ಗೃಹ ಲಕ್ಷ್ಮಿ ಯೋಜನೆಯು ಕಾಂಗ್ರೆಸ್ ಸರ್ಕಾರದ ಐದು ಖಾತರಿಗಳ ಯೋಜನೆಗೆ ಕಿರೀಟ ಎಂದರೆ ತಪ್ಪಾಗಲಾರದು. ಆದರೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಈ ಯೋಜನೆ ಇನ್ನೂ ಫಲ ನೀಡಿಲ್ಲ. ಈ ಯೋಜನೆಯ ಅಡಿಯಲ್ಲಿ ಕಡಿಮೆ ಆದಾಯದ ಕುಟುಂಬಗಳಲ್ಲಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ 2000 ರೂಪಾಯಿ ಮಾಸಿಕವಾಗಿ ನೀಡಲಾಗುತ್ತದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಲಾಗಿದೆ. ಆದರೆ ಹಲವಾರು ಮಹಿಳೆಯರು ಇನ್ನೂ ಕೂಡಾ ಈ ಯೋಜನೆಯ ಪ್ರಯೋಜನವನ್ನು ಪಡೆದಿಲ್ಲ. ಅದರಲ್ಲೂ ಬೆಂಗಳೂರಿನಲ್ಲಿ ಹಲವಾರು ಮಂದಿಗೆ ಹಣ ಜಮೆಯಾಗಿಲ್ಲ ಎಂಬ ಮಾಹಿತಿಯಿದೆ. ಈ ನಡುವೆ ವಿಳಂಬವೇ, ಸ್ಥಗಿತವೇ? ಎಂಬ ಗೊಂದಲವೂ ಇದೆ.

ಬೆನ್ನುಬಿಡದ ತಾಂತ್ರಿಕ ಸಮಸ್ಯೆ
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವಿದ್ಯಾರಣ್ಯಪುರ ವಾರ್ಡ್‌ನ ಪ್ರೀತಿ ಎಂಬ ಮನೆ ಕೆಲಸ ಮಾಡುವ ಮಹಿಳೆ, "ಗೃಹ ಜ್ಯೋತಿ ಅಥವಾ ಉಚಿತ ವಿದ್ಯುತ್ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆ ಬಂದಾಗ ನನಗೆ ಸಮಾಧಾನವಾಯಿತು. ಅನ್ನ ಭಾಗ್ಯ ಯೋಜನೆಯಡಿ ಧಾನ್ಯಗಳ ಬದಲಿಗೆ ನಗದು ಪಾವತಿ ಪಡೆಯುತ್ತಿದ್ದೇನೆ. ಆದರೆ ಕಳೆದ ವರ್ಷ ಜೂನ್‌ನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ತಕ್ಷಣವೇ ಅರ್ಜಿ ಸಲ್ಲಿಸಿದ್ದರೂ, ಹಣ ಬಂದೇ ಇಲ್ಲ," ಎಂದು ಹೇಳಿದ್ದಾರೆ.
"ನಾನು ನೋಂದಾಯಿಸಿದ್ದೇನೆ ಎಂದು ನನಗೆ ಸಂದೇಶ ಬಂದಿದೆ. ಆದರೆ ನನ್ನ ಖಾತೆಗೆ ಈವರೆಗೂ ಹಣ ಜಮೆಯಾಗಿಲ್ಲ. ನಾನು ಬ್ಯಾಂಕ್ ಮತ್ತು ಹತ್ತಿರದ ಬೆಂಗಳೂರು ಒನ್ ಕೇಂದ್ರಕ್ಕೆ ಹಲವಾರು ಬಾರಿ ಭೇಟಿ ನೀಡಿದೆ. ಯಲಹಂಕದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಗೆ ಹೋಗಲು ಹೇಳಿದರು. ಅಲ್ಲಿ ಅಧಿಕಾರಿ ಪಡಿತರ ಚೀಟಿ ನವೀಕರಿಸಲು ತಿಳಿಸಿದ್ದಾರೆ. ಬಿಪಿಎಲ್ ಕಾರ್ಡ್‌ನಲ್ಲೇ ಮನೆಯ ಮುಖ್ಯಸ್ಥೆ ಎಂದು ಆಗಿರಲಿಲ್ಲ," ಎಂದು ವಿವರಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಅಂಗೀಕರಿಸಿದ ಯೋಜನೆಗೆ ಸಂಬಂಧಿಸಿದ ಸರ್ಕಾರಿ ಆದೇಶವು ಅರ್ಜಿದಾರರು ತಮ್ಮ ಮನೆಯ ಮುಖ್ಯಸ್ಥರು ಎಂಬುವುದನ್ನು ಸ್ವಯಂ ಘೋಷಿಸಬಹುದು ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದರೆ, ಈ ಯೋಜನೆಗಾಗಿ ಅರ್ಜಿ ಸಲ್ಲಿಸುವ ವಿಚಾರಕ್ಕೆ ಬಂದಾಗ ಮನೆಯ ಮುಖ್ಯಸ್ಥರ ವಿಚಾರದಲ್ಲಿ ಗೊಂದಲವಿದೆ. ಪಡಿತರ ಚೀಟಿಯಲ್ಲಿ ಮುಖ್ಯಸ್ಥರು ಅಥವಾ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಮಾತ್ರ ಅರ್ಹರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಸ್ಪಷ್ಟತೆಯ ಕೊರತೆ
ಇದೇ ವೇಳೆ ಅದೇ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಾದ ಮರಿಯಮ್ಮ ಎಂಬುವರು ಅರ್ಜಿ ಸಲ್ಲಿಸಲು ಪರದಾಡುತ್ತಿದ್ದಾರೆ. ಪ್ರೀತಿಯಂತೆ ಪೌರಕಾರ್ಮಿಕರಾದ ಮರಿಯಮ್ಮ ಅನ್ನ ಭಾಗ್ಯ ಯೋಜನೆಯಡಿ 500 ರೂಪಾಯಿ ಪಡೆದಿದ್ದಾರೆ. ಆದರೆ ಗೃಹ ಲಕ್ಷ್ಮೀ ಯೋಜನೆಯಡಿ ಮಾತ್ರ ಹಣ ಲಭ್ಯವಾಗುತ್ತಿಲ್ಲ ಎಂದು ಮಾಧ್ಯಮ ವರದಿ ಮಾಡಿದೆ.
ಬ್ಯಾಂಕ್ ಪಾಸ್‌ಬುಕ್ ಅನ್ನು ಡಿಸೆಂಬರ್‌ಗೆ ನವೀಕರಿಸಲಾಗಿದೆ. ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಲಾಗಿದೆ. ಅದರಿಂದಾಗಿ ಅನ್ನ ಭಾಗ್ಯ ಯೋಜನೆಯಡಿ ನಗದು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಪ್ರೀತಿಯಂತೆ, ಮರಿಯಮ್ಮ ಸ್ಥಳೀಯ ಆಹಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ. "ಯಾವ ತಪ್ಪು ಕೂಡಾ ಅಧಿಕಾರಿಗಳಿಗೆ ಕಂಡುಬಂದಿಲ್ಲ. ಬ್ಯಾಂಕ್‌ಗೆ ಹೋಗುವಂತೆ ಹೇಳಿದರು. ಬ್ಯಾಂಕ್‌ನಲ್ಲೂ ಯಾವುದೇ ಸಮಸ್ಯೆ ಇಲ್ಲ. ಅನ್ನ ಭಾಗ್ಯ ಹಣ ಬರುತ್ತಿದೆ. ಆದರೆ ಗೃಹ ಲಕ್ಷ್ಮೀಯಲ್ಲಿ ಸಮಸ್ಯೆ ಏನೆಂದೇ ಗೊತ್ತಿಲ್ಲ," ಎಂದು ಮರಿಯಮ್ಮ ಹೇಳುತ್ತಾರೆ.
ಅರ್ಹತೆ ಹೊಂದಿದ್ದರೂ ಮತ್ತು ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರೂ ಗೃಹ ಜ್ಯೋತಿ ಯೋಜನೆಯ ಮೊತ್ತವು ಇನ್ನು ಕೂಡಾ 26 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಲಭ್ಯವಾಗಿಲ್ಲ. ಅಧಿಕಾರಿಗಳು, ಸಚಿವರುಗಳು ಮಾತ್ರ ತಾಂತ್ರಿಕ ದೋಷವಿದೆ ಎಂದು ಹೇಳಿಕೆ ನೀಡಿದ್ದಾರೆ.


Click it and Unblock the Notifications