ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ದೇಶದ ನಾಲ್ಕನೇ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಕೋಟಕ್ ಮಹೀಂದ್ರಾ ಬ್ಯಾಂಕ್ ಇತ್ತೀಚೆಗೆ ತನ್ನ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ 2-5 ಕೋಟಿ ರೂಪಾಯಿ ಎಫ್‌ಡಿ ಮೇಲಿನ ಬಡ್ಡಿದರ ಮಾತ್ರ ಏರಿಸಿದೆ. ಆದ್ದರಿಂದಾಗಿ ಸಾಮಾನ್ಯ ನಾಗರಿಕರಿಗೆ ವಾರ್ಷಿಕ ಎಫ್‌ಡಿ ಬಡ್ಡಿದರವು ಶೇಕಡ 4.75ರಿಂದ ಶೇಕಡ 7.00ರ ನಡುವೆ ಇರುತ್ತದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ ಶೇಕಡ 5.25ರಿಂದ ಶೇಕಡ 7.75ರ ನಡುವೆ ಎಫ್‌ಡಿ ಬಡ್ಡಿದರವಿದೆ. ಇನ್ನು ಕೋಟಕ್ ಮಹೀಂದ್ರಾ ಬ್ಯಾಂಕ್ ಕೂಡಾ ಎಫ್‌ಡಿ ಬಡ್ಡಿದರ ಹೆಚ್ಚಿಸಿದೆ. 180 ದಿನಗಳ ಸ್ಥಳೀಯ ಟರ್ಮ್ ಡೆಪಾಸಿಟ್ ಬಡ್ಡಿದರ 50 ಮೂಲಾಂಕ ಅಥವಾ ಶೇಕಡ 6ರಿಂದ ಶೇಕಡ 6.50ಕ್ಕೆ ಏರಿಸಿದೆ. ಇನ್ನು ಹಿರಿಯ ನಾಗರಿಕರು ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಹೆಚ್ಚುವರಿ 50 ಬಿಪಿಎಸ್ ಪಡೆಯಬಹುದು. ಶೇ.7ರವರೆಗೆ ಬಡ್ಡಿದರ ಇರಲಿದೆ.

ಎಫ್‌ಡಿ ಬಡ್ಡಿದರ ಏರಿಸಿದ ಹಲವಾರು ಬ್ಯಾಂಕುಗಳು
ಈ ಹಿಂದೆ ಹಲವಾರು ಬ್ಯಾಂಕುಗಳು ಎಫ್‌ಡಿ ಬಡ್ಡಿದರವನ್ನು ಏರಿಸಿದೆ. ಪ್ರಮುಖವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಶೇ.4ರಿಂದ ಶೇ.6.50ಕ್ಕೆ ಹೆಚ್ಚಿಸಿದ ಅವಧಿಯಲ್ಲಿ ಬಹುತೇಕ ಎಲ್ಲ ಬ್ಯಾಂಕುಗಳು, ಎಫ್‌ಡಿ ಮಾತ್ರವಲ್ಲದೆ ಸಾಲದ ಬಡ್ಡಿದರ ಏರಿಸಿದೆ. ಈಗಾಗಲೇ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಫ್‌ಡಿ ಬಡ್ಡಿದರ ಹೆಚ್ಚಿಸಿದೆ.
ಎಫ್‌ಡಿ ಹೂಡಿಕೆದಾರರು ಈಗ ಮಾಡುವುದೇನು?
ಮುಂದಿನ ಎಂಪಿಸಿ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣದುಬ್ಬರವನ್ನು ಇನ್ನಷ್ಟು ನಿಯಂತ್ರಣಕ್ಕೆ ತರುವ ಪ್ರಯತ್ನದಲ್ಲಿ ರೆಪೋ ದರವನ್ನು ಮತ್ತೆ 25 ಮೂಲಾಂಕ ಹೆಚ್ಚಿಸುವ ಸಾಧ್ಯತೆಯಿದೆ. ಅದಾದ ಬಳಿಕವೂ ಹಲವಾರು ಬ್ಯಾಂಕ್‌ಗಳು ಬಡ್ಡಿದರ ಏರಿಸಬಹುದು. ಆದ್ದರಿಂದಾಗಿ ಹೂಡಿಕೆದಾರರು ಪ್ರಸ್ತುತ ದೀರ್ಘಾವಧಿಯ ಎಫ್‌ಡಿ ಹೂಡಿಕೆಯನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ ಎಂದು ತಜ್ಞರ ಅಭಿಪ್ರಾಯವಾಗಿದೆ.
ಈ ವರ್ಷದ ಕೊನೆಯ ವೇಳೆಗೆ ಎಫ್‌ಡಿ ಬಡ್ಡಿದರ ಭಾರೀ ಹೆಚ್ಚಳವಾಗುವ ನಿರೀಕ್ಷೆಯಿದೆ. ಆದರೆ ಮುಂದಿನ ವರ್ಷದಲ್ಲೇ ಎಫ್‌ಡಿ ಬಡ್ಡಿದರ ಕೊಂಚ ಇಳಿಕೆ ಕಾಣಬಹುದು. ಆದರೆ ದೀರ್ಘಾಕಾಲ ಯಾವುದೇ ಇಳಿಕೆ ಉಂಟಾಗುವ ಸಾಧ್ಯತೆಯಿಲ್ಲ. ಆದ್ದರಿಂದಾಗಿ 3ರಿಂದ 5 ವರ್ಷದ ಎಫ್‌ಡಿ ಹೂಡಿಕೆ ಉತ್ತಮ ಎನ್ನುತ್ತಾರೆ ತಜ್ಞರು.


Click it and Unblock the Notifications