ಬ್ಯಾಂಕಿಂಗ್‌ನ ಡಿಜಿಟಲೀಕರಣವು ನಮ್ಮ ಜೀವನವನ್ನು ಹೆಚ್ಚು ಸರಳ, ಸುಲಭವಾಗಿಸಿದೆ. ನಾವು ಮನೆಯಲ್ಲಿಯೇ ಕುಳಿತು ಬಹುತೇಕ ಎಲ್ಲ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಈ ಡಿಜಿಟಲ್ ಬ್ಯಾಂಕಿಂಗ್ ಅವಕಾಶ ನೀಡುತ್ತದೆ. ಆದರೆ ಈಗ ಡಿಜಿಟಲ್ ಬ್ಯಾಂಕಿಂಗ್ ವಂಚನೆ ದಿನದಿಂದ ದಿನಕ್ಕೆ ಅಧಿಕವಾಗುತ್ತಾ ಸಾಗುತ್ತಿದೆ.
ಡಿಜಿಟಲ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಅಪರಾಧಿಗಳು ಅಮಾಯಕ ಜನರನ್ನು ವಂಚನೆ ಮಾಡಲೆಂದು, ಜನರ ಹಣ ಎಗರಿಸಲೆಂದು ನಿರಂತರವಾಗಿ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ.

ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಇಮೇಲ್ ಮೂಲಕ ಈ ಎಚ್ಚರಿಕೆಯನ್ನು ನೀಡಿದೆ. ಇಮೇಲ್‌ನಲ್ಲಿ, ವಂಚಕರು ಬ್ಯಾಂಕ್ ಉದ್ಯೋಗಿಗಳಂತೆ ನಟಿಸುವ ಮೂಲಕ ನಮ್ಮ ಗ್ರಾಹಕರನ್ನು ವಂಚನೆ ಮಾಡುತ್ತಿದ್ದಾರೆ ಎಂದು ಐಸಿಐಸಿಐ ಬ್ಯಾಂಕ್ ವಿವರಿಸಿದೆ.
ಬ್ಯಾಂಕ್ ಸಿಬ್ಬಂದಿ ಅಥವಾ ಅಧಿಕಾರಿಗಳಂತೆ ನಟಿಸಿ ಕರೆ ಮಾಡುವ ಈ ವಂಚಕ ಅಪರಾಧಿಗಳು ಗ್ರಾಹಕರಲ್ಲಿ ಸೂಕ್ಷ್ಮ ಮಾಹಿತಿಯನ್ನು ನೀಡುವಂತೆ ಕೇಳುತ್ತಾರೆ. ಆದ್ದರಿಂದಾಗಿ ಗ್ರಾಹಕರು ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ ಎಂದು ಬ್ಯಾಂಕ್ ಒತ್ತಿಹೇಳುತ್ತದೆ. ಈ ಮಾಹಿತಿಯನ್ನು ಹಂಚಿಕೊಳ್ಳುವ ತಪ್ಪನ್ನು ನೀವು ಮಾಡಬೇಡಿ. ಮಾಡಿದರೆ ವಂಚನೆಗೆ ಬಲಿಯಾಗುತ್ತೀರಿ ಎಂದು ಬ್ಯಾಂಕ್ ತಿಳಿಸಿದೆ.
ನಿಜವಾದ ಬ್ಯಾಂಕ್ ಉದ್ಯೋಗಿಗಳು ಗ್ರಾಹಕರ ವೈಯಕ್ತಿಕ ಅಥವಾ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ ಎಂದು ಐಸಿಐಸಿಐ ಬ್ಯಾಂಕ್ ಸ್ಪಷ್ಟಪಡಿಸಿದೆ. ಗ್ರಾಹಕರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಈ ಇಮೇಲ್‌ನಲ್ಲಿ ಮಾರ್ಗದರ್ಶನ ನೀಡಲಾಗಿದೆ.
ಸ್ಪಷ್ಟವಾದ ಇಮೇಲ್
"ಬ್ಯಾಂಕ್ ಉದ್ಯೋಗಿಯಂತೆ ನಿಮಗೆ ಕರೆ ಮಾಡುವ ಯಾವುದೇ ಅಪರಾಧಿಯೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವಂತಹ ಒಂದು ತಪ್ಪು ನಿಮಗೆ ಭಾರೀ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಈ ವಂಚಕರು ಬ್ಯಾಂಕ್ ಉದ್ಯೋಗಿ ಎಂದು ಹೇಳಿಕೊಂಡು ಗ್ರಾಹಕರಿಗೆ ಕರೆ ಮಾಡಬಹುದು. ನಂಬಿಕೆಯನ್ನು ಬೆಳೆಸಲು, ಕರೆ ಮಾಡಿದವರು ತಮ್ಮ ಹೆಸರು ಮತ್ತು ಉದ್ಯೋಗಿ ಐಡಿಯನ್ನು ಒದಗಿಸಬಹುದು. ನಂಬಿಕೆ ಹುಟ್ಟುಹಾಕಿದ ಬಳಿಕ ನಿಮ್ಮ ಒಟಿಪಿ, ಸಿವಿವಿ, ಕಾರ್ಡ್ ಸಂಖ್ಯೆ ಮತ್ತು ಪಾಸ್‌ವರ್ಡ್‌ಗಳಂತಹ ಮಾಹಿತಿಯನ್ನು ವಿನಂತಿಸಬಹುದು."
ಈ ವಂಚಕರು ವಿವಿಧ ತಂತ್ರಗಳನ್ನು ಬಳಸಬಹುದು. ಉದಾಹರಣೆಗೆ, ನಿಮ್ಮ ಕ್ರೆಡಿಟ್ ಕಾರ್ಡ್ ಅಪ್‌ಗ್ರೇಡ್‌ಗೆ ಅರ್ಹವಾಗಿದೆ ಎಂದು ನಿಮಗೆ ಕರೆ ಮಾಡಿ ಹೇಳುತ್ತಾರೆ. ಅಪ್‌ಗ್ರೇಡ್ ಮಾಡಲು ಮತ್ತು ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು, ನಿಮ್ಮ ಕಾರ್ಡ್ ಸಂಖ್ಯೆ, ಸಿವಿವಿ ಮತ್ತು ಒಟಿಪಿಯನ್ನು ಕೇಳುತ್ತಾರೆ. ಈ ಮಾಹಿತಿಯನ್ನು ಹಂಚಿಕೊಂಡ ಕೂಡಲೇ ನಿಮ್ಮ ಹಣವು ವಂಚಕರ ಕೈ ಸೇರುತ್ತದೆ. ಆದ್ದರಿಂದ, ವೈಯಕ್ತಿಕ ಅಥವಾ ಸೂಕ್ಷ್ಮ ವಿವರಗಳನ್ನು ಯಾರಿಗೂ ತಿಳಿಸದಿರುವುದು ಬಹಳ ಮುಖ್ಯ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಐಸಿಐಸಿಐ ಬ್ಯಾಂಕ್ ಅಂತಹ ಮಾಹಿತಿಯನ್ನು ಗ್ರಾಹಕರ ಬಳಿ ಎಂದಿಗೂ ಕೇಳುವುದಿಲ್ಲ. ಇತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳುವ ಭರವಸೆಯನ್ನು ಕೂಡಾ ಬ್ಯಾಂಕ್ ನೀಡುವುದಿಲ್ಲ. ಹೀಗೆ ಮಾಹಿತಿ ಕೇಳುವ ಅನುಮಾನಾಸ್ಪದ ಕರೆ ನಿಮಗೆ ಬಂದರೆ, ತಕ್ಷಣ ರಾಷ್ಟ್ರೀಯ ಸೈಬರ್ ಅಪರಾಧ ಘಟಕಕ್ಕೆ ವರದಿ ಮಾಡಿ.
ನೀವು cybercrime.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ 1930 ರಲ್ಲಿ ಸಹಾಯವಾಣಿಗೆ ಕರೆ ಮಾಡಬಹುದು. ಡಿಜಿಟಲ್ ಯುಗದಲ್ಲಿ ನಿಮ್ಮ ಆರ್ಥಿಕತೆಯನ್ನು ರಕ್ಷಣೆ ಮಾಡಲು ನೀವು ಜಾಗರೂಕರಾಗಿರುವುದು ಪ್ರಮುಖವಾಗಿದೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ.


Click it and Unblock the Notifications