ಹಲವಾರು ಮಂದಿ ಶಿಕ್ಷಣವನ್ನು ಪಡೆಯಲು ಸಾಲವನ್ನು ಮಾಡಿಕೊಳ್ಳುತ್ತಾರೆ. ಬ್ಯಾಂಕ್‌ಗಳಲ್ಲಿ ಶಿಕ್ಷಣಕ್ಕಾಗಿ ಸಾಲ ಲಭ್ಯವಾಗುತ್ತದೆಯಾದರೂ ಅದರ ಬಡ್ಡಿದರ ಮಾತ್ರ ತೀವ್ರ ಹೆಚ್ಚಳವಾಗಿದೆ. ಈ ನಡುವೆ ಆರ್‌ಬಿಐ ರೆಪೋ ದರ ಹೆಚ್ಚಳ ಮಾಡಿದ ಬಳಿಕ ಈ ಶಿಕ್ಷಣ ಸಾಲದ ಬಡ್ಡಿದರ ಇನ್ನಷ್ಟು ಹೆಚ್ಚಳವಾಗುತ್ತದೆ.
ಆರ್‌ಬಿಐ ಮೇ ತಿಂಗಳಿನಲ್ಲಿ ಶೇಕಡ 0.4ರಷ್ಟು ಹಾಗೂ ಜೂನ್ ತಿಂಗಳಿನಲ್ಲಿ ಶೇಕಡ 0.5ರಷ್ಟು ರೆಪೋ ದರವನ್ನು ಹೆಚ್ಚಳ ಮಾಡಿದೆ. ಆ ಬಳಿಕ ಬ್ಯಾಂಕುಗಳು ಹಾಗೂ ಸಾಲ ನೀಡುವ ಸಂಸ್ಥೆಗಳು ಕೂಡಾ ತಮ್ಮ ರೆಪೋ ಆಧಾರಿತ ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ.
ಗ್ಯಾನ್‌ಧನ್‌ನ ಸಿಇಒ ಮತ್ತು ಸಂಸ್ಥಾಪಕ ಅಂಕಿತ್ ಮೆಹ್ರಾ ಪ್ರಕಾರ, "ಕಳೆದ ತಿಂಗಳು ಆರ್‌ಬಿಐ ಶೇಕಡ 0.4ರಷ್ಟು ರೆಪೋ ದರವನ್ನು ಹೆಚ್ಚಳ ಮಾಡಿದೆ. ಎನ್‌ಬಿಎಫ್‌ಸಿಗಳು ಈಗಾಗಲೇ ತಮ್ಮ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಿಕೊಂಡಿದೆ. ಆದರೆ ರೆಪೋ ದರವನ್ನು ಆರ್‌ಬಿಐ ಮತ್ತೆ ಹೆಚ್ಚಳ ಮಾಡಿದೆ. ಇದರಿಂದಾಗಿ ಶೀಘ್ರದಲ್ಲೇ ಮತ್ತೆ ಸಾಲದ ಬಡ್ಡಿದರ ಅಧಿಕವಾಗಲಿದೆ," ಎಂದು ತಿಳಿಸಿದ್ದಾರೆ.
ಶಿಕ್ಷಣ ವೆಚ್ಚ ಹೆಚ್ಚಳ
ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣದ ವೆಚ್ಚ ಹೆಚ್ಚುತ್ತಿದೆ. ಈ ನಡುವೆ ರೆಪೋ ದರ ಏರಿಕೆ ಕಾರಣದಿಂದಾಗಿ ಶಿಕ್ಷಣ ಸಾಲದ ಮೇಲಿನ ಬಡ್ಡಿದರವು ಅಧಿಕವಾಗಲಿದೆ. ಇದರಿಂದಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣದ ವೆಚ್ಚ ಇನ್ನಷ್ಟು ಹೆಚ್ಚಳವಾಗಲಿದೆ. ಶಿಕ್ಷಣದ ಮೇಲಿನ ಸಾಲದ ಬಡ್ಡಿದರವು ಸಾಲ ನೀಡುವ ಸಂಸ್ಥೆ, ಸಾಲ ಪಡೆಯುವವರ ವಿವರ, ಕೋರ್ಸ್, ಶಿಕ್ಷಣ ಸಂಸ್ಥೆಯನ್ನು ಅವಲಂಭಿಸಿ ಶೇಕಡಾ 7.5 ರಿಂದ 11.5 ರಷ್ಟು ಅಥವಾ ಅದಕ್ಕಿಂತ ಹೆಚ್ಚಿಗೆ ಇರುತ್ತದೆ. ಒಟ್ಟಾರೆಯಾಗಿ, ಆರ್‌ಬಿಐ ರೆಪೊ ದರ ಏರಿಕೆಯ ಪರಿಣಾಮವು ವಿದ್ಯಾರ್ಥಿಗಳ ಮೇಲೆ ಅಧಿಕವಾಗಿದೆ.
ಎಷ್ಟು ಹೆಚ್ಚಳ ಸಾಧ್ಯತೆ
ಇನ್ನು ವಿದ್ಯಾರ್ಥಿಗಳ ಸಾಲದ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ ತಜ್ಞರು, "ಸದ್ಯ ವಿದೇಶದಲ್ಲಿ ಶಿಕ್ಷಣ ಪಡೆಯಲು 30 ಲಕ್ಷ ರೂಪಾಯಿ ಸಾಲದ 10 ವರ್ಷಗಳ ಇಎಂಐ ಪಾವತಿಯಲ್ಲಿ ಸುಮಾರು ರೂಪಾಯಿ 750ರಿಂದ ರೂಪಾಯಿ 900ರ ನಡುವೆ ಏರಿಕೆ ಉಂಟಾಗಲಿದೆ. ಅಂದರೆ ಪ್ರತಿ ಲಕ್ಷಕ್ಕೆ ಸುಮಾರು ರೂಪಾಯಿ 2.5 ಅಥವಾ ರೂಪಾಯಿ 3ರಷ್ಟು ಹೆಚ್ಚಳವಾಗಲಿದೆ. ವಿದ್ಯಾರ್ಥಿ ಜೀವನ ಮುಗಿಸಿ ಈಗಷ್ಟೇ ಉದ್ಯೋಗಕ್ಕೆ ಸೇರಿದವರು ತಮ್ಮ ಸಂಬಳದಲ್ಲಿ ಅಧಿಕ ಮೊತ್ತವನ್ನು ಇಎಂಐಗೆ ಭರಿಸುವುದರ ಬದಲಾಗಿ ಸಾಲ ನೀಡಿದ ಬ್ಯಾಂಕ್ ಅನ್ನು ಸಂಪರ್ಕಿಸಿ ಸಾಲದ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳುವುದು ಉತ್ತಮ," ಎಂದು ತಿಳಿಸಿದ್ದಾರೆ.
ಬಡ್ಡಿದರ ಹೇಗೆ ಅನ್ವಯ
ನೀವು ಸ್ಥಿರ ಬಡ್ಡಿದರವನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ಆಯಾ ಸಮಯಕ್ಕೆ ಬದಲಾವಣೆ ಹೊಂದು ಬಡ್ಡಿದರವನ್ನು ಹೊಂದಿರಬಹುದು. ಎರಡೂ ಕೂಡಾ ತಮ್ಮದೇ ಆದ ಲಾಭ, ನಷ್ಟವನ್ನು ಹೊಂದಿದೆ. ಇವೆರಡಲ್ಲಿ ಯಾವುದೇ ಒಂದನ್ನು ಆಯ್ಕೆ ಮಾಡುವಾಗ ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ. ಪ್ರಮುಖವಾಗಿ ಎಲ್ಲಾ ಬ್ಯಾಂಕುಗಳಲ್ಲಿ ಸಾಲವು ಬೆಂಚ್ ಮಾರ್ಕ್ ಆಧಾರಿತವಾಗಿರುತ್ತದೆ. ಕೆಲವು ವಿದೇಶದಲ್ಲಿ ಶಿಕ್ಷಣ ಪಡೆಯಲೆಂದು ಪಡೆದ ಸಾಲದ ಬಡ್ಡಿದರವು ಸ್ಥಿರವಾಗಿರುತ್ತದೆ.
ಗೃಹ, ಕಾರು ಸಾಲದ ಬಡ್ಡಿದರ ಹೆಚ್ಚಳ
ಇನ್ನು ಶಿಕ್ಷಣ ಸಾಲದ ಬಡ್ಡಿದರ ಮಾತ್ರವಲ್ಲದೇ ಗೃಹ, ಕಾರು ಸಾಲದ ಬಡ್ಡಿದರವೂ ಕೂಡಾ ಅಧಿಕವಾಗಲಿದೆ. ಈಗಾಗಲೇ ರೆಪೋ ದರ ಏರಿಕೆ ಆದ ಸಂದರ್ಭದಲ್ಲಿ ಗೃಹ ಹಾಗೂ ಕಾರು ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದೆ. ಈಗ ಮತ್ತೆ ರೆಪೋ ದರವನ್ನು ಏರಿಕೆ ಮಾಡಲಾಗಿದ್ದು, ಬ್ಯಾಂಕುಗಳು ಮತ್ತೆ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ.


Click it and Unblock the Notifications