ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಗೂ ಮುನ್ನವೇ ಐದು ಖಾತರಿ ಯೋಜನೆಗಳ ಜಾರಿಯ ಭರವಸೆಯನ್ನು ನೀಡಿದೆ. ಅದರಂತೆ ಅಧಿಕಾರ ಪಡೆದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ಐದು ಯೋಜನೆಗಳಲ್ಲಿ ಒಂದಾದ ಅನ್ನ ಭಾಗ್ಯ ಯೋಜನೆಯಡಿ ಫಲಾನುಭವಿಗಳ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದನ್ನು ಜುಲೈ 10, 2023 ರಿಂದ ಪ್ರಾರಂಭಿಸಿದೆ.
ಈಗಾಗಲೇ ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಮೊತ್ತವನ್ನು ಅರ್ಹ ಫಲಾನುಭವಿಗಳಿಗೆ ಜಮೆ ಮಾಡಲಾಗಿದ್ದು, ಈಗ ನವೆಂಬರ್ ತಿಂಗಳ ಮೊತ್ತವನ್ನು ಇನ್ನಷ್ಟೇ ಜಮೆ ಮಾಡಬೇಕಾಗಿದೆ. ಆರಂಭಿಕವಾಗಿ 10 ಕೆಜಿ ಅಕ್ಕಿಯನ್ನು ನೀಡುವ ಭರವಸೆ ನೀಡಲಾಗಿದ್ದರೂ, ಅಕ್ಕಿ ಕೊರತೆಯಿಂದಾಗಿ 5 ಕೆಜಿ ಅಕ್ಕಿ ಮತ್ತು ಇನ್ನುಳಿದ ಐದು ಕೆಜಿಗೆ ಹಣವನ್ನು ನೀಡಲು ಸರ್ಕಾರ ನಿರ್ಧಾರ ಮಾಡಿತು.

ಅನ್ನ ಭಾಗ್ಯ ಯೋಜನೆಯಡಿ, ಕರ್ನಾಟಕ ಸರ್ಕಾರವು ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಗಳ ನಗದು ಪಾವತಿಸುತ್ತದೆ. ಉಚಿತ ಅಕ್ಕಿ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ, ಅಂತ್ಯೋದಯ ಕುಟುಂಬದ ಸದಸ್ಯರಿಗೆ 34 ರೂಪಾಯಿಯಂತೆ ನೀಡಲಾಗುತ್ತದೆ.
ಬಿಪಿಎಲ್ ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ನೇರವಾಗಿ ವರ್ಗಾಯಿಸಲಾಗುತ್ತದೆ. ರಾಜ್ಯ ಸರ್ಕಾರದ ಪ್ರಕಾರ, ಕರ್ನಾಟಕವು 'ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ' 1.28 ಕೋಟಿ ಪಡಿತರ ಚೀಟಿಗಳನ್ನು ಹೊಂದಿದೆ.
ಈ ಕಾರ್ಡ್‌ಗಳಲ್ಲಿ ಶೇಕಡ 99 ರಷ್ಟು ಆಧಾರ್ ಸಂಖ್ಯೆಯೊಂದಿಗೆ ಫ್ರೀಜ್ ಮಾಡಲಾಗಿದೆ. ಈ ಕಾರ್ಡ್‌ಗಳಲ್ಲಿ ಶೇಕಡ 82 ರಷ್ಟು (1.06 ಕೋಟಿ) ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ. ಅನ್ನ ಭಾಗ್ಯ ಯೋಜನೆಯ ಮೊತ್ತ ಜಮೆಯಾಗಿದೆಯೇ ಎಂದು ನೀವು ಚೆಕ್ ಮಾಡಿಕೊಳ್ಳಬಹುದಾಗಿದೆ.
ಅನ್ನ ಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್ ಪರಿಶೀಲಿಸಿ
ಹಂತ 1: ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ https://ahara.kar.nic.in/ ಗೆ ಭೇಟಿ ನೀಡಿ
ಹಂತ 2: ಹೋಮ್‌ಪೇಜ್‌ನಲ್ಲಿ ಇ-ಸೇವೆಗಳ ಟ್ಯಾಬ್ ಅನ್ನು ಕ್ಲಿಕ್ ಮಾಡಿ
ಹಂತ 3: ಈ ಡಿಬಿಟಿ ಸ್ಟೇಟಸ್ ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 4: ತಿಂಗಳು, ವರ್ಷವನ್ನು ಆಯ್ಕೆ ಮಾಡಿ. ನಿಮ್ಮ ಪಡಿತರ ಚೀಟಿ ಸಂಖ್ಯೆ (ಆರ್‌ಸಿ ಸಂಖ್ಯೆ) ನಮೂದಿಸಿ ಮತ್ತು continue ಕ್ಲಿಕ್ ಮಾಡಿ
ಹಂತ 5: ಅನ್ನ ಭಾಗ್ಯ ಅಡಿಯಲ್ಲಿ ನಿಮ್ಮ ಡಿಬಿಟಿ ಸ್ಟೇಟಸ್ ಪರದೆಯ ಮೇಲೆ ಕಾಣಲಿದೆ.
ಅನ್ನಭಾಗ್ಯ ಯೋಜನೆ ಆರಂಭ ಯಾವಾಗ?
ಐದು ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆ ಹೊಸ ಯೋಜನೆ ಏನಲ್ಲ. ಇದು ಸುಮಾರು ಹತ್ತು ವರ್ಷಗಳ ಹಿಂದೆ ಆರಂಭ ಮಾಡಲಾಗಿರುವ ಯೋಜನೆಯಾಗಿದೆ. ರಾಜ್ಯದಲ್ಲಿ ಜುಲೈ 2013 ರಿಂದ 'ಅನ್ನಭಾಗ್ಯ' ಯೋಜನೆಯನ್ನು ಅಂದಿನ ಸಿಎಂ ಸಿದ್ಧರಾಮಯ್ಯ ಜಾರಿಗೆ ತಂದಿದ್ದಾರೆ. ಈ ಯೋಜನೆ ಜಾರಿಯಾದ ಬಳಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪ್ರತಿ ಬಿಪಿಎಲ್ ಕುಟುಂಬಗಳಿಗೆ ವಿತರಣೆ ಮಾಡಲಾಗುವ ರೇಷನ್ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ.
2013ಕ್ಕೂ ಮೊದಲು ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ ಕನಿಷ್ಟ 4 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ಗೋಧಿಯಂತೆ ಒಂದು ಕುಟುಂಬಕ್ಕೆ ಗರಿಷ್ಟ 20 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಗೋಧಿಯನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ ಈ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 2015ರಿಂದ ಅರ್ಹ ಬಿಪಿಎಲ್ ಏಕ ಸದಸ್ಯ ಕುಟುಂಬಗಳಿಗೆ 10 ಕೆ.ಜಿ, ದ್ವಿ ಸದಸ್ಯ ಕುಟುಂಬಗಳಿಗೆ 20 ಕೆ.ಜಿ, 3 ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ 30 ಕೆ.ಜಿ ಆಹಾರ ಧಾನ್ಯವನ್ನು ಪ್ರತಿ ಕೆಜಿಗೆ ಒಂದು ರೂಪಾಯಿಯಂತೆ ಹಂಚಿಕೆಯನ್ನು ಮಾಡಲಾಗುತ್ತಿತ್ತು.


Click it and Unblock the Notifications