ರೆಪೋ ದರ ಕಡಿತವಾಗಲಿ ಅಥವಾ ದರ ಹೆಚ್ಚಳವಾಗಲಿ, ಏನೇ ಆದರೂ ಗೃಹ ಸಾಲ ಪಡೆದವರು, ಪಡೆಯುವವರು ಆರ್‌ಬಿಐನ ಹಣಕಾಸು ನೀತಿಯಲ್ಲಿ ಏನು ಬದಲಾವಣೆ ಎಂದು ಕಾತುರದಿಂದ ನೋಡುತ್ತಾರೆ. ಅದಕ್ಕೆ ಮುಖ್ಯ ಕಾರಣ ರೆಪೋ ದರವು ನೇರವಾಗಿ ಸಾಲದ ದರಗಳಿಗೆ ಸಂಬಂಧ ಹೊಂದಿರುವುದು ಆಗಿದೆ.
ರೆಪೋ ದರವು ಹಣದುಬ್ಬರದ ಒತ್ತಡವನ್ನು ನಿಯಂತ್ರಿಸಲು ಆರ್‌ಬಿಐಗೆ ಒಂದು ಸಾಧನವಾಗಿದೆ. ಈ ರೆಪೋ ದರವು ಕೇಂದ್ರ ಬ್ಯಾಂಕ್ ದ್ರವ್ಯತೆ ಕೊರತೆಯ ಸಮಯದಲ್ಲಿ ಬ್ಯಾಂಕ್‌ಗಳಿಗೆ ಹಣವನ್ನು ನೀಡುವ ಬಡ್ಡಿ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಣ ಮಾಡಲು ಆರ್‌ಬಿಐ ಮೇ 2022 ರಿಂದ ಫೆಬ್ರವರಿ 2023 ರ ನಡುವೆ ದರವನ್ನು 250 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.

ಈ ರೆಪೋ ದರ ಹೆಚ್ಚಾಗುತ್ತಿದ್ದಂತೆ, ಬ್ಯಾಂಕ್‌ಗಳ ಗೃಹ ಸಾಲದ ಬಡ್ಡಿದರಗಳನ್ನು ಕೂಡಾ ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಅಕ್ಟೋಬರ್ 2019 ರಿಂದ, ಬ್ಯಾಂಕ್‌ಗಳು ಟರ್ಮ್ ಲೋನ್ ದರಗಳನ್ನು ನಿರ್ಧರಿಸಲು ಎಂಸಿಎಲ್‌ಆರ್ ಅನ್ನು ಅನ್ನು ಮಾನದಂಡವಾಗಿ ಬಳಸುವುದನ್ನು ನಿಲ್ಲಿಸಿವೆ.
ಪ್ರಸ್ತುತ ಅಂದರೆ 2019 ರ ಬಳಿಕ ಟರ್ಮ್ ಲೋನ್ ದರಗಳನ್ನು ನಿರ್ಧರಿಸಲು ಬ್ಯಾಂಕುಗಳು ಆರ್‌ಬಿಐನ ಪಾಲಿಸಿ ರೆಪೋ ದರದಂತಹ ಬಾಹ್ಯ ಮಾನದಂಡಗಳನ್ನು ಆಧರಿಸಿದೆ. ಆದ್ದರಿಂದ, ರೆಪೊ ದರದಲ್ಲಿನ ಯಾವುದೇ ಬದಲಾವಣೆಯು ಗೃಹ ಸಾಲದ ಇಎಂಐಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಆರ್‌ಬಿಐ ರೆಪೊ ದರವನ್ನು ಏಪ್ರಿಲ್ 2023ರಿಂದ ಶೇಕಡ 6.5 ರಲ್ಲಿ ಸ್ಥಿರವಾಗಿ ಇರಿಸಿದೆ. ಇದರಿಂದಾಗಿ ಮನೆ ಖರೀದಿದಾರರು ಕೊಂಚ ಉಸ್ಸಪ್ಪ ಎಂದಿದ್ದಾರೆ. ಆದರೆ ಈಗ ಎಲ್ಲರ ಚಿತ್ತ ಅಕ್ಟೋಬರ್ 6 ರಂದು ಹೊರಬರುವ ಆರ್‌ಬಿಐನ ವಿತ್ತೀಯ ನೀತಿಯ ಮೇಲೆ ನೆಟ್ಟಿದೆ. ಆರ್ಥಿಕ ತಜ್ಞರು ಆರ್‌ಬಿಐ ಈ ಬಾರಿಯೂ ರೆಪೋ ದರ ಸ್ಥಿರವಾಗಿರಿಸಬಹುದು ಎಂದು ಅಭಿಪ್ರಾಯಿಸಿದ್ದಾರೆ.
ಗೃಹ ಸಾಲದ ದರಗಳ ಮೇಲೆ ಹೇಗೆ ಪರಿಣಾಮ?
"ಮುಂಬರುವ ಹಣಕಾಸು ನೀತಿ ಸಭೆಯು ಎಚ್ಚರಿಕೆಯ ಆಶಾವಾದವನ್ನು ಹೊಂದಿದೆ. ಆರ್‌ಬಿಐ ರೆಪೋ ದರವನ್ನು ಮತ್ತೆ ಸ್ಥಿರವಾಗಿರಿಸುವ ನಿರೀಕ್ಷೆಯಿದೆ. ಸಾಲಗಾರರಿಗೆ, ವಿಶೇಷವಾಗಿ ಗೃಹ ಸಾಲಗಳನ್ನು ಪಡೆಯಲು ಬಯಸುವವರಿಗೆ ಇದು ಒಂದು ಭರವಸೆಯ ನಿರೀಕ್ಷೆ," ಎಂದು ರುಲೋನ್ಸ್ ಡಿಸ್ಟ್ರಿಬ್ಯೂಷನ್‌ನ ಸಂಸ್ಥಾಪಕ ಮತ್ತು ಸಿಇಒ ಕೌಶಿಕ್ ಮೆಹ್ತಾ ಹೇಳಿದ್ದಾರೆ.
"ರೆಪೋ ದರ ಸ್ಥಿರವಾಗಿದ್ದರೆ ಮತ್ತು ಆರ್ಥಿಕತೆಯು ಪಾಸಿಟಿವ್ ಆಗಿದ್ದರೆ, ನಾವು ಗೃಹ ಸಾಲದ ಅರ್ಜಿಯಲ್ಲಿ ಹೆಚ್ಚಳ ಕಾಣಬಹುದು. ವಿಶೇಷವಾಗಿ ವರ್ಷಾಂತ್ಯದಲ್ಲಿ, ಹಬ್ಬದ ಸೀಸನ್‌ನಲ್ಲಿ ಮತ್ತಷ್ಟು ಗೃಹ ಸಾಲಕ್ಕೆ ಅರ್ಜಿ ಹೆಚ್ಚಾಗಬಹುದು. ಇವೆಲ್ಲವೂ ಕೇಂದ್ರ ಬ್ಯಾಂಕ್‌ನ ನೀತಿ ಮೇಲೆ ಅವಲಂಭಿತ," ಎಂದು ಕೌಶಿಕ್ ಮೆಹ್ತಾ ಅಭಿಪ್ರಾಯಿಸಿದ್ದಾರೆ.
"ರೆಪೋ ದರ ಸ್ಥಿರವಾಗಿದ್ದರೆ, ಹಲವಾರು ಮಾರುಕಟ್ಟೆಯಲ್ಲಿ ಸಾಲ ಉತ್ತೇಜನಕ್ಕೆ ಸಹಾಯಕ. ಗ್ರಾಹಕರು ವಾಹನ ಸಾಲ, ಇತರೆ ಸಾಲಗಳನ್ನು ಪಡೆಯಲು ಹಿಂಜರಿಯುವುದಿಲ್ಲ. ಕಾರು ಸಾಲದ ಅರ್ಜಿ ಹೆಚ್ಚಾಗುವ ನಿರೀಕ್ಷೆಯಿದೆ. ಅದರಲ್ಲೂ ಹಬ್ಬದ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಾಗಬಹುದು," ಎಂದು ವಿವರಿಸಲಾಗಿದೆ.
"ಹಣದುಬ್ಬರ ನಿಯಂತ್ರಣಕ್ಕೆ ಆರ್‌ಬಿಐ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಆರ್‌ಬಿಐ ರೆಪೋ ದರ ಸ್ಥಿರವಾಗಿರುಸುತ್ತದೆ ಎಂಬುವುದು ನಮ್ಮ ನಂಬಿಕೆಯಾಗಿದೆ. ಆರ್ಥಿಕ ಉತ್ತೇಜನಕ್ಕೆ ಗಮನಹರಿಸುತ್ತದೆ ಎಂಬ ಭರವಸೆಯಿದೆ. ವಿಶೇಷವಾಗಿ ಹಬ್ಬದ ಸೀಸನ್‌ನಲ್ಲಿ ಆರ್‌ಬಿಐ ಹಣದುಬ್ಬರ, ಆರ್ಥಿಕ ಬೆಳವಣಿಗೆ ಮೇಲೆ ಗಮನಹರಿಸಲಿದೆ," ಎಂದು ಅನಂತ್ ರಾಜ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಮನ್ ಸರಿನ್ ತಿಳಿಸಿದರು.
ಗೃಹ ಸಾಲದ ಮೇಲೆ ರೆಪೋ ದರ ಪ್ರಭಾವ
ಆಕ್ಸಿಸ್ ಬ್ಯಾಂಕ್ ಪ್ರಕಾರ ಪ್ರಸ್ತುತ, ಬಹುಪಾಲು ಬ್ಯಾಂಕ್ ಸಾಲಗಳು ರೆಪೋ ದರಕ್ಕೆ ಲಿಂಕ್ ಆಗಿದೆ. ಆದ್ದರಿಂದ ರೆಪೋ ದರವು ಏರಿದಾಗ ಸಾಲಗಳ ಮೇಲಿನ ಬಡ್ಡಿ ದರಗಳು ಸಹ ಹೆಚ್ಚಾಗುತ್ತವೆ. ಅದಕ್ಕಾಗಿ ಆಕ್ಸಿಸ್ ಬ್ಯಾಂಕ್ ಒಂದು ಉದಾಹರಣೆಯೊಂದಿಗೆ ವಿವರಿಸಿದೆ.
ಉದಾಹರಣೆ: ನೀವು 20 ವರ್ಷಗಳವರೆಗೆ ವಾರ್ಷಿಕ ಶೇಕಡ 8 ರಷ್ಟು ಬಡ್ಡಿಯಲ್ಲಿ 50 ಲಕ್ಷ ರೂಪಾಯಿಸಾಲವನ್ನು ಹೊಂದಿದ್ದರೆ, ಬಡ್ಡಿದರವು ಶೇಕಡ 9ಕ್ಕೆ ಏರಿಕೆಯಾದರೆ ನಿಮ್ಮ ಇಎಂಐ ಪಾವತಿಯಲ್ಲಿ 3,164 ರೂಪಾಯಿ ಹೆಚ್ಚಾಗುತ್ತದೆ. ಅಂದರೆ ಇಎಂಐ 41,822 ರೂಪಾಯಿಯಿಂದ 44,986 ರೂಪಾಯಿಗೆ ಏರಿಕೆಯಾಗುತ್ತದೆ.
ದೇ ರೀತಿ, ಆರ್‌ಬಿಐ ರೆಪೊ ದರವನ್ನು ಕಡಿಮೆ ಮಾಡಿದಾಗ, ಸಾಲಗಳ ಮೇಲಿನ ಬಡ್ಡಿ ದರ ಮತ್ತು ಇಎಂಐ ಮೊತ್ತವೂ ಕಡಿಮೆಯಾಗುತ್ತದೆ. ಸಂಪೂರ್ಣವಾಗಿ ಹೇಳುವುದಾದರೆ, ಆರ್‌ಬಿಐ ರೆಪೋ ದರ ಏರಿದಾಗ ಸಾಲದ ಇಎಂಐ ಕೂಡಾ ಹೆಚ್ಚಳವಾಗುತ್ತದೆ. ರೆಪೋ ದರ ಇಳಿದಾಗ ಇಎಂಐ ಕೂಡಾ ಇಳಿಯುತ್ತದೆ.
ಗಮನಿಸಿ: ಮೇಲಿನ ಶಿಫಾರಸುಗಳನ್ನು ಮಾರುಕಟ್ಟೆ ವಿಶ್ಲೇಷಕರು ನೀಡಿರುವುದು ಆಗಿದೆ. ಗ್ರೇನಿಯಮ್ ಈ ಸಲಹೆಯನ್ನು ನೀಡಿರುವುದಲ್ಲ. ಈ ಬರಹದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರದಿಂದ ಯಾವುದೇ ನಷ್ಟವಾದರೂ ಲೇಖಕರು, ಅಥವಾ ಬ್ರೋಕರೇಜ್ ಸಂಸ್ಥೆ ಅಥವಾ ಗ್ರೇನಿಯಮ್ ಜವಾಬ್ದಾರಿಯಲ್ಲ. ಯಾವುದೇ ಹೂಡಿಕೆ ನಿರ್ಧಾರಕ್ಕೂ ಮುನ್ನ ಪ್ರಮಾಣೀಕೃತ ತಜ್ಞರನ್ನು ಸಂಪರ್ಕಿಸಿ.


Click it and Unblock the Notifications