ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ 47ನೇ ಜಿಎಸ್‌ಟಿ ಕೌನ್ಸಿಲ್ ಸಭೆಯು ಜೂನ್ 28ರಿಂದ ಎರಡು ದಿನಗಳ ಕಾಲ ನಡೆದಿದೆ. ಈ ಸಭೆಯಲ್ಲಿ ಹಲವಾರು ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯನ್ನು ಪರಿಷ್ಕರಣೆ ಮಾಡಲಾಗಿದೆ. ಆ ಪರಿಷ್ಕೃತ ದರವು ಜುಲೈ 18ರಿಂದ ಜಾರಿಗೆ ಬರಲಿದೆ. ಆದ್ದರಿಂದ ಇಂದಿನಿಂದ ಹಲವಾರು ವಸ್ತುಗಳು ದುಬಾರಿಯಾದರೆ, ಕೆಲವು ವಸ್ತುಗಳು ಅಗ್ಗವಾಗಲಿದೆ.
ಮನೆ ಬಳಕೆ ವಸ್ತುಗಳು, ಬ್ಯಾಂಕ್ ಸೇವೆ, ಆಸ್ಪತ್ರೆ, ಹೊಟೇಲ್ ರೂಮ್, ಪ್ರೀ ಪ್ಯಾಕೆಡ್ ಫುಡ್ ಸೇರಿದಂತೆ ಹಲವಾರು ವಸ್ತುಗಳ ಬೆಲೆಯು ಇಂದಿನಿಂದಲೇ ಏರಿಕೆಯಾಗಲಿದೆ. ಕೃತಕ ಕಾಲು ಮೊದಲಾದ ದೇಹದ ಕೃತಕ ಭಾಗಗಳ ಮೇಲಿನ ಜಿಎಸ್‌ಟಿಯನ್ನು ಕಡಿತ ಮಾಡಲಾಗಿದೆ.
ಬ್ಯಾಂಕ್ ಚೆಕ್‌ಗಳ ಮೇಲೆಯೂ ಜಿಎಸ್‌ಟಿ ಹೇರಿಕೆ ಮಾಡುವ ನಿರ್ಧಾರವನ್ನು ಕೌನ್ಸಿಲ್ ತೆಗೆದುಕೊಂಡಿದೆ. ಹಾಗೆಯೇ ಮ್ಯಾಪ್, ಅಟ್ಲಾಸ್ ಮೇಲೆಯೂ ಶೇಕಡ ಹನ್ನೆರಡಷ್ಟು ತೆರಿಗೆ ವಿಧಿಸಲು ನಿರ್ಧಾರ ಮಾಡಲಾಗಿದೆ. ಹಾಗಾದರೆ ಯಾವೆಲ್ಲಾ ವಸ್ತುಗಳು ಅಗ್ಗವಾಗಲಿದೆ, ಯಾವುದು ದುಬಾರಿಯಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....
ಯಾವೆಲ್ಲಾ ವಸ್ತುಗಳು ದುಬಾರಿ?
* ಮೊದಲೇ ಪ್ಯಾಕ್ ಮಾಡಲಾದ, ಲೇಬಲ್ ಹಾಕಲಾದ ಆಹಾರ ಸಾಮಾಗ್ರಿಗಳಾದ ಪನೀರ್, ಮೊಸರು, ಹಿಟ್ಟಿನ ಮೇಲೆ ಶೇಕಡ 5ರಷ್ಟು ಜಿಎಸ್‌ಟಿ ಹೇರಿಕೆಯಾಗಲಿದೆ.
* 5 ಸಾವಿರಕ್ಕಿಂತ ಅಧಿಕ ಮೊತ್ತದ ಆಸ್ಪತ್ರೆಯ ಬೆಡ್‌ಗಳಿಗೆ ಶೇಕಡ 5ರಷ್ಟು ತೆರಿಗೆ ವಿಧಿಸಲಾಗುತ್ತದೆ.
* 1 ಸಾವಿರಕ್ಕಿಂತ ಕಡಿಮೆ ಬಾಡಿಗೆಯನ್ನು ಪಡೆಯುವ ಹೊಟೇಲ್ ರೂಮ್‌ಗಳ ಮೇಲೆ ಶೇಕಡ 12ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಈವರೆಗೂ ಒಂದು ಸಾವಿರಕ್ಕಿಂತ ಕಡಿಮೆ ಬಾಡಿಗೆಯನ್ನು ಪಡೆಯುವ ಹೊಟೇಲ್ ರೂಮ್‌ಗಳ ಮೇಲೆ ಯಾವುದೇ ಜಿಎಸ್‌ಟಿ ಇಲ್ಲ.
* ಮಾಪ್, ಚಾರ್ಟ್, ಅಟ್ಲಾಸ್‌ಗಳ ಮೇಲೆ ಶೇಕಡ 12ರಷ್ಟು ಜಿಎಸ್‌ಟಿ ಹೇರಲಾಗುತ್ತದೆ.
ಸೋಲರ್ ವಾಟರ್ ಹೀಟರ್ ಸೇರಿ ಹಲವು ಸೇವೆ ದುಬಾರಿ?
* ಬ್ಯಾಂಕ್‌ಗಳು ನೀಡುವ ಚೆಕ್ ಮೇಲೆಯೂ ಸುಮಾರು ಶೇಕಡ 18ರಷ್ಟು ಜಿಎಸ್‌ಟಿ ಹೇರಿಕೆ ಮಾಡಲಾಗುತ್ತದೆ.
* ಪ್ರಿಟಿಂಗ್, ಬರವಣಿಗೆ, ಡ್ರಾಯಿಂಗ್ ಮಾಡಲು ಬಳಸುವ ಇಂಕ್, ಬ್ಲೇಡ್, ಚಾಕು, ಪೆನ್ಸಿಲ್ ಶಾರ್ಪ್‌ನರ್, ಎಲ್‌ಇಡಿ ಲೈಟ್, ಡ್ರಾಯಿಂಗ್‌ಗೆ ಬಳಕೆ ಮಾಡುವ ಸಾಮಾಗ್ರಿಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 12ರಿಂದ ಶೇಕಡ 18ಕ್ಕೆ ಏರಿಕೆ ಮಾಡಲಾಗಿದೆ.
* ಸೋಲರ್ ವಾಟರ್ ಹೀಟರ್ ಮೇಲಿನ ಜಿಎಸ್‌ಟಿಯನ್ನು ಶೇಕಡ 5ರಿಂದ ಶೇಕಡ 12ಕ್ಕೆ ಏರಿಕೆ ಮಾಡಲಾಗಿದೆ.
* ಸೇವೆಗಳಾದ ರೋಡ್, ಬ್ರಿಡ್ಜ್, ರೈಲ್ವೇ, ಮೆಟ್ರೋ ಕಾಂಟ್ರಾಕ್ಟ್‌ಗಳ ಮೇಲಿನ ಜಿಎಸ್‌ಟಿ ಶೇಕಡ 12ರಿಂದ ಶೇಕಡ 18ಕ್ಕೆ ಏರಿಕೆ ಮಾಡಲಾಗಿದೆ.
* ಆರ್‌ಬಿಐ, ಐಆರ್‌ಡಿಎ, ಸೆಬಿ ಸೇವೆಗಳ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.
* ಬಯೋ ಮೆಡಿಕಲ್ ವೇಸ್ಟ್ ಚಿಕಿತ್ಸೆ ವ್ಯವಸ್ಥೆಗೆ ಶೇಕಡ 12ರಷ್ಟು ಜಿಎಸ್‌ಟಿ
ಯಾವುದೆಲ್ಲಾ ಅಗ್ಗ ಆಗುತ್ತೆ?
* ಕೃತಕ ಕಾಲು ಮೊದಲಾದ ದೇಹದ ಕೃತಕ ಭಾಗಗಳ ಮೇಲಿನ ಜಿಎಸ್‌ಟಿಯನ್ನು ಕಡಿತ ಮಾಡಲಾಗಿದೆ. ಈ ಹಿಂದೆ ಕೃತಕ ಕಾಲು ಮೊದಲಾದವುಗಳಿಗೆ ಶೇಕಡ 12 ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಶೇಕಡ 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.
* ಟ್ರಕ್, ಸರಕು ಸಾಗಾಟ ಬಾಡಿಗೆ ಕೂಡಾ ಇಳಿಕೆ ಮಾಡಲಾಗಿದೆ. ಶೇಕಡ 18ರಿಂದ ಶೇಕಡ 12ಕ್ಕೆ ಇಳಿಕೆ ಮಾಡಲಾಗಿದೆ.
ಬೇರೇನೆಲ್ಲಾ ಅಗ್ಗ?
* ವಾಯು ಮಾರ್ಗ ಪ್ರಯಾಣ: ಇಕಾನಮಿ ಕ್ಲಾಸ್‌ನಲ್ಲಿ ಈಶಾನ್ಯ ರಾಜ್ಯದಿಂದ ಹಾಗೂ ಬಾಗ್ಡೋಗ್ರದಿಂದ ವಾಯು ಮಾರ್ಗ ಪ್ರಯಾಣಕ್ಕೆ ಯಾವುದೇ ಜಿಎಸ್‌ಟಿ ವಿಧಿಸಲಾಗುವುದಿಲ್ಲ.
* ಎಲೆಕ್ಟ್ರಿಕಲ್ ವಾಹನದ ಮೇಲಿನ ಜಿಎಸ್‌ಟಿಯನ್ನು ಶೇಕಡ 18ರಿಂದ ಶೇಕಡ 5ಕ್ಕೆ ಇಳಿಕೆ ಮಾಡಲಾಗಿದೆ.


Click it and Unblock the Notifications