ನಿರುದ್ಯೋಗ ಪ್ರಮಾಣ ಹೆಚ್ಚಳವಾಗುತ್ತಾ ಸಾಗಿದಂತೆ ಉದ್ಯೋಗ ಹುಡುಕಾಡುವ ಜನರ ಸಂಖ್ಯೆಯೂ ಕೂಡಾ ಅಧಿಕವಾಗುತ್ತಿದೆ. ಹೀಗಿರುವಾಗ ನಿಮಗೆ 10-20 ಸಾವಿರ ರೂಪಾಯಿಯಲ್ಲ, ಮಾಸಿಕವಾಗಿ 1,15,000 ರೂಪಾಯಿ ವೇತನವನ್ನು ನೀಡುವ ಉದ್ಯೋಗದ ಬಗ್ಗೆ ನಾವಿಲ್ಲಿ ತಿಳಿಸಿದ್ದೇವೆ.
ಹೌದು ಈ ಉದ್ಯೋಗದಿಂದ ಒಂದು ತಿಂಗಳಲ್ಲೇ ಲಕ್ಷಾಂತರ ರೂಪಾಯಿ ಪಡೆಯಬಹುದಾಗಿದೆ. ಇಷ್ಟು ಸಂಬಳ ಕೊಡುವಾಗ ಕೆಲವು ಅರ್ಹತೆ ಕೂಡಾ ಅಗತ್ಯವಲ್ಲವೇ?. ಯಾರು ಈ ಉದ್ಯೋಗಕ್ಕೆ ಅರ್ಹರು, ಏನೆಲ್ಲ ನಿಯಮವಿದೆ, ವಯೋಮಿತಿ, ಯಾವ ಉದ್ಯೋಗ, ಇತರೆ ಮಾಹಿತಿ ಇಲ್ಲಿದೆ ಮುಂದೆ ಓದಿ...

ಯಾವ ಹುದ್ದೆ ತಿಳಿಯಿರಿ
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಕಾನೂನು ಸಲಹೆಗಾರರನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಇತ್ತೀಚೆಗೆ ಅಧಿಸೂಚನೆ ಪ್ರಕಟಿಸಿದೆ. ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಕಾನೂನು ಸಲಹೆಗಾರ (Legal Adviser) ಅನ್ನು ಸರ್ಕಾರದ ಆದೇಶ ದಿನಾಂಕ 21/07/1994ರ ಉಲ್ಲೇಖಿತ ಆದೇಶದ ಅನ್ವಯ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಹುದ್ದೆಯ ಮಾಹಿತಿ ಇಲ್ಲಿದೆ
ಸರ್ಕಾರದ ಆದೇಶದ ಪ್ರಕಾರ ಕರ್ನಾಟಕ ಲೋಕಸೇವಾ ಆಯೋಗದ ಕಛೇರಿಯ ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಎರಡು ವರ್ಷಗಳ ಅವಧಿಗೆ ಕಾನೂನು ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ನೀವು ಸೇವಾ ವಿಷಯಗಳಲ್ಲಿ ನುರಿತರಾಗಿರಬೇಕು, ಹಾಗೆಯೇ ಹೆಚ್ಚಿನ ಅನುಭವವುಳ್ಳ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಆಗಿರಬೇಕಾಗುತ್ತದೆ.
ಅಂದರೆ ಇದು ನ್ಯಾಯಾಧೀಶರಿಗೆ ಮಾತ್ರ ಅನ್ವಯವಾಗುವ ಉದ್ಯೋಗವಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದವರು ಮಾಸಿಕವಾಗಿ ಬರೋಬ್ಬರಿ 1,15,000 ರೂಪಾಯಿ ವೇತನವನ್ನು ಪಡೆಯಬಹುದಾಗಿದೆ. ಹಾಗೆಯೇ ವಾಹನ ಭತ್ಯೆ ರೂಪದಲ್ಲಿ ಮಾಸಿಕವಾಗಿ 35,000 ರೂಪಾಯಿ ಪಡೆಯಬಹುದಾಗಿದೆ.
ಎರಡು ವರ್ಷಗಳ ಅವಧಿಗೆ ಈ ಹುದ್ದೆಗೆ ನೇಮಕಾತಿ ಮಾಡಲಾಗುತ್ತಿದೆ. ಹಾಗೆಯೇ ಒಂದು ವರ್ಷ ಕಾರ್ಯನಿರ್ವಹಣೆ ಮಾಡಿದ ಬಳಿಕ ಈ ಉದ್ಯೋಗಿಯ ಕೆಲಸ ಹೇಗಿದೆ ಎಂದು ನೋಡಿಕೊಂಡು ಮುಂದಿನ ಒಂದು ವರ್ಷಕ್ಕೆ ಉದ್ಯೋಗ ಮುಂದುವರೆಸಲಾಗುತ್ತದೆ. ಇಲ್ಲವಾದರೆ ಉದ್ಯೋಗಿಯ ಬದಲಾವಣೆ ಮಾಡಲಾಗುತ್ತದೆ.
ಗಮನಿಸಿ: ಷರತ್ತುಗಳೂ ಅನ್ವಯ!
* ದಿನಾಂಕ 01/11/2023ಕ್ಕೆ 65 ವರ್ಷ ಮೀರದ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅರ್ಜಿ ಸಲ್ಲಿಸಲು ಅವಕಾಶ ಹೊಂದಿದ್ದಾರೆ.
* ಆಯ್ಕೆ ಅಧಿಸೂಚನೆ ಹೊರಡಿಸಿ, ನೇಮಕಾತಿ ಆದೇಶ ತಲುಪಿದ 7 ದಿನಗಳೊಳಗೆ ಕರ್ತವ್ಯಕ್ಕೆ ಹಾಜರಿರಬೇಕು.
* ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಈ ಹಿಂದೆ ಸೇವೆಯಿಂದ ವಜಾಗೊಂಡಿರಬಾರದು ಹಾಗೂ ಯಾವುದೇ ಇಲಾಖಾ ವಿಚಾರಣೆ/ ಶಿಸ್ತು ಕ್ರಮಗಳಿಗೆ ಒಳಗಾಗಿರಬಾರದು.
* ಈ ಉದ್ಯೋಗಿಯು ಕಛೇರಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕಾರ್ಯದರ್ಶಿಯಿಂದ ಬರುವ ಯಾವುದೇ ಕಡತಗಳಿಗೆ ಕಾನೂನು ಸಲಹೆ ನೀಡಬೇಕು.
* ಈ ಉದ್ಯೋಗಿಯು ಕಛೇರಿಯ ಅವಧಿಯಲ್ಲಿ ಕರ್ತವ್ಯಕ್ಕೆ ಹಾಜರಿರಬೇಕು ಹಾಗೂ ಆಯೋಗದ ಮಾನ್ಯ ಅಧ್ಯಕ್ಷರು, ಸದಸ್ಯರುಗಳು ಹಾಗೂ ಕಾರ್ಯದರ್ಶಿಯವರೊಂದಿಗೆ ಸಮಾಲೋಚನೆಯಲ್ಲಿ ಭಾಗಿಯಾಗಬೇಕು.
* ಆಯೋಗದ ವಿರುದ್ಧದ ಅಥವಾ ಆಯೋಗದ ಹಿತಾಸಕ್ತಿಗೆ ಧಕ್ಕೆ ಬರುವಂತಹ ಯಾವುದೇ ಪ್ರಕರಣದ ಯಾವುದೇ ಖಾಸಗಿ ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡುವಂತಿಲ್ಲ. ಅಂದರೆ ಆಯೋಗದ ವಿರುದ್ಧವಾಗಿ ಖಾಸಗಿಯಾಗಿ ಕಾನೂನು ಸಲಹೆ ಕಾರ್ಯ ಮಾಡುವಂತಿಲ್ಲ.
* ತಮಗೆ ವಹಿಸಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯೋಗವನ್ನು ಪ್ರತಿನಿಧಿಸುವ ವಕೀಲರುಗಳ ಮಾರ್ಗದರ್ಶನವನ್ನು ಈ ಉದ್ಯೋಗಿಯು ಪರಿಶೀಲನೆ ಮಾಡಿ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಬೇಕು.
* ಆಯೋಗದಿಂದ ಹೂಡಲ್ಪಟ್ಟ ಅಥವಾ ಆಯೋಗದ ವಿರುದ್ಧದ ಎಲ್ಲ ಪ್ರಕರಣಗಳ ಸಂಕ್ಷಿಪ್ತ ಟಿಪ್ಪಣಿ ತಯಾರಿಬೇಕು. ಅವುಗಳ ವಿಶ್ಲೇಷಣೆಯನ್ನು ಕಾಲಕಾಲಕ್ಕೆ ಕಾರ್ಯದರ್ಶಿಯವರಿಗೆ ಮಂಡಿಸಬೇಕು.
* ಕಾಲಕಾಲಕ್ಕೆ ಅವರಿಗೆ ವಹಿಸಲಾಗುವ ಕಾನೂನು ಪ್ರಕರಣ ಅಥವಾ ಕಾನೂನಿಗೆ ಸಂಬಂಧಿಸಿದ ಇತರ ತೊಡಕುಗಳ ನಿವಾರಣೆಯಲ್ಲಿಯೂ ಸಹಕಾರ ನೀಡಬೇಕು.
* ಈ ಉದ್ಯೋಗಿಯು ಆಯೋಗವು ತಮಗೆ ನೀಡಲಾದ ಸಿಬ್ಬಂದಿ ವರ್ಗದವರ ಸಹಯೋಗದೊಂದಿಗೆ ಕಾನೂನು ಕೋಶದ ಸುಗಮ ನಿರ್ವಹಣೆಗಾಗಿ ಸಂಪೂರ್ಣ ಜವಾಬ್ದಾರಿ ಹೊರಬೇಕು.
* ಈ ಹುದ್ದೆಗೆ ಭರ್ತಿಗೊಂಡವರು ಅವಧಿ ಮುಗಿಯುವ 1 ತಿಂಗಳ ಮೊದಲು ನೋಟೀಸ್ ನೀಡುವ ಮೂಲಕ ಹುದ್ದೆಯನ್ನು ಕೈಬಿಡಬಹುದು.
* ಅವಧಿ ಮುಗಿಯುವ 1 ತಿಂಗಳ ಮೊದಲು ನೋಟೀಸ್ ನೀಡದೆ, ತಕ್ಷಣವೇ ಉದ್ಯೋಗವನ್ನು ಬಿಡುವುದಾದರೆ, 1 ತಿಂಗಳ ವೇತನವನ್ನು ಕಳೆದುಕೊಳ್ಳಬೇಕಾಗುತ್ತದೆ.
ಹೇಗೆ ಅರ್ಜಿ ಸಲ್ಲಿಸುವುದು?
ಸೇವಾ ವಿಷಯಗಳಲ್ಲಿ ನುರಿತ ಹಾಗೂ ಹೆಚ್ಚಿನ ಅನುಭವ ಹಾಗೂ ಮಾಹಿತಿಯನ್ನು ಹೊಂದಿರುವ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಂದ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಸಕ್ತರು ಅರ್ಜಿಯೊಂದಿಗೆ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ವಿವರಗಳನ್ನೊಳಗೊಂಡ ಸಂಪೂರ್ಣ ಮಾಹಿತಿಯನ್ನು ಲಗತ್ತಿಸಿ 'ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು' ವಿಳಾಸಕ್ಕೆ ಸಲ್ಲಿಸಬೇಕು.


Click it and Unblock the Notifications