ಲಕ್ಷಾಂತರ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತಿನ ಮೊತ್ತಕ್ಕಾಗಿ ಕಾಯುತ್ತಿದ್ದಾರೆ. ಈ ಮೊತ್ತವನ್ನು ಸರ್ಕಾರವು ನವೆಂಬರ್ ಮತ್ತು ಡಿಸೆಂಬರ್ 2023 ರ ನಡುವೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆದರೆ ಈ ಬಾರಿ ಬಹುತೇಕ ರೈತರಿಗೆ ಪಿಎಂ ಕಿಸಾನ್ ಕಂತು ಲಭ್ಯವಾಗದು ಎಂಬುವುದು ನಿಮಗೆ ತಿಳಿದಿದೆಯೇ?!
ಪ್ರಧಾನ ಮಂತ್ರಿ ಕಿಸಾನ್ ಯೋಜನೆಯು ಹಲವಾರು ರೈತರಿಗೆ ಒಂದು ಸಣ್ಣ ಸಹಾಯವಾಗಿದೆ. ಯೋಜನೆಯಡಿ ಈಗಾಗಲೇ 14 ಕಂತುಗಳನ್ನು ವಿತರಿಸಲಾಗಿದ್ದು, 15 ನೇ ಕಂತಿನ ನಿರೀಕ್ಷೆಯಿದೆ. ಆದರೆ ಅರ್ಹ ರೈತರು ಈ ಸಹಾಯವನ್ನು ಕಳೆದುಕೊಳ್ಳಬಾರದು ಎಂದಾದರೆ ಕೆಲವು ಕಾರ್ಯಗಳನ್ನು ಮಾಡಬೇಕಾಗುತ್ತದೆ. ಈ ಕಂತು ಯಾಕೆ ಲಭ್ಯವಾಗದು, ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಭೂ ದಾಖಲೆಗಳ ಪರಿಶೀಲನೆ
ಪ್ರತಿ ಕಂತಿನ ಬಿಡುಗಡೆಯ ಮೊದಲು, ಫಲಾನುಭವಿಗಳ ಪಟ್ಟಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತದೆ. ಭೂ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಕೆಲವು ರೈತರನ್ನು ಈ ಯೋಜನೆಯಿಂದ ಹೊರಗಿಡಲಾಗುತ್ತದೆ. ಈ ಪ್ರಕ್ರಿಯೆಯು ಮುಂಬರುವ ಕಂತಿನಲ್ಲಿ ನಡೆದ ಬಳಿಕ, ಫಲಾನುಭವಿಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಬಹುದು.
ಇಕೆವೈಸಿ ಅವಶ್ಯಕತೆ
ತಮ್ಮ ಇಕೆವೈಸಿ (ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್) ಅನ್ನು ಪೂರ್ಣಗೊಳಿಸದ ರೈತರು ಸಹ ಪಟ್ಟಿಯಿಂದ ಹೊರಕ್ಕೆ ಉಳಿಯುತ್ತಾರೆ. ನೀವು ಮುಂದಿನ ಕಂತಿನ ಮೊತ್ತವನ್ನು ಪಡೆಯಬೇಕಾದರೆ ಕೂಡಲೇ ಇಕೆವೈಸಿ ಮಾಡಿಕೊಳ್ಳುವುದು ಅತೀ ಮುಖ್ಯವಾಗಿದೆ.
ಅರ್ಜಿ ನಮೂನೆಯನ್ನು ಪರಿಶೀಲಿಸಿ
ನೀವು ಎಲ್ಲ ಅರ್ಹತಾ ಮಾನದಂಡಗಳನ್ನು ಹೊಂದಿದ್ದರೂ ಕೂಡಾ ನಿಮ್ಮ ಅರ್ಜಿ ನಮೂನೆಯಲ್ಲಿನ ದೋಷಗಳು ನಿಮಗೆ ಪಿಎಂ ಕಿಸಾನ್ ಮೊತ್ತ ಲಭ್ಯವಾಗದಂತೆ ಮಾಡುತ್ತದೆ. ಉದಾಹರಣೆಗೆ ಲಿಂಗ, ಹೆಸರು, ವಿಳಾಸ ಅಥವಾ ಖಾತೆ ಸಂಖ್ಯೆಗಳಲ್ಲಿನ ತಪ್ಪುಗಳು ಕಂತು ಪ್ರಕ್ರಿಯೆಯನ್ನು ಅಡ್ಡಿಪಡಿಸಬಹುದು. ನಿಮ್ಮ ವಿವರಗಳು ನಿಖರವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ.
ಇ-ಕೆವೈಸಿ ಶೀಘ್ರ ಮಾಡಿ
ನೀವು ಇನ್ನೂ ಇ-ಕೆವೈಸಿ ಮಾಡಿಲ್ಲದಿದ್ದರೆ ಮತ್ತು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿದ್ದರೆ, ಇನ್ನು ವಿಳಂಬ ಮಾಡಬೇಡಿ. ಇ-ಕೆವೈಸಿಯನ್ನು ಶೀಘ್ರವೇ ಮಾಡಿ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪಿಎಂ ಕಿಸಾನ್ ಯೋಜನೆ ವೆಬ್‌ಸೈಟ್ ಅಥವಾ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಿ. ನೀವು ಇಕೆವೈಸಿ ಮಾಡದಿದ್ದರೆ ನಿಮಗೆ ಕಂತು ಲಭ್ಯವಾಗದು.
ಪಿಎಂ ಕಿಸಾನ್ ಯೋಜನೆ ಎಂದರೇನು?
ಕೇಂದ್ರ ವಲಯದ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಯೋಜನೆಯು ದೇಶದ ಎಲ್ಲಾ ರೈತ ಕುಟುಂಬಗಳಿಗೆ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ಖರ್ಚಿಗಾಗಿ ಸರ್ಕಾರ ನೀಡುವ ಆದಾಯ ಬೆಂಬಲವಾಗಿದೆ. ಯೋಜನೆಯ ಭಾಗವಾಗಿ, ಫಲಾನುಭವಿಗಳಿಗೆ ಹಣಕಾಸನ್ನು ಸರ್ಕಾರ ನೇರವವಾಗಿ ಖಾತೆಗೆ ಜಮೆ ಮಾಡುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತ ಕುಟುಂಬಗಳು ವಾರ್ಷಿಕವಾಗಿ ಆರು ಸಾವಿರ ರೂಪಾಯಿ ಆರ್ಥಿಕ ಪ್ರಯೋಜನ ಪಡೆಯಬಹುದಾಗಿದೆ. 2000 ರೂಪಾಯಿಯ ಮೂರು ಕಂತಿನಂತೆ ಈ ಮೊತ್ತ ಲಭ್ಯವಾಗುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಅರ್ಜಿ ಹೀಗೆ ಸಲ್ಲಿಸಿ
ಹಂತ 1: ಅಧಿಕೃತ ವೆಬ್‌ಸೈಟ್ www.pmkisan.gov.inಗೆ ಭೇಟಿ ನೀಡಿ
ಹಂತ 2: ಹೋಮ್‌ಪೇಜ್‌ನಲ್ಲಿ Farmer's Corner ಗೆ ಹೋಗಿ 'New Farmer Registration' ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ಅನ್ನು ಹಾಕಿ
ಹಂತ 4: click here to continue ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 5: YES ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಫಾರ್ಮ್ 2023 ಅನ್ನು ಭರ್ತಿ ಮಾಡಿ
ಹಂತ 6: ಈ ಅರ್ಜಿಯನ್ನು ಭರ್ತಿ ಮಾಡಿದ ಬಳಿಕ ಅದನ್ನು ಸೇವ್ ಮಾಡಿ, ಪ್ರಿಂಟ್ ಔಟ್ ಅನ್ನು ತೆಗೆಯಿರಿ
ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ, ಜಮೀನು ಹೊಂದಿರುವ ರೈತರು ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ತಮ್ಮ ಹೆಸರಿನಲ್ಲಿ ಭೂಮಿ ಹೊಂದಿರುವ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂ ಕಿಸಾನ್) ಲಾಭವನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ.


Click it and Unblock the Notifications