ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರವನ್ನು ಪಡೆದರೆ ಐದು ಖಾತರಿ ಯೋಜನೆಗಳನ್ನು ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದೆ. ಅದರಂತೆಯೇ ಆಡಳಿತ ಆರಂಭಿಸಿದ ಬಳಿಕ ಈಗಾಗಲೇ ನಾಲ್ಕು ಯೋಜನೆಗಳನ್ನು ಆರಂಭಿಸಿದೆ. ಡಿಸೆಂಬರ್ 21 ರಿಂದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಕೂಡಾ ಆರಂಭವಾಗಲಿದೆ.
ಆದರೆ ಈಗ ನಿಮಗೆ ಡಿಸೆಂಬರ್ ತಿಂಗಳ ಅನ್ನಭಾಗ್ಯ ಯೋಜನೆಯ ಮೊತ್ತ ಜಮೆಯಾಗಿದೆಯೇ?. ಜುಲೈ 10, 2023 ರಿಂದ ಪ್ರಾರಂಭಿಸಲಾದ ಈ ಯೋಜನೆಯಡಿಯಲ್ಲಿ ಹತ್ತು ಕೆಜಿ ಅಕ್ಕಿ ನೀಡುವ ಭರವಸೆಯನ್ನು ನೀಡಲಾಗಿತ್ತು. ಆದರೆ ಅಕ್ಕಿ ಕೊರತೆಯಿಂದ 5 ಕೆಜಿ ಅಕ್ಕಿ ಮತ್ತು ನ್ನುಳಿದ ಐದು ಕೆಜಿಗೆ ಹಣವನ್ನು ನೀಡಲು ಸರ್ಕಾರ ನಿರ್ಧಾರ ಮಾಡಿತು.

ಅನ್ನ ಭಾಗ್ಯ ಯೋಜನೆಯಡಿ, ಕರ್ನಾಟಕ ಸರ್ಕಾರವು ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಗಳ ನಗದು ಪಾವತಿಸುತ್ತದೆ. ಉಚಿತ ಅಕ್ಕಿ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ, ಅಂತ್ಯೋದಯ ಕುಟುಂಬದ ಸದಸ್ಯರಿಗೆ 34 ರೂಪಾಯಿಯಂತೆ ನೀಡಲಾಗುತ್ತದೆ.
ಸಂಪೂರ್ಣ 10 ಕೆಜಿ ಅಕ್ಕಿ ನೀಡಲು ಸಾಧ್ಯವೇ?
ಈ ಹಿಂದೆ ಸೆಪ್ಟೆಂಬರ್ ತಿಂಗಳಿನಲ್ಲಿ ಕರ್ನಾಟಕ ಸರ್ಕಾರವು ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಧನಸಹಾಯವನ್ನು ನೀಡುವ ಬದಲಾಗಿ ಬರಪೀಡಿತ ಎಂದು ಗೊತ್ತುಪಡಿಸಿದ ತಾಲ್ಲೂಕುಗಳಲ್ಲಿ 5 ಕೆಜಿ ಅಕ್ಕಿಯನ್ನು ವಿತರಿಸಲು ಯೋಜಿಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಆದರೆ ಪ್ರಸ್ತುತ ರಾಜ್ಯದಲ್ಲಿ ಅಕ್ಕಿ ಕೊರತೆ ಹೆಚ್ಚಳ ಅಧಿಕವಾಗುವ ಎಲ್ಲ ಸಾಧ್ಯತೆಗಳಿದೆ ಎಂದು ವರದಿ ಉಲ್ಲೇಖಿಸಿದೆ. ರಾಜ್ಯದಲ್ಲಿ ಮಳೆ ಕೊರತೆಯಿದ್ದು, ಬರ ಕಾಡುತ್ತಿದೆ. ಪ್ರತಿ ವರ್ಷ ಭತ್ತ ಬೆಳೆಗೆ ನಿರ್ಧಾರ ಮಾಡಲಾಗುವ ಗುರಿಗಿಂತ ಶೇಕಡ 35 ರಷ್ಟು ಭತ್ತ ಬೆಳೆ ಕಡಿಮೆಯಾಗಿದೆ. ಇದರಿಂದಾಗಿ ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಈ ನಡುವೆ ಸರ್ಕಾರದ ಅನ್ನ ಭಾಗ್ಯ ಯೋಜನೆ ಮೇಲೆಯೂ ಇದು ಹೊರೆಯಾಗುವ ನಿರೀಕ್ಷೆಯಿದೆ.
ಅನ್ನ ಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್ ಪರಿಶೀಲಿಸಿ
ಹಂತ 1: ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ https://ahara.kar.nic.in/ ಗೆ ಭೇಟಿ ನೀಡಿ
ಹಂತ 2: ಹೋಮ್‌ಪೇಜ್‌ನಲ್ಲಿ ಇ-ಸೇವೆಗಳ ಟ್ಯಾಬ್ ಅನ್ನು ಕ್ಲಿಕ್ ಮಾಡಿ
ಹಂತ 3: ಈ ಡಿಬಿಟಿ ಸ್ಟೇಟಸ್ ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 4: ತಿಂಗಳು, ವರ್ಷವನ್ನು ಆಯ್ಕೆ ಮಾಡಿ. ನಿಮ್ಮ ಪಡಿತರ ಚೀಟಿ ಸಂಖ್ಯೆ (ಆರ್‌ಸಿ ಸಂಖ್ಯೆ) ನಮೂದಿಸಿ ಮತ್ತು continue ಕ್ಲಿಕ್ ಮಾಡಿ
ಹಂತ 5: ಅನ್ನ ಭಾಗ್ಯ ಅಡಿಯಲ್ಲಿ ನಿಮ್ಮ ಡಿಬಿಟಿ ಸ್ಟೇಟಸ್ ಪರದೆಯ ಮೇಲೆ ಕಾಣಲಿದೆ.
ಅನ್ನಭಾಗ್ಯ ಯೋಜನೆ ಬಗ್ಗೆ ತಿಳಿದಿರಿ
ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಲ್ಲಿ ಅನ್ನ ಭಾಗ್ಯ ಯೋಜನೆಯನ್ನು ಸೇರ್ಪಡೆ ಮಾಡಿದ್ದರೂ ಕೂಡಾ ಇದು ಹೊಸದಾದ ಯೋಜನೆ ಏನಲ್ಲ. ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಸಿದ್ಧರಾಮಯ್ಯರವರು ಈ ಹಿಂದೆ ಸಿಎಂ ಆಗಿದ್ದಾಗ ರಾಜ್ಯದಲ್ಲಿ ಆರಂಭ ಮಾಡಿರುವ ಯೋಜನೆ ಇದಾಗಿದೆ. ಈ ಯೋಜನೆಯನ್ನು ನೂತನ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಸೇರಿಸಲಾಗಿದೆ.
ಅನ್ನ ಭಾಗ್ಯ ಯೋಜನೆ ಸುಮಾರು ಹತ್ತು ವರ್ಷಗಳ ಹಿಂದೆ ಆರಂಭ ಮಾಡಲಾಗಿರುವ ಯೋಜನೆಯಾಗಿದೆ. ರಾಜ್ಯದಲ್ಲಿ ಜುಲೈ 2013 ರಿಂದ 'ಅನ್ನಭಾಗ್ಯ' ಯೋಜನೆಯನ್ನು ಅಂದಿನ ಸಿಎಂ ಸಿದ್ಧರಾಮಯ್ಯ ಜಾರಿಗೆ ತಂದಿದ್ದು, ಈ ಯೋಜನೆ ಜಾರಿಯಾದ ಬಳಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪ್ರತಿ ಬಿಪಿಎಲ್ ಕುಟುಂಬಗಳಿಗೆ ವಿತರಣೆ ಮಾಡಲಾಗುವ ರೇಷನ್ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ.


Click it and Unblock the Notifications