ಪ್ರಸ್ತುತ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುತ್ತಿದೆ. ಕಳೆದ ವರ್ಷದ ಕೊನೆಯಲ್ಲಿ ಉದ್ಯೋಗ ಕಡಿತ ಪ್ರಕ್ರಿಯೆ ಆರಂಭವಾಗಿದ್ದು, ಇದು ಈಗಲೂ ಮುಂದುವರಿದಿದೆ. ನಿನ್ನೆಯಷ್ಟೇ ಡೆಲ್ ಸಂಸ್ಥೆ 6,600 ಉದ್ಯೋಗಿಗಳನ್ನು ವಜಾಗೊಳಿಸಿದೆ. ಹಲವಾರು ಮಂದಿ ಕೆಲಸವನ್ನು ಕಳೆದುಕೊಂಡು, ಹೊಸ ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸಿಹಿಸುದ್ದಿಯೊಂದು ಇಲ್ಲಿದೆ.
ಪಿಡಬ್ಲ್ಯೂಸಿ ಭಾರತದಲ್ಲಿನ ತನ್ನ ಉಪಸ್ಥಿತಿಯನ್ನು ಇನ್ನಷ್ಟು ವಿಸ್ತರಣೆ ಮಾಡುವುದಾಗಿ ಹೇಳಿಕೊಂಡಿದೆ. "ಭಾರತದ ಬೆಳವಣಿಗೆಗಾಗಿ ಉತ್ತಮ ಕಾರ್ಯತಂತ್ರವನ್ನು ನಾವು ರೂಪಿಸುತ್ತೇವೆ," ಎಂದು ಸಂಸ್ಥೆಯು ಹೇಳಿಕೊಂಡಿದೆ. ಭಾರತದಲ್ಲಿ ಪಿಡಬ್ಲ್ಯೂಸಿ ಉದ್ಯೋಗಿಗಳ ಸಂಖ್ಯೆಯನ್ನು 50 ಸಾವಿರದಿಂದ 80 ಸಾವಿರಕ್ಕೆ ಏರಿಸಲು ನಿರ್ಧಾರ ಮಾಡಿದೆ ಎಂದು ಕೂಡಾ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
"ನಮ್ಮ ಅಜೆಂಡಾವನ್ನು ಪೂರೈಸಲು ಪಿಡಬ್ಲ್ಯೂಸಿ ಭಾರತದಲ್ಲಿ ಮತ್ತು ಪಿಡಬ್ಲ್ಯೂಸಿ ಯುಎಸ್‌ನಲ್ಲಿ ಜಾಯಿಂಟ್ ವೆಂಚರ್ ಆರಂಭಿಸಿದೆ. ಮುಖ್ಯವಾಗಿ ಬೆಳವಣಿಗೆ, ಕ್ಲೈಂಟ್‌ಗಳ ಸಂಬಂಧ ವಿಸ್ತರಿಸಲು, ಗುಣಮಟ್ಟವನ್ನು ಹೆಚ್ಚಿಸಲು ನಾವು ಈ ಕ್ರಮವನ್ನು ಕೈಗೊಂಡಿದ್ದೇವೆ," ಎಂದು ಕೂಡಾ ಹೇಳಿಕೆಯಲ್ಲಿ ಸಂಸ್ಥೆಯು ಉಲ್ಲೇಖಿಸಿದೆ. ಕಳೆದ ಕೆಲವು ವರ್ಷಗಳಿಂದ ಪಿಡಬ್ಲ್ಯೂಸಿ ಭಾರತದಲ್ಲಿ ವಿಸ್ತಾರವಾಗಿ ಬೆಳಯುತ್ತಿದೆ.

2022ರಲ್ಲಿ 3 ಕಚೇರಿಗಳನ್ನು ತೆರೆದ ಪಿಡಬ್ಲ್ಯೂಸಿ
2022ರಲ್ಲಿ ಪಿಡಬ್ಲ್ಯೂಸಿ ಭಾರತದಲ್ಲಿ ಒಟ್ಟಾಗಿ ಮೂರು ಕಚೇರಿಗಳನ್ನು ತೆರೆದಿದೆ. ಭುವನೇಶ್ವರ, ಜೈಪುರ ಮತ್ತು ನೋಯ್ಡಾದಲ್ಲಿ ಹೊಸ ಕಚೇರಿಯನ್ನು ಪಿಡಬ್ಲ್ಯೂಸಿ ಆರಂಭ ಮಾಡಿದೆ. ಪ್ರಮುಖವಾಗಿ ಸ್ಥಳೀಯವಾಗಿರುವ, ಪ್ರತಿಭಾವಂತರನ್ನು ನೇಮಕಾತಿ ಮಾಡುವ ಉದ್ದೇಶವನ್ನು ಈ ಸಂಸ್ಥೆಯು ಹೊಂದಿದೆ.
ಪಿಡಬ್ಲ್ಯೂಸಿಯ ಜಾಗತಿಕ ತಂತ್ರದ ಪ್ರಕಾರ, ಸಂಸ್ಥೆಯು ಭಾರತದ ಆರ್ಥಿಕ ಬೆಳವಣಿಗೆಗೆ ತನ್ನ ಪಾತ್ರವನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿದೆ. ಹಾಗೆಯೇ ಸ್ಥಳೀಯ ಮಾರುಕಟ್ಟಯನ್ನು ಬೆಳೆಸುವುದು, ಸ್ಥಳೀಯವಾಗಿ ಜನರಿಗೆ ಅತೀ ಹೆಚ್ಚಿನ ಅವಕಾಶವನ್ನು ಸೃಷ್ಟಿ ಮಾಡುವುದು ಪಿಡಬ್ಲ್ಯೂಸಿನ ಪ್ರಮುಖ ಕಾರ್ಯತಂತ್ರವಾಗಿದೆ.
ಪಿಡಬ್ಲ್ಯೂಸಿ ಭಾರತ ಹೂಡಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ, ವಹಿವಾಟು ವಾತಾವರಣವನ್ನು ಬದಲಾವಣೆ ಮಾಡಲು ಪಿಡಬ್ಲ್ಯೂಸಿ ಮುಖ್ಯ ಉದ್ದೇಶವಾಗಿದೆ. ಕ್ಲೈಂಟ್‌ಗಳ ಅಗತ್ಯವನ್ನು ಪೂರೈಸುವುದು ಮತ್ತು ಇತರೆ ಸ್ಟೇಕ್‌ಹೋಲ್ಡರ್‌ಗಳ ಅಗತ್ಯವನ್ನು ಪೂರೈಸುವುದು ಪ್ರಮುಖ ಗುರಿಯಾಗಿದೆ.
ಬೇರೆ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ
ಟ್ವಿಟ್ಟರ್, ಮೆಟಾ, ಅಮೆಜಾನ್, ಮೈಕ್ರೋಸಾಫ್ಟ್, ಡೆಲ್ ಮೊದಲಾದವುಗಳಲ್ಲಿ ಉದ್ಯೋಗ ಕಡಿತವನ್ನು ಮಾಡಲಾಗುತ್ತಿದೆ. ಪ್ರಮುಖವಾಗಿ ಹಣದುಬ್ಬರ, ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಆರ್ಥಿಕ ಹಿಂಜರಿತ ಉಂಟಾಗುವ ಆತಂಕದ ನಡುವೆ ಈ ಪ್ರಮುಖ ಟೆಕ್ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ಮಾಡಲಾಗುತ್ತಿದೆ. ಇನ್ನು ಆನ್‌ಲೈನ್ ಡೆಲಿವರಿ ಸಂಸ್ಥೆಗಳು ಕೂಡಾ ಉದ್ಯೋಗ ಕಡಿತ ಮಾಡುತ್ತಿದೆ.


Click it and Unblock the Notifications