ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಇತ್ತೀಚೆಗೆ ತನ್ನ ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ. ಇದರಿಂದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಇನ್ಮುಂದೆ ಸಾಲವು ದುಬಾರಿಯಾಗಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಸಾಲವನ್ನು ಪಡೆದವರು ಇನ್ಮುಂದೆ ಅಧಿಕ ಇಎಂಐ ಪಾವತಿ ಮಾಡಬೇಕಾಗುತ್ತದೆ. ಈ ನೂತನ ಬಡ್ಡಿದರವು ಜುಲೈ 7, 2023ರಿಂದ ಜಾರಿಗೆ ಬರಲಿದೆ.
ಈ ಹಿಂದೆ ಏಪ್ರಿಲ್‌ನಲ್ಲಿಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಪರಿಷ್ಕರಣೆ ಮಾಡಿದೆ. ಕೆಲವು ಅವಧಿಯ ಎಂಸಿಎಲ್‌ಆರ್ ಅನ್ನು ಎಚ್‌ಡಿಎಫ್‌ಸಿ ಬ್ಯಾಂಕ್ 85 ಬೇಸಿಸ್ ಪಾಯಿಂಟ್‌ಗೆ (ಬಿಪಿಎಸ್) ಇಳಿಸಲಾಗಿದೆ. (ಇಲ್ಲಿ ಒಂದು ಬಿಪಿಎಸ್ ಅಂದರೆ ಶೇಕಡ 0.01 ಆಗಿದೆ). ಈ ನೂತನ ಬಡ್ಡಿದರವು ಏಪ್ರಿಲ್ 10, 2023ರಿಂದ ಜಾರಿಗೆ ಬಂದಿದೆ. ಈಗ ಎಂಸಿಎಲ್‌ಆರ್ ಅನ್ನು ಹೆಚ್ಚಿಸಿದೆ. ನೂತನ ಬಡ್ಡಿದರದ ವಿವರ ಇಲ್ಲಿದೆ....

ಎಚ್‌ಡಿಎಫ್‌ಸಿ ಬ್ಯಾಂಕ್‌ನ ನೂತನ ಎಂಸಿಎಲ್‌ಆರ್ ಎಷ್ಟಿದೆ?
ಎಚ್‌ಡಿಎಫ್‌ಸಿ ಬ್ಯಾಂಕ್ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಹೆಚ್ಚಳ ಮಾಡಿದೆ. ಓವರ್‌ನೈಟ್ ಎಂಸಿಎಲ್‌ಆರ್ ಅನ್ನು 15 ಬೇಸಿಕ್ ಪಾಯಿಂಟ್ ಹೆಚ್ಚಳ ಮಾಡಲಾಗಿದ್ದು, ಶೇಕಡ 8.25ಕ್ಕೆ ತಲುಪಿದೆ. ಇದಕ್ಕೂ ಹಿಂದೆ ಓವರ್‌ನೈಟ್ ಎಂಸಿಎಲ್‌ಆರ್ ಶೇಕಡ 8.10 ಆಗಿತ್ತು. ಒಂದು ತಿಂಗಳ ಎಂಸಿಎಲ್‌ಆರ್ ಶೇಕಡ 8.20ರಿಂದ ಶೇಕಡ 8.30ಕ್ಕೆ ಏರಿಕೆಯಾಗಿದೆ. ಅಂದರೆ 10 ಬೇಸಿಕ್ ಪಾಯಿಂಟ್ ಹೆಚ್ಚಳವಾಗಿದೆ.
ಇನ್ನು ಮೂರು ತಿಂಗಳ ಎಂಸಿಎಲ್‌ಆರ್ ಕೂಡಾ ಹತ್ತು ಮೂಲಾಂಕ ಏರಿಕೆಯಾಗಿದ್ದು, ಶೇಕಡ 8.60ಕ್ಕೆ ತಲುಪಿದೆ. ಇನ್ನು ಆರು ತಿಂಗಳ ಎಂಸಿಎಲ್‌ಆರ್ ಐದು ಬೇಸಿಕ್ ಪಾಯಿಂಟ್ ಹೆಚ್ಚಳ ಮಾಡಲಾಗಿದ್ದು, ಶೇಕಡ 8.90 ಆಗಿದೆ. ಆದರೆ ಒಂದು ವರ್ಷದ ಅವಧಿಯ ಎಂಸಿಎಲ್‌ಆರ್ ಸ್ಥಿರವಾಗಿದೆ, ಇದರಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ, ಆದ್ದರಿಂದ ಶೇಕಡ 9.05 ಆಗಿದೆ.
ಗೃಹ ಸಾಲದ ಬಡ್ಡಿದರಕ್ಕೆ ಪ್ರಭಾವ ಬೀರುತ್ತಾ?
ಎಚ್‌ಡಿಎಫ್‌ಸಿ ಬ್ಯಾಂಕ್ ನೀಡುವ ಹಲವಾರು ಸಾಲಗಳು ಒಂದು ವರ್ಷದ ಎಂಸಿಎಲ್‌ಆರ್‌ಗೆ ಲಿಂಕ್ ಆಗಿರುತ್ತದೆ ಎಂಬುವುದು ಗಮನಾರ್ಹವಾಗಿದೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಎಂಸಿಎಲ್‌ಆರ್ ಅನ್ನು ಹೆಚ್ಚಳ ಮಾಡಿರುವುದು ಗೃಹ ಸಾಲದ ಬಡ್ಡಿದರದ ಮೇಲೆಯೂ ಪ್ರಭಾವ ಉಂಟು ಮಾಡದು. ಯಾಕೆಂದರೆ ಗೃಹ ಸಾಲವು ರೆಪೋ ದರ ಆಧಾರಿತವಾಗಿದೆ. ವೈಯಕ್ತಿಕ ಸಾಲ ಹಾಗೂ ಆಟೋ ಸಾಲವು ಎಂಸಿಎಲ್‌ಆರ್ ಆಧಾರಿತವಾಗಿದ್ದು, ಈ ಸಾಲ ಪಡೆದವರಿಗೆ ಬಡ್ಡಿದರವು ಹೆಚ್ಚಳವಾಗಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಹಿಂದಿನ ಎಂಪಿಸಿ ಸಭೆಯ ಬಳಿಕ ರೆಪೋ ದರವು ಸ್ಥಿರವಾಗಿರಿಸಿದೆ. ಆದರೆ ಈಗ ಎಚ್‌ಡಿಎಫ್‌ಸಿ ಬ್ಯಾಂಕ್ ಎಂಸಿಎಲ್‌ಆರ್ ಅನ್ನು ಹೆಚ್ಚಿಸಿರುವುದು ಹಲವಾರು ತಜ್ಞರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಇನ್ನು ಆಗಸ್ಟ್‌ನಲ್ಲಿ ಮತ್ತೆ ಎಂಪಿಸಿ ಸಭೆ ನಡೆಯಲಿದ್ದು, ಆಗಲೂ ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಲಿದೆ ಎಂದು ತಜ್ಞರು ಹೇಳುತ್ತಾರೆ.
ಈ ತಿಂಗಳ ಮೊದಲ ದಿನದಿಂದ ಜಾರಿಗೆ ಬರುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ವಿಲೀನವಾಗಿದೆ. ಜುಲೈ 13 ರಿಂದ ಷೇರು ವಿನಿಮಯ ಕೇಂದ್ರದಲ್ಲಿ ಎಚ್‌ಡಿಎಫ್‌ಸಿ ಷೇರುಗಳ ವಹಿವಾಟು ಸ್ಥಗಿತಗೊಳ್ಳಲಿದೆ. ಈ ನೂತನ ಸಾಲದ ಬಡ್ಡಿದರ ಏರಿಕೆಯೂ ವಿಲೀನದ ಬಳಿಕ ಎರಡು ಸಂಸ್ಥೆಗಳಲ್ಲಿ ಸಾಲ ಪಡೆದಿರುವವರಿಗೆ ಪ್ರಭಾವ ಉಂಟು ಮಾಡಬಹುದು. ಆದ್ದರಿಂದಾಗಿ ನೀವು ಬ್ಯಾಂಕ್ ಅನ್ನು ಸಂಪರ್ಕಿಸುವುದು ಉತ್ತಮ.
ಏಪ್ರಿಲ್‌ನಲ್ಲಿ ಎಷ್ಟು ಎಂಸಿಎಲ್ಆರ್ ಇಳಿಸಲಾಗಿತ್ತು?
ಈ ದರ ಕಡಿತದ ಬಳಿಕ ಓವರ್‌ನೈಟ್ ಎಂಸಿಎಲ್‌ಆರ್ 85 ಮೂಲಾಂಕ ಇಳಿಕೆಯಾಗಿದ್ದು, ಶೇಕಡ 8.65ರಿಂದ ಶೇಕಡ 7.80ಕ್ಕೆ ತಲುಪಿತ್ತು. ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ಒಂದು ತಿಂಗಳ ಎಂಸಿಎಲ್‌ಆರ್ ಅನ್ನು 70 ಬಿಪಿಎಸ್ ಇಳಿಸಲಾಗಿದ್ದು, ಎಂಸಿಎಲ್‌ಆರ್ ಶೇಕಡ 8.65ರಿಂದ ಶೇಕಡ 7.95ಕ್ಕೆ ತಲುಪಿತ್ತು. ಇನ್ನು ಇದೇ ಸಂದರ್ಭದಲ್ಲಿ 3 ತಿಂಗಳ ಎಂಸಿಎಲ್‌ಆರ್ ಅನ್ನು 40 ಬಿಪಿಎಸ್ ಕಡಿತಗೊಳಿಸಲಾಗಿದ್ದು ದರ ಶೇಕಡ 8.7ರಿಂದ ಶೇಕಡ 8.30ಕ್ಕೆ ತಲುಪಿತ್ತು. 6 ತಿಂಗಳ ಎಂಸಿಎಲ್‌ಆರ್ 10 ಮೂಲಾಂಕ ಇಳಿಕೆ ಮಾಡಲಾಗಿತ್ತು. ಅದರಿಂದಾಗಿ ಎಂಸಿಎಲ್‌ಆರ್ ದರವು ಶೇಕಡ 8.80ರಿಂದ ಶೇಕಡ 8.7ಕ್ಕೆ ತಲುಪಿತ್ತು. ಅದಾದ ಬಳಿಕ ಕೊಂಚ ಎಂಸಿಎಲ್‌ಆರ್ ಹೆಚ್ಚಿಸಲಾಗಿತ್ತು.


Click it and Unblock the Notifications