ಹೊಸ ಹಣಕಾಸು ವರ್ಷ ಇಂದಿನಿಂದ (ಏಪ್ರಿಲ್ 1, 2023) ಆರಂಭವಾಗುತ್ತಿದೆ. ಪ್ರತಿ ತಿಂಗಳಿನಿಂದ ತಿಂಗಳಿಗೆ ಹಲವಾರು ಬದಲಾವಣೆಗಳು ಆಗುತ್ತದೆ. ಅದರಂತೆಯೇ ಈ ಹೊಸ ಹಣಕಾಸು ವರ್ಷದ ಆರಂಭವಲ್ಲ. ಈ ತಿಂಗಳಲ್ಲಿ ಪ್ರತಿ ತಿಂಗಳಿಗಿಂತ ಹೆಚ್ಚಾಗಿ ಹಣಕಾಸು ಇತರೆ ನಿಯಮಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಏಪ್ರಿಲ್ 1ರಿಂದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಂಡನೆ ಮಾಡಿರುವ ಎಲ್ಲ ಯೋಜನೆಗಳು, ನಿಯಮಗಳು ಜಾರಿಗೆ ಬರುವುದು ಆಗಿದೆ. ಹೌದು, ಇಂದಿನಿಂದ ಬಜೆಟ್‌ನಲ್ಲಿ ಎಲ್ಲ ಯೋಜನೆಗಳು ಜಾರಿಗೆ ಬರಲಿದೆ.
ಪ್ರತಿ ತಿಂಗಳ ಮೊದಲ ದಿನದಂದು ಸಾಮಾನ್ಯವಾಗಿ ಅಡುಗೆ ಅನಿಲ, ವಾಣಿಜ್ಯ ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಅದರಂತೆಯೇ ಏಪ್ರಿಲ್ 1ರಂದು ವಾಣಿಜ್ಯ ಎಲ್‌ಪಿಜಿ ದರ 92 ರೂಪಾಯಿ ಇಳಿಕೆ ಮಾಡಲಾಗಿದೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ, ದರ ಸ್ಥಿರವಾಗಿದೆ. ಆದರೆ ಈ ತಿಂಗಳು ಹಲವಾರು ವಸ್ತುಗಳ ದರ ಏರಿಕೆಯಾಗಲಿದೆ. ಇನ್ನು ಕೆಲವು ವಸ್ತುಗಳ ದರ ಇಳಿಕೆಯಾಗಲಿದೆ. ಟೋಲ್ ದರವು ಬದಲಾಗಲಿದೆ. ಹೊಸ ತೆರಿಗೆ ಪದ್ಧತಿ ಜಾರಿಗೆ ಬರಲಿದೆ. ಔಷಧಿಗಳ ಬೆಲೆ ಹೆಚ್ಚಾಗಲಿದೆ. ಚಿನ್ನ ಮಾರಾಟಕ್ಕೆ ಹೊಸ ನಿಯಮ ಬರಲಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

ಇಂದಿನಿಂದ (ಏ.1) ಈ ಪ್ರಮುಖ ಬದಲಾವಣೆ
* ಏಪ್ರಿಲ್ 1ರಿಂದ ಚಿನ್ನದ ಜ್ಯುವೆಲ್ಲರಿ ಮತ್ತು ಚಿನ್ನದ ವಸ್ತುಗಳ ಮೇಲೆ 6 ಡಿಜಿಟ್‌ನ ಎಚ್‌ಯುಐಡಿ ಕೋಡ್ ಇರುವುದು ಕಡ್ಡಾಯವಾಗಿದೆ.
* ಏಕ್ಸ್‌ಪ್ರೆಸ್‌ವೇ ಟೋಲ್‌ಗಳು ಶೇಕಡ 3.5ರಿಂದ ಶೇಕಡ 7ರವರೆಗೆ ಏರಿಕೆಯಾಗಲಿದೆ. ಇನ್ನು ಕಡಿಮೆ ಅಂತರವಿದ್ದರೆ ಹೆಚ್ಚುವರಿ ಶೇಕಡ 10ರಷ್ಟು ಟೋಲ್ ಶುಲ್ಕ ಇರಲಿದೆ. ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಮುಂಬೈ - ಪುಣೆ ಎಕ್ಸ್‌ಪ್ರೆಸ್‌ವೇ ಟೋಲ್ ಶೇಕಡ 18ರಷ್ಟು ಹೆಚ್ಚಳವಾಗಿದೆ.
* ಸಂಬಳ ಪಡೆಯುವ ಸರ್ಕಾರೇತರ ಉದ್ಯೋಗಿಗಳಿಗೆ, ಲೀವ್ ಎನ್‌ಕ್ಯಾಶ್‌ಮೆಂಟ್ ಮೇಲಿನ ತೆರಿಗೆ ವಿನಾಯಿತಿ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಬಜೆಟ್ 2023 ರ ಅಡಿಯಲ್ಲಿ ಮಿತಿಯು 3 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಾಗುತ್ತದೆ.
* ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) 2 ಸಾವಿರ ರೂಪಾಯಿಗಿಂತ ಅಧಿಕ ಮೊತ್ತದ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ವಹಿವಾಟಿನ ಮೇಲೆ ಇಂಟರ್ ಚೇಂಜ್ ಶುಲ್ಕವನ್ನು ಶಿಫಾರಸು ಮಾಡಿದೆ. ಪ್ರೀಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (ಪಿಪಿಐ) ಮೂಲಕ ಮಾಡಿದ ವಹಿವಾಟಿಗೆ ಮಾತ್ರ ಈ ಶುಲ್ಕವನ್ನು ವಿಧಿಸಲಾಗುತ್ತದೆ. ಸುಮಾರು ಶೇಕಡ 1.1ರಷ್ಟು ಇಂಟರ್ ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಇತರೆ ಯುಪಿಐ ವಹಿವಾಟಿಗೆ ಈ ಶುಲ್ಕವಿಲ್ಲ.
* ಹೊಸ ಹಣಕಾಸು ವರ್ಷದಲ್ಲಿ ಪ್ರಮುಖವಾಗಿ 384 ಅಗತ್ಯ ಔಷಧಿಗಳ ದರ ಹಾಗೂ 1,000 ಫಾರ್ಮೂಲೇಷನ್‌ಗಳ ದರವು ಶೇಕಡ 11ಕ್ಕೂ ಅಧಿಕ ಅಥವಾ ಶೇಕಡ 12ರವರೆಗೆ ಏರಿಕೆಯಾಗಲಿದೆ. ಆಕ್ಸಿಜನ್ ಮೆಡಿಸಿನ್, ಪೇನ್‌ಕಿಲ್ಲರ್ (ನೋವು ನಿರೋಧಕ), ಆಂಟಿಬಯೋಟಿಕ್ಸ್ (ಸೋಂಕು ನಿರೋಧಕ ಔಷಧಿ) ದರ ಅಧಿಕವಾಗಲಿದೆ.
* ಇಂದಿನಿಂದ ವಾಹನಗಳ ದರವು ಏರಿಕೆಯಾಗಲಿದೆ. ಎಲ್ಲಾ ಹೊಸ ವಾಹನಗಳು BS6 ಹಂತ 2 ಎಮಿಷನ್ ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ. ಇದು ವಾಹನ ದರಗಳ ಮೇಲೆ ಪ್ರಭಾವ ಬೀರುತ್ತದೆ.
* ಕೇರಳ ಮತ್ತು ಮಹಾರಾಷ್ಟ್ರ ಸೇರಿ ಕೆಲವು ರಾಜ್ಯಗಳಲ್ಲಿ ಸ್ಟ್ಯಾಂಪ್ ಡ್ಯೂಟಿ ಏರಿಕೆ
* ಫಿಕ್ಸಿಡ್ ಡೆಪಾಸಿಟ್‌ನಿಂದ ತಾವು ಪಡೆಯುತ್ತಿದ್ದ ಪ್ರಯೋಜನವನ್ನು ಡೆಬ್ಟ್ ಮ್ಯೂಚುವಲ್ ಫಂಡ್‌ದಾರರು ಕಳೆದುಕೊಳ್ಳಲಿದ್ದಾರೆ. ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಡೆಬ್ಟ್ ಮ್ಯೂಚುವಲ್ ಫಂಡ್ ಯೋಜನೆ ಹೂಡಿಕೆಯಲ್ಲಿ ಲಭ್ಯವಾಗುವ ಲಾಭವನ್ನು ನಿಮ್ಮ ಆದಾಯ ಎಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ತೆರಿಗೆಗೆ ಒಳಪಡಿಸಲಾಗುತ್ತದೆ.
* ಹೊಸ ಆದಾಯ ತೆರಿಗೆ ಪದ್ಧತಿಯು ಸಂಬಳ ಪಡೆಯುವ ವ್ಯಕ್ತಿಗಳಿಗೆ ಡೀಫಾಲ್ಟ್ ತೆರಿಗೆ ಪದ್ಧತಿಯಾಗುತ್ತದೆ.
* ಹಿರಿಯ ನಾಗರಿಕತ ಉಳಿತಾಯ ಯೋಜನೆ ಕನಿಷ್ಟ ಹೂಡಿಕೆ ಮಿತಿ 15 ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿಗೆ ಏರಿಕೆ
* ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್) ಹೂಡಿಕೆ ಮಿತಿಯನ್ನು 4.5 ಲಕ್ಷ ರೂಪಾಯಿಯಿಂದ 9 ಲಕ್ಷ ರೂಪಾಯಿಗೆ ಏರಿಕೆ, ಜಾಯಿಂಟ್ ಖಾತೆಯ ಹೂಡಿಕೆ ಮಿತಿಯನ್ನು 9 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ.
* 5 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಜೀವ ವಿಮಾ ಪಾಲಿಸಿ ಮೇಲೆ ತೆರಿಗೆ ಅನ್ವಯವಾಗಲಿದೆ.
* ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಶೇಷ ಕಡಿಮೆ ಬಡ್ಡಿದರ ಗೃಹ ಸಾಲ ಯೋಜನೆಗಳು ಅಂತ್ಯ.


Click it and Unblock the Notifications