ಈಗಾಗಲೇ 2023ರ ವರ್ಷ ಕೊನೆಯಾಗುತ್ತಿದೆ. 2024 ಇನ್ನು ಕೆಲವೇ ವಾರಗಳಲ್ಲಿ ಆರಂಭವಾಗಲಿದೆ. ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹಲವಾರು ಬದಲಾವಣೆಗಳು ಕೂಡಾ ಆಗಲಿದೆ. ಈ ವರ್ಷ ಹಲವಾರು ವಸ್ತುಗಳ ಬೆಲೆ ಏರಿಕೆಯಾಗಿದೆ. ಮುಂದಿನ ವರ್ಷ ಬೆಲೆ ಏರಿಕೆಯಾಗುತ್ತಾ ಅಥವಾ ನಿಯಂತ್ರಣಕ್ಕೆ ಬರಲಿದೆಯೇ ಎಂದು ನಾವು ಕಾದುನೋಡಬೇಕು. ಆದರೆ ಈ ಕಾರುಗಳು ಮಾತ್ರ ಮುಂದಿನ ವರ್ಷ ದುಬಾರಿಯಾಗಲಿದೆ.
2023 ರ ವರ್ಷವು ಮುಕ್ತಾಯವಾಗುತ್ತಿದ್ದಂತೆ, ಮಾರುತಿ, ಹ್ಯುಂಡೈ ಮತ್ತು ಟಾಟಾ ಸೇರಿದಂತೆ ಹಲವಾರು ಕಾರು ಬ್ರ್ಯಾಂಡ್‌ಗಳು ತಮ್ಮ ಮಾಡೆಲ್‌ಗಳ ಬೆಲೆ ಹೆಚ್ಚಳವನ್ನು ಘೋಷಣೆ ಮಾಡಿದೆ. ಈ ನೂತನ ಬೆಲೆಯು ಜನವರಿ 2024 ರಿಂದ ಜಾರಿಗೆ ಬರಲಿದೆ. ಯಾವೆಲ್ಲ ಕಾರುಗಳ ಬೆಲೆ ಹೆಚ್ಚಳವಾಗಿದೆ, ದರ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಮಾರುತಿ ಸುಜುಕಿ ಬೆಲೆ ಏರಿಕೆ
ನವೆಂಬರ್ 2023 ರ ಅಂತ್ಯದ ವೇಳೆಗೆ, ಮಾರುತಿ ತನ್ನ ಅರೆನಾ ಮತ್ತು ನೆಕ್ಸಾ ಎರಡೂ ಕಾರುಗಳ ಬೆಲೆಯು ಏರಿಕೆಯಾಗಿದೆ. 2024 ರಿಂದ ಜಾರಿಗೆ ಬರುವಂತೆ ಬೆಲೆ ಏರಿಕೆಯನ್ನು ಘೋಷಣೆ ಮಾಡಲಾಗಿದೆ. ಸರಕುಗಳ ಬೆಲೆಗಳು ಅಧಿಕವಾಗುತ್ತಿದೆ ಮತ್ತು ಹಣದುಬ್ಬರವು ವೆಚ್ಚವನ್ನು ಅಧಿಕಗೊಳಿಸಿದೆ. ಆದ್ದರಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.
ಬೆಲೆ ಏರಿಕೆಯ ಪ್ರಮಾಣವನ್ನು ಮಾರುತಿ ಇನ್ನೂ ಪ್ರಕಟಿಸಿಲ್ಲ. ಮಾರುತಿಯ ಪ್ರಸ್ತುತ ಶ್ರೇಣಿಯು ಅರೆನಾ ಮತ್ತು ನೆಕ್ಸಾ ಒಳಗೊಂಡಂತೆ ಒಟ್ಟು 17 ಮಾಡೆಲ್‌ಗಳನ್ನು ಒಳಗೊಂಡಿದೆ. ಅವುಗಳ ಬೆಲೆಗಳು ಮಾರುತಿ ಆಲ್ಟೊ ಕೆ10 ಗೆ 3.99 ಲಕ್ಷ ರೂಪಾಯಿಯಿಂದ ಮಾರುತಿ ಇನ್ವಿಕ್ಟೊಗೆ 28.42 ಲಕ್ಷ ರೂಪಾಯಿವರೆಗೆ ಇದೆ.
ಹುಂಡೈ ಬೆಲೆ ಏರಿಕೆ ಘೋಷಣೆ
ವೆಚ್ಚ ಹೆಚ್ಚಳ, ಅಧಿಕ ವಿನಿಮಯ ದರ, ಸರಕುಗಳ ಬೆಲೆ ಏರಿಕೆ ಕಾರಣದಿಂದಾಗಿ ಜನವರಿ 2024 ರಿಂದ ತನ್ನ ಕಾರುಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಹುಂಡೈ ದೃಢಪಡಿಸಿದೆ. ಹ್ಯುಂಡೈನ ಅಸ್ತಿತ್ವದಲ್ಲಿರುವ ಭಾರತ ತಂಡವು ಎರಡು ಇವಿಗಳನ್ನು ಒಳಗೊಂಡಂತೆ 13 ಮಾಡೆಲ್‌ಗಳನ್ನು ಹೊಂದಿದೆ. ಭಾರತದಲ್ಲಿ, ಹ್ಯುಂಡೈನ ಬೆಲೆಯು 5.84 ಲಕ್ಷ ರೂಪಾಯಿಯಿಂದ 45.95 ಲಕ್ಷ ರೂಪಾಯಿಯ ನಡುವೆ ಇದೆ.
ಟಾಟಾ ಸಂಸ್ಥೆಗಳ ಕಾರುಗಳ ಬೆಲೆ ಜಿಗಿತ
ಟಾಟಾ ಮೋಟಾರ್ಸ್ ತನ್ನ ಎಲ್ಲಾ ಐಸಿಇ ಮತ್ತು ಇವಿ ಸೇರಿದಂತೆ ಎಲ್ಲ ಮಾಡೆಲ್‌ಗಳ ಬೆಲೆಯನ್ನು ಜನವರಿ 2024 ರಿಂದ ಹೆಚ್ಚಿಸುವ ನಿರ್ಧಾರವನ್ನು ಪ್ರಕಟಿಸಿದೆ. ಬೆಲೆ ಏರಿಕೆಯ ಪ್ರಮಾಣವನ್ನು ಸಂಸ್ಥೆ ತಿಳಿಸಿಲ್ಲ. ಟಾಟಾ ಪ್ರಸ್ತುತ ಹತ್ತು ಮಾಡೆಲ್‌ನ ಕಾರುಗಳನ್ನು ಹೊಂದಿದೆ. ಇದರಲ್ಲಿ ಇವಿಗಳು ಕೂಡಾ ಸೇರಿದೆ.
ಟಾಟಾ ಟಿಯಾಗೊ ಇವಿ, ಟಾಟಾ ಟಿಗೊರ್ ಇವಿ ಮತ್ತು ಟಾಟಾ ನೆಕ್ಸಾನ್ ಇವಿ ಪ್ರಮುಖ ಇವಿಗಳಾಗಿದೆ. ಟಾಟಾದ ಬೆಲೆಯು ಟಿಯಾಗೊದೊಂದಿಗೆ ಪ್ರಾರಂಭವಾಗುತ್ತದೆ. ಇದು 5.60 ಲಕ್ಷ ರೂಪಾಯಿಯ ಕಾರಾಗಿದೆ. ಸಫಾರಿ ಬೆಲೆ ಅಧಿಕವಾಗಿದ್ದು, ಅದರ ಬೆಲೆ 27.34 ಲಕ್ಷ ರೂಪಾಯಿ ಆಗಿದೆ.
ಮಹೀಂದ್ರದಲ್ಲಿ ಬೆಲೆ ಏರಿಕೆ
ಎಲ್ಲಾ ಎಲೆಕ್ಟ್ರಿಕ್ XUV400 ಇವಿ ಸೇರಿದಂತೆ ಮಹೀಂದ್ರಾ ಮಾಡೆಲ್‌ಗಳು ಜನವರಿ 2024 ರಿಂದ ಹೆಚ್ಚು ದುಬಾರಿಯಾಗಲಿವೆ. ಇತರ ತಯಾರಕರಂತೆ, ಮಹೀಂದ್ರಾ ಬೆಲೆ ಏರಿಕೆಗೆ ಪ್ರಮುಖ ಕಾರಣ ವೆಚ್ಚ ಅಧಿಕವಾಗಿರುವುದು ಎಂದು ಹೇಳಿದೆ. ಮಾಡೆಲ್‌ಗಳಿಗೆ ಅನುಗುಣವಾಗಿ ಬೆಲೆ ಏರಿಕೆ ಪ್ರಮಾಣ ಬದಲಾವಣೆಯಾಗುತ್ತದೆ.
ಮಹೀಂದ್ರಾ ಪ್ರಸ್ತುತ ಭಾರತದಲ್ಲಿ 8 ಎಸ್‌ಯುವಿಗಳು ಮತ್ತು ಒಂದು ಎಂಪಿವಿಗಳನ್ನು ಮಾರಾಟ ಮಾಡುತ್ತಿದೆ. ಮಹೀಂದ್ರಾ XUV300 ಅತ್ಯಂತ ಕೈಗೆಟುಕುವ ಮಹೀಂದ್ರಾದ ಎಸ್‌ಯುವಿ ಆಗಿದ್ದು, ಇದರ ಬೆಲೆ 7.99 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಈ ನಡುವೆ ಟಾಪ್ ಎಸ್‌ಯುವಿ ಮಹೀಂದ್ರಾ XUV700 ಬೆಲೆಗಳು 26.57 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ.
ಹೋಂಡಾ ಬೆಲೆ ತಿಳಿಯಿರಿ
ಇತ್ತೀಚಿಗೆ ಬಿಡುಗಡೆಯಾದ ಹೋಂಡಾ ಎಲಿವೇಟ್ ಸೇರಿದಂತೆ ಹೋಂಡಾ ತನ್ನ ಮಾಡೆಲ್‌ಗಳ ಬೆಲೆಯನ್ನು ಹೆಚ್ಚಿಸಲಿದೆ. ಪ್ರತಿ ಮಾಡೆಲ್‌ಗೆ ಬೆಲೆ ಏರಿಕೆಯ ವಿವರಗಳನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ. ಈ ಸಂಸ್ಥೆಯು ಕೂಡಾ ವೆಚ್ಚ ಹೆಚ್ಚಳದಿಂದಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಹೋಂಡಾದ ಭಾರತ ತಂಡವು ಮೂರು ಮಾಡೆಲ್‌ಗಳನ್ನು ಹೊಂದಿದೆ. ಹೋಂಡಾ ಸಿಟಿ (ಪೆಟ್ರೋಲ್ ಮತ್ತು ಹೈಬ್ರಿಡ್ ಎರಡೂ), ಹೋಂಡಾ ಅಮೇಜ್ ಮತ್ತು ಹೋಂಡಾ ಎಲಿವೇಟ್ ಈ ಮೂರು ಮಾಡೆಲ್‌ಗಳಾಗಿದೆ. ಹೋಂಡಾದ ಇಂಡಿಯಾ ಲೈನ್‌ಅಪ್ ಅಮೇಜ್ ಬೆಲೆ ಅತೀ ಕಡಿಮೆಯಾಗಿದ್ದು, 7.10 ಲಕ್ಷ ರೂಪಾಯಿ ಆಗಿದೆ. ಹೋಂಡಾ ಸಿಟಿ ಹೈಬ್ರಿಡ್ ಬೆಲೆ 20.39 ಲಕ್ಷ ರೂಪಾಯಿ ಆಗಿದೆ.
ಆಡಿ ಕಾರಿನ ಬೆಲೆ ಎಷ್ಟು ಏರಿಕೆ?
ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಆಡಿ ತನ್ನ ಎಲ್ಲಾ ಕಾರುಗಳ ಬೆಲೆಗಳನ್ನು ಜನವರಿ 2024 ರಿಂದ ಜಾರಿಗೆ ಬರುವಂತೆ ಹೆಚ್ಚಿಸಲು ಸಿದ್ಧವಾಗಿದೆ. ವೆಚ್ಚ ಅಧಿಕವಾದ ಕಾರಣ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಸಂಸ್ಥೆಯು ಹೇಳಿದೆ. ಭಾರತದಲ್ಲಿ, ಆಡಿ ಒಟ್ಟು 15 ಮಾಡೆಲ್‌ಗಳನ್ನು ಹೊಂದಿದೆ. ಈ ಪೈಕಿ 4 ಇವಿ ಆಗಿದೆ. ಆಡಿ ಎ4 ಅತೀ ಕಡಿಮೆ ದರದ ಕಾರಾಗಿದ್ದು, 43.85 ಲಕ್ಷ ರೂಪಾಯಿ ಆಗಿದೆ. ಆಡಿ ಆರ್‌ಎಸ್ ಕ್ಯೂ8 ಬೆಲೆ 2.22 ಕೋಟಿ ರೂಪಾಯಿ ಆಗಿದೆ.
ರೆನಾಲ್ಟ್, ನಿಸ್ಸಾನ್, ಕಿಯಾ ಮತ್ತು ಜೀಪ್‌ನಂತಹ ಇತರ ವಾಹನ ತಯಾರಕರು ಇನ್ನೂ ಯಾವುದೇ ಬೆಲೆ ಏರಿಕೆಯನ್ನು ಘೋಷಿಸಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಈ ಸಂಸ್ಥೆಗಳು ಕೂಡಾ ದರ ಏರಿಕೆಯನ್ನು ಘೋಷಣೆ ಮಾಡುವ ಸಾಧ್ಯತೆಯಿದೆ.


Click it and Unblock the Notifications