ಸರಕು ಹಾಗೂ ಸೇವೆ ತೆರಿಗೆ (ಜಿಎಸ್‌ಟಿ) ಕೌನ್ಸಿಲ್ ಸಭೆಯು ಇಂದು (ಜುಲೈ 11) ನವದೆಹಲಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಮೇಲೆ ತೆರಿಗೆ ವಿಧಿಸುವುದು ಸೇರಿದಂತೆ ಹಲವಾರು ಜಿಎಸ್‌ಟಿ ಸಂಬಂಧಿತ ವಿಚಾರದಲ್ಲಿ ಚರ್ಚೆ ನಡೆಯಲಿದೆ. ಹಾಗೆಯೇ ಐಟಿಸಿ ಕ್ಲೈಮ್ ಹಾಗೂ ರಿಜಿಸ್ಟ್ರೇಷನ್ ನಿಯಮ ಬಿಗಿಗೊಳಿಸುವ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ನೇತೃತ್ವದಲ್ಲಿ ಕೌನ್ಸಿಲ್ ಸಭೆಯು ನಡೆಯಲಿದ್ದು, ವಿವಿಧ ರಾಜ್ಯಗಳ ಹಣಕಾಸು ಸಚಿವರುಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಭೆಯ ಬಳಿಕ ಕೆಲವು ವಸ್ತುಗಳ ಜಿಎಸ್‌ಟಿ ಏರಿಕೆ ಮಾಡಿದರೆ, ಕೆಲವು ವಸ್ತುಗಳ ಜಿಎಸ್‌ಟಿ ಕಡಿತ ಮಾಡುವ ಸಾಧ್ಯತೆಯಿದೆ. ಅದರಿಂದಾಗಿ ಜಿಎಸ್‌ಟಿ ಸಭೆಯ ಬಳಿಕ ಹಲವಾರು ವಸ್ತುಗಳು ದುಬಾರಿ ಅಥವ ಅಗ್ಗವಾಗಬಹುದು. ಯಾವುದು ಅಗ್ಗವಾಗಲಿದೆ, ಯಾವುದು ದುಬಾರಿಯಾಗಲಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಯಾವೆಲ್ಲ ವಸ್ತುಗಳು ಅಗ್ಗವಾಗಲಿದೆ?
1. ಸಿನಿಮಾ ಹಾಲ್‌ನಲ್ಲಿ ಆಹಾರ, ಪಾನೀಯಗಳು: ಸಿನಿಮಾ ಹಾಲ್‌ಗಳಲ್ಲಿ ಮಾರಾಟ ಮಾಡಲಾಗುವ ಆಹಾರ ಹಾಗೂ ಪಾನೀಯಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 18ರಿಂದ ಶೇಕಡ 5ಕ್ಕೆ ಇಳಿಕೆ ಮಾಡುವಂತೆ ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ) ಮನವಿ ಮಾಡಿದೆ. ಮಲ್ಟಿಫ್ಲೆಕ್ಸ್‌ಗಳಲ್ಲಿ ಮಾರಾಟ ಮಾಡಲಾಗುವ ಆಹಾರ ಪಾನೀಯಗಳು ಆದಾಯದ ಪ್ರಮುಖ ಆಧಾರವಾಗಿದೆ ಎಂಬುವುದು ಗಮನಾರ್ಹವಾಗಿದೆ.
ಮಲ್ಟಿಫ್ಲೆಕ್ಸ್‌ಗಳ ವಾರ್ಷಿಕ ಆದಾಯದ ಸುಮಾರು ಶೇಕಡ 30-32ರಷ್ಟು ಸಿನಿಮಾ ಹಾಲ್‌ಗಳಲ್ಲಿ ಮಾರಾಟ ಮಾಡಲಾಗುವ ಆಹಾರ ಪಾನೀಯದಿಂದ ಲಭ್ಯವಾಗುತ್ತದೆ. ಪ್ರಸ್ತುತ 100 ರೂಪಾಯಿಗಿಂತ ಕಡಿಮೆ ಬೆಲೆಯ ಟಿಕೆಟ್‌ಗೆ ಶೇಕಡ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. 100 ರೂಪಾಯಿಗಿಂತ ಅಧಿಕ ಮೊತ್ತದ ಟಿಕೆಟ್‌ಗೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.
2. ಔಷಧಿಗಳು: ಫಿಟ್‌ಮೆಂಟ್ ಕಮೀಟಿಯು ಔಷಧಿಗಳ ಜಿಎಸ್‌ಟಿಯನ್ನು ಕಡಿತ ಮಾಡುವಂತೆ ಸಲಹೆ ನೀಡಿದೆ. 36 ಲಕ್ಷ ರೂಪಾಯಿ ವೆಚ್ಚದ ಔಷಧಿಗೆ ಜಿಎಸ್‌ಟಿ ಯಿಂದ ವಿನಾಯಿತಿ ನೀಡಬೇಕು ಎಂದು ಫಿಟ್‌ಮೆಂಟ್ ಸಮಿತಿಯು ಸೂಚಿಸಿದೆ. ಈ ಕಾರಣ ಔಷಧಿಯ ಜಿಎಸ್‌ಟಿಯನ್ನು ಕಡಿತ ಮಾಡುವ ಸಾಧ್ಯತೆಯಿದೆ.
ಫಿಟ್‌ಮೆಂಟ್ ಸಮಿತಿಯು ಸ್ನಾಕ್ ಪ್ಯಾಲೆಟ್‌ಗಳ ಮೇಲಿನ ಜಿಎಸ್‌ಟಿ ದರಗಳನ್ನು ಶೇಕಡ 18ರಿಂದ ಶೇಕಡ 5ಕ್ಕೆ ಇಳಿಕೆ ಮಾಡಲು ಶಿಫಾರಸು ಮಾಡಿದೆ. ವೈಯಕ್ತಿಕ ಬಳಕೆಗಾಗಿ ಕ್ಯಾನ್ಸರ್ ಔಷಧವನ್ನು (ಡಿನುಟುಕ್ಸಿಮಾಬ್/ಕ್ವಾರ್ಜಿಬಾ) ಆಮದು ಮಾಡಿಕೊಂಡಾಗ ವಿಧಿಸಲಾಗುವ ಶೇಕಡ 12ರಷ್ಟು ಜಿಎಸ್‌ಟಿಯಿಂದ ವಿನಾಯಿತಿ ನೀಡುವಂತೆ ಸೂಚಿಸಿದೆ.
3. ಸಾಟೆಲೈಟ್ ಸರ್ವಿಸ್ ಆರಂಭ: ಸಮಿತಿ ತೆರಿಗೆ ವಿನಾಯಿತಿಗೆ ಸೂಚಿಸಿರುವುದರಿಂದ ಸಾಟೆಲೈಟ್ ಸರ್ವಿಸ್ ಆರಂಭ ಅಗ್ಗವಾಗುವ ಸಾಧ್ಯತೆ ಇದೆ.
ಯಾವೆಲ್ಲ ವಸ್ತುಗಳು ದುಬಾರಿ?
1. ಆನ್‌ಲೈನ್ ಗೇಮಿಂಗ್, ಕ್ಯಾಸಿನೋ: ಆನ್‌ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್ ದುಬಾರಿಯಾಗುವ ಸಾಧ್ಯತೆಯಿದೆ. ಆನ್‌ಲೈನ್ ಗೇಮಿಂಗ್, ಕುದುರೆ ರೇಸಿಂಗ್, ಕ್ಯಾಸಿನೋ ಮೇಲಿನ ತೆರಿಗೆಯನ್ನು ಏರಿಕೆ ಮಾಡಲು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ನೇತೃತ್ವದ ಸಮಿತಿಯು ಸಲಹೆ ನೀಡಿದೆ. ಶೇಕಡ 28ರಷ್ಟು ಜಿಎಸ್‌ಟಿ ವಿಧಿಸಲು ತಿಳಿಸಿದೆ. ಈ ನಡುವೆ ಗೋವಾ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸುವಂತೆ ಸಲಹೆ ನೀಡಿದೆ.
2. MUV ಗಳು ಮತ್ತು XUV ಗಳು ದುಬಾರಿ: ಮಲ್ಟಿ ಯುಟಿಲಿಟಿ ವೇಕಲ್ಸ್ ಮತ್ತು ಕ್ರಾಸ್‌ಓವರ್ ಯುಟಿಲಿವಿ ವೇಕಲ್ಸ್ (MUV, XUV) ಜಿಎಸ್‌ಟಿಯನ್ನು ಹೆಚ್ಚಿಸಲು ಫಿಟ್‌ಮೆಂಟ್ ಸಮಿತಿ ಸಲಹೆ ನೀಡಿದೆ. 4 ಮೀಟರ್‌ಗಿಂತ ಅಧಿಕ ಉದ್ದ, 1,500 cc ಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಮತ್ತು 170 mm ಗಿಂತ ಹೆಚ್ಚಿನ 'ಅನ್-ಲಾಡೆನ್ ಕಂಡಿಷನ್' ಅನ್ನು ಹೊಂದಿರುವ ವಾಹನಕ್ಕೆ ಜಿಎಸ್‌ಟಿ ಹೆಚ್ಚಿಸಲು ಸಲಹೆ ನೀಡಲಾಗಿದೆ.


Click it and Unblock the Notifications