ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ವಿಶೇಷ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಯೋಜನೆಯನ್ನು ಮತ್ತೆ ವಿಸ್ತರಣೆ ಮಾಡಿದೆ. ಈ ಹಿಂದೆ ಮೇ ತಿಂಗಳಿನಲ್ಲಿ ಗಡುವು ಸಮೀಪಿಸಿದಾಗ ಹಿರಿಯ ನಾಗರಿಕರಿಗಾಗಿ ಇರುವ ವಿಶೇಷ ಎಫ್‌ಡಿ ಯೋಜನೆಯನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ವಿಸ್ತರಣೆ ಮಾಡಿದ್ದು ಈಗ ಮತ್ತೆ ಗಡುವು ಮುಗಿದ ಬಳಿಕ ಅವಧಿಯನ್ನು ವಿಸ್ತರಣೆ ಮಾಡಿದೆ. ಅಷ್ಟಕ್ಕೂ ಅವಧಿ ವಿಸ್ತರಣೆಯಾಗಿರುವುದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಿಶೇಷ ಎಫ್‌ಡಿ ಯೋಜನೆ "ಸಿನೀಯರ್ ಸಿಟಿಜನ್ ಕೇರ್ ಎಫ್‌ಡಿ" ಯದ್ದಾಗಿದೆ.
ಮೇ 18, 2020ರಂದು ಎಚ್‌ಡಿಎಫ್‌ಸಿ ಬ್ಯಾಂಕ್ ಈ ಯೋಜನೆಯನ್ನು ಆರಂಭ ಮಾಡಿದೆ. ಹಿರಿಯ ನಾಗರಿಕರಿಗೆ ಸಾಮಾನ್ಯವಾಗಿಯೇ ಎಫ್‌ಡಿ ಮೇಲೆ ಇತರರಿಗೆ ನೀಡುವ ಬಡ್ಡಿದರಕ್ಕಿಂತ ಅಧಿಕ ಬಡ್ಡಿದರವನ್ನು ನೀಡಲಾಗುತ್ತದೆ. ಆದರೆ ಅದಕ್ಕೂ ಅಧಿಕ ಬಡ್ಡಿದರವನ್ನು ಈ ವಿಶೇಷ ಯೋಜನೆಯಲ್ಲಿ ನೀಡಲಾಗುತ್ತದೆ. ಈ ವಿಶೇಷ ಎಫ್‌ಡಿ ಯೋಜನೆಯ ಅವಧಿಯು ಜುಲೈ 7, 2023ರಂದು ಕೊನೆಯಾಗಿದೆ. ಆದರೆ ಬ್ಯಾಂಕ್ ಈ ಎಫ್‌ಡಿ ಅವಧಿಯನ್ನು ನವೆಂಬರ್ 7, 2023 ರವರೆಗೆ ವಿಸ್ತರಣೆ ಮಾಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆ
ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರು ಹೆಚ್ಚುವರಿಯಾಗಿ ಶೇಕಡ 0.25ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಹೆಚ್ಚುವರಿಯಾಗಿ ಶೇಕಡ 0.50ರಷ್ಟು ಬಡ್ಡಿದರ ನೀಡಲಾಗುತ್ತದೆ.
ಅದಕ್ಕೂ ಅಧಿಕವಾಗಿ ಶೇಕಡ 0.25ರಷ್ಟು ಬಡ್ಡಿದರವನ್ನು ವಿಶೇಷ ಎಫ್‌ಡಿಯಲ್ಲಿ ನೀಡಲಾಗುತ್ತದೆ. ಅಂದರೆ ನೀವು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಯೋಜನೆಯಲ್ಲಿ ಸಾಮಾನ್ಯ ನಾಗರಿಕರಿಗಿಂತ ಶೇಕಡ 0.75ರಷ್ಟು ಹೆಚ್ಚುವರಿ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ.
"5 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ 5 ವರ್ಷ 1 ದಿನದಿಂದ 10 ವರ್ಷದ ಅವಧಿಯ ವಿಶೇಷ ಎಫ್‌ಡಿ ಯೋಜನೆಯ ಮೇಲೆ ಹೆಚ್ಚುವರಿಯಾಗಿ ಶೇಕಡ 0.25ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಮೇ 18 2020ರಿಂದ ಜುಲೈ 7, 2023ರವರೆಗೆ ಯಾರೆಲ್ಲ ಈ ಯೋಜನೆಯನ್ನು ಖರೀದಿ ಮಾಡಿದ್ದರೋ ಅವರಿಗೆ ಈ ಹೆಚ್ಚುವರಿ ಬಡ್ಡಿದರ ಅನ್ವಯವಾಗುತ್ತದೆ," ಎಂದು ಬ್ಯಾಂಕ್ ಈ ಹಿಂದೆ ಹೇಳಿದೆ.
"ಈ ವಿಶೇಷ ಕೊಡುಗೆಯು ಹೊಸ ಫಿಕ್ಸಿಡ್ ಡೆಪಾಸಿಟ್ ಬುಕಿಂಗ್‌ಗಳಿಗೆ ಮತ್ತು ಮೇಲಿನ ಅವಧಿಯಲ್ಲಿ ಹಿರಿಯ ನಾಗರಿಕರು ಮಾಡಿದ ಅಪ್‌ಡೇಟ್‌ಗಳಿಗೆ ಅನ್ವಯವಾಗುತ್ತದೆ," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ತಿಳಿಸಿದೆ. ಇನ್ನು ಈ ಎಫ್‌ಡಿಯನ್ನು ಅಕಾಲಿಕವಾಗಿ ಮುಚ್ಚಿದ್ದರೆ ಅಂದರೆ 5-ವರ್ಷದ ಅವಧಿಯ ಅಂತ್ಯದ ಮೊದಲು ಮುಚ್ಚಿದರೆ, ಮೂಲ ದರಕ್ಕಿಂತ ಶೇಕಡ 1ರಷ್ಟು ಕಡಿಮೆ ಬಡ್ಡಿದರ ನೀಡಲಾಗುತ್ತದೆ.
ಈಗ ಬ್ಯಾಂಕ್ ಹೇಳುವುದೇನು?
"5 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ 5 ವರ್ಷ 1 ದಿನದಿಂದ 10 ವರ್ಷದ ಅವಧಿಯ ಎಫ್‌ಡಿ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ 18 ಮೇ 2020 ರಿಂದ ನವೆಂಬರ್ 7, 2023 ರವರೆಗೆ ಹಿರಿಯ ನಾಗರಿಕರಿಗೆ ಸಾಮಾನ್ಯವಾಗಿ ನೀಡುವ ಹೆಚ್ಚುವರಿ ಶೇಕಡ 0.50 ಬಡ್ಡಿದರಕ್ಕಿಂತ ಅಧಿಕ ಶೇಕಡ 0.25ರಷ್ಟು ಬಡ್ಡಿದರವನ್ನು ನೀಡುತ್ತೇವೆ. ಈ ವಿಶೇಷ ಎಫ್‌ಡಿ ಬಡ್ಡಿದರವು ಈಗ ಜಾಲ್ತಿಯಲ್ಲಿರುವ ಹಾಗೂ ಹೊಸದಾಗಿ ಮಾಡಲಾಗುವ ಎಫ್‌ಡಿ ಯೋಜನೆಗೆ ಅನ್ವಯಾಗುತ್ತದೆ. ಇದು ಅನಿವಾಸಿ ಭಾರತೀಯರಿಗೆ ಅನ್ವಯವಾಗುವುದಿಲ್ಲ," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ.
ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಇತ್ತೀಚೆಗೆ ವಿಲೀನವಾಗಿದೆ. ಅದಾದ ಬಳಿಕ ಬ್ಯಾಂಕ್‌ನ ಎಂಸಿಎಲ್‌ಆರ್ ಏರಿಕೆ ಮಾಡಲಾಗಿದೆ ಎಂಬುವುದು ಗಮನಾರ್ಹ. ಅಂದರೆ ಬ್ಯಾಂಕ್‌ನ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದೆ.


Click it and Unblock the Notifications