ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಬೆಂಚ್‌ಮಾರ್ಕ್ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ (ಎಂಸಿಎಲ್‌ಆರ್) ಆಧಾರಿತ ಸಾಲದ ದರಗಳನ್ನು ಏರಿಕೆ ಮಾಡಿದೆ. ನಿಗದಿತ ಅವಧಿಗಳ ಎಂಸಿಎಲ್‌ಆರ್ ಅನ್ನು ಬ್ಯಾಂಕ್ 15 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಿಸಿದೆ. ಅಂದರೆ ಬ್ಯಾಂಕ್‌ನಲ್ಲಿ ಈಗ ಎಂಸಿಎಲ್‌ಆರ್‌ಗೆ ಲಿಂಕ್ ಮಾಡಲಾದ ಸಾಲಗಳ ಮೇಲೆ ಹೆಚ್ಚಿನ ಬಡ್ಡಿ ದರವನ್ನು ವಿಧಿಸುತ್ತದೆ.
ಹೊಸ ದರಗಳು ಆಗಸ್ಟ್ 7, 2023 ರಿಂದ ಜಾರಿಗೆ ಬರುತ್ತವೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಂಸಿಎಲ್‌ಆರ್ ಕನಿಷ್ಠ ವೆಚ್ಚವು 15 ಬೇಸಿಕ್ ಪಾಯಿಂಟ್‌ಗಳವರೆಗೆ ಹೆಚ್ಚಳವಾಗಿದೆ. ಓವರ್‌ನೈಟ್ ಎಂಸಿಎಲ್‌ಆರ್ 10 ಮೂಲಾಂಕ ಹೆಚ್ಚಳವಾಗಿ ಶೇಕಡ 8.35ಕ್ಕೆ ತಲುಪಿದೆ. ಆದರೆ ಒಂದು ತಿಂಗಳ ಎಂಸಿಎಲ್‌ಆರ್ 15 ಬಿಪಿಎಸ್ ಹೆಚ್ಚಾಗಿ ಶೇಕಡ 8.45ಕ್ಕೆ ಏರಿಕೆಯಾಗಿದೆ.

ಮೂರು ತಿಂಗಳ ಎಂಸಿಎಲ್‌ಆರ್ ಅನ್ನು ಕೂಡಾ 10 ಬೇಸಿಸ್ ಪಾಯಿಂಟ್‌ಗಳಷ್ಟು ಜಿಗಿತ ಕಂಡಿದ್ದು, ಶೇಕಡ 8.70 ಕ್ಕೆ ಏರಿಕೆಯಾಗಿದೆ. ಆರು ತಿಂಗಳ ಎಂಸಿಎಲ್‌ಆರ್ 5 ಬೇಸಿಸ್ ಪಾಯಿಂಟ್ ಹೆಚ್ಚಳವಾಗಿದ್ದು, ಶೇಕಡ 8.95 ಕ್ಕೆ ಜಿಗಿತ ಕಂಡಿದೆ. ಆದರೆ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಎಂಸಿಎಲ್‌ಆರ್ ಸ್ಥಿರವಾಗಿದೆ. ಈ ಎಂಸಿಎಲ್‌ಆರ್ ಏರಿಕೆಯು ನಿಮ್ಮ ಸಾಲದ ಇಎಂಐಗಳನ್ನು ಏರಿಕೆ ಮಾಡಲಿದೆ. ಇದು ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಸಾಲ ಪಡೆದವರ ಇಎಂಐ ಮೇಲೆ ಪ್ರಭಾವ ಉಂಟು ಮಾಡಲಿದೆ.
ಎಂಸಿಎಲ್‌ಆರ್ ಪರಿಷ್ಕರಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್
"ಮಾರ್ಜಿನಲ್ ಕಾಸ್ಟ್ ಆಫ್ ದಿ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ ಅಥವಾ ಎಂಸಿಎಲ್‌ಆರ್ ಒಂದು ನಿರ್ದಿಷ್ಟ ಸಾಲಕ್ಕಾಗಿ ಹಣಕಾಸು ಸಂಸ್ಥೆಯು ವಿಧಿಸಬೇಕಾದ ಕನಿಷ್ಠ ಬಡ್ಡಿ ದರವಾಗಿದೆ. ಇದು ಸಾಲದ ಬಡ್ಡಿದರದ ಕನಿಷ್ಠ ಮಿತಿಯನ್ನು ಸೂಚಿಸುತ್ತದೆ," ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿದೆ.
ಆರ್‌ಬಿಐನ ಹಣಕಾಸು ನೀತಿ ನಿರ್ಧಾರ ಬಾಕಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಆಗಸ್ಟ್ 8 ರಿಂದ 10 ರವರೆಗೆ ಮೂರು ದಿನಗಳ ಕಾಲ ಸಭೆ ಸೇರಲಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆಗಸ್ಟ್ 10 ರಂದು 10:00 ಗಂಟೆಗೆ ನೀತಿ ದರಗಳು ಮತ್ತು ಇತರ ಸಭೆಯಲ್ಲಿ ಮಾಡಲಾದ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ.
ಜುಲೈನಲ್ಲಿಯೂ ಸಾಲದ ಬಡ್ಡಿದರ ಏರಿಸಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್
ದೇಶದ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ ಈ ಹಿಂದೆಯೂ ತನ್ನ ಸಾಲದ ಬಡ್ಡಿದರವನ್ನು ಏರಿಕೆ ಮಾಡಿದೆ. ಈಗ ಮತ್ತೆ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಸಾಲವನ್ನು ಪಡೆದವರು ಇನ್ಮುಂದೆ ಅಧಿಕ ಇಎಂಐ ಪಾವತಿ ಮಾಡಬೇಕಾಗುತ್ತದೆ.
ಈ ಹಿಂದೆ ಏಪ್ರಿಲ್‌ನಲ್ಲಿಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು ಪರಿಷ್ಕರಣೆ ಮಾಡಿದೆ. ಕೆಲವು ಅವಧಿಯ ಎಂಸಿಎಲ್‌ಆರ್ ಅನ್ನು ಎಚ್‌ಡಿಎಫ್‌ಸಿ ಬ್ಯಾಂಕ್ 85 ಬೇಸಿಸ್ ಪಾಯಿಂಟ್‌ಗೆ (ಬಿಪಿಎಸ್) ಇಳಿಸಲಾಗಿದೆ. (ಇಲ್ಲಿ ಒಂದು ಬಿಪಿಎಸ್ ಅಂದರೆ ಶೇಕಡ 0.01 ಆಗಿದೆ). ಈ ನೂತನ ಬಡ್ಡಿದರವು ಏಪ್ರಿಲ್ 10, 2023ರಿಂದ ಜಾರಿಗೆ ಬಂದಿದೆ.


Click it and Unblock the Notifications