ಭವಿಷ್ಯ ನಿಧಿ ಅಥವಾ ಪ್ರಾವಿಡೆಂಟ್ ಫಂಡ್ ಚಂದಾದಾರರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಶುಕ್ರವಾರ ಹಣಕಾಸು ವರ್ಷ 2022-23 ಕ್ಕೆ ಪಿಎಫ್ ಖಾತೆಗಳಿಗೆ ಶೇಕಡ 8.15 ಬಡ್ಡಿಯನ್ನು ಜಮೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಹೇಳಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ಇಪಿಎಫ್‌ಒ, "ಪ್ರಕ್ರಿಯೆಯು ಆರಂಭವಾಗಿದೆ. ಶೀಘ್ರವೇ ನಿಮ್ಮ ಇಪಿಎಫ್‌ಒ ಖಾತೆಗೆ ಮೊತ್ತ ಜಮೆಯಾಗಲಿದೆ. ಬಡ್ಡಿಯನ್ನು ಜಮಾ ಮಾಡಿದಾಗಲೆಲ್ಲಾ ಮೊತ್ತವನ್ನು ಒಟ್ಟಾಗಿ ಸೇರಿಸಲಾಗುತ್ತದೆ. ಹಾಗೆಯೇ ಪೂರ್ಣವಾಗಿ ಪಾವತಿಸಲಾಗುತ್ತದೆ. ಬಡ್ಡಿಯು ನಿಮಗೆ ನಷ್ಟವಾಗುವುದಿಲ್ಲ. ದಯವಿಟ್ಟು ತಾಳ್ಮೆಯನ್ನು ಕಾಪಾಡಿಕೊಳ್ಳಿ," ಎಂದು ಮನವಿ ಮಾಡಿದೆ.

ಹಣಕಾಸು ವರ್ಷ 2022-23 ಬಡ್ಡಿ ಇನ್ನೂ ಜಮಾ ಆಗಿಲ್ಲ ಎಂದು ಕೇಳುವ ಎಕ್ಸ್ (ಈ ಹಿಂದಿನ ಟ್ವಿಟ್ಟರ್) ಬಳಕೆದಾರರ ಪೋಸ್ಟ್‌ಗೆ ಉತ್ತರವನ್ನು ಇಪಿಎಫ್‌ಒ ನೀಡಿದೆ. ಈ ಸಂದರ್ಭದಲ್ಲಿ ಈ ಮಾಹಿತಿಯನ್ನು ನೀಡಿದೆ. ಖಾತೆಗೆ ಬಡ್ಡಿದರ ಯಾವಾಗ ಜಮೆ ಮಾಡಲಾಗುತ್ತದೆ ಎಂದು ಎಕ್ಸ್ ಬಳಕೆದಾರರು ಇಪಿಎಫ್‌ಒಗೆ ಪ್ರಶ್ನೆ ಮಾಡಿದ್ದರು.
ಕೆಲವು ಬಳಕೆದಾರರ ಖಾತೆಗಳಿಗೆ ಈಗಾಗಲೇ ಬಡ್ಡಿ ಜಮೆಯಾಗಿದೆ ಎಂದು ಹೇಳಿದ್ದಾರೆ. ಆದರೆ ಇಪಿಎಫ್‌ಒ ಎಲ್ಲರ ಖಾತೆಗೆ ಬಡ್ಡಿ ಜಮೆ ಆಗುವುದು ಕೊಂಚ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ಈ ನಡುವೆ ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಮಾತನಾಡಿ, ಈಗಾಗಲೇ 24 ಕೋಟಿಗೂ ಅಧಿಕ ಖಾತೆಗಳಿಗೆ ಬಡ್ಡಿ ಜಮೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ನಿಮ್ಮ ಖಾತೆಗೆ ಬಡ್ಡಿ ಜಮೆಯಾಗಿದೆಯೇ? ಹೀಗೆ ಚೆಕ್ ಮಾಡಿ.
ಈ ಹಿಂದೆ ಕೇಂದ್ರ ಸರ್ಕಾರವು 2022-23ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಗೆ ಶೇಕಡ 8.15 ರ ಬಡ್ಡಿ ದರವನ್ನು ಅನುಮೋದಿಸಿತ್ತು. 2023-24 ರ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರವು ಇಪಿಎಫ್ ಖಾತೆಗಳಿಗೆ ಶೇಕಡ 8.15 ಬಡ್ಡಿಯನ್ನು ಜಮಾ ಮಾಡಲು ಅನುಮೋದಿಸಿದೆ.
ಆನ್‌ಲೈನ್‌ನಲ್ಲಿ ಇಪಿಎಫ್‌ಒ ಬ್ಯಾಲೆನ್ಸ್ ಚೆಕ್ ಮಾಡಿ
ಹಂತ 1: ಮೊದಲು ನೀವು epfindia.gov.in ನಲ್ಲಿ ಇಪಿಎಫ್‌ಒನ ಅಧಿಕೃತ ಪೋರ್ಟಲ್‌ಗೆ ಲಾಗ್ ಇನ್ ಆಗಬೇಕು.
ಹಂತ 2: ನಂತರ ಹೋಮ್‌ಪೇಜ್ ಮೇಲೆ ಕ್ಲಿಕ್ ಮಾಡಿ, 'ಸೇವೆಗಳು' ಮೇಲೆ ಕ್ಲಿಕ್ ಮಾಡಿ, ನಂತರ 'For Employers' ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ನಂತರ ಮುಂದಿನ ಪುಟದಲ್ಲಿ, 'Services' ವಿಭಾಗವನ್ನು ನೋಡಿ, ಬಳಿಕ Member Passbook ಲಿಂಕ್ ಅನ್ನು ಕ್ಲಿಕ್ ಮಾಡಿ, ನಂತರ ಲಾಗಿನ್ ಪುಟವು ಪರದೆಯ ಮೇಲೆ ಕಾಣುತ್ತದೆ.
ಹಂತ 4: ನಂತರ ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್), ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಲಾಗ್ ಇನ್ ಆಗಿ, submit ಮೇಲೆ ಕ್ಲಿಕ್ ಮಾಡಿ.
ಹಂತ 5: ಅಂತಿಮವಾಗಿ, ನಿಮ್ಮ ಖಾತೆಯ ವಿವರಗಳು ಮತ್ತು ಕ್ರೆಡಿಟ್ ಆಗಿರುವ ಬಡ್ಡಿಯನ್ನು ಪರಿಶೀಲಿಸಿ.
ಉಮಾಂಗ್ ಆಪ್‌ನಲ್ಲಿ ಹೀಗೆ ಚೆಕ್ ಮಾಡಿ
ಹಂತ 1: ಮೊದಲು ಉಮಂಗ್ ಪೋರ್ಟಲ್‌ಗೆ ಲಾಗ್ ಇನ್ ಆಗಿ https://web.umang.gov.in/landing/
ಹಂತ 2: ನಂತರ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಅನ್ನು ನೋಡಿ view passbook ಮೇಲೆ ಕ್ಲಿಕ್ ಮಾಡಿ.
ಹಂತ 3: ಬಳಿಕ ಇಪಿಎಫ್ ಖಾತೆಯ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ನಮೂದಿಸಿ.
ಹಂತ 4: ನಂತರ ನೀವು ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಪಡೆಯಲು ಕ್ಲಿಕ್ ಮಾಡಿ.
ಹಂತ 5: ಸದಸ್ಯರ ಐಡಿಯನ್ನು ಆಯ್ಕೆ ಮಾಡಿ ಮತ್ತು ಇ-ಪಾಸ್‌ಬುಕ್ ಅನ್ನು ಡೌನ್‌ಲೋಡ್ ಮಾಡಿ.
ಹಂತ 6: ಇದರ ನಂತರ, ಇ-ಪಾಸ್‌ಬುಕ್ ವಿವರಗಳು ಮತ್ತು ಇಪಿಎಫ್ ಬ್ಯಾಲೆನ್ಸ್ ನಿಮಗೆ ಲಭ್ಯವಾಗಲಿದೆ.


Click it and Unblock the Notifications