ಮದರ್ ಡೈರಿ ತನ್ನ ಉತ್ಪನ್ನಗಳಲ್ಲಿ ಒಂದಾದ ಧಾರಾ ಅಡುಗೆ ಎಣ್ಣೆಯ ದರವನ್ನು ತಕ್ಷಣವೇ ಜಾರಿಗೆ ಬರುವಂತೆ ಇಳಿಕೆ ಮಾಡಿದೆ. ಮದರ್ ಡೈರಿ ದರವನ್ನು ಸುಮಾರು 15-20 ರೂಪಾಯಿ ಇಳಿಕೆ ಮಾಡಿದೆ. ಈ ಕ್ರಮವು ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಬೆಲೆ ಕಡಿಮೆಯಾದ ಪರಿಣಾಮ ಮತ್ತು ದೇಶೀಯವಾಗಿ ಬೆಳೆಗಳ ಲಭ್ಯತೆ ಅಧಿಕವಾದ ಕಾರಣದಿಂದಾಗಿ ಅಡುಗೆ ತೈಲದ ಬೆಲೆಯನ್ನು ಇಳಿಸುವ ನಿರ್ಧಾರವನ್ನು ಮದರ್ ಡೈರಿ ಮಾಡಿದೆ.
ಮದರ್ ಡೈರಿ ಪ್ರಕಾರ ಪರಿಷ್ಕೃತ ಎಂಆರ್‌ಪಿ ದರವು ಮುಂದಿನ ವಾರದ ವೇಳೆಗೆ ಮಾರುಕಟ್ಟೆಗೆ ಬರಲಿವೆ. ಮದರ್ ಡೈರಿ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಧಾರಾ ಖಾದ್ಯ ತೈಲಗಳ ಗರಿಷ್ಠ ರಿಟೇಲ್ ಬೆಲೆಯನ್ನು (MRP) ತಕ್ಷಣವೇ ಜಾರಿಗೆ ಬರುವಂತೆ ಲೀಟರ್‌ಗೆ 15-20 ರೂಪಾಯಿಗಳಷ್ಟು ಕಡಿಮೆ ಮಾಡಲಾಗುತ್ತದೆ. ಪರಿಷ್ಕೃತ ಎಂಆರ್‌ಪಿ ದರವು ಮುಂದಿನ ವಾರದ ವೇಳೆಗೆ ಮಾರುಕಟ್ಟೆಗೆ ಬರಲಿದೆ," ಎಂದು ತಿಳಿಸಿದೆ.

"ಸೋಯಾಬೀನ್ ಎಣ್ಣೆ, ಸನ್‌ಪ್ಲವರ್ ಆಯಿಲ್, ಸೂರ್ಯಕಾಂತಿ ಎಣ್ಣೆ ಮತ್ತು ಕಡಲೆಕಾಯಿ ಎಣ್ಣೆಯಂತಹ ಅಡುಗೆ ತೈಲದ ದರವನ್ನು ಕಡಿತ ಮಾಡಲಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದರವು ಕಡಿಮೆಯಾಗಿದೆ. ಹಾಗೆಯೇ ದೇಶೀಯ ಮಾರುಕಟ್ಟೆಯಲ್ಲಿ ಬೆಳೆಗಳ ಲಭ್ಯತೆಯು ಅಧಿಕವಾಗಿದೆ. ಇದಾದ ಕಾರಣದಿಂದಾಗಿ ನಾವು ಖಾದ್ಯ ತೈಲದ ದರ ಇಳಿಕೆ ಮಾಡುತ್ತಿದೆ," ಎಂದು ವಕ್ತಾರರು ಹೇಳಿದ್ದಾರೆ.
ಮದರ್ ಡೈರಿ ಖಾದ್ಯ ತೈಲ ದರ ಹೊಸ ದರ
1 ಲೀಟರ್ ಪ್ಯಾಕ್‌ನಲ್ಲಿರುವ ಧಾರಾ ಸಂಸ್ಕರಿಸಿದ ಸೋಯಾಬೀನ್ ಎಣ್ಣೆಯ ಗರಿಷ್ಠ ರಿಟೇಲ್ ದರವು 170 ರೂಪಾಯಿಯಿಂದ 150 ರೂಪಾಯಿಗೆ ಇಳಿಕೆಯಾಗಿದೆ. ಧಾರಾ ಸಂಸ್ಕರಿಸಿದ ರೈಸ್ ಬ್ರ್ಯಾನ್ ಆಯಿಲ್ ಎಂಆರ್‌ಪಿ ದರವು ಪ್ರತಿ ಲೀಟರ್‌ಗೆ 170 ರೂಗೆ ಇಳಿದಿದೆ. ಧಾರಾ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಲೀಟರ್‌ಗೆ 175 ರೂಪಾಯಿಯಿಂದ 160 ರೂಪಾಯಿಗೆ ಇಳಿಕೆಯಾಗಿದೆ. ಧಾರಾ ಶೇಂಗಾ ಎಣ್ಣೆಯ ಎಂಆರ್‌ಪಿ ಲೀಟರ್‌ಗೆ 255 ರೂಪಾಯಿಯಿಂದ 240 ರೂಪಾಯಿಗೆ ಇಳಿಕೆಯಾಗಿದೆ.
ಖಾದ್ಯ ತೈಲದ ಬೆಲೆಯಲ್ಲಿನ ಇಳಿಕೆಯನ್ನು ಗ್ರಾಹಕರಿಗೆ ವರ್ಗಾವಣೆ ಮಾಡಬೇಕು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ ನವದೆಹಲಿಯಲ್ಲಿ ಪ್ರಮುಖ ಉದ್ಯಮ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಹೇಳಿದ್ದಾರೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಹೇಳಿಕೆಯ ಪ್ರಕಾರ, ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ ಅಂತರರಾಷ್ಟ್ರೀಯ ಬೆಲೆಗಳು ಇಳಿಕೆಯಾಗುತ್ತಿದೆ. ಇದು ಭಾರತಕ್ಕೆ ಅನುಕೂಲವಾಗಿದೆ.
ಸಾಲ್ವೆಂಟ್ ಎಕ್ಸ್‌ಟ್ರಾಕ್ಷನ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಇಎಐ) ಮತ್ತು ಭಾರತೀಯ ತರಕಾರಿ ತೈಲ ಉತ್ಪಾದಕರ ಸಂಘಯ ಪ್ರತಿನಿಧಿಗಳು ಜಾಗತಿಕ ಬೆಲೆಗಳ ಕುಸಿತದ ನಡುವೆ ಅಡುಗೆ ಎಣ್ಣೆಗಳ ರಿಟೇಲ್ ಬೆಲೆಯಲ್ಲಿ ಮತ್ತಷ್ಟು ಕಡಿತದ ಕುರಿತು ಚರ್ಚಿಸಲು ಹಾಜರಿದ್ದರು.
ದರ ಇಳಿಸಲು ಕೇಂದ್ರ ಆಹಾರ ಸಚಿವಾಲಯ ಸೂಚನೆ
ಖಾದ್ಯ ತೈಲದ ಬೆಲೆಯನ್ನು ಕಡಿಮೆ ಮಾಡುವಂತೆ ರಿಟೇಲ್ ವ್ಯಾಪಾರಿಗಳಿಗೆ ಕೇಂದ್ರ ಆಹಾರ ಸಚಿವಾಲಯವು ತಿಳಿಸಿದೆ. ಪ್ರಮುಖವಾಗಿ ಈ ಋತುವಿನಲ್ಲಿ ತಾಳೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳ ಜಾಗತಿಕ ಬೆಲೆಗಳಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಹಾಗೆಯೇ ಸಾಸಿವೆ, ಕಡಲೆಕಾಯಿ ಮತ್ತು ಸೋಯಾಬೀನ್‌ನಂತಹ ದೇಶೀಯ ಎಣ್ಣೆಕಾಳುಗಳ ಉತ್ಪಾದನೆಯು ಅಧಿಕವಾಗಿದೆ. ಇದನ್ನು ಉಲ್ಲೇಖಿಸಿ ಆಹಾರ ಸಚಿವಾಲಯ ದರ ಇಳಿಸಲು ಸೂಚಿಸಿದೆ.


Click it and Unblock the Notifications