ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೋ ದರವನ್ನು ಮತ್ತೆ ಸ್ಥಿರವಾಗಿರಿಸಿದೆ. ಪ್ರಸ್ತುತ ರೆಪೋ ದರ ಶೇಕಡ 6.50ರಷ್ಟಿದೆ. ಹಣದುಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ಸಂದರ್ಭದಲ್ಲಿ ರೆಪೋ ದರವನ್ನು ಆರ್‌ಬಿಐ ನಿರಂತರವಾಗಿ ಹೆಚ್ಚಳ ಮಾಡಿದೆ. ಒಟ್ಟಾಗಿ 250 ಮೂಲಾಂಕ ದರ ಹೆಚ್ಚಾಗಿದೆ. ಈಗ ಹಣದುಬ್ಬರವು ನಿಯಂತ್ರಣಕ್ಕೆ ಬಂದಿದ್ದು, ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿದೆ.
ಹಣದುಬ್ಬರವು ನಿರಂತರವಾಗಿ ಇಳಿಕೆ ಕಾಣುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಹಣದುಬ್ಬರ ದರವು 18 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಪ್ರಸ್ತುತ ಶೇಕಡ 4.7ರಷ್ಟಿದೆ. ಮೇ ತಿಂಗಳಿನಲ್ಲಿ ಈ ಹಣದುಬ್ಬರ ದರವು ಏಪ್ರಿಲ್ ತಿಂಗಳ ದರಕ್ಕಿಂತ ಕಡಿಮೆ ಇರಲಿದೆ ಎಂದು ಇತ್ತೀಚೆಗೆ ಆರ್‌ಬಿಐ ಗವರ್ನರ್ ಅಭಿಪ್ರಾಯಿಸಿದ್ದಾರೆ. ಮೇ ತಿಂಗಳ ಸಿಪಿಐ ಆಧಾರಿತ ಹಣದುಬ್ಬರ ದರವನ್ನು ಜೂನ್ 12ರಂದು ಬಿಡುಗಡೆ ಮಾಡಲಾಗುತ್ತದೆ.

ಈ ನಡುವೆ ಸ್ಥಿರವಾಗಿರುವ ರೆಪೋ ದರವು ಗೃಹ ಸಾಲ, ಇತರೆ ಸಾಲ, ರಿಯಲ್ ಎಸ್ಟೇಟ್, ಫಿಕ್ಸಿಡ್ ಡೆಪಾಸಿಟ್ ಸೇರಿದಂತೆ ಬೇರೆ ಬೇರೆ ವಲಯದ ಮೇಲೆ ಏನು ಪ್ರಭಾವ ಉಂಟು ಮಾಡಲಿದೆ? ಎಂಪೈರ್ ಸೆಂಟ್ರಮ್‌ನ ಸಿಇಒ, ಡೈರೆಕ್ಟರ್ ಅನೂಪ್ ಭಾರ್ಗವ ಏನು ಹೇಳುತ್ತಾರೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..
ಗೃಹ ಸಾಲ ವಲಯ
ಆರ್‌ಬಿಐ ರೆಪೋ ದರವನ್ನು ಸ್ಥಿರವಾಗಿರಿಸಿದರೆ, ಗೃಹ ಸಾಲದ ಬಡ್ಡಿದರವು ಕೂಡಾ ಸ್ಥಿರವಾಗಿರುವ ಸಾಧ್ಯತೆ ಇದೆ. ಇದು ಪ್ರಮುಖವಾಗಿ ಗೃಹ ಸಾಲ ಪಡೆದವರ ಮೇಲೆ ಪಾಸಿಟಿವ್ ಪ್ರಭಾವ ಉಂಟು ಮಾಡಲಿದೆ. ಈ ಹಿಂದೆ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದಾಗ, ಪ್ರಮುಖ ಬ್ಯಾಂಕುಗಳು ಕೂಡಾ ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ. ಇದು ಗೃಹ ಸಾಲ ಪಡೆದವರ ಮೇಲೆ ನೆಗೆಟಿವ್ ಪ್ರಭಾವ ಬೀರಿದೆ.
ಆದರೆ ರೆಪೋ ದರ ಮಾತ್ರವಲ್ಲದೆ ಗೃಹ ಸಾಲದ ಬಡ್ಡಿದರದ ಮೇಲೆ ಬೇರೆ ಬೇರೆ ಅಂಶಗಳು ಕೂಡಾ ಪರಿಣಾಮ ಬೀರಲಿದೆ ಎಂಬುವುದು ತಿಳಿದಿರಬೇಕು. ಹಣದುಬ್ಬರ, ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಸಾಲದಾತರ ನಡುವಿನ ಸ್ಪರ್ಧೆ ಸೇರಿದಂತೆ ವಿವಿಧ ಅಂಶಗಳು ಕೂಡಾ ಗೃಹ ಸಾಲದ ಬಡ್ಡಿದರಗಳ ಮೇಲೆ ಪ್ರಭಾವ ಉಂಟಾಗಲಿದೆ.
ಡೆಬ್ಟ್ ಇನ್‌ಸ್ಟ್ರುಮೆಂಟ್
ಬಾಂಡ್‌ಗಳು ಮತ್ತು ಫಿಕ್ಸಿಡ್ ಡೆಪಾಸಿಟ್ ಯೋಜನೆಗಳಂತಹ ಡೆಬ್ಟ್ ಇನ್‌ಸ್ಟ್ರುಮೆಂಟ್‌ಗಳು ಬದಲಾಗದ ರೆಪೋ ದರದಿಂದ ತಕ್ಷಣ ಪ್ರಭಾವಕ್ಕೆ ಒಳಗಾಗದೆ ಇರಬಹುದು. ಬರೀ ರೆಪೋ ದರ ಮಾತ್ರವಲ್ಲದೆ ಬೇರೆ ಬೇರೆ ಅಂಶಗಳು ಕೂಡಾ ಡೆಬ್ಟ್ ಇನ್‌ಸ್ಟ್ರುಮೆಂಟ್ ಮೇಲೆ ಪ್ರಭವಾ ಉಂಟು ಮಾಡಲಿದೆ. ಮಾರುಕಟ್ಟೆಯ ಬೇಡಿಕೆ, ಕ್ರೆಡಿಟ್ ರೇಟಿಂಗ್‌ಗಳು ಮತ್ತು ಚಾಲ್ತಿಯಲ್ಲಿರುವ ಬಡ್ಡಿದರಗಳು ಸೇರಿದಂತೆ ಹಲವಾರು ಅಂಶಗಳಿಂದ ಪ್ರಭಾವಿತವಾಗಿವೆ.
ರಿಯಲ್ ಎಸ್ಟೇಟ್ ವಲಯ
ರಿಯಲ್ ಎಸ್ಟೇಟ್ ವಲಯವು ಬಡ್ಡಿದರಗಳಲ್ಲಿನ ಬದಲಾವಣೆಗಳಿಂದ ಪ್ರಭಾವಿತವಾಗಿರುತ್ತದೆ. ರೆಪೋ ದರ ಸ್ಥಿರವಾಗಿರುವುದರಿಂದಾಗಿ ರಿಯಲ್ ಎಸ್ಟೇಟ್ ಡೆವಲಪರ್‌ಗಳು ಮತ್ತು ಹೂಡಿಕೆದಾರರಿಗೆ ಸಾಲದ ವೆಚ್ಚವು ಕೂಡ ಸ್ಥಿರವಾಗಿರಲಿದೆ.
ಸಾಲದ ಬಡ್ಡಿದರ ಸ್ಥಿರವಾಗಿರುವ ನಿರೀಕ್ಷೆಯಿಂದ ಹೂಡಿಕೆದಾರರ ರಿಯಲ್ ಎಸ್ಟೇಟ್ ವಲಯದಲ್ಲಿ ಸಾಲದ ವೆಚ್ಚವು ಕೂಡಾ ಸ್ಥಿರವಾಗಿರಲಿದೆ. ಹೆಚ್ಚುವರಿಯಾಗಿ, ಗೃಹ ಸಾಲಗಳ ಮೇಲಿನ ಬಡ್ಡಿ ದರಗಳು ಸ್ಥಿರವಾಗಿದ್ದರೆ, ಅದು ಗೃಹ ಖರೀದಿದಾರರಿಗೆ ಉತ್ತೇಜನವಾಗಲಿದೆ. ಇದರಿಂದಾಗಿ ರಿಯಲ್ ಎಸ್ಟೇಟ್‌ಗೆ ಬೇಡಿಕೆಯನ್ನು ಹೆಚ್ಚಿಸಲಿದೆ.
ರೆಪೋ ದರ ಎಷ್ಟಿದೆ ನೋಡಿ
ಆರ್‌ಬಿಐ ಈ ಹಿಂದೆ ಒಟ್ಟು ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಸುಮಾರು ಹತ್ತು ತಿಂಗಳುಗಳ ಕಾಲ ಸ್ಥಿರವಾಗಿರಿಸಿದ್ದ ರೆಪೋ ದರವನ್ನು ಆರ್‌ಬಿಐ ಮೇ ತಿಂಗಳಿನಲ್ಲಿ 40 ಮೂಲಾಂಕ ಏರಿಕೆ ಮಾಡಿದೆ. ಅದಾದ ಬಳಿಕ ಜೂನ್‌ನಲ್ಲಿ ಮತ್ತೆ 50 ಮೂಲಾಂಕ, ಆಗಸ್ಟ್‌ನಲ್ಲಿ 50 ಮೂಲಾಂಕ, ಸೆಪ್ಟೆಂಬರ್‌ನಲ್ಲಿ ಮತ್ತೆ 50 ಬಿಪಿಎಸ್ ದರ ಏರಿಕೆ ಮಾಡಿದೆ.
ಅದಾದ ಬಳಿಕ ಡಿಸೆಂಬರ್‌ನಲ್ಲಿ ಆರ್‌ಬಿಐ ರೆಪೋ ದರವನ್ನು 35 ಬಿಪಿಎಸ್ ಹೆಚ್ಚಳ ಮಾಡಿದೆ. ಫೆಬ್ರವರಿಯಲ್ಲಿ ಮತ್ತೆ 25 ಬಿಪಿಎಸ್ ಏರಿಸಿದೆ. ಒಟ್ಟಾಗಿ 250 ಮೂಲಾಂಕದವರೆಗೂ ದರ ಏರಿಕೆ ಮಾಡಲಾಗಿದೆ. ಏಪ್ರಿಲ್‌ನಲ್ಲಿ ರೆಪೋ ದರ ಸ್ಥಿರವಾಗಿರಿಸಲಾಗಿದೆ. ಜೂನ್‌ನಲ್ಲಿಯೂ ದರ ಸ್ಥಿರವಾಗಿರಿಸುವ ನಿರೀಕ್ಷೆಯಿದೆ.


Click it and Unblock the Notifications