ಅಮೆರಿಕ ಸುಂಕ ಏರಿಕೆಯ ಬಿಸಿಯನ್ನು ತಣ್ಣಗೆ ಮಾಡಲು ಆರ್‌ಬಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತೀಯ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾಲದ ಮೇಲಿನ ಬಡ್ಡಿದರ ಅಥವಾ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಹಣಕಾಸು ನೀತಿ ಸಮಿತಿ (MPC) ಸಭೆಯಲ್ಲಿ ಕಳೆದ ಶುಕ್ರವಾರವಷ್ಟೇ, ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇದರೊಂದಿಗೆ, ರೆಪೊ ದರವು 5.50 ಶೇಕಡಾದಿಂದ 5.25 ಶೇಕಡಾಕ್ಕೆ ಇಳಿಕೆಯಾಗಿದೆ. ಈ ನಡೆ ಬ್ಯಾಂಕ್‌ಗಳು ತಮ್ಮ ಸಾಲದಲ್ಲಿ ಹೊಸ ಬಡ್ಡಿದರಗಳನ್ನು ಪರಿಷ್ಕರಿಸುವ ಸಾಧ್ಯತೆಯಿದೆ.

ರೆಪೊ ದರವನ್ನು ಕಡಿಮೆ ಮಾಡುವ ನಿರ್ಧಾರದ ಜೊತೆಗೆ, ಆರ್‌ಬಿಐ ಈ ಮೂಲಕ ತನ್ನ ಹೊಸ ನಿಲುವನ್ನು ಸ್ಪಷ್ಟಪಡಿಸಿದೆ. ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ದೇಶದ ಜಿಡಿಪಿ ಬೆಳವಣಿಗೆ ಬಲಿಷ್ಠವಾಗಿದೆ ಮತ್ತು ಹಣದುಬ್ಬರ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ದರ ಕಡಿತವು, ನಗದು ಹರಿವು ಸುಧಾರಿಸುವ ನಿರೀಕ್ಷೆಯೊಂದಿಗೆ, ಮುಂಬರುವ ವಾರಗಳಲ್ಲಿ ಹೊಸದಾಗಿ ಹೂಡಿಕೆ ಮಾಡುವ ಅಥವಾ ಅಪ್ಡೇಟ್ ಮಾಡುವ ಸ್ಥಿರ ಠೇವಣಿಗಳ ಮೇಲಿನ ಆದಾಯವನ್ನು ಸಹ ಕಡಿಮೆ ಮಾಡಲಿದೆ ಎಂದು ವರದಿಯಾಗಿದೆ. ರೆಪೊ ದರ ಕಡಿತವೆಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಅಲ್ಫಾವಧಿ ಸಾಲ ಪಡೆಯುವುದಾಗಿದೆ. ಇದೀಗ ರೆಪೋ ದರ ಕಡಿತ ಮಾಡಿದ್ದು, ಹಲವು ಬ್ಯಾಂಕ್‌ಗಳಿಗೆ ಅನುಕೂಲವಾಗಲಿದೆ..
ಸಾಲಗಾರರಿಗೆ ಲಾಭ, ಹೂಡಿಕೆದಾರರಿಗೆ ನಷ್ಟ!
ರೆಪೋ ದರ ಕಡಿತದಿಂದಾಗಿ, ಹೊಸ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳ ಮೇಲೂ ಪರಿಣಾಮ ಬೀರಬಹುದು. ಅಂದರೆ ಫಿಕ್ಸೆಡ್ ಡೆಪಾಸಿಟ್‌ಗಳ ಬಡ್ಡಿಯೂ ಕೆಳಗಿಳಿಯುವ ಸಾಧ್ಯತೆ ಇದೆ. ಅಂದರೆ 25 ಬೇಸಿಸ್ ಪಾಯಿಂಟ್‌ಗಳ ರೆಪೊ ದರ ಕಡಿತವು, ಬ್ಯಾಂಕ್‌ಗಳು ಹೊಸ ಎಫ್‌ಡಿ ದರಗಳನ್ನು 10 ರಿಂದ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಟ್ವಿಸ್ಟ್ ಏನೆಂದರೆ ಈಗಾಗಲೇ ಅಸ್ತಿತ್ವದಲ್ಲಿರುವ ಸ್ಥಿರ ಠೇವಣಿಗಳ ಮೇಲೆ ಈ ದರ ಕಡಿತ ಅನ್ವಯವಾಗುವುದಿಲ್ಲ. ಒಮ್ಮೆ ಎಫ್‌ಡಿಯಲ್ಲಿ ಹೂಡಿಕೆ ಮಾಡಿದ ನಂತರ, ಅದರ ಬಡ್ಡಿದರವು ಸಂಪೂರ್ಣ ಅವಧಿಗೆ ನಿಗದಿಪಡಿಸಲ್ಪಡುತ್ತದೆ. ರೆಪೊ ದರ ಕಡಿತವು ಕೇವಲ ಹೊಸ ಠೇವಣಿಗಳು ಅಥವಾ ಅಪ್ಡೇಟ್‌ಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎನ್ನಲಾಗಿದೆ.
ಅಲ್ಪಾವಧಿಯ ಎಫ್‌ಡಿ ಮೇಲೆ ಪೆಟ್ಟು!
ಆರ್‌ಬಿಐ ಇತ್ತೀಚೆಗೆ 1 ಲಕ್ಷ ಕೋಟಿ ರೂಪಾಯಿ ಬಾಂಡ್ ಖರೀದಿ ಹಾಗೂ $5 ಬಿಲಿಯನ್‌ಗಳ ಮೂರು ವರ್ಷಗಳ ವಿದೇಶಿ ವಿನಿಮಯ ಅವಕಾಶನ್ನು ಘೋಷಿಸಿದ ನಂತರ ನಗದು ಹರಿವು ಸುಧಾರಿಸುವ ನಿರೀಕ್ಷೆಯಿದೆ. ಹೀಗಾಗಿ ಬ್ಯಾಂಕ್‌ಗಳು ಅಲ್ಪಾವಧಿ ಎಫ್‌ಡಿ ದರಗಳನ್ನು ಶೀಘ್ರವಾಗಿ ಕಡಿತಗೊಳಿಸಬಹುದು ಎಂದು ಅಂದಾಜಿಸಲಾಗಿದೆ.
ಠೇವಣಿದಾರರು ಅಲ್ಪಾವಧಿ ಮತ್ತು ಮಧ್ಯಮಾವಧಿಯ ಸ್ಥಿರ ಠೇವಣಿ ಯೋಜನೆಗಳ ಮೇಲಿನ ಬಡ್ಡಿದರಗಳಲ್ಲಿ ಕ್ರಮೇಣ ಇಳಿಕೆಯನ್ನು ನಿರೀಕ್ಷಿಸಬಹುದು. ಹೆಚ್ಚಿನ ಆದಾಯವನ್ನು ಖಚಿತಪಡಿಸಿಕೊಳ್ಳಲು ಬಯಸುವವರು, ಬ್ಯಾಂಕ್‌ಗಳು ಬಡ್ಡಿದರಗಳನ್ನು ಪರಿಷ್ಕರಿಸುವ ಮೊದಲು ಎಫ್‌ಡಿಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ಸಲಹೆ ನೀಡಲಾಗಿದೆ.
ಆದರೆ, ಸದ್ಯದ ಮಟ್ಟಿಗೆ ದೀರ್ಘಾವಧಿಯ ಎಫ್‌ಡಿ ದರಗಳು ತೀವ್ರವಾಗಿ ಕಡಿಮೆಯಾಗದಿರಬಹುದು ಎಂದು ವರದಿಯಾಗಿದೆ.


Click it and Unblock the Notifications