ಶೈಕ್ಷಣಿಕ ಸಾಲ ಪಡೆದುಕೊಂಡು ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ ಕೇಂದ್ರ ವಲಯ ಬಡ್ಡಿ ಸಬ್ಸಿಡಿ ಸ್ಕೀಮ್ (ಸಿಎಸ್‌ಐಎಸ್) ಸರ್ಕಾರದ ಅತ್ಯುತ್ತಮ ಯೋಜನೆಯಾಗಿದೆ. ಈ ಯೋಜನೆಯಡಿ ಬ್ಯಾಂಕ್‌ಗಳು ನೀಡಿರುವ ಸಾಲಕ್ಕೆ ಕೇಂದ್ರ ಸರ್ಕಾರವು ಶೇಕಡ 100 ರವರೆಗೆ ಸಬ್ಸಿಡಿ ನೀಡುತ್ತದೆ.
ಯಾವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯವು 4.5 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆಯಿದ್ದರೆ ಅಂಥವರಿಗೆ ಈ ಯೋಜನೆಯ ಅನುಕೂಲ ದೊರೆಯುತ್ತದೆ. ಕಡಿಮೆ ಆದಾಯ ಹೊಂದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಆರ್ಥಿಕ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ.

ಅಲ್ಲದೆ ನ್ಯಾಕ್, ಎನ್‌ಬಿಎ, ಸಿಎಫ್‌ಟಿಐ ಹಾಗೂ ಇತರೆ ನಿಯಂತ್ರಿತ ಸಂಸ್ಥೆಗಳಿಂದ ಅನುಮತಿ ಪಡೆದ ವಿದ್ಯಾಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಈ ಸಿಎಸ್‌ಐಎಸ್ ಯೋಜನೆ ಅನ್ವಯವಾಗುತ್ತದೆ. ಸಿಎಸ್‌ಐಎಸ್ ಯೋಜನೆಯಡಿ ಸಾಲ ಪಡೆದವರು ತಕ್ಷಣಕ್ಕೆ ಇಎಂಐಗಳನ್ನು ಪಾವತಿಸುವ ಅಗತ್ಯವಿಲ್ಲ.
ಕೋರ್ಸ್ ಮುಗಿದ ನಂತರವೂ ಈ ಪ್ರಕ್ರಿಯೆಗಳನ್ನು ಮುಗಿಸುವುದಕ್ಕೆ ಒಂದು ವರ್ಷದ ಕಾಲಾವಕಾಶವಿರುತ್ತದೆ. ಆ ನಂತರದಲ್ಲಿ ಸಾಲದ ಇಎಂಐಗಳನ್ನು ಪಾವತಿಸಬೇಕು. ಈ ಸಾಲದ ಮೇಲಿನ ಬಡ್ಡಿಗೆ ನಿಯಮಗಳು ಹಾಗೂ ನಿಬಂಧನೆಗಳ ಪ್ರಕಾರ ಸಬ್ಸಿಡಿಯನ್ನು ಒದಗಿಸುತ್ತದೆ.
ಈ ಯೋಜನೆಗೆ ಅರ್ಜಿ ಹೀಗೆ ಸಲ್ಲಿಸಿ
ಈ ಯೋಜನೆಗೆ ಅರ್ಜಿ ಸಲ್ಲಿಸುವವರು ಜ್ಞಾನಸಮರ್ಥ್ ವೆಬ್‌ಸೈಟ್‌ನಲ್ಲಿ https://www.jansamarth.in/ ಎಂಬ ಲಿಂಕ್‌ಗೆ ಭೇಟಿ ನೀಡಬೇಕು. ಮೊದಲ ಪೇಜ್‌ನಲ್ಲೇ ಸಾಲಕ್ಕೆ ಸಂಬಂಧಿಸಿದ ಆಯ್ಕೆಗಳಿವೆ. ಇಲ್ಲಿ ನೀವು ನಿಮ್ಮ ಅರ್ಹತೆಯನ್ನು ಪರಿಶೀಲಿಸಬಹುದು.
ಆ ಮೂಲಕ ಕೋರ್ಸ್‌ನ ಹೆಸರು, ಆರಂಭದ ದಿನಾಂಕ, ಕೋರ್ಸ್ ಕಲಿಕಾ ಅವಧಿ, ಕುಟುಂಬದ ವಾರ್ಷಿಕ ಆದಾಯ ಮುಂತಾದ ಮಾಹಿತಿಯನ್ನು ಭರ್ತಿ ಮಾಡಬೇಕು. ಅಲ್ಲಿ ಎಲ್ಲ ರೀತಿಯ ಆಯ್ಕೆಗಳನ್ನು ಮಾಡಿಕೊಂಡ ಬಳಿಕ ನಿಮ್ಮ ಅರ್ಹತೆಯನ್ನು ಪರಿಶೀಲಿಸಬಹುದು.
ನಂತರದಲ್ಲಿ ಕ್ಯಾಪ್ಚಾ ಹಾಗೂ ಮೊಬೈಲ್ ಸಂಖ್ಯೆಯನ್ನು ಎಂಟ್ರಿ ಮಾಡಬೇಕು. ಮುಂದೆ ಸಾಲದ ನಿಯಮ ಮತ್ತು ಷರತ್ತುಗಳಿಗೆ ಸಂಬಂಧಿಸಿದ ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀಡಿರುವ ಮಾಹಿತಿಯನ್ನು ಬಹಳ ಎಚ್ಚರಿಕೆಯಿಂದ ಓದಬೇಕು. ಎಲ್ಲ ರೀತಿಯ ಕಂಡಿಷನ್‌ಗಳನ್ನು ಸರಿಯಾಗಿ ಓದಿಕೊಂಡ ಬಳಿಕ ಎಡ ಭಾಗದಲ್ಲಿರುವ ಎಗ್ರಿ ಬಾಕ್ಸ್‌ನ್ನು ಕ್ಲಿಕ್ ಮಾಡುವುದರೊಂದಿಗೆ ಒಪ್ಪಿಗೆಯನ್ನು ಸೂಚಿಸಬೇಕು.
ಇದಾದ ನಂತರ ಒಟಿಪಿ ಆಪ್ಶನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ ನಿಮ್ಮ ಮೊಬೈಲ್‌ಗೆ ಒಟಿಪಿ ಕೂಡ ಬರುತ್ತದೆ ಹಾಗೂ ನೀವು ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅದಾದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ವಿವರಗಳನ್ನು ನೀಡಬೇಕು.
ಈ ನಡುವೆ ವೆಬ್‌ಸೈಟ್‌ನಲ್ಲಿ ನಮೂದಿಸಿ ಎಲ್ಲ ಮಾಹಿತಿಯನ್ನು ಒಂದು ಕಡೆ ಸೇವ್ ಮಾಡಿ ಇಟ್ಟುಕೊಳ್ಳುವುದು ಉತ್ತಮ. ಇದರ ಹೊರತಾಗಿ ಬೇರೆ ಯಾವುದೇ ವೆಬ್‌ಸೈಟ್‌ನಲ್ಲಿ ಸಾಲಕ್ಕಾಗಿ ನೋಂದಾಯಿಸಿಕೊಳ್ಳಬಾರದು. ಒಂದುವೇಳೆ ನೀವು ಅರ್ಹರಾಗಿದ್ದರೆ ಸಾಲವನ್ನು ಪಡೆಯುತ್ತೀರಿ. ಈ ಸಾಲ ಯೋಜನೆಯು ಭಾರತದಲ್ಲಿ ಶಿಕ್ಷಣ ಪಡೆಯಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ.


Click it and Unblock the Notifications