ಮಹತ್ವಾಕಾಂಕ್ಷೆಯ ಐದು ಖಾತರಿ ಯೋಜನೆಗಳಲ್ಲಿ ಒಂದಾದ, ಕುಟುಂಬದ ಮಹಿಳಾ ಮುಖ್ಯಸ್ಥರಿಗೆ 2,000 ರೂಪಾಯಿಗಳ ಆರ್ಥಿಕ ನೆರವು ನೀಡುವ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ಮೊತ್ತವು ಇನ್ನೂ ಕೂಡಾ ಹಲವಾರು ಜನರಿಗೆ ಲಭ್ಯವಾಗಿಲ್ಲ. ಸೆಪ್ಟೆಂಬರ್ ತಿಂಗಳ ಮೊತ್ತವು ಇನ್ನೂ ಕೂಡಾ ಸುಮಾರು 26 ಲಕ್ಷ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ.
ಇಲ್ಲಿಯವರೆಗೆ, 1.2 ಕೋಟಿ ಫಲಾನುಭವಿಗಳಲ್ಲಿ ಶೇಕಡ 88 ರಷ್ಟು ಮಂದಿ ಯೋಜನೆ ಜಾರಿಯಾದ ನಂತರ ಮೊದಲ ತಿಂಗಳ ಮೊತ್ತವನ್ನು ಪಡೆದಿದ್ದಾರೆ. ಆದರೆ ಕನಿಷ್ಠ ಶೇಕಡ 7.5ರಷ್ಟು ಮಹಿಳೆಯರು ಮೊದಲ ತಿಂಗಳ ಕಂತು ಕೂಡ ಪಡೆದಿಲ್ಲ ಎಂದು ದೂರಿದ್ದಾರೆ. ಸೆಪ್ಟೆಂಬರ್‌ನಿಂದ 26 ಲಕ್ಷ ಮಹಿಳೆಯರು ಅಥವಾ ಒಟ್ಟು ಫಲಾನುಭವಿಗಳಲ್ಲಿ ಶೇಕಡ 21 ರಷ್ಟು ಮಂದಿ ಹಣವನ್ನು ಪಡೆದಿಲ್ಲ.

ಗೃಹಲಕ್ಷ್ಮೀ ಮೊತ್ತ ಜಮೆಯಾಗದಿರಲು ಕಾರಣವೇನು?
ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್‌ನಲ್ಲಿನ ಹೆಸರಿನಲ್ಲಿ ಹೊಂದಾಣಿಕೆಯಾಗದಿರುವುದು, ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿರುವುದು ಮತ್ತು ತಪ್ಪು ವಿಳಾಸವು ಗೃಹ ಲಕ್ಷ್ಮೀ ಯೋಜನೆಯ ಮೊತ್ತವು ಖಾತೆಗೆ ಜಮೆಯಾಗದಿರಲು ಮುಖ್ಯ ಕಾರಣವೆಂದು ಅಧಿಕಾರಿಗಳು ಹೇಳಿದ್ದಾರೆ.
"ಮೂಲಭೂತ ವಸ್ತುಗಳ ಬೆಲೆಗಳು ಏರಿಕೆಯಾದ ನಂತರ ಸ್ವಲ್ಪ ಪರಿಹಾರವನ್ನು ಒದಗಿಸಲು ಈ ಯೋಜನೆಯು ಸಹಾಯಕವಾಗಿದೆ. ಒಂದು ಕೆಜಿ ಬೇಳೆ ಖರೀದಿಸಬೇಕಾದರೆ 200 ರೂಪಾಯಿ ನೀಡಬೇಕಾಗುತ್ತದೆ," ಎಂದು ಹಾಸನ ನಗರದ ನಿವಾಸಿ ವಸಂತ ಹೇಳಿದ್ದಾರೆ.
"ನಾನು ಮೊದಲ ತಿಂಗಳು ಹಣವನ್ನು ಪಡೆದುಕೊಂಡೆ ಮತ್ತು ನಂತರದ ಎರಡು ತಿಂಗಳು ನನಗೆ ಸಿಗಲಿಲ್ಲ. ನಾನು ಈ ತಿಂಗಳು ಬಾಕಿ ಮೊತ್ತವನ್ನು ಪಡೆದಿದ್ದೇನೆ. ಆದರೆ ನನ್ನ ನೆರೆಹೊರೆಯವರಿಗೆ ಈ ಮೊತ್ತವು ಲಭ್ಯವಾಗಿಲ್ಲ," ಎಂದು ಕೂಡಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಹಾಸನದಲ್ಲಿ ತನ್ನ ನೆರೆಹೊರೆಯ ಇತರ ಮಹಿಳೆಯರ ಜೊತೆಯಲ್ಲಿ ಅರ್ಜಿ ಸಲ್ಲಿಸಿದ ಮಣಿ ಎಂಬ ಮಹಿಳೆಯು, "ನನ್ನ ಅರ್ಜಿಯಲ್ಲಿ ಯಾವುದೇ ತೊಂದರೆ ಇಲ್ಲ ಎಂದು ನಾನು ನೋಂದಾಯಿಸಿದಾಗ ನನಗೆ ತಿಳಿಸಿದರೂ ಮೊದಲ ತಿಂಗಳಿನಿಂದ ಹಲವಾರು ಮಹಿಳೆಯರು ಮತ್ತು ನನಗೆ ಹಣ ಬಂದಿಲ್ಲ," ಎಂದಿದ್ದಾರೆ.
ಇತರೆ ಜಿಲ್ಲೆಗಳಲ್ಲೂ ಲಭ್ಯವಾಗಿಲ್ಲ ಮೊತ್ತ
ಯಾದಗಿರಿಯಲ್ಲಿ, ಗೃಹ ಲಕ್ಷ್ಮಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿದ ಸುಮಾರು ಕಾಲು ಭಾಗದಷ್ಟು ಮಹಿಳೆಯರು ಕನಿಷ್ಠ ಒಂದು ತಿಂಗಳ ಮೌಲ್ಯದ ಅಥವಾ ಅದಕ್ಕಿಂತ ಹೆಚ್ಚಿನ ಆರ್ಥಿಕ ಸಹಾಯವನ್ನು ಪಡೆದಿಲ್ಲ ಸಾಮಾಜಿಕ ಕಾರ್ಯಕರ್ತೆ ಗೌರಿ ಹುಕ್ಕೇರಿ ಅಂದಾಜಿಸಿದ್ದಾರೆ.
"ಆಧಾರ್ ಮತ್ತು ಬ್ಯಾಂಕ್ ಪಾಸ್‌ಬುಕ್ ನಡುವೆ ಹೆಸರಿನಲ್ಲಿ ಹೊಂದಿಕೆಯಾಗದಿರುವ ಮಹಿಳೆಯರಿಗೆ ದೋಷವನ್ನು ಸರಿಪಡಿಸಲು ಅಧಿಕಾರಿಗಳು ಹೇಳಿದ್ದಾರೆ. ಇತರರು ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ," ಎಂದು ಹೇಳಿದರು.
"ನನ್ನ ಅರ್ಜಿಯಲ್ಲಿ ಸಮಸ್ಯೆ ಏನು ಎಂದು ನನಗೆ ತಿಳಿದಿಲ್ಲ. ಮೊದಲ ತಿಂಗಳ ನಂತರ ನಾನು ಹಣವನ್ನು ಪಡೆದಿಲ್ಲ. ನಾನು ಜಿಲ್ಲಾಡಳಿತವನ್ನು ಸಂಪರ್ಕಿಸಿದಾಗ, ಅವರು ನನ್ನ ಹೆಸರು ಮೂರನೇ ಪಟ್ಟಿಯಲ್ಲಿದೆ ಮತ್ತು ಹದಿನೈದು ದಿನಗಳಲ್ಲಿ ಹಣ ನನಗೆ ತಲುಪುತ್ತದೆ ಎಂದು ಹೇಳಿದರು," ಎಂದು ಹಾವೇರಿಯ ದೀಪಾ ಎಂಬ ಮಹಿಳೆ ಹೇಳಿಕೊಂಡಿದ್ದಾರೆ.
4 ಸಾವಿರ ರೂಪಾಯಿ ಜಮೆಯಾಗುತ್ತಾ?
ಈಗಾಗಲೇ ಕೆಲವು ಮಹಿಳೆಯರಿಗೆ ಆಗಸ್ಟ್ ತಿಂಗಳ 2 ಸಾವಿರ ರೂಪಾಯಿ ಮೊತ್ತವನ್ನು ಜಮೆ ಮಾಡಲಾಗಿದೆ. ಆದರೆ ಇನ್ನೂ ಕೆಲವು ಮಂದಿಗೆ 2000 ರೂಪಾಯಿಯನ್ನು ಜಮೆ ಮಾಡಲಾಗಿಲ್ಲ. ಈ ಫಲಾನುಭವಿಗಳಿಗೆ ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ದಸರಾ ಉಡುಗೊರೆಯಾಗಿ ಒಂದೇ ಬಾರಿಗೆ 4 ಸಾವಿರ ರೂಪಾಯಿ ಜಮೆ ಮಾಡಲಿದೆ ಎಂದು ಈ ಹಿಂದೆ ವರದಿಯು ಉಲ್ಲೇಖಿಸಿದೆ.


Click it and Unblock the Notifications