ನೀವು ಹಣವನ್ನು ಉಳಿತಾಯ ಮಾಡಲು ಬಯಸಿದರೆ, ಅದನ್ನು ನಿಮ್ಮಲ್ಲೇ ಇರಿಸಿಕೊಳ್ಳಬೇಡಿ, ಬದಲಾಗಿ ಹೂಡಿಕೆ ಮಾಡಿ. ಹೂಡಿಕೆ ಮಾತ್ರ ನಿಮ್ಮ ಹಣವು ವೇಗವಾಗಿ ಬೆಳವಣಿಗೆ ಕಾಣಲು ಸಹಾಯ ಮಾಡುತ್ತದೆ. ಆದರೆ ಎಲ್ಲಿ ಹೂಡಿಕೆ ಮಾಡುವುದು ಎಂಬುದೇ ದೊಡ್ಡ ಪ್ರಶ್ನೆ ಅಲ್ಲವೇ?
ಹೂಡಿಕೆ ವಿಚಾರದಲ್ಲಿ ನೀವು ಅಪಾಯವನ್ನು ಸ್ವೀಕರಿಸಲು ಸಿದ್ಧವಾಗಿದ್ದರೆ, ನೀವು ಷೇರು ಮಾರುಕಟ್ಟೆಗೆ ಲಿಂಕ್ ಆದ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಆದರೆ ನೀವು ಸುರಕ್ಷಿತ ಹೂಡಿಕೆ ಮಾಡಿ ಉತ್ತಮ ಆದಾಯವನ್ನು ಪಡೆಯಲು ಬಯಸಿದರೆ, ಸರ್ಕಾರದ ಯೋಜನೆಗಳು ಉತ್ತಮ ಆಯ್ಕೆಯಾಗಿದೆ.

ನೀವು ಮಾಸಿಕ ಡೆಪಾಸಿಟ್ ಮಾಡುವ ಯೋಜನೆಯನ್ನು ಮಾಡಲು ಬಯಸಿದರೆ, ನಿಮಗೆ ಆರ್‌ಡಿ, ಪಿಪಿಎಫ್ ಮುಂತಾದ ಹಲವು ಆಯ್ಕೆಗಳಿದೆ. ನೀವು ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಲು ಬಯಸಿದರೆ, ಅಂಚೆ ಕಚೇರಿ ಟರ್ಮ್ ಡೆಪಾಸಿಟ್ ಎಂದು ಕರೆಯಲ್ಪಡುವ ಅಂಚೆ ಕಚೇರಿ ಎಫ್‌ಡಿ ನಿಮಗೆ ಉತ್ತಮ ಆಯ್ಕೆಯಾಗಿದೆ.
ಪ್ರಸ್ತುತ, 5 ವರ್ಷಗಳ ಎಫ್‌ಡಿ ಮೇಲಿನ ಬಡ್ಡಿಯು ಅಂಚೆ ಕಚೇರಿಯಲ್ಲಿ ಶೇಕಡ 7.5 ಆಗಿದೆ. ಇದು ಪಿಪಿಎಫ್‌ಗಿಂತ ಅಧಿಕವಾಗಿದೆ. ನೀವು ದೀರ್ಘಾವಧಿಗೆ ಹೂಡಿಕೆಯನ್ನು ಮಾಡಿದರೆ, ನಿಮ್ಮ ಮೊತ್ತವನ್ನು ಕೇವಲ 120 ತಿಂಗಳುಗಳಲ್ಲಿ ಅಂದರೆ 10 ವರ್ಷಗಳಲ್ಲಿ ದ್ವಿಗುಣಗೊಳಿಸಬಹುದು. ಅಂದರೆ ಡಬಲ್ ಮಾಡಬಹುದು, ಹೇಗೆ ಎಂದು ತಿಳಿಯಿರಿ.
ಹೂಡಿಕೆ ಮಾಡಿದ ಹಣ ಡಬಲ್ ಮಾಡುವುದು ಹೇಗೆ?
ನೀವು 5 ಲಕ್ಷ ರೂಪಾಯಿಗಳನ್ನು ಅಂಚೆ ಕಚೇರಿ ಎಫ್‌ಡಿಯಲ್ಲಿ 5 ವರ್ಷಗಳವರೆಗೆ ಅಂದರೆ 60 ತಿಂಗಳವರೆಗೆ ಡೆಪಾಸಿಟ್ ಮಾಡುತ್ತೀರಿ ಎಂದು ಅಂದುಕೊಳ್ಳೋಣ. ಐದು ವರ್ಷಗಳಲ್ಲಿ ನೀವು ಶೇಕಡ 7.5 ರಷ್ಟು ಬಡ್ಡಿಯನ್ನು ಪಡೆಯುತ್ತೀರಿ. ಅಂದರೆ ಬಡ್ಡಿದರ 2,24,974 ರೂಪಾಯಿ ಆಗಿರುತ್ತದೆ.
ಈ ರೀತಿಯಾಗಿ, ನಿಮ್ಮ 5 ಲಕ್ಷ ರೂಪಾಯಿಗಳು ಐದು ವರ್ಷಗಳಲ್ಲಿ 7,24,974 ರೂಪಾಯಿ ಆಗುತ್ತದೆ. ಆದರೆ ನೀವು ಈಗ ಈ ಮೊತ್ತವನ್ನು ವಿತ್‌ಡ್ರಾ ಮಾಡಬೇಕಾಗಿಲ್ಲ. ಮತ್ತೆ ಐದು ವರ್ಷಗಳ ಕಾಲ ಈ ಎಫ್‌ಡಿಯನ್ನು ಮುಂದುವರಿಸಿ. ಹೀಗೆ ಮತ್ತೆ ಐದು ವರ್ಷಗಳ ಕಾಲ ಮುಂದುವರಿಸಿದರೆ, ನಿಮ್ಮ ಮೊತ್ತವು 10,51,175 ಕ್ಕೆ ಹೆಚ್ಚಳವಾಗುತ್ತದೆ.
ಅಂದರೆ ನಿಮ್ಮ 5 ಲಕ್ಷ ರೂಪಾಯಿಗೆ ನೀವು 5,51,175 ರೂಪಾಯಿಯನ್ನು ಬಡ್ಡಿಯಾಗಿ ಪಡೆಯುತ್ತೀರಿ. ಅದು ನೀವು ಹೂಡಿಕೆ ಮಾಡಿದ ಮೊತ್ತಕ್ಕಿಂತ ಹೆಚ್ಚಾಗಿರುತ್ತದೆ. ಈ ರೀತಿಯಾಗಿ, ನೀವು 120 ತಿಂಗಳುಗಳಲ್ಲಿ ಅಂದರೆ 10 ವರ್ಷಗಳಲ್ಲಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡಬಹುದು.
ನೀವು 10 ವರ್ಷಗಳ ಕಾಲ ಅಂಚೆ ಕಚೇರಿ ಫಿಕ್ಸಿಡ್ ಡೆಪಾಸಿಟ್‌ನಲ್ಲಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ನಂತರ ನೀವು 11,02,349 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಮೆಚ್ಯೂರಿಟಿ ವೇಳೆ ನೀವು ಒಟ್ಟು 21,02,349 ರೂಪಾಯಿ ಪಡೆಯುತ್ತೀರಿ.
ಒಂದರಿಂದ ಮೂರು ವರ್ಷಗಳ ಎಫ್‌ಡಿ ಮೇಲಿನ ಬಡ್ಡಿ
ಅಂಚೆ ಕಚೇರಿ ಎಫ್‌ಡಿಯಲ್ಲಿ ನೀವು ಕೇವಲ 5 ವರ್ಷಗಳ ಫಿಕ್ಸಿಡ್ ಡೆಪಾಸಿಟ್ ಆಯ್ಕೆಯನ್ನು ಹೊಂದಿರುವುದಲ್ಲ. ನೀವು 1, 2, 3 ಮತ್ತು 5 ವರ್ಷಗಳ ಅವಧಿಗೆ ಎಫ್‌ಡಿ ಪಡೆಯಬಹುದು. ವರ್ಷಕ್ಕೆ ಅನುಗುಣವಾಗಿ ಬಡ್ಡಿ ದರವೂ ಬದಲಾವಣೆಯಾಗುತ್ತದೆ. ಸದ್ಯಕ್ಕೆ 1 ವರ್ಷದ ಎಫ್‌ಡಿಗೆ ಶೇಕಡ 6.9, ಎರಡು ವರ್ಷದ ಎಫ್‌ಡಿಗೆ ಶೇಕಡ 7.0, 3 ವರ್ಷದ ಎಫ್‌ಡಿಗೆ ಶೇಕಡ 7.0, 5 ವರ್ಷದ ಎಫ್‌ಡಿಗೆ ಶೇಕಡ 7.5 ಬಡ್ಡಿ ಪಡೆಯಬಹುದು.
ನೀವು ಎಫ್‌ಡಿ ಅನ್ನು ಪ್ರಾರಂಭಿಸಿದ ಬಳಿಕ ಅದೇ ದರದಲ್ಲಿ ನೀವು ಮೆಚ್ಯೂರಿಟಿ ಮೊತ್ತವನ್ನು ಪಡೆಯುತ್ತೀರಿ. ನೀವು ಇಂದು 5 ವರ್ಷಗಳ ಎಫ್‌ಡಿಯಲ್ಲಿ ಹೂಡಿಕೆ ಮಾಡಿದರೆ, 5 ವರ್ಷಗಳ ನಂತರ ನಿಮಗೆ ಕೇವಲ ಶೇಕಡ 7.5 ರಷ್ಟು ಬಡ್ಡಿ ಲಭ್ಯವಾಗುತ್ತದೆ.
ಈ ಮಧ್ಯೆ ಬಡ್ಡಿದರ ಬದಲಾದರೂ ಅದು ನಿಮ್ಮ ಎಫ್‌ಡಿ ಮೇಲೆ ಪರಿಣಾಮ ಬೀರದು. ಆದರೆ 5 ವರ್ಷಗಳ ನಂತರ, ನೀವು ನಿಮ್ಮ ಎಫ್‌ಡಿಯನ್ನು ರಿನೀವ್ ಮಾಡಿದರೆ, ಆ ಸಂದರ್ಭದಲ್ಲಿ ಎಷ್ಟು ಬಡ್ಡಿದರ ಚಾಲ್ತಿಯಲ್ಲಿರುತ್ತದೆಯೋ ಅಷ್ಟೇ ಬಡ್ಡಿದರವನ್ನು ಪಡೆಯುತ್ತೀರಿ. ಇದು ಸ್ವಲ್ಪ ಹೆಚ್ಚು ಅಥವಾ ಕಡಿಮೆ ಇರಬಹುದು.


Click it and Unblock the Notifications