ಬೆಲೆ ಏರಿಕೆಯನ್ನು ತಡೆಯಲು ಅಕ್ಟೋಬರ್‌ವರೆಗೆ ಸಗಟು ವ್ಯಾಪಾರಿಗಳು, ರಿಟೇಲ್ ವ್ಯಾಪಾರಿಗಳು, ಆಮದುದಾರರು ಮತ್ತು ಗಿರಣಿದಾರರು ಹೊಂದಬಹುದಾದ ಬೇಳೆಗಳ ಮೇಲೆ ಕೇಂದ್ರ ಸರ್ಕಾರವು ದಾಸ್ತಾನು ಮಿತಿಗಳನ್ನು ವಿಧಿಸಿದೆ. ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವಾಲಯ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶವನ್ನು ಹೊರಡಿಸಿದೆ.
ತೊಗರಿ ಬೇಳೆಯ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆಯು ಜೂನ್ 2 ರಂದು ಶೇಕಡ 19ರಷ್ಟು ಏರಿಕೆಯಾಗಿದ್ದು ಪ್ರತಿ ಕೆಜಿಗೆ 122.68 ರೂಪಾಯಿ ಆಗಿದೆ. ಒಂದು ವರ್ಷದ ಹಿಂದೆ ತೊಗರಿ ಬೇಳೆಯ ದರವು ಕೆಜಿಗೆ 103.25 ರೂಪಾಯಿ ಆಗಿದೆ. ಅದೇ ರೀತಿಯಾಗಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಉದ್ದಿನ ಬೇಳೆಯ ಸರಾಸರಿ ರಿಟೇಲ್ ದರವು ಶೇಕಡ 5.26ರಷ್ಟು ಏರಿಕೆಯಾಗಿ, ಪ್ರತಿ ಕೆಜಿಗೆ 105.05 ರೂಪಾಯಿಯಿಂದ 110.58 ರೂಪಾಯಿಗೆ ತಲುಪಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, "ಈ ಆದೇಶದಂತೆ ತೊಗರಿ ಹಾಗೂ ಉದ್ದಿನ ಬೇಳೆಯ ಸ್ಟಾಕ್ ಮೇಲೆ ಅಕ್ಟೋಬರ್ 31, 2023ರವರೆಗೆ ಮಿತಿಯನ್ನು ವಿಧಿಸಲಾಗಿದೆ. ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಬೇಳೆಯ ಸ್ಟಾಕ್ ಮಿತಿಯನ್ನು ವಿಧಿಸಲಾಗಿದೆ," ಎಂದು ತಿಳಿಸಿದ್ದಾರೆ.
ವ್ಯಾಪಾರಿಗಳಿಗೆ ಮಿತಿ ಎಷ್ಟಿದೆ?
ಆದೇಶದ ಪ್ರಕಾರ ಸಗಟು ವ್ಯಾಪಾರಿಗಳಿಗೆ ತೊಗರಿ ಹಾಗೂ ಉದ್ದಿನ ಬೇಳೆಯ ಮಿತಿಯನ್ನು 200 ಟನ್ ಎಂದು ವಿಧಿಸಲಾಗಿದೆ. ರಿಟೇಲರ್‌ಗಳು ಮತ್ತು ರಿಟೇಲರ್ ಮಾರಾಟ ಮಳಿಗೆಗಳಿಗೆ ತಲಾ 5 ಟನ್ ಮಿತಿಯನ್ನು ವಿಧಿಸಲಾಗಿದೆ. ಇನ್ನು ಚೇನ್ ರಿಟೇಲರ್‌ಗಳಿಗೆ ಡಿಪೋದಲ್ಲಿ 200 ಟನ್‌ಗಳ ದಾಸ್ತಾನು ಮಿತಿಯನ್ನು ವಿಧಿಸಲಾಗಿದೆ.
ಇನ್ನು ಗಿರಣಿದಾರರ ವಿಷಯಕ್ಕೆ ಬಂದಾಗ ಸ್ಟಾಕ್ ಮಿತಿಯು ಉತ್ಪಾದನೆಯ ಕೊನೆಯ ಮೂರು ತಿಂಗಳುಗಳು ಅಥವಾ ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ 25ರಷ್ಟು ಯಾವುದು ಹೆಚ್ಚಾಗಿರುತ್ತದೆಯೋ ಅದು ಇರುತ್ತದೆ. ಆದರೆ ಆಮದುದಾರರು ಕಸ್ಟಮ್ಸ್ ಕ್ಲಿಯರೆನ್ಸ್ ದಿನಾಂಕದಿಂದ 30 ದಿನಗಳ ನಂತರ ಸ್ಟಾಕ್ ಅನ್ನು ಇಟ್ಟುಕೊಳ್ಳಲು ಯಾವುದೇ ಅನುಮತಿ ಇಲ್ಲ ಎಂದು ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯ ಪೋರ್ಟಲ್‌ನಲ್ಲಿ (https://fcainfoweb.nic.in/psp) ಎಷ್ಟು ಸ್ಟಾಕ್ ಇದೆ ಎಂಬ ಸರಿಯಾದ ಮಾಹಿತಿಯನ್ನು ನಮೂದಿಸಲು ಸಚಿವಾಲಯವು ಆಯಾ ಕಾನೂನು ಘಟಕಗಳಿಗೆ ತಿಳಿಸಿದೆ. ಒಂದು ವೇಳೆ ಸಂಸ್ಥೆಗಳು ಹೊಂದಿರುವ ಸ್ಟಾಕ್‌ಗಳು ನಿಗದಿತ ಮಿತಿಗಳಿಗಿಂತ ಹೆಚ್ಚಿದ್ದರೆ, ಅಧಿಸೂಚನೆಯನ್ನು ಹೊರಡಿಸಿದ ನಂತರ 30 ದಿನಗಳ ಒಳಗೆ ನಿಗದಿತ ಸ್ಟಾಕ್ ಮಿತಿಗಳಿಗೆ ತರಬೇಕಾಗುತ್ತದೆ.
ತೊಗರಿಬೇಳೆ ಮತ್ತು ಉದ್ದಿನಬೇಳೆಯ ದಾಸ್ತಾನು ಮಿತಿಗಳನ್ನು ವಿಧಿಸುವುದು ಅಗತ್ಯ ವಸ್ತುಗಳ ಬೆಲೆಯನ್ನು ಹತ್ತಿಕ್ಕಲು ಸರ್ಕಾರವು ಕೈಗೊಂಡ ನಿರಂತರ ಪ್ರಯತ್ನಗಳ ಮತ್ತೊಂದು ಹೆಜ್ಜೆಯಾಗಿದೆ. ಸ್ಟಾಕ್ ಬಗ್ಗೆ ಮಾಹಿತಿ ಉಲ್ಲೇಖಿಸುವ ಪೋರ್ಟಲ್‌ನಲ್ಲಿ ಸರಿಯಾದ ಮಾಹಿತಿಯನ್ನು ಉಲ್ಲೇಖ ಮಾಡಲಾಗಿದೆಯೇ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ವಾರಕ್ಕೊಮ್ಮೆ ಪರಿಶೀಲನೆ ಮಾಡುತ್ತದೆ.
ಬೇಳೆಗಳ ದರ ಇಳಿಕೆಯಾಗುತ್ತದೆಯೆ?
ಈ ಹಿಂದೆ ಗೋಧಿ ಹಿಟ್ಟು ಹಾಗೂ ಗೋಧಿ ಬೆಲೆಯು ಅಧಿಕವಾದ ಸಂದರ್ಭದಲ್ಲಿ, ಸಕ್ಕರೆ ಬೆಲೆ ಅಧಿಕವಾದ ಸಂದರ್ಭದಲ್ಲಿ ಸರ್ಕಾರವು ಅದನ್ನು ನಿಯಂತ್ರಣ ಮಾಡಲು ಕ್ರಮವನ್ನು ಕೈಗೊಂಡಿದೆ. ಸಕ್ಕರೆ, ಗೋಧಿಯ ರಫ್ತು ಮೇಲೆ ಮಿತಿಯನ್ನು ವಿಧಿಸುವ ಕ್ರಮವನ್ನು ಸರ್ಕಾರವು ಕೈಗೊಂಡಿದೆ.
ಈಗ ತೊಗರಿಬೇಳೆ ಹಾಗೂ ಉದ್ದಿನಬೇಳೆಯ ಸ್ಟಾಕ್ ಮೇಲೆ ಮಿತಿಯನ್ನು ಹೇರಲಾಗಿದೆ. ಈ ಹಿಂದೆ ಸರ್ಕಾರದ ಕ್ರಮದಿಂದಾಗಿ ಪ್ರಮುಖ ಆದಾಹ ಉತ್ಪನ್ನಗಳ ದರವು ಕೊಂಚ ಇಳಿಕೆ ಕಂಡಿದೆ, ಅದರಂತೆಯೇ ಈಗ ತೊಗರಿಬೇಳೆ ಹಾಗೂ ಉದ್ದಿನಬೇಳೆಯ ಬೆಲೆಯು ಕೂಡಾ ಇಳಿಕೆಯಾಗುವ ಸಾಧ್ಯತೆಯಿದೆ.


Click it and Unblock the Notifications