ಹಲವಾರು ಬ್ಯಾಂಕುಗಳು ಉಳಿತಾಯ ಖಾತೆಗೆ ಸ್ಪರ್ಧಾತ್ಮಕ ಬಡ್ಡಿದರವನ್ನು ನೀಡುತ್ತಿದೆ. ಇನ್ನು ಕೆಲವು ಬ್ಯಾಂಕುಗಳು ಫಿಕ್ಸಿಡ್ ಡೆಪಾಸಿಟ್ ಮೇಲೆ ನೀಡಲಾಗುವ ಬಡ್ಡಿದರ ಹಾಗೂ ಉಳಿತಾಯ ಖಾತೆಗೆ ನೀಡುವ ಬಡ್ಡಿದರವು ಸರಿಸುಮಾರು ಸಮವಾಗುತ್ತಿದೆ. ಸಾಮಾನ್ಯವಾಗಿ ಹಿರಿಯ ನಾಗರಿಕರಿಗೆ ಫಿಕ್ಸಿಡ್ ಡೆಪಾಸಿಟ್ ಮೇಲೆ ಅಧಿಕ ಬಡ್ಡಿದರ ನೀಡುತ್ತದೆ. ಆದರೆ ಉಳಿತಾಯ ಖಾತೆಯಲ್ಲಿ ಹಿರಿಯ ನಾಗರಿಕರಿಗೆ ಈ ಪ್ರಯೋಜನ ಲಭ್ಯವಾಗದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಹೆಚ್ಚಿಸಿದ ಬಳಿಕ ಬಡ್ಡಿದರ ಏರಿಸಲಾಗುತ್ತಿದೆ.
ಆರ್‌ಬಿಐ ಒಟ್ಟು ಆರು ಬಾರಿ ರೆಪೋ ದರವನ್ನು ಹೆಚ್ಚಳ ಮಾಡಿದೆ. ಇದಾದ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಉಳಿತಾಯ ಖಾತೆಯ ಬಡ್ಡಿದರವನ್ನು ಏರಿಸಿದೆ. ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು 40 ಮೂಲಾಂಕ, ಜೂನ್‌ನಲ್ಲಿ ರೆಪೋ ದರವನ್ನು ಆರ್‌ಬಿಐ 50 ಮೂಲಾಂಕ, ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ, ಬಳಿಕ ಸೆಪ್ಟೆಂಬರ್‌ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಿಸಲಾಗಿದೆ. ಡಿಸೆಂಬರ್‌ನಲ್ಲಿ ಮತ್ತೆ 35 ಮೂಲಾಂಕ ಹೆಚ್ಚಳ ಮಾಡಿದೆ. ಫೆಬ್ರವರಿಯಲ್ಲಿ ರೆಪೋ ದರವನ್ನು 25 ಮೂಲಾಂಕ ಏರಿಸಲಾಗಿದೆ. ಬಡ್ಡಿದರವು ಶೇಕಡ 6.50ಕ್ಕೆ ತಲುಪಿದೆ. ಈಗ ಯಾವ ಬ್ಯಾಂಕ್ ಅಧಿಕ ಬಡ್ಡಿದರ ನೀಡುತ್ತೆ ತಿಳಿಯಿರಿ...

ಯಾವ ಬ್ಯಾಂಕ್‌ನಲ್ಲಿ ಬಡ್ಡಿದರ ಎಷ್ಟಿದೆ?
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಉಳಿತಾಯ ಖಾತೆಯಲ್ಲಿ 10 ಕೋಟಿ ರೂಪಾಯಿವರೆಗಿನ ಡೆಪಾಸಿಟ್ ಮೇಲೆ ಶೇಕಡ 2.70 ಬಡ್ಡಿದರವನ್ನು ನೀಡುತ್ತದೆ. 10 ಕೋಟಿ ರೂಪಾಯಿಗಿಂತ ಅಧಿಕ ಡೆಪಾಸಿಟ್ ಮೇಲೆ ಶೇಕಡ 3ರಷ್ಟು ಬಡ್ಡಿದರವನ್ನು ಎಸ್‌ಬಿಐ ನೀಡುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಖಾತೆಯಲ್ಲಿನ 50 ಲಕ್ಷ ರೂಪಾಯಿಗಿಂತ ಕಡಿಮೆ ಮೊತ್ತದ ಡೆಪಾಸಿಟ್‌ಗೆ ಶೇಕಡ 3ರಷ್ಟು ಬಡ್ಡಿದರವನ್ನು ನೀಡುತ್ತದೆ. 50 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಡೆಪಾಸಿಟ್ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಶೇಕಡ 3.50ರಷ್ಟು ಬಡ್ಡಿದರವನ್ನು ನೀಡುತ್ತದೆ.
ಐಸಿಐಸಿಐ ಬ್ಯಾಂಕ್ ಉಳಿತಾಯ ಖಾತೆಯಲ್ಲಿ 50 ಲಕ್ಷ ರೂಪಾಯಿವರೆಗಿನ ಡೆಪಾಸಿಟ್ ಮೇಲೆ ಶೇಕಡ 3ರಷ್ಟು ಬಡ್ಡಿದರವನ್ನು ನೀಡುತ್ತದೆ. ಉಳಿತಾಯ ಖಾತೆಗೆ 50 ಲಕ್ಷ ರೂಪಾಯಿಗೂ ಅಧಿಕ ಠೇವಣಿ ಮಾಡುವುದಾದರೆ ನಿಮಗೆ ಐಸಿಐಸಿಐ ಬ್ಯಾಂಕ್ ಶೇಕಡ 3.50ರಷ್ಟು ಬಡ್ಡಿದರವನ್ನು ನೀಡುತ್ತದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಉಳಿತಾಯ ಖಾತೆಯಲ್ಲಿನ 10 ಲಕ್ಷ ರೂಪಾಯಿವರೆಗಿನ ಡೆಪಾಸಿಟ್ ಮೇಲೆ ಶೇಕಡ 2.70ರಷ್ಟು ಬಡ್ಡಿದರ ನೀಡುತ್ತದೆ. ಅದಕ್ಕೂ ಅಧಿಕ ಮೊತ್ತದ ಡೆಪಾಸಿಟ್ ಮೇಲೆ ಶೇಕಡ 2.75ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 100 ಕೋಟಿ ಅಥವಾ ಅದಕ್ಕೂ ಅಧಿಕ ಮೊತ್ತದ ಡೆಪಾಸಿಟ್ ಮೇಲೆ ಬ್ಯಾಂಕ್ ಶೇಕಡ 3ರಷ್ಟು ಬಡ್ಡಿದರವನ್ನು ನೀಡುತ್ತದೆ.
ಕೆನರಾ ಬ್ಯಾಂಕ್ ಬೇರೆ ಬೇರೆ ಖಾತೆಗಳಿಗೆ ಸರಿಸುಮಾರು ಶೇಕಡ 2.90ರಿಂದ ಶೇಕಡ 4ರ ನಡುವೆ ಬಡ್ಡಿದರವನ್ನು ನೀಡುತ್ತದೆ. 2000 ಕೋಟಿ ರೂಪಾಯಿ ಅಥವಾ ಅದಕ್ಕೂ ಅಧಿಕ ಮೊತ್ತಕ್ಕೆ ಬ್ಯಾಂಕ್ ಶೇಕಡ 4ರಷ್ಟು ಬಡ್ಡಿದರವನ್ನು ನೀಡುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 50 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತದ ಡೆಪಾಸಿಟ್ ಮೇಲೆ ಶೇಕಡ 2.75ರಷ್ಟು ಬಡ್ಡಿದರವನ್ನು ನೀಡುತ್ತದೆ. 50 ಲಕ್ಷ ರೂಪಾಯಿಗಿಂತ ಅಧಿಕ 100 ಕೋಟಿ ರೂಪಾಯಿವರೆಗಿನ ಮೊತ್ತದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಯ ಡೆಪಾಸಿಟ್ ಮೇಲೆ ಶೇಕಡ 2.90ರಷ್ಟು ಬಡ್ಡಿದರವನ್ನು ನೀಡುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿನ 100 ಕೋಟಿ ರೂಪಾಯಿಗಿಂತ ಅಧಿಕ ಮೊತ್ತದ ಡೆಪಾಸಿಟ್ ಮೇಲೆ ಬ್ಯಾಂಕ್ ಶೇಕಡ 3.10ರಷ್ಟು ಬಡ್ಡಿದರವನ್ನು ನೀಡುತ್ತದೆ. 500 ಕೋಟಿ ರೂಪಾಯಿಗೂ ಅಧಿಕ ಉಳಿತಾಯ ಖಾತೆ ಠೇವಣಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಾರ್ಷಿಕವಾಗಿ ಶೇಕಡ 3.40ರಷ್ಟು ಬಡ್ಡಿದರವನ್ನು ನೀಡುತ್ತದೆ. 1000 ಕೋಟಿ ರೂಪಾಯಿ ಹೂಡಿಕೆ ಮೇಲೆ ಶೇಕಡ 3.55ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.


Click it and Unblock the Notifications