ಕಳೆದೊಂದು ವಾರದಲ್ಲಿ ಈರುಳ್ಳಿ ಬೆಲೆ ಡಬಲ್ ಆಗಿದೆ. ಕೆಜಿಗೆ 30-35 ರೂ ಆಗಿದ್ದ ಈರುಳ್ಳಿ ಬೆಲೆ ಈಗ ಕೆಜಿಗೆ 60-90 ರೂಪಾಯಿಗೆ ತಲುಪಿದೆ. ಈ ನಡುವೆ ಸರ್ಕಾರವು ಈರುಳ್ಳಿಯನ್ನು ತನ್ನ ಬಫರ್ ಸ್ಟಾಕ್‌ನಿಂದ ಕೆಜಿಗೆ 25 ರೂಪಾಯಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ.
ಇದಕ್ಕಾಗಿ ಸರ್ಕಾರವು 170 ಕ್ಕೂ ಹೆಚ್ಚು ನಗರಗಳು ಮತ್ತು 685 ಕೇಂದ್ರಗಳಲ್ಲಿ ಈರುಳ್ಳಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಿದೆ ಎಂದು ವರದಿ ಉಲ್ಲೇಖಿಸಿದೆ. ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸರ್ಕಾರವು ತನ್ನ ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ಬಿಡುಗಡೆ ಮಾಡುವುದು ಮತ್ತು ಆಮದು ಹೆಚ್ಚಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ.

ಬಫರ್ ಸ್ಟಾಕ್‌ನಿಂದ ಈರುಳ್ಳಿಯನ್ನು ದೇಶಾದ್ಯಂತದ ಪ್ರಮುಖ ಬಳಕೆ ಕೇಂದ್ರಗಳಲ್ಲಿ ಆಗಸ್ಟ್ ಎರಡನೇ ವಾರದಿಂದ ನಿರಂತರವಾಗಿ ವಿಲೇವಾರಿ ಮಾಡಲಾಗುತ್ತಿದೆ. ಹಾಗೆಯೇ ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿ ನಿರ್ವಹಿಸುವ ಮೊಬೈಲ್ ವ್ಯಾನ್‌ಗಳ ಮೂಲಕ ರಿಟೇಲ್ ಗ್ರಾಹಕರಿಗೆ 25 ರೂಪಾಯಿಗೆ ಈರುಳ್ಳಿ ಮಾರಲಾಗುತ್ತದೆ.
ಬಫರ್‌ಗಾಗಿ ಈಗಾಗಲೇ 5 ಲಕ್ಷ ಟನ್‌ಗಳಷ್ಟು ಈರುಳ್ಳಿಯನ್ನು ಸಂಗ್ರಹ ಮಾಡಲಾಗಿದೆ. ಈಗ ಕೇಂದ್ರ ಸರ್ಕಾರವು ಹೆಚ್ಚುವರಿಯಾಗಿ 2 ಲಕ್ಷ ಟನ್‌ಗಳಷ್ಟು ಈರುಳ್ಳಿಯನ್ನು ಸಂಗ್ರಹಿಸುವುದಾಗಿ ಇತ್ತೀಚೆಗೆ ಘೋಷಿಸಿದೆ. ಕನಿಷ್ಠ ರಫ್ತು ಬೆಲೆ (ಎಂಇಪಿ) ವಿಧಿಸುವ ಕ್ರಮವು ರಾಬಿ ಈರುಳ್ಳಿ ಬೆಲೆ ಸಂಗ್ರಹಣೆ ಪ್ರಮಾಣ ಕುಸಿಯುತ್ತಿರುವಾಗ ಬೆಲೆ ನಿಯಂತ್ರಣಕ್ಕೆ ತರಲು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಾಕಷ್ಟು ಈರುಳ್ಳಿ ಲಭ್ಯವಾಗುವಂತೆ ಸಹಾಯ ಮಾಡುತ್ತದೆ ಎಂದು ಕಳೆದ ಶನಿವಾರ ಹೊರಡಿಸಿದ ಅಧಿಕೃತ ಹೇಳಿಕೆ ತಿಳಿಸಿದೆ.
ಯಾವೆಲ್ಲ ಸ್ಥಳಗಳಲ್ಲಿ ಕಡಿಮೆ ಬೆಲೆಗೆ ಈರುಳ್ಳಿ ಮಾರಾಟ?
ದೆಹಲಿ-ಎನ್‌ಸಿಆರ್‌ನ 71 ಸ್ಥಳಗಳಲ್ಲಿ ಮೊಬೈಲ್ ವ್ಯಾನ್‌ಗಳ ಮೂಲಕ ರಿಯಾಯಿತಿ ದರದಲ್ಲಿ ಈರುಳ್ಳಿ ಲಭ್ಯವಿದೆ. ಇನ್ನು ಜೈಪುರದ 2, ಲೂಧಿಯಾನದ 12, ವಾರಣಾಸಿಯ 10, ರೋಹ್ಟಕ್‌ನ 6, ಶ್ರೀನಗರದ 5 ಸ್ಥಳಗಳಲ್ಲಿ ಈರುಳ್ಳಿ ಲಭ್ಯವಿದೆ.
ಭೋಪಾಲ್, ಇಂದೋರ್, ಭುವನೇಶ್ವರ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಮೊಬೈಲ್ ವ್ಯಾನ್‌ಗಳ ಮೂಲಕ ರಿಯಾಯಿತಿ ದರದಲ್ಲಿ ರಿಟೇಲ್ ಮೂಲಕ ಈರುಳ್ಳಿ ಮಾರಾಟವನ್ನು ನಡೆಸಲಾಗುತ್ತಿದೆ. ರಫ್ತು ನಿರ್ಬಂಧಗಳನ್ನು ಹೇರಿದ ನಂತರ ಪ್ರಮುಖ ಈರುಳ್ಳಿ ಸರಬರಾಜು ರಾಜ್ಯವಾದ ಮಹಾರಾಷ್ಟ್ರದಲ್ಲಿ ಸಗಟು ಬೆಲೆಗಳು ಕಡಿಮೆಯಾಗುತ್ತಿದೆ. ಆದರೆ ರಿಟೇಲ್ ದರ ಪ್ರತಿ ಕಿಲೋಗ್ರಾಂಗೆ 78 ರೂಪಾಯಿಯಷ್ಟಿದೆ. ಈ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಈರುಳ್ಳಿ ದುಬಾರಿಯಾಗುತ್ತಲೇ ಇದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ ಮಂಗಳವಾರ ಅಖಿಲ ಭಾರತ ಸರಾಸರಿ ರಿಟೇಲ್ ಈರುಳ್ಳಿ ಬೆಲೆ ಕೆಜಿಗೆ 3.40 ರೂಪಾಯಿ ಏರಿಕೆಯಾಗಿ 53.75 ರೂಪಾಯಿಗೆ ತಲುಪಿದೆ. ರಾಷ್ಟ್ರ ರಾಜಧಾನಿಯಲ್ಲಿ ಈರುಳ್ಳಿ ಬೆಲೆ ಅಕ್ಟೋಬರ್ 25 ರಿಂದ ಏರಿಕೆಯಾಗುತ್ತಾ ಸಾಗುತ್ತಿದೆ. ಆದ ದರ ಕೆಜಿಗೆ 40 ರೂಪಾಯಿ ಆಗಿತ್ತು. ಆದರೆ ಅಕ್ಟೋಬರ್ 29 ರಂದು ಈರುಳ್ಳಿ ಬೆಲೆ ಕೆಜಿಗೆ 80 ರೂಪಾಯಿ ಆಗಿದೆ.


Click it and Unblock the Notifications