ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 25 ಪರ್ಸೆಂಟ್ ಇಳಿಯಿತು, 30 ಪರ್ಸೆಂಟ್ ಇಳಿಯಿತು ಅಂತೆಲ್ಲ ಸುದ್ದಿ ಓದಿರುತ್ತೀರಿ, ಕೇಳಿರುತ್ತೀರಿ. ಈ ರೀತಿ ಬೆಲೆ ಇಳಿಯುವುದು ಬ್ಯಾರಲ್ ಗೆ. ಅಂದರೆ ಒಂದು ಬ್ಯಾರಲ್ ಗೆ ಹತ್ತಿರ ಹತ್ತಿರ 159 ಲೀಟರ್.
ಅಷ್ಟು ಲೀಟರ್ ಗೆ ಬೆಲೆ ಕಡಿಮೆ ಆಯಿತಲ್ಲಾ, ಗ್ರಾಹಕರಾದ ನಮಗೂ ಅದರ ಅನುಕೂಲ ಸಿಗುತ್ತದೆ ಅಂದುಕೊಳ್ಳುವಷ್ಟರಲ್ಲಿ ಶನಿವಾರ ಕೇಂದ್ರದಿಂದ ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ತಲಾ 3 ರುಪಾಯಿ ಏರಿಸಲಾಯಿತು. ಇನ್ನು ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ರಾಷ್ಟ್ರಗಳು ವ್ಯಾಟ್ ಹೆಚ್ಚಿಸಿದವು.
ಭಾರತದಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ಪಾವತಿಸುವ ದರದ ಮೇಲೆ ಅಂತರರಾಷ್ಟ್ರೀಯ ಉತ್ಪನ್ನಗಳ ದರ ಮತ್ತು ಇತರ ಮಾರುಕಟ್ಟೆ ಸನ್ನಿವೇಶಗಳು ಪ್ರಭಾವ ಬೀರುತ್ತವೆ. ನೆನಪಿರಲಿ, ಜಿಎಸ್ ಟಿ ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬರುವುದಿಲ್ಲ. ಹಾಗಿದ್ದರೆ ಪೆಟ್ರೋಲ್- ಡೀಸೆಲ್ ಚಿಲ್ಲರೆ ದರದಲ್ಲಿ ಏನೇನು ಸೇರಿರುತ್ತದೆ ಗೊತ್ತಾ?

ಅಬಕಾರಿ ಸುಂಕ, ವ್ಯಾಟ್, ಬಿಎಸ್ 6 ಪ್ರೀಮಿಯಂ, ಮಾರ್ಕೆಟಿಂಗ್ ವೆಚ್ಚ ಮತ್ತು ಮಾರ್ಜಿನ್ಸ್, ಡೀಲರ್ ಗಳ ಕಮಿಷನ್ ಮತ್ತಿತರ ಅಂಶಗಳು ಸೇರಿರುತ್ತವೆ. ಹಾಗಿದ್ದರೆ ಪೆಟ್ರೋಲ್ ಮೂಲ ದರ ಎಷ್ಟು, ಅದಕ್ಕೆ ಗ್ರಾಹಕರು ಎಷ್ಟು ತೆರಿಗೆ ಪಾವತಿಸುತ್ತಾರೆ ಎಂಬ ಲೆಕ್ಕಾಚಾರ ಇಲ್ಲಿದೆ ನೋಡಿ:
ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ಲೀಟರ್ ಗೆ (ಮಾರ್ಚ್ 16, 2020) ರು. 69.59
ಇಂಧನದ ಮೂಲ ದರ (ಲೀಟರ್ ಗೆ) ರು. 27.96
ಪ್ರತಿ ಲೀಟರ್ ಗೆ ಸಾಗಾಣಿಕೆ ವೆಚ್ಚ (ಇಂಡಿಯನ್ ಆಯಿಲ್ ವೆಬ್ ಸೈಟ್ ಮಾಹಿತಿ) ರು. 0.32 ಪೈಸೆ
ಪ್ರತಿ ಲೀಟರ್ ಗೆ ಡೀಲರ್ ಗಳಿಗೆ ವಿಧಿಸುವ ದರ (ಅಬಕಾರಿ ಸುಂಕ ಹಾಗೂ ವ್ಯಾಟ್ ಹೊರತುಪಡಿಸಿ) ರು. 28.28
ಅಬಕಾರಿ ಸುಂಕ ರು. 22.98
ಡೀಲರ್ ಗಳ ಸರಾಸರಿ ಕಮಿಷನ್ ರು. 3.54
ಡೀಲರ್ ಕಮಿಷನ್ ಕೂಡ ಸೇರಿಸಿ ಹಾಕುವ ವ್ಯಾಟ್ ರು. 14.79
ಇವೆಲ್ಲವೂ ಸೇರಿ ಪೆಟ್ರೋಲ್ ಮಾರಾಟ ಬೆಲೆ 69.59 ಆಗುತ್ತದೆ.
ಅಬಕಾರಿ ಸುಂಕ, ರಾಜ್ಯ ಸರ್ಕಾರದಿಂದ ಹಾಕುವ ವ್ಯಾಟ್ ಎಲ್ಲವನ್ನೂ ಸೇರಿಸಿದರೆ ದೆಹಲಿಯಲ್ಲಿ ಪೆಟ್ರೋಲ್ ಮೇಲೆ ಒಟ್ಟಾರೆ ತೆರಿಗೆ 54% ಬೀಳುತ್ತದೆ.
ಡೀಸೆಲ್ ಲೆಕ್ಕಾಚಾರ ಹೀಗಿದೆ:
ದೆಹಲಿಯಲ್ಲಿ ಇಂದಿನ ಡೀಸೆಲ್ ದರ ಲೀಟರ್ ಗೆ (ಮಾರ್ಚ್ 16, 2020) ರು. 62.29
ಇಂಧನದ ಮೂಲ ದರ (ಲೀಟರ್ ಗೆ) ರು. 31.49
ಪ್ರತಿ ಲೀಟರ್ ಗೆ ಸಾಗಾಣಿಕೆ ವೆಚ್ಚ (ಇಂಡಿಯನ್ ಆಯಿಲ್ ವೆಬ್ ಸೈಟ್ ಮಾಹಿತಿ) ರು. 0.29 ಪೈಸೆ
ಪ್ರತಿ ಲೀಟರ್ ಗೆ ಡೀಲರ್ ಗಳಿಗೆ ವಿಧಿಸುವ ದರ (ಅಬಕಾರಿ ಸುಂಕ ಹಾಗೂ ವ್ಯಾಟ್ ಹೊರತುಪಡಿಸಿ) ರು. 31.78
ಅಬಕಾರಿ ಸುಂಕ ರು. 18.83
ಡೀಲರ್ ಗಳ ಸರಾಸರಿ ಕಮಿಷನ್ ರು. 2.49
ಡೀಲರ್ ಕಮಿಷನ್ ಕೂಡ ಸೇರಿಸಿ ಹಾಕುವ ವ್ಯಾಟ್ ರು. 9.19
ಇವೆಲ್ಲವೂ ಸೇರಿ ಡೀಸೆಲ್ ಮಾರಾಟ ಬೆಲೆ 62.29 ಆಗುತ್ತದೆ.
ಅಬಕಾರಿ ಸುಂಕ, ರಾಜ್ಯ ಸರ್ಕಾರದಿಂದ ಹಾಕುವ ವ್ಯಾಟ್ ಎಲ್ಲವನ್ನೂ ಸೇರಿಸಿದರೆ ದೆಹಲಿಯಲ್ಲಿ ಡೀಸೆಲ್ ಮೇಲೆ ಒಟ್ಟಾರೆ ತೆರಿಗೆ 44% ಬೀಳುತ್ತದೆ.


Click it and Unblock the Notifications