ಉದ್ಯೋಗವನ್ನು ಹುಡುಕಾಡುವವರಿಗೆ ಇಲ್ಲೊಂದು ಸಿಹಿಸುದ್ದಿಯನ್ನು ನಾವು ನೀಡುತ್ತಿದ್ದೇವೆ. ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿವಿಧ ಹುದ್ದೆಗಳ ಜಿಲ್ಲಾವಾರು ನೇಮಕಾತಿಯನ್ನು ಅತೀ ಶೀಘ್ರದಲ್ಲೇ ಪ್ರಾರಂಭ ಮಾಡಲಿದೆ. ಆದರೆ ಇದರಲ್ಲಿ ಒಬ್ಬ ಅಭ್ಯರ್ಥಿ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗುತ್ತದೆ ಎಂಬ ವರದಿಯಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಶೀಘ್ರವೇ ಪ್ರಕಟವಾಗಲಿದೆ. ಜಿಲ್ಲಾವಾರು ನೇಮಕಾತಿ ಮಾಡಲಾಗುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ.....

ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿಗಾಗಿ ಪ್ರಸ್ತಾವಣೆಯನ್ನು ಸಲ್ಲಿಸಿದೆ. ಹಾಗೆಯೇ ಸುಮಾರು 733 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯೂ ಕೂಡಾ ಅಸ್ತು ಎಂದಿದೆ. ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಿ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲು ಕೆಪಿಎಸ್‌ಸಿ ಇಲಾಖೆಗೆ ವಾಪಸ್ ಕಳಿಸಿದೆ. ಈ ತಿಂಗಳ ಅಂತ್ಯ ಅಥವ ಜನವರಿ ಮೊದಲ ವಾರದಲ್ಲಿ ಅಧಿಸೂಚನೆ ಲಭ್ಯವಾಗುವ ಸಾಧ್ಯತೆಯಿದೆ.
ನೇಮಕಾತಿ ನಿಯಮದಲ್ಲಿ ಬದಲಾವಣೆ
ಇನ್ನು ನೇಮಕಾತಿ ನಿಯಮದಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಜಿಲ್ಲಾವಾರು ನೇಮಕಾತಿಯನ್ನು ಮಾಡುವಾಗ ಬೇರೆ ಜಿಲ್ಲೆಗಳಲ್ಲಿ ನೇಮಕಾತಿ ಮಾಡಿದರೆ ಬೇರೆ ಬೇರೆ ಕಾರಣವನ್ನು ನೀಡಿಕೊಂಡು ವರ್ಗಾವಣೆಗೆ ಉದ್ಯೋಗಿಗಳು ಪ್ರಯತ್ನಿಸುತ್ತಾರೆ. ಇದನ್ನು ತಪ್ಪಿಸಲು ಅವರವರ ಜಿಲ್ಲೆಯಲ್ಲಿಯೇ ಪೋಸ್ಟಿಂಗ್ ಮಾಡಲು ಚಿಂತನೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ನಿಯಮ ಬದಲಾವಣೆ ಮಾಡಲಾಗುತ್ತಿದೆ.
ಅದರಿಂದಾಗಿಯೇ ಅರ್ಜಿ ಸಲ್ಲಿಸುವಾಗ ಒಂದು ಜಿಲ್ಲೆಯನ್ನು ಮಾತ್ರ ಆಯ್ಕೆ ಮಾಡಬೇಕು ಎಂಬ ನಿಯಮವನ್ನು ಮಾಡಲಾಗಿದೆ. ಹಾಗಿದ್ದಾಗ ನಾವು ಆಯ್ಕೆ ಮಾಡಿದ ಜಿಲ್ಲೆಯಲ್ಲಿ ಮಾತ್ರ ನಾವು ಕೆಲಸ ಮಾಡಬೇಕಾಗುತ್ತದೆ. ನಾವು ಜಿಲ್ಲೆ ಆಯ್ಕೆ ಮಾಡುವಾಗ ಸರಿಯಾಗಿ ನಮಗೆ ಬೇಕಾದ ಜಿಲ್ಲೆ ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. ವರ್ಗಾವಣೆಗೆ ಅವಕಾಶವಿಲ್ಲ.
ಈ ಚಿಂತನೆಗೆ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಸಿಕ್ಕಿದರೆ ಒಬ್ಬ ಅಭ್ಯರ್ಥಿಗೆ ಒಂದೇ ಜಿಲ್ಲೆ ಎಂಬ ನಿಯಮ ಅಧಿಸೂಚನೆಯಲ್ಲಿ ಪ್ರಕಟವಾಗಲಿದೆ. ಇಲಾಖೆಯ ಮಾಹಿತಿ ಪ್ರಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಕಾರ್ಯದರ್ಶಿ ಗ್ರೇಡ್-1, ಕಾರ್ಯದರ್ಶಿ ಗ್ರೇಡ್-2 ಸೇರಿ ಒಟ್ಟು 733 ಹುದ್ದೆಗಳನ್ನು ಭರ್ತಿ ಮಾಡುವ ಸಾಧ್ಯತೆಯಿದೆ.
ಕಲ್ಯಾಣ ಕರ್ನಾಟಕ ಮತ್ತು ಸಾಮಾನ್ಯ ವೃಂದ ಸೇರಿ ಪಿಡಿಒ ಹುದ್ದೆಗಳ ಭರ್ತಿಗೆ ಸಹ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ನೇಮಕಾತಿ ಅಧಿಸೂಚನೆ ಪ್ರಕಟವಾದರೆ ಎಷ್ಟು ಹುದ್ದೆ ಎಂಬ ನಿಖರ ಮಾಹಿತಿ ಲಭ್ಯವಾಗಲಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 106 ಪಿಡಿಒ, ಕಾರ್ಯದರ್ಶಿ ಗ್ರೇಡ್-1 85 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂಬ ಮಾಹಿತಿಯಿದೆ.
ಹುದ್ದೆಗಳು ಎಷ್ಟು ಖಾಲಿಯಿದೆ?
ಸರ್ಕಾರದ ಮಾಹಿತಿಯಂತೆ ರಾಜ್ಯದಲ್ಲಿ ಪಿಡಿಒ 660, ಕಾರ್ಯದರ್ಶಿ ಗ್ರೇಡ್-1 350, ಕಾರ್ಯದರ್ಶಿ ಗ್ರೇಡ್-2 415 ಹುದ್ದೆಗಳು ಇದೆ. ಇವುಗಳಲ್ಲಿ 733 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಹಲವು ಗ್ರಾಮ ಪಂಚಾಯಿತಿಗಳಲ್ಲಿ ಹುದ್ದೆಗಳು ಖಾಲಿ ಇರುವ ಕಾರಣ ಒಬ್ಬ ಸಿಬ್ಬಂದಿಗೆ ಎರಡು, ಮೂರು ಪಂಚಾಯಿತಿಗಳ ನಿರ್ವಹಣೆ ಸಿಗಲಿದೆ. ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಶೀಘ್ರವೇ ನೇಮಕಾತಿ ಮಾಡಬೇಕಾಗುತ್ತದೆ.


Click it and Unblock the Notifications