ನಮ್ಮದೇ ಆದ ಸ್ವಂತ ಮನೆಯಲ್ಲಿ ವಾಸ ಮಾಡುವುದು ಎಲ್ಲರ ಕನಸಾಗಿದೆ. ಆದರೆ ಅದಕ್ಕೆ ನಮ್ಮಲ್ಲಿ ಅಷ್ಟು ಹಣ ಇರಬೇಕಾಗುತ್ತದೆ. ಹಣವಿಲ್ಲದಿದ್ದರೆ ನಾವು ಮನೆ ಕಟ್ಟಿಸಲು ಅಥವಾ ಹೊಸ ಮನೆಯನ್ನು ಖರೀದಿಸಲು ಸಾಧ್ಯವೇ ಇಲ್ಲ ಎಂದಲ್ಲ. ನಾವು ಗೃಹ ಸಾಲವನ್ನು ಪಡೆಯುವ ಮೂಲಕ ಮನೆ ಖರೀದಿ ಮಾಡಬಹುದು. ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸು ಮಾಡಲು ನಮಗೆ ಗೃಹ ಸಾಲ ಸಹಕಾರಿಯಾಗಿದೆ. ಆದರೆ ನೀವು ಗೃಹ ಸಾಲವನ್ನು ಪಡೆದು ಸರಿಯಾಗಿ ನಿರ್ವಹಣೆ ಮಾಡದಿದ್ದರೆ, ಅದು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.
ಹೌದು, ನಾವು ಮನೆ ಖರೀದಿಗೆ ಸಾಲವನ್ನೇನೋ ಪಡೆಯುತ್ತೇವೆ, ಆದರೆ ಅದನ್ನು ಮರುಪಾವತಿ ಮಾಡಬೇಕಲ್ಲವೇ?. ಕಳೆದ 10 ತಿಂಗಳಿನಲ್ಲಿ ಗೃಹ ಸಾಲದ ಬಡ್ಡಿದರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪ್ರಮುಖವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರೆಪೋ ದರ ಹೆಚ್ಚಿಸಿದ್ದಂತೆ ಬ್ಯಾಂಕುಗಳು ಕೂಡಾ ಸಾಲದ ಬಡ್ಡಿದರವನ್ನು ಏರಿಸುತ್ತಾ ಬಂದಿದೆ. ಇದು ಗೃಹ ಸಾಲ ಪಡೆಯುವವರಿಗೆ ಹೊರೆಯಾಗಿದೆ. ಬಡ್ಡಿದರ ಹೆಚ್ಚಾಗಿರುವಾಗಲೂ ಗೃಹ ಸಾಲ ಪಡೆಯಲು ಮುಂದಾಗಿದ್ದೀರಾ? ಮೊದಲು ಈ ಸುದ್ದಿಯನ್ನು ನೀವು ಓದಲೇ ಬೇಕು...
ಬಡ್ಡಿದರ ಬಗ್ಗೆ ಸರಿಯಾದ ಮಾಹಿತಿ ತಿಳಿದಿರಿ
ಗೃಹ ಸಾಲವೆಂದಲ್ಲ ನಾವು ಸಾಮಾನ್ಯವಾಗಿ ಯಾವುದೇ ಸಾಲವನ್ನು ಪಡೆಯುವಾಗಲೂ ಅದಕ್ಕೆ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳು ಎಷ್ಟು ಬಡ್ಡಿದರವನ್ನು ವಿಧಿಸುತ್ತದೆ ಎಂದು ತಿಳಿಯುವುದು ಮುಖ್ಯವಾಗುತ್ತದೆ. ನೀವು ಗೃಹ ಸಾಲವನ್ನು ಪಡೆಯುವಾಗ ಸ್ಥಿರವಲ್ಲದ ಅಂದರೆ ಬದಲಾಗುವ ಬಡ್ಡಿದರ ಇರಬಹುದು. ಇದು ಭವಿಷ್ಯದಲ್ಲಿ ಕಡಿಮೆ ಬಡ್ಡಿದರದ ಪ್ರಯೋಜನ ನಿಮಗೆ ನೀಡಬಹುದಾದರೂ ಅಪಾಯ ತಪ್ಪಿದಲ್ಲ. ಬಡ್ಡಿದರ ಹೆಚ್ಚಾದರೆ ನೀವು ಮೊತ್ತ ಪಾವತಿಸಬೇಕಾಗುತ್ತದೆ. ಕಳೆದ 10 ತಿಂಗಳಿನಲ್ಲಿ ಬಡ್ಡಿದರವು ಶೇಕಡ 2.5ರಷ್ಟು ಏರಿಕೆಯಾಗಿದೆ. ಇನ್ನು ಮುಂದೆಯೂ ಹೆಚ್ಚಾಗುವ ಸಾಧ್ಯತೆಯಿದೆ.
ದೀರ್ಘಾವಧಿಯಲ್ಲಿ ಆಗುವ ಬದಲಾವಣೆಗಳು
ಗೃಹ ಸಾಲ ಎಂದಿಗೂ ಒಂದೆರಡು ವರ್ಷದಲ್ಲಿ ಮರುಪಾವತಿ ಮಾಡಲು ಸಾಧ್ಯವಾಗುವಷ್ಟು ಮೊತ್ತವನ್ನು ಹೊಂದಿರುವುದಿಲ್ಲ. ಗೃಹ ಸಾಲ ಮರುಪಾವತಿ ಮಾಡಲು ಸಾಕಷ್ಟು ವರ್ಷಗಳು ಬೇಕಾಗುತ್ತದೆ. ಗೃಹ ಸಾಲವನ್ನು ದೀರ್ಘಾವಧಿಗೆ ನಾವು ಪಡೆಯುತ್ತೇವೆ. ಆದ್ದರಿಂದಾಗಿ ಭವಿಷ್ಯದಲ್ಲಿ ಆಗಲಿರುವ ಆರ್ಥಿಕ ಮತ್ತು ಇತರೆ ಅಂಶಗಳ ಬಗ್ಗೆ ನಾವು ಸ್ವಲ್ಪವಾದರೂ ಜ್ಞಾನ ಹೊಂದಿರಬೇಕಾಗುತ್ತದೆ. ಈ ಅಂಶಗಳು ಬಡ್ಡಿದರದ ಮೇಲೆ ಪ್ರಭಾವ ಉಂಟು ಮಾಡಬಹುದಾಗಿದೆ. ಇನ್ನು ಬಡ್ಡಿದರದ ಆಧಾರದಲ್ಲಿ ಎಂದಿಗೂ ಗೃಹ ಸಾಲವನ್ನು ಪಡೆದರೆ ಪ್ರಯೋಜನ ಉಂಟಾಗಲಿದೆ ಎಂದು ಹೇಳಲಾಗದು. ಯಾಕೆಂದರೆ ಗೃಹ ಸಾಲದ ಮೇಲೆ ಎಂದಿಗೂ ಹಲವಾರು ಅಂಶಗಳು ಪ್ರಭಾವ ಬೀರುತ್ತದೆ.
ಬಡ್ಡಿದರ ಹೆಚ್ಚಾಗುತ್ತಿದೆ ಗಮನದಲ್ಲಿರಲಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣದುಬ್ಬರವನ್ನು ನಿಯಂತ್ರಣ ಮಾಡುವ ಪ್ರಯತ್ನದಲ್ಲಿ ಕಳೆದ 10 ತಿಂಗಳಿನಿಂದ ಬಡ್ಡಿದರವ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಇದರಿಂದಾಗಿ ಗೃಹ ಸಾಲವು ದುಬಾರಿಯಾಗಿದೆ. ಇನ್ನು ಮುಂದೆಯೂ ಕೂಡಾ ಬಡ್ಡಿದರ ಹೆಚ್ಚಾಗುವ ಸಾಧ್ಯತೆಯಿದೆ. ಹಾಗೆಯೇ ಶೀಘ್ರವೇ ದರ ಇಳಿಯುವ ಲಕ್ಷಣಗಳು ಇಲ್ಲ. ಹಾಗಿರುವಾಗ ಭವಿಷ್ಯದಲ್ಲಿ ಬಡ್ಡಿದರ ಏರಿಕೆಯಾಗದ ಸ್ಥಿತಿ ನಿಭಾಯಿಸಲು ಸಿದ್ಧವಾಗಿಯೇ ಗೃಹ ಸಾಲ ಪಡೆಯಿರಿ. ಅವಧಿ ವಿಸ್ತರಣೆ ಮಾಡದಿರುವುದು ಉತ್ತಮ ಎಂದು ಕೆಲವು ತಜ್ಞರು ಹೇಳುತ್ತಾರೆ. ಇಎಂಐ ಹೆಚ್ಚಾದರೂ ಅವಧಿ ಹೆಚ್ಚಿಸದಿದ್ದರೆ, ಸಾಲವನ್ನು ಶೀಘ್ರವೇ ಪಾವತಿಸಬಹುದು ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.
ಪೂರ್ವಪಾವತಿ ಆಯ್ಕೆ, ಕ್ರೆಡಿಟ್ ಸ್ಕೋರ್
ನೀವು ಗೃಹ ಸಾಲವನ್ನು ಪಡೆಯುವಾಗ ಎಂದಿಗೂ ಕೂಡಾ ಪೂರ್ವಪಾವತಿ ಆಯ್ಕೆಯನ್ನು ಮಾಡಿಕೊಳ್ಳುವುದು ಉತ್ತಮ. ನೀವು ಗೃಹ ಸಾಲ ಇಎಂಐ ಮೂಲ ಪಾವತಿಸುವ ಜೊತೆಗೆಯೇ ಬೇರೆಡೆ ಹೂಡಿಕೆ ಕೂಡಾ ಮಾಡುತ್ತಿರಬಹುದು. ಆ ಹೂಡಿಕೆ ಮೆಚ್ಯೂರಿಟಿ ಆಗಿ ಮೊತ್ತ ನಿಮ್ಮ ಕೈಗೆ ಬಂದಾಗ ನೀವು ಪೂರ್ವಪಾವತಿ ಮಾಡಿದರೆ, ಗೃಹ ಸಾಲವನ್ನು ಶೀಘ್ರವೇ ಮುಗಿಸಲು ಸಹಾಯಕವಾಗಲಿದೆ. ಇನ್ನು ಸಾಲಕ್ಕೆ ಕ್ರೆಡಿಟ್ ಸ್ಕೋರ್ ಕೂಡಾ ಅತೀ ಮುಖ್ಯ ಅಂಶ. ಕ್ರೆಡಿಟ್ ಸ್ಕೋರ್‌ನ ಪ್ರಯೋಜನ ಪಡೆಯುವುದನ್ನು ಎಂದಿಗೂ ಮರೆಯದಿರಿ. ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ, ಕಡಿಮೆ ಬಡ್ಡಿದರದಲ್ಲಿ ಸಾಲದ ಲಭ್ಯವಾಗಲಿದೆ.


Click it and Unblock the Notifications