ಖಾದ್ಯ ತೈಲದ ಬೆಲೆಯನ್ನು ಕಡಿಮೆ ಮಾಡುವಂತೆ ರಿಟೇಲ್ ವ್ಯಾಪಾರಿಗಳಿಗೆ ಕೇಂದ್ರ ಆಹಾರ ಸಚಿವಾಲಯವು ತಿಳಿಸಿದೆ. ಪ್ರಮುಖವಾಗಿ ಈ ಋತುವಿನಲ್ಲಿ ತಾಳೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳ ಜಾಗತಿಕ ಬೆಲೆಗಳಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಹಾಗೆಯೇ ಸಾಸಿವೆ, ಕಡಲೆಕಾಯಿ ಮತ್ತು ಸೋಯಾಬೀನ್‌ನಂತಹ ದೇಶೀಯ ಎಣ್ಣೆಕಾಳುಗಳ ಉತ್ಪಾದನೆಯು ಅಧಿಕವಾಗಿದೆ. ಇದನ್ನು ಉಲ್ಲೇಖಿಸಿ ಆಹಾರ ಸಚಿವಾಲಯ ದರ ಇಳಿಸಲು ಸೂಚಿಸಿದೆ.
"ಹಲವಾರು ಅಡುಗೆ ತೈಲ ಸಂಸ್ಥೆಗಳು ಕಳೆದ ಕೆಲವು ದಿನಗಳಿಂದ ಖಾದ್ಯ ತೈಲದ ದರವನ್ನು ಇಳಿಕೆ ಮಾಡುತ್ತಿದೆ. ಆದರೂ ಕೂಡಾ ಪ್ಯಾಕ್ ಆದ ಖಾದ್ಯ ತೈಲದಲ್ಲಿರುವ ಗರಿಷ್ಟ ರಿಟೇಲ್ ದರ (ಎಂಆರ್‌ಪಿ) ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಇಲ್ಲ. ದರವನ್ನು ಇನ್ನಷ್ಟು ಇಳಿಕೆ ಮಾಡಬೇಕಾಗಿದೆ," ಎಂದು ಕೇಂದ್ರ ಆಹಾರ ಸಚಿವಾಲಯವು ಹೇಳಿದೆ.

ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ (ಎಸ್‌ಇಎ) ಸದಸ್ಯರು ಖಾದ್ಯ ತೈಲದ ಎಂಆರ್‌ಪಿಯನ್ನು ಕಡಿಮೆ ಮಾಡಬೇಕು, ಗ್ರಾಹಕರಿಗೆ ಪ್ರಯೋಜನಗಳನ್ನು ವರ್ಗಾಯಿಸಬೇಕು ಎಂದು ಒತ್ತಾಯ ಮಾಡುತ್ತಿದೆ. ಈ ನಡುವೆ ಕೇಂದ್ರ ಆಹಾರ ಸಚಿವಾಲಯವು, "ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಬೆಲೆಗಳು ಅಧಿಕವಾಗಿದೆ, ಪ್ರಸ್ತುತ ಮಾರುಕಟ್ಟೆ ಸ್ಥಿತಿಗೆ ಅನುಗುಣವಾಗಿ ದರವನ್ನು ಇಳಿಕೆ ಮಾಡಬೇಕು," ಎಂದು ತಿಳಿಸಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯ ಮಾಹಿತಿಯ ಪ್ರಕಾರ, ಕಡಲೆಕಾಯಿ ಮತ್ತು ತಾಳೆ ಎಣ್ಣೆಯಂತಹ ಖಾದ್ಯ ತೈಲಗಳ ರಿಟೇಲ್ ಬೆಲೆಯು ಕಳೆದ ಮೂರು ತಿಂಗಳ ಅವಧಿಯಲ್ಲಿ ಕ್ರಮವಾಗಿ ಪ್ರತಿ ಲೀಟರ್‌ಗೆ 185 ರೂಪಾಯಿ ಮತ್ತು ಪ್ರತಿ ಲೀಟರ್‌ಗೆ 105 ರೂಪಾಯಿಯಾಗಿದ್ದು, ಮಂಗಳವಾರವು ಬದಲಾವಣೆಯಾಗದೆ ಉಳಿದಿದೆ. ಸಾಸಿವೆ ಎಣ್ಣೆಯ ರಿಟೇಲ್ ದರವು ಮೂರು ತಿಂಗಳ ಹಿಂದೆ ಇದ್ದ ಬೆಲೆಗಳಿಗಿಂತ ಮಂಗಳವಾರ ಸುಮಾರು ಶೇಕಡ 9ರಷ್ಟು ಅಥವಾ 150 ರೂಪಾಯಿ ಕುಸಿತ ಕಂಡಿದೆ.
ಕಚ್ಚಾ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಗಳು ಕ್ರಮವಾಗಿ ಶೇಕಡ 50ರಷ್ಟು ಮತ್ತು ಶೇಕಡ 55ರಷ್ಟು ಇಳಿಕೆಯಾಗಿ ಪ್ರತಿ ಟನ್‌ಗೆ 960 ಡಾಲರ್ ಮತ್ತು ಪ್ರತಿ ಟನ್‌ಗೆ 990 ಡಾಲರ್‌ಗೆ ಇಳಿಕೆಯಾಗಿದೆ. ಇನ್ನು ಭಾರತವು ವಾರ್ಷಿಕವಾಗಿ ತನ್ನ 24-25 ಮೆಟ್ರಿಕ್ ಟನ್ ಖಾದ್ಯ ತೈಲ ಬಳಕೆಯ ಶೇಕಡ 56ರಷ್ಟು ಆಮದು ಮಾಡಿಕೊಳ್ಳುತ್ತದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಸುಮಾರು 8 ಮೆಟ್ರಿಕ್ ಟನ್ ತಾಳೆ ಎಣ್ಣೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಖಾದ್ಯ ತೈಲ ಬೆಲೆ ಇಳಿಸಿದ ಅದಾನಿ ವಿಲ್ಮಾರ್, ಮದರ್ ಡೈರಿ
ಅದಾನಿ ವಿಲ್ಮಾರ್, ಮದರ್ ಡೈರಿ ಸಂಸ್ಥೆಯು ಮೇ ತಿಂಗಳಿನಲ್ಲಿ ಖಾದ್ಯ ತೈಲದ ದರವನ್ನು ಪ್ರತಿ ಲೀಟರ್‌ಗೆ 20 ರೂಪಾಯಿಯಂತೆ ಇಳಿಕೆ ಮಾಡಲಾಗುವುದು ಎಂದು ತಿಳಿಸಿದೆ. ಮುಂದಿನ 7-10 ದಿನಗಳಲ್ಲಿ ಈ ನೂತನ ದರ ಇಳಿಕೆಯು ಜಾರಿಗೆ ಬರಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮದರ್ ಡೈರಿ ವಕ್ತಾರರು, "ಧಾರಾ ಖಾದ್ಯ ತೈಲಗಳ ಗರಿಷ್ಠ ರಿಟೇಲ್ ಬೆಲೆಯು ಪ್ರತಿ ಲೀಟರ್‌ಗೆ 15-20 ರೂಪಾಯಿಗಳಷ್ಟು ಕಡಿತ ಮಾಡಲಾಗುತ್ತದೆ. ಇದು ಕೂಡಲೇ ಜಾರಿಗೆ ಬರಲಿದೆ," ಎಂದು ಹೇಳಿದ್ದಾರೆ.
"ಸೋಯಾಬೀನ್ ಎಣ್ಣೆ, ರೈಸ್ ಬ್ರಾನ್ ಆಯಿಲ್, ಸೂರ್ಯಕಾಂತಿ ಎಣ್ಣೆ ಮತ್ತು ಕಡಲೆಕಾಯಿ ಎಣ್ಣೆಯಂತಹ ತೈಲಗಳ ದರ ಇಳಿಕೆ ಮಾಡಲಾಗುತ್ತದೆ. ಪ್ರಮುಖವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದರ ಕಡಿಮೆಯಾಗಿರುವುದರಿಂದಾಗಿ ಮತ್ತು ಸ್ಥಳೀಯವಾಗಿ ಈ ಬೆಳೆಗಳ ಲಭ್ಯತೆ ಇರುವುದರಿಂದಾಗಿ ದರ ಇಳಿಸಲಾಗುತ್ತದೆ," ಎಂದು ವಕ್ತಾರರು ತಿಳಿಸಿದ್ದಾರೆ.
ಫಾರ್ಚೂನ್ ಆಯಿಲ್ ತಯಾರಕರಾದ ಅದಾನಿ ವಿಲ್ಮಾರ್ ಕೂಡ ತನ್ನ 1 ಲೀಟರ್ ಸೋಯಾಬೀನ್ ಎಣ್ಣೆಯ ಬೆಲೆಯನ್ನು ಏಪ್ರಿಲ್‌ನಲ್ಲಿ 145 ರೂಪಾಯಿಯಿಂದ 140 ರೂಪಾಯಿಗೆ ಇಳಿಕೆ ಮಾಡಿದ್ದಾರೆ. ವರ್ಷದ ಆರಂಭದಲ್ಲಿ ಫಾರ್ಚೂನ್‌ನ 1 ಲೀಟರ್ ಸೋಯಾಬೀನ್ ಎಣ್ಣೆಯ ಬೆಲೆಯು 170 ರೂಪಾಯಿ ಆಗಿತ್ತು. ಆದರೆ ಈಗ 30 ರೂಪಾಯಿವರೆಗೆ ಕಡಿಮೆಯಾಗಿದೆ.
"ನಾವು ಜನವರಿಯಲ್ಲಿ ಸೂರ್ಯಕಾಂತಿ ಎಣ್ಣೆಯ ದರವನ್ನು ಪ್ರತಿ ಲೀಟರ್‌ಗೆ 159 ರೂಪಾಯಿಯಿಂದ 135 ರೂಪಾಯಿಗೆ ಇಳಿಕೆ ಮಾಡಿದ್ದೇವೆ. ಇನ್ನು ಸಾಸಿವೆ ಎಣ್ಣೆ ಬೆಲೆಯನ್ನು ಜನವರಿಯಲ್ಲಿ 175 ರೂಪಾಯಿಯಿಂದ 152 ರೂಪಾಯಿಗೆ ಕುಗ್ಗಿಸಲಾಗಿದೆ," ಎಂದು ಅದಾನಿ ವಿಲ್ಮಾರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಂಗ್ಶು ಮಲ್ಲಿಕ್ ಹೇಳಿದ್ದಾರೆ.


Click it and Unblock the Notifications