ತೀರಾ ಹೆಚ್ಚೇನಿಲ್ಲ, ನಾಲ್ಕೈದು ತಿಂಗಳಲ್ಲಿ ಬಹಳ ಬದಲಾಗಿದೆ. ನಗರ- ಪಟ್ಟಣ ಪ್ರದೇಶಗಳಲ್ಲಿ ಭೂಮಿ- ಮನೆಗಳನ್ನು ಖರೀದಿಗೆ ಕೇಳುವವರ ಸಂಖ್ಯೆ ಕಡಿಮೆ ಆಗಿದೆ. ಆದರೆ ಹೊರ ವಲಯಗಳಲ್ಲಿ ಅರ್ಧ ಎಕರೆ, ಒಂದು- ಒಂದೂವರೆ ಎಕರೆ ಜಮೀನು ಖರೀದಿಗೆ ಬೇಡಿಕೆ ಹೆಚ್ಚಾಗಿದೆ ಎಂದರು ದಶಕಗಳಿಂದ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುತ್ತಿರುವ ಲೋಕೇಶ್.
ರಿಯಲ್ ಎಸ್ಟೇಟ್ ಬೆಳೆದ ವೇಗಕ್ಕೆ ಇನ್ನು ಇದು ಯಾವ ಮಟ್ಟಕ್ಕೆ ಹೊರಟುಹೋಗುತ್ತದೋ ಎಂಬ ಕುತೂಹಲ- ನಿರೀಕ್ಷೆ ಇತ್ತು. ಆದರೆ ಕೊರೊನಾ ಬಂದ ನಂತರ ಎಲ್ಲ ಲೆಕ್ಕಾಚಾರ ತಲೆ ಕೆಳಗಾಗಿದೆ. ಗ್ರಾಹಕರು ಅಂತ ಇದ್ದ ಉದ್ಯೋಗಸ್ಥರು ವರ್ಕ್ ಫ್ರಂ ಹೋಮ್ ಎಂದು ಮನೆ ಸೇರಿಕೊಂಡಿದ್ದಾರೆ. ಅವರಿಗೆ ಈಗ ಕಚೇರಿಗಳ ಬಳಿ ಮನೆ ಮಾಡಿಕೊಳ್ಳಬೇಕು ಎಂಬ ಕಡ್ಡಾಯ ಇಲ್ಲ.
ಡಿಸೆಂಬರ್ ತನಕ ಮಾಮೂಲಿನಂತೆ ಆಗಲ್ಲ
ಇನ್ನು ಬೇರೆ ಬೇರೆ ಊರುಗಳಿಂದ ಬಂದು, ಪಟ್ಟಣ- ನಗರಗಳಲ್ಲಿ ತಮ್ಮದೇ ಸೂರು ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಿದ್ದವರು ವಾಪಸ್ ತಮ್ಮ ಊರುಗಳನ್ನು ಸೇರಿಕೊಂಡಿದ್ದಾರೆ. ಇನ್ನು ಭವಿಷ್ಯದಲ್ಲಿ ಭೂಮಿ ಮೇಲೆ ಬೆಳೆಯುತ್ತದೆ. ಅದರಿಂದ ಲಾಭ ಮಾಡಿಕೊಳ್ಳೋಣ ಅಂತಂದುಕೊಂಡು, ಹೂಡಿಕೆ ಮಾಡುತ್ತಿದ್ದವರಿಗೆ ಈಗಿನ ಕೊರೊನಾ ಆರ್ಥಿಕ ಬಿಕ್ಕಟ್ಟಿನಿಂದ ಯಾವಾಗ ಚೇತರಿಕೆ ಕಾಣಬಹುದು ಎಂಬ ಅಂದಾಜು ಸಿಗುತ್ತಿಲ್ಲ. ಬಾಡಿಗೆ ಮನೆಗಳನ್ನು ಖಾಲಿ ಮಾಡುತ್ತಿರುವವರು, ಪಿ.ಜಿ. ಗಳಿಂದ ಹೊರಟಿರುವವರು ಬೇಕಾದಷ್ಟು ಮಂದಿ ಇದ್ದಾರೆ. ಸದ್ಯಕ್ಕೆ ಈ ವರ್ಷದ ಡಿಸೆಂಬರ್ ತನಕ ಎಲ್ಲವೂ ಮಾಮೂಲಿನಂತೆ ಆಗಲು ಸಾಧ್ಯವಿಲ್ಲ ಅನ್ನೋದು ಅವರದೇ ಅಂದಾಜು. ಇನ್ನೂ ಕೆಲ ಉದ್ಯೋಗಸ್ಥರಿಗೆ ಡಿಸೆಂಬರ್ ಕೊನೆ ತನಕ ವರ್ಕ್ ಫ್ರಮ್ ಹೋಮ್ ಎಂದು ಘೋಷಣೆ ಮಾಡಿಯಾಗಿದೆ.
ಪೋಷಕರನ್ನು ಊರಿಗೆ ಬಿಟ್ಟು ಬರುತ್ತಿದ್ದಾರೆ
ಕೊರೊನಾದಿಂದ ತಪ್ಪಿಸಿಕೊಳ್ಳಬೇಕು ಅಂದರೆ, ಸಾಧ್ಯವಾದಷ್ಟೂ ಜನನಿಬಿಡ ಪ್ರದೇಶಗಳಿಂದ ದೂರ ಇರಬೇಕು ಎಂಬ ತಮ್ಮದೇ ಲೆಕ್ಕಾಚಾರದಲ್ಲಿ ಈಗಾಗಲೇ ಇರುವ ತೋಟ- ಜಮೀನುಗಳಿಗೆ ತೆರಳುತ್ತಿರುವವರು ಒಂದು ಕಡೆಯಾದರೆ, ವಯಸ್ಸಾದ ಅಪ್ಪ- ಅಮ್ಮನನ್ನು ಊರಿನ ಮನೆಯಲ್ಲಿ ಮತ್ತೆ ವಾಪಸ್ ಬಿಟ್ಟು ಬಂದು, ಜೋಪಾನವಾಗಿ ಆರೋಗ್ಯ ನೋಡಿಕೊಳ್ಳಿ ಎನ್ನುವವರು ಸಹ ಕಂಡುಬರುತ್ತಾರೆ. ಕತ್ರಿಗುಪ್ಪೆಯಲ್ಲಿ ವಾಸವಿರುವ ಮಂಜುನಾಥ್ ಅವರ ತಂದೆಗೆ ಬೆಸ್ಕಾಂನಲ್ಲಿ ಕೆಲಸ. ಇನ್ನೇನು ನಿವೃತ್ತಿಯ ಅಂಚಿನಲ್ಲಿ ಇರುವ ಅವರಿಗೆ ಹದಿನೈದು- ಇಪ್ಪತ್ತು ದಿನ ರಜಾ ಹಾಕಿಸಿ, ಪೋಷಕರನ್ನು ಮಂಡ್ಯದ ಬಳಿಯ ತಮ್ಮ ಊರಾದ ಚನ್ನಪಿಳೆಕೊಪ್ಪಲಿಗೆ ಬಿಟ್ಟು ಬಂದಿದ್ದಾರೆ ಮಂಜುನಾಥ್.
ಕನಿಷ್ಠ ಸೌಕರ್ಯ ಸಾಕೆಂಬ ಲೆಕ್ಕಾಚಾರ
ಇನ್ನು ಆರಂಭದಲ್ಲಿ ಹೇಳಿದಂತೆ ಅರ್ಧ ಎಕರೆ, ಒಂದರಿಂದ ಎರಡು ಎಕರೆಯ ಜಮೀನು ಖರೀದಿಸಿ, ಅಲ್ಲಿ ಕನಿಷ್ಠ ಸೌಕರ್ಯ ಇರುವ ಮನೆಗಳನ್ನು ಕಟ್ಟಿಸಲು ಆರಂಭಿಸಿದವರಿದ್ದಾರೆ. ಇಂಟರ್ ನೆಟ್, ವಿದ್ಯುತ್, ರಸ್ತೆಗೆ ಸಮೀಪ, ಆಸ್ಪತ್ರೆಗೆ ತೆರಳುವುದಕ್ಕೆ ಅನುಕೂಲ ಹಾಗೂ ಓಡಾಟಕ್ಕೆ ವಾಹನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮಕ್ಕಳ ಶಾಲೆಗಳು ಕೂಡ ಸದ್ಯಕ್ಕೆ ಶುರು ಮಾಡುವ ಲಕ್ಷಣಗಳಿಲ್ಲ. ಆನ್ ಲೈನ್ ನಲ್ಲಿ ನಡೆಯುವ ತರಗತಿಗಳಿಗೆ ಇಂಟರ್ ನೆಟ್ ಇದ್ದರೆ ಸಾಕು. ಅದೇ ಇಂಟರ್ ನೆಟ್ ವರ್ಕ್ ಫ್ರಂ ಹೋಮ್ ಗೂ ಅನ್ವಯಿಸುತ್ತದೆ. ಉದ್ಯೋಗ ಕಡಿತದ ಸಾಧ್ಯತೆ ಹಾಗೂ ಈಗಾಗಲೇ ಸಂಬಳ ಕಡಿತ ಮಾಡಿರುವವರು ಕಡಿಮೆ ಖರ್ಚಿನಲ್ಲಿ ಜೀವನ ನಡೆಸಲು ಇದೇ ಪರ್ಯಾಯ ಮಾರ್ಗ ಎಂದು ಕಂಡುಕೊಂಡಿದ್ದಾರೆ.
ಶಾಶ್ವತವಾಗಿ ಹಳ್ಳಿಗೆ ವಾಪಸ್
ಆದರೆ, ನಿಜವಾದ ಸಮಸ್ಯೆ ಆಗುತ್ತಿರುವುದು ಗ್ರಾಮೀಣ ಪ್ರದೇಶಗಳಲ್ಲಿ. ನಗರ- ಪಟ್ಟಣ ಪ್ರದೇಶಗಳಿಂದ ವಾಪಸ್ ಆದವರ ಜತೆಗೆ ಮುಂಚಿನಂತೆ ಬೆರೆಯುತ್ತಿಲ್ಲ. ಸಣ್ಣ ಹಿಡುವಳಿ, ದೊಡ್ಡ ಕುಟುಂಬ ಇರುವ ಕಡೆ ಈಗ ಬರುವ ಆದಾಯ ಸಾಕಾಗುವುದಿಲ್ಲ. ಜಮೀನು ಕೆಲಸ ಹೆಚ್ಚು ದೈಹಿಕ ಶ್ರಮವನ್ನು ಬೇಡುವುದರಿಂದ ಅದಕ್ಕೆ ತಕ್ಷಣ ಹೊಂದಿಕೊಳ್ಳಲು ಆಗುತ್ತಿಲ್ಲ. ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೇರಿಯ ರೈತರೊಬ್ಬರ ತಮ್ಮ ಡಿಪ್ಲೊಮಾ ಮಾಡಿ, ಬೆಂಗಳೂರಿನಲ್ಲಿ ಇಪ್ಪತ್ತೈದು ಸಾವಿರಕ್ಕೆ ಕೆಲಸಕ್ಕೆ ಇದ್ದರು. ನಾಲ್ಕು ಎಕರೆ ಕೃಷಿ ಭೂಮಿಯನ್ನು ಅಣ್ಣನೇ ನೋಡಿಕೊಳ್ಳುತ್ತಿದ್ದರು. ಈಗ ಶಾಶ್ವತವಾಗಿ ಹಳ್ಳಿಗೆ ವಾಪಸಾಗಿದ್ದಾರೆ ಆ ರೈತರ ತಮ್ಮ. ಈಗ ಎರಡು ಎಕರೆ ಜಮೀನು ಬಿಟ್ಟುಕೊಟ್ಟಿರುವ ಆ ರೈತರಿಗೆ ಸೋದರ ಈ ವೃತ್ತಿಗೆ ಹೊಂದಿಕೊಳ್ಳುತ್ತಾನಾ ಎಂಬ ಆತಂಕ ಶುರುವಾಗಿದೆ.


Click it and Unblock the Notifications