದುವರೆದವರು


Click it and Unblock the Notifications