ನೀವು ಮನೆಯನ್ನು, ಆಸ್ತಿಯನ್ನು ಬಾಡಿಗೆಗೆ ಪಡೆದರೆ ನೀವು ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?, ಹೌದು ಮನೆಯನ್ನು, ಆಸ್ತಿಯನ್ನು ಬಾಡಿಗೆಗೆ ಪಡೆಯುವ ಕೆಲವು ಜನರು ತಾವು ಪಾವತಿಸುವ ಬಾಡಿಗೆ ಮೇಲೆಯೂ ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ.
ಜುಲೈ 18 ರಿಂದ ಜಾರಿಗೆ ಬಂದಿರುವ ಹೊಸ ಜಿಎಸ್‌ಟಿ ನಿಯಮಗಳ ಪ್ರಕಾರ, ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಒಬ್ಬ ಹಿಡುವಳಿದಾರನು ಆಸ್ತಿಯನ್ನು ಬಾಡಿಗೆಗೆ ಪಡೆಯಲು ಶೇಕಡಾ 18 ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ.
ಪಾವತಿಸಿದ ಬಾಡಿಗೆಯ ಮೇಲಿನ 18 ಪ್ರತಿಶತ ತೆರಿಗೆಯು ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಲಾದ ಬಾಡಿಗೆದಾರರಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ ವ್ಯಾಪಾರ ಅಥವಾ ವೃತ್ತಿಯನ್ನು ನಿರ್ವಹಿಸುವ ಜಿಎಸ್‌ಟಿ-ನೋಂದಾಯಿತ ವ್ಯಕ್ತಿಯು ಮಾಲೀಕರಿಗೆ ಪಾವತಿಸುವ ಬಾಡಿಗೆಯ ಮೇಲೆ ಶೇಕಡ 18ರಷ್ಟು ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಈ ಹಿಂದೆ ಯಾರು ಜಿಎಸ್‌ಟಿ ಪಾವತಿ ಮಾಡಬೇಕಾಗಿತ್ತು, ಈಗ ಈ ಹೊಸ ಜಿಎಸ್‌ಟಿ ನಿಯಮ ಏನು ಹೇಳುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಈ ಹಿಂದೆ ಯಾರು ಜಿಎಸ್‌ಟಿ ಪಾವತಿಸುತ್ತಿದ್ದರು?
ಈ ಹಿಂದೆ ಬಾಡಿಗೆ ಅಥವಾ ಗುತ್ತಿಗೆಗೆ ನೀಡಲಾದ ಕಚೇರಿಗಳು ಅಥವಾ ಇತರೆ ಸ್ಥಳಗಳಂತಹ ವಾಣಿಜ್ಯ ಆಸ್ತಿಗಳ ಮೇಲೆ ಮಾತ್ರ ಜಿಎಸ್‌ಟಿಯನ್ನು ವಿಧಿಸಲಾಗುತ್ತಿತ್ತು. ಕಾರ್ಪೊರೇಟ್ ಮನೆಗಳು, ಒಬ್ಬ ವ್ಯಕ್ತಿಯ ಮನೆಯನ್ನು ಬಾಡಿಗೆಗೆ ಅಥವಾ ಗುತ್ತಿಗೆಗೆ ನೀಡಿದ ಸಂದರ್ಭದಲ್ಲಿ ಯಾವುದೇ ಜಿಎಸ್‌ಟಿಯನ್ನು ವಿಧಿಸಲಾಗುತ್ತಿರಲಿಲ್ಲ. ಆದರೆ ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿಯಲ್ಲಿ ನೋಂದಾಯಿಸಲ್ಪಟ್ಟಿರುವ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (ಆರ್‌ಸಿಎಂ) ಅಡಿಯಲ್ಲಿ ತೆರಿಗೆಯನ್ನು ಪಾವತಿ ಮಾಡುವ ಹೊಣೆಯನ್ನು ಹೊಂದಿರುತ್ತಾನೆ. ಹಿಡುವಳಿದಾರನು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅಡಿಯಲ್ಲಿ ಪಾವತಿಸಿದ ಜಿಎಸ್‌ಟಿಯನ್ನು ಮತ್ತೆ ಕ್ಲೈಮ್ ಮಾಡಲು ಸಾಧ್ಯವಾಗಲಿದೆ.
ಸಾಮಾನ್ಯ ಜನರು ಬಾಡಿಗೆ ಮೇಲೆ ಜಿಎಸ್‌ಟಿ ಪಾವತಿಸಬೇಕೇ?
ಹಿಡುವಳಿದಾರನು ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಿಕೊಂಡಾಗ ಮತ್ತು ಜಿಎಸ್‌ಟಿ ರಿಟರ್ನ್ ಅನ್ನು ಸಲ್ಲಿಕೆ ಮಾಡಬೇಕಾದಾಗ ಮಾತ್ರ ತೆರಿಗೆ ಅನ್ವಯವಾಗುತ್ತದೆ. ಆಸ್ತಿಯ ಮಾಲೀಕರು ತಮ್ಮ ಆಸ್ತಿಗಾಗಿ ಜಿಎಸ್‌ಟಿ ಪಾವತಿ ಮಾಡಬೇಕಾಗಿಲ್ಲ. "ಯಾವುದೇ ಸಾಮಾನ್ಯ ವೇತನದಾರರು ವಸತಿ ಮನೆ ಅಥವಾ ಫ್ಲಾಟ್ ಅನ್ನು ಬಾಡಿಗೆ ಅಥವಾ ಗುತ್ತಿಗೆಗೆ (ಲೀಸ್) ತೆಗೆದುಕೊಂಡಿದ್ದರೆ, ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗಿಲ್ಲ. ಆದರೆ ವ್ಯಾಪಾರ ಅಥವಾ ವೃತ್ತಿಯನ್ನು ಮಾಡುವ ಜಿಎಸ್‌ಟಿ ನೋಂದಾಯಿತ ವ್ಯಕ್ತಿಯು ತಮ್ಮ ಮಾಲೀಕರಿಗೆ ಪಾವತಿ ಮಾಡುವ ಜಿಎಸ್‌ಟಿ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ," ಎಂದು ವರದಿಯು ವಿವರಿಸಿದೆ.
ವಾರ್ಷಿಕ ವಹಿವಾಟು ಮಿತಿ ಎಷ್ಟು ನೋಡಿ
ಇನ್ನು ಆಸ್ತಿ ಅಥವಾ ಮನೆಯನ್ನು ಬಾಡಿಗೆಗೆ ಪಡೆದ ವ್ಯಕ್ತಿ ಬಾಡಿಗೆಗೆ ಪಡೆದ ವಸತಿ ಆಸ್ತಿಯಿಂದ ಯಾವುದೇ ಸೇವೆಯನ್ನು ನೀಡಿದರೆ ಶೇಕಡ 18ರಷ್ಟು ಜಿಎಸ್‌ಟಿಯನ್ನು ಪಾವತಿ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾನೆ. ಜಿಎಸ್‌ಟಿ ಕಾನೂನಿನ ಪ್ರಕಾರ ಜಿಎಸ್‌ಟಿ ಅಡಿ ನೋಂದಾಯಿಸಿದ ವ್ಯಕ್ತಿಯು ಕಾರ್ಪೋರೇಟ್ ಸಂಸ್ಥೆಗಳನ್ನು ಹೊಂದಿದ್ದರೆ ಮಾತ್ರ ಬಾಡಿಗೆ ಮೇಲೆ ಜಿಎಸ್‌ಟಿ ಪಾವತಿ ಮಾಡಬೇಕಾಗುತ್ತದೆ. ಇನ್ನು ವ್ಯಾಪಾರ ಅಥವಾ ವೃತ್ತಿಯನ್ನು ಮಾಡುತ್ತಿರುವ ವ್ಯಕ್ತಿಯು ಮಿತಿಗಿಂತ ಅಧಿಕ ವಾರ್ಷಿಕ ವಹಿವಾಟನ್ನು ನಡೆಸಿದ ಸಂದರ್ಭದಲ್ಲಿ ಜಿಎಸ್‌ಟಿ ನೋಂದಣಿ ಕಡ್ಡಾಯವಾಗಿದೆ. ಕಾನೂನಿನ ಪ್ರಕಾರ 20 ಲಕ್ಷ ರೂಪಾಯಿಗಿಂತ ಅಧಿಕ ವಾರ್ಷಿಕ ವಹಿವಾಟನ್ನು ಹೊಂದಿದ್ದರೆ ಆ ವ್ಯಕ್ತಿ ಜಿಎಸ್‌ಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಸರಕುಗಳ ಪೂರೈಕೆದಾರರ ಈ ವಾರ್ಷಿಕ ವಹಿವಾಟಿನ ಮಿತಿ 40 ಲಕ್ಷ ರೂಪಾಯಿ ಆಗಿದೆ. ನೋಂದಾಯಿತ ಘಟಕವು ಯಾವುದೇ ಈಶಾನ್ಯ ರಾಜ್ಯಗಳು ಅಥವಾ ವಿಶೇಷ ವರ್ಗದ ರಾಜ್ಯಗಳಲ್ಲಿ ತಮ್ಮ ಬ್ರಾಂಚ್ ಅನ್ನು ಹೊಂದಿದ್ದರೆ, ಮಿತಿಯು 10 ಲಕ್ಷ ರೂಪಾಯಿ ಆಗಿದೆ.
ಯಾರ ಮೇಲೆ ಈ ಹೊಸ ನಿಯಮದ ಪ್ರಭಾವ?
ಜಿಎಸ್‌ಟಿ ಕೌನ್ಸಿಲ್‌ನ 47 ನೇ ಸಭೆಯ ನಂತರ ಜಾರಿಗೆ ತರಲಾದ ಹೊಸ ಬದಲಾವಣೆಗಳು, ಬಾಡಿಗೆ ಅಥವಾ ಗುತ್ತಿಗೆಗೆ ವಸತಿ ಆಸ್ತಿಗಳನ್ನು ತೆಗೆದುಕೊಂಡಿರುವ ಕಂಪನಿಗಳು ಮತ್ತು ವೃತ್ತಿಪರರ ಮೇಲೆ ಪರಿಣಾಮ ಬೀರುತ್ತವೆ. ಉದ್ಯೋಗಿಗಳಿಗೆ ಗೆಸ್ಟ್ ಹೌಸ್ ಆಗಿ ಅಥವಾ ನಿವಾಸಗಳಾಗಿ ಬಳಕೆ ಮಾಡಲು ಬಾಡಿಗೆಗೆ ತೆಗೆದುಕೊಂಡ ವಸತಿ ಆಸ್ತಿಗಳಿಗೆ ಕಂಪನಿಗಳು ಪಾವತಿಸುವ ಬಾಡಿಗೆಗೆ ಈಗ ಶೇಕಡ 18ರಷ್ಟು ಜಿಎಸ್‌ಟಿಯನ್ನು ವಿಧಿಸಲಾಗುತ್ತದೆ. ಇದು ಉದ್ಯೋಗಿಗಳಿಗೆ ಉಚಿತ ವಸತಿ ನೀಡುತ್ತಿರುವ ಕಂಪನಿಗಳಿಗೆ ಉದ್ಯೋಗಿಗಳ ವೆಚ್ಚವನ್ನು ಹೆಚ್ಚಿಸುತ್ತದೆ. ಇನ್ನು ಖಾಸಗಿ ವ್ಯಕ್ತಿಗಳಿಗೆ ವೈಯಕ್ತಿಕ ಬಳಕೆಗಾಗಿ ಬಾಡಿಗೆಗೆ ನೀಡಿದರೆ ವಸತಿ ಘಟಕಗಳಿಗೆ ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದು ಸರ್ಕಾರ ಶುಕ್ರವಾರ ಸ್ಪಷ್ಟಣೆ ನೀಡಿದೆ.


Click it and Unblock the Notifications