ಸುರಕ್ಷಿತ ಹೂಡಿಕೆ ಮತ್ತು ಆದಾಯವನ್ನು ನೀಡುವ ವಿವಿಧ ಅಂಚೆ ಕಛೇರಿ ಉಳಿತಾಯ ಯೋಜನೆಗಳನ್ನು ಇಂಡಿಯಾ ಪೋಸ್ಟ್ ಹೊಂದಿದೆ. ಭಾರತದ ಎಲ್ಲಾ ಅಂಚೆ ಕಛೇರಿಗಳಲ್ಲಿ ವಿವಿಧ ರೀತಿಯ ಹೂಡಿಕೆ ಆಯ್ಕೆಗಳು ನಮಗಿದೆ, ಅದರಲ್ಲೂ ಮುಖ್ಯವಾಗಿ ಈ ಹೂಡಿಕೆ ಯೋಜನೆಗಳು ಅಪಾಯಮುಕ್ತವಾಗಿದೆ ಎಂಬುವುದು ಗಮನಾರ್ಹವಾಗಿದೆ.
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ), ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್, ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಇತರವುಗಳನ್ನು ನಾವು ಹೊಂದಿದ್ದೇವೆ.

ಸರ್ಕಾರವು ತ್ರೈಮಾಸಿಕ ಆಧಾರದಲ್ಲಿ ಈ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಪರಿಷ್ಕರಣೆ ಮಾಡುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಯೋಜನೆಗಳ ಪ್ರಸ್ತುತ ಬಡ್ಡಿದರವು ಶೇಕಡ 8ರಷ್ಟಿದೆ. ನೀವು ಅಂಚೆ ಕಚೇರಿಯ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡಿ ನಿಮ್ಮ ಮೊತ್ತವನ್ನು ಡಬಲ್ ಮಾಡಬಹುದಾಗಿದೆ.
ಅಂಚೆ ಕಚೇರಿಯ ವಿವಿಧ ಯೋಜನೆಗಳು
ಕಿಸಾನ್ ವಿಕಾಸ್ ಪತ್ರ (ಕೆವಿಪಿ): ಈ ಯೋಜನೆಯು ಹೂಡಿಕೆದಾರರ ಹಣವನ್ನು 10 ವರ್ಷ ಮತ್ತು ಮೂರು ತಿಂಗಳಲ್ಲಿ ವಾರ್ಷಿಕ ಶೇಕಡ 7.5ರಷ್ಟು ಬಡ್ಡಿದರದೊಂದಿಗೆ ದ್ವಿಗುಣಗೊಳಿಸುತ್ತದೆ. 18 ವರ್ಷಕ್ಕಿಂತ ಮೇಲ್ಪಟ್ಟವರು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ. ಕನಿಷ್ಠ ಹೂಡಿಕೆಯು 10 ಸಾವಿರ ರೂಪಾಯಿ ಆಗಿದೆ.
ಸುಕನ್ಯಾ ಸಮೃದ್ಧಿ ಯೋಜನೆ: ಈ ಯೋಜನೆಯು ಡೆಪಾಸಿಟ್‌ಗಳ ಮೇಲೆ ಗಮನಾರ್ಹವಾದ ಶೇಕಡ 8ರಷ್ಟು ವಾರ್ಷಿಕ ಬಡ್ಡಿ ದರವನ್ನು ನೀಡುತ್ತದೆ. ಹತ್ತು ವರ್ಷದವರೆಗಿನ ಹೆಣ್ಣು ಮಗುವಿಗೆ ಈ ಯೋಜನೆಯಡಿಯಲ್ಲಿ ಖಾತೆಯನ್ನು ತೆರೆಯಬಹುದು.
ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್): 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಆಸಕ್ತ ಅಭ್ಯರ್ಥಿಗಳು ಪೋಸ್ಟ್ ಆಫೀಸ್‌ನಲ್ಲಿ ಖಾತೆಯನ್ನು ತೆರೆಯಬಹುದು ಮತ್ತು ಡೆಪಾಸಿಟ್‌ಗಳ ಮೇಲೆ ದೃಢವಾದ ಶೇಕಡ 8.2ರಷ್ಟು ಬಡ್ಡಿದರವನ್ನು ಪಡೆಯಬಹುದು.
ರಾಷ್ಟ್ರೀಯ ಉಳಿತಾಯ ಯೋಜನೆ: ಹೂಡಿಕೆದಾರರು ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ ಆಕರ್ಷಕ ಬಡ್ಡಿಯನ್ನು ಪಡೆಯಬಹುದು. ಈ ಯೋಜನೆಯ ಬಡ್ಡಿದರ ಶೇಕಡ 7.7ರಷ್ಟು ಆಗಿದೆ. ಈ ಯೋಜನೆಯು ಕನಿಷ್ಠ 100 ರೂಪಾಯಿ ಡೆಪಾಸಿಟ್‌ಗಳನ್ನು ಮತ್ತು ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆಗೆ ಅವಕಾಶ ನೀಡುತ್ತದೆ.
ಅಂಚೆ ಕಚೇರಿ ಟರ್ಮ್ ಡೆಪಾಸಿಟ್ ಯೋಜನೆ: ಹೂಡಿಕೆದಾರರು 1, 2, 3, ಅಥವಾ 5 ವರ್ಷಗಳ ಅವಧಿಗೆ ಹಣವನ್ನು ಹೂಡಿಕೆ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ. ಈ ಯೋಜನೆಗೆ ವಿಶೇಷವಾಗಿ ಶೇಕಡ 7.5ರಷ್ಟು ಬಡ್ಡಿದರವನ್ನು ನಾವು 5 ವರ್ಷಗಳ ಸಮಯದ ಡೆಪಾಸಿಟ್ ಮೇಲೆ ಪಡೆಯಬಹುದಾಗಿದೆ.
5-ವರ್ಷದ ಅಂಚೆ ಕಚೇರಿ ರೆಕ್ಯೂರಿಂಗ್ ಡೆಪಾಸಿಟ್ ಖಾತೆ (ಆರ್‌ಡಿ): ವೈಯಕ್ತಿಕ ಮತ್ತು ಜಂಟಿ ಖಾತೆಗಳಿಗೆ ಪ್ರಸ್ತುತ 5 ವರ್ಷಗಳ ಯೋಜನೆಯಡಿಯಲ್ಲಿ ನಾವು ಶೇಕಡ 6.20ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ.


Click it and Unblock the Notifications