ನವದೆಹಲಿ, ಮಾರ್ಚ್ 30: ಷೇರು ಮಾರುಕಟ್ಟೆ ಎಂಬುದು ಸಾಕಷ್ಟು ನಷ್ಟದ ಭೀತಿಯನ್ನು ಹೊಂದಿರುತ್ತದೆ. ಆದರೂ ಷೇರು ಪೇಟೆಯಲ್ಲಿ ಹಣ ಮಾಡುವ ದಾರಿಗಳು ಕೂಡ ಇವೆ. ಅದರಲ್ಲೂ ಭಾರತದ ಷೇರು ಮಾರುಕಟ್ಟೆ ಕಳೆದ 10 ವರ್ಷದಿಂದ ಸಾಕಷ್ಟು ಲಾಭ ತಂದುಕೊಟ್ಟಿದೆ. ಜೊತೆಗೆ ವಿದೇಶಿ ಹೂಡಿಕೆದಾರರನ್ನು ಸೆಳೆಯುತ್ತಿದೆ. ಇದೇ ರೀತಿ ಇದೀಗ 2023-24ನೇ ಆರ್ಥಿಕ ವರ್ಷದಲ್ಲೂ ಹೂಡಿಕೆದಾರರ ಜೇಬು ತುಂಬಿಸಿದೆ ಭಾರತದ ಷೇರು ಮಾರುಕಟ್ಟೆ.
10 ವರ್ಷದಲ್ಲಿ ಲಕ್ಷ ಲಕ್ಷ ಕೋಟಿ
ಅಭಿವೃದ್ಧಿ ಹೊಂದಿದ ದೇಶಗಳ ಷೇರು ಮಾರುಕಟ್ಟೆ ಕೂಡ ಈಗ ನಷ್ಟದ ಹಾದಿಯಲ್ಲಿದೆ. ಆದರೆ ಭಾರತದ ಷೇರು ಮಾರುಕಟ್ಟೆ ಮಾತ್ರ ಲಾಭದಲ್ಲೇ ಮುನ್ನಡೆಯುತ್ತಿದೆ. ಜನ ಕೂಡ ಭಾರತದ ಷೇರು ಪೇಟೆಯಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಇಲ್ಲಿ ಹೂಡಿಕೆ ಮಾಡಿದರೆ ಲಾಭ ಗ್ಯಾರಂಟಿ ಎಂಬ ಭರವಸೆ ಕೂಡ ಹೂಡಿಕೆದಾರರಿಗೆ ಬಂದಿದೆ. ಹೀಗಾಗಿ ಭಾರತದ ಷೇರು ಮಾರುಕಟ್ಟೆಗೆ ಕಳೆದ 10 ವರ್ಷದಲ್ಲಿ ಲಕ್ಷ ಲಕ್ಷ ಕೋಟಿ ರೂಪಾಯಿ ಹಣ ಹರಿದು ಬಂದಿದೆ. ಇದರ ಪರಿಣಾಮ ಭಾರತದ ಷೇರು ಪೇಟೆಯಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರಿಗೆ ಭರ್ಜರಿ ಲಾಭ ಸಿಕ್ಕಿದೆ.

₹128 ಲಕ್ಷ ಕೋಟಿ ಲಾಭ!
ಈಗಿನ ಲೆಕ್ಕಾಚಾರದ ಪ್ರಕಾರ 2023 & 24ನೇ ಆರ್ಥಿಕ ವರ್ಷದಲ್ಲಿ ಹೂಡಿಕೆದಾರರಿಗೆ ₹128.77 ಲಕ್ಷ ಕೋಟಿ ಲಾಭ ಆಗಿದೆ. 2022-23ರ ಹಣಕಾಸು ವರ್ಷದಲ್ಲಿ ಭಾರತೀಯ ಷೇರು ಮಾರುಕಟ್ಟೆ ಜಾಗತಿಕ ಮಟ್ಟದಲ್ಲಿ ಸುದ್ದಿಯಲ್ಲಿತ್ತು, ಆದರೆ ಹೂಡಿಕೆ ಮಾಡಿದವರಿಗೆ ಲಾಭ ಬಂದಿರಲಿಲ್ಲ. ಈ ಸಾಲಿನಲ್ಲಿ ಒಟ್ಟಾರೆ ಭರ್ಜರಿ ಲಾಭ ಸಿಕ್ಕಂತಾಗಿದೆ. ಈ ಹಣಕಾಸು ವರ್ಷವು ಆದಾಯದ ಏರಿಕೆ ಜೊತೆಗೆ ದೇಶದ ಆರ್ಥಿಕತೆ ಬೆಳವಣಿಗೆಗೂ ಕೊಡುಗೆ ನೀಡಿದೆ. ಹೂಡಿಕೆಯ ಒಳಹರಿವು ಹೆಚ್ಚಿದ್ದು ಕಾರ್ಪೊರೇಟ್ ವಲಯದ ಆದಾಯ ಹೆಚ್ಚಳ ಈಗ ಆಶಾದಾಯಕ ಎಂಬ ಅಭಿಪ್ರಾಯ ಮಾರುಕಟ್ಟೆ ತಜ್ಞರಿಂದ ಇದೀಗ ಕೇಳಿಬಂದಿದೆ.
ಇತಿಹಾಸ ನಿರ್ಮಿಸಿದ ಮಾರುಕಟ್ಟೆ
ನಿನ್ನೆ ಷೇರು ಮಾರುಕಟ್ಟೆಯಲ್ಲಿ ಪ್ರಮುಖ ಸೂಚ್ಯಂಕ ಬಿಎಸ್ಇ ಸೆನ್ಸೆಕ್ಸ್ (BSE Sensex) & ಎನ್ಎಸ್ಇ ನಿಫ್ಟಿ ಐತಿಹಾಸಿಕ ಹಂತ ತಲುಪಿದ್ದವು. ಬಿಎಸ್ಇ ಸೆನ್ಸೆಕ್ಸ್ ಗರಿಷ್ಠ 1,000 ಅಂಕ ಏರಿಕೆ ಕಂಡು 74,000 ಗಡಿ ದಾಟಿತ್ತು. ಎನ್ಎಸ್ಇ ನಿಫ್ಟಿ ಅಥವಾ ನಿಫ್ಟಿ-50 300ಕ್ಕೂ ಹೆಚ್ಚು ಅಂಕ ಏರಿಕೆ ಕಂಡು 22,400 ಅಂಕಕ್ಕೂ ತಲುಪಿತ್ತು. ಹೀಗೆ ಕಳೆದ ಹಲವು ತಿಂಗಳಿಂದಲೂ ನಿರಂತರವಾಗಿ ಹೂಡಿಕೆ ಮಾಡಿದವರಿಗೆ ಲಾಭ ನೀಡಿದೆ ಭಾರತೀಯ ಷೇರು ಮಾರುಕಟ್ಟೆ. 2023-24ರ ಹಣಕಾಸು ವರ್ಷದಲ್ಲಿ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 14,659 ಅಂಶ ಎಂದರೆ ಶೇಕಡಾ 24.85ರಷ್ಟು ಏರಿಕೆ ಕಂಡಿದೆ.
ಮುಂದಿನ ವರ್ಷಗಳಲ್ಲಿ ಭಾರತದ ಷೇರು ಮಾರುಕಟ್ಟೆ ಮತ್ತಷ್ಟು ಏರಿಕೆ ಕಾಣಲಿದೆ ಎಂಬ ಮಾತು ತಜ್ಞರಿಂದ ಕೇಳಿಬಂದಿದೆ. ಹೀಗಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದು ಭಾರತದ ಆರ್ಥಿಕತೆ ಬಲಪಡಿಸುವ ಜೊತೆಗೆ ಭಾರತಕ್ಕೆ ಮತ್ತಷ್ಟು ಬಲ ತುಂಬಲಿದೆ.


Click it and Unblock the Notifications