ಡಿಜಿಟಲೀಕರಣ ಹೆಚ್ಚಾಗುತ್ತಾ ಸಾಗುತ್ತಿರುವಂತೆ ಸೈಬರ್ ಕ್ರೈಮ್ ಪ್ರಕರಣ ಕೂಡಾ ಹೆಚ್ಚಾಗುತ್ತಾ ಸಾಗುತ್ತಿದೆ. ಜನರು ಆನ್‌ಲೈನ್ ಮೂಲಕವೇ ವಂಚನೆಯನ್ನು ನಡೆಸುತ್ತಿದ್ದಾರೆ. ಸೈಬರ್ ವಂಚನೆಯು ನಿರಂತರವಾಗಿ ಅಪ್‌ಡೇಟ್ ಆಗುತ್ತಿದೆ. ಒಟಿಪಿ, ಸಿವಿವಿ ಸಂಖ್ಯೆಗಳು ಮತ್ತು ಬ್ಯಾಂಕ್ ವಿವರಗಳನ್ನು ವಂಚಕರು ಖದಿಯುತ್ತಿದ್ದಾರೆ.
ವಂಚಕರು ಹೊಸ ಹೊಸ ತಂತ್ರವನ್ನು ರೂಪಿಸಿದ್ದಾರೆ. ಹೊಸ ಹೊಸ ತಂತ್ರವನ್ನು ಬಳಸುತ್ತಿರುವಾಗ ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಎಟಿಎಂಗಳು ಮತ್ತು ಇತರ ಸಾಧನಗಳಿಗೆ ಅನಧಿಕೃತವಾಗಿ ಬಳಕೆ ಮಾಡಲು ಜನರು ಸಿಲಿಕಾನ್ ಫಿಂಗರ್‌ಪ್ರಿಂಟ್‌ಗಳು ಮತ್ತು ಬಯೋಮೆಟ್ರಿಕ್ ಯಂತ್ರಗಳನ್ನು ಬಳಸುತ್ತಿರುವುದು ಕಂಡು ಬರುತ್ತಿದೆ. ಈಗ ಆಧಾರ್ ನಂಬರ್ ಬಳಸಿಕೊಂಡು ಖಾತೆಯ ಹಣ ಎಗಿರಿಸಲಾಗುತ್ತಿದೆ, ಇಲ್ಲಿದೆ ವಿವರ....

ಆಧಾರ್ ಸಂಖ್ಯೆಗಳ ದುರ್ಬಳಕೆ ಮಾಡಲಾಗುತ್ತಿದೆ!
ಆಧಾರ್ ಸಂಖ್ಯೆಗಳನ್ನು ದುರ್ಬಳಕೆ ಮಾಡುವ ಮೂಲಕ ಮತ್ತು ಫಿಂಗರ್‌ಪ್ರಿಂಟ್‌ಗಳನ್ನು ನಕಲು ಮಾಡುವ ಮೂಲಕ, ಈ ವಂಚಕರು ವ್ಯಕ್ತಿಗಳ ಖಾತೆಗಳಿಂದ ಹಣವನ್ನು ಎಗರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ವಂಚನೆಯ ಪ್ರಮಾಣವನ್ನು ಎತ್ತಿ ತೋರಿಸುವ ಇಂತಹ ಕೆಲವು ಪ್ರಕರಣಗಳನ್ನು ಪರಿಶೀಲಿಸೋಣ.
ಖ್ಯಾತ ಯೂಟ್ಯೂಬರ್ ಪುಷ್ಪೇಂದ್ರ ಸಿಂಗ್ ಅವರ ತಾಯಿ ಕೂಡಾ ವಂಚನೆಗೆ ಒಳಗಾಗಿದ್ದಾರೆ. ಆಶ್ಚರ್ಯಕರವಾಗಿ, ಯಾವುದೇ ದೃಢೀಕರಣವಿಲ್ಲದೆಯೇ ಯೂಟ್ಯೂಬರ್ ಪುಷ್ಪೇಂದ್ರ ಸಿಂಗ್ ತಾಯಿಯ ಖಾತೆಯಿಂದ ಹಣವನ್ನು ವಿತ್‌ಡ್ರಾ ಮಾಡಲಾಗಿದೆ. ಇನ್ನು ಬ್ಯಾಂಕ್ ಖಾತೆಯಿಂದ ಯಾವುದೇ ಮೆಸೇಜ್ ಕೂಡಾ ಕಳುಹಿಸಲಾಗಿಲ್ಲ.
ಹೌದು, ಖಾತೆಯಿಂದ ಹಣವನ್ನು ಹಿಂಪಡೆದಿದ್ದರೂ ಕೂಡಾ ಬ್ಯಾಂಕ್‌ನಿಂದ ಯಾವುದೇ ಮೆಸೇಜ್ ಬಂದಿಲ್ಲ. ಪಾಸ್‌ಬುಕ್ ಅನ್ನು ಅಪ್‌ಡೇಟ್ ಮಾಡುವವರೆಗೂ ಬ್ಯಾಂಕ್ ಖಾತೆಯಿಂದ ವಂಚಕರು ಹಣವನ್ನು ಎಗರಿಸಿದ್ದಾರೆ ಎಂಬುವುದು ಯೂಟ್ಯೂಬರ್ ಪುಷ್ಪೇಂದ್ರ ಸಿಂಗ್‌ರ ತಾಯಿಯ ಗಮನಕ್ಕೆ ಬಂದಿಲ್ಲ. ಆಧಾರ್-ಲಿಂಕ್ ಮಾಡಿದ ಫಿಂಗರ್‌ಪ್ರಿಂಟ್ ಬಳಸಿ ವಂಚನೆಯನ್ನು ಮಾಡಲಾಗುತ್ತಿದೆ.
ಈ ವರ್ಷದ ಆರಂಭದಲ್ಲಿ ಹರಿಯಾಣದ ಗುರುಗ್ರಾಮದಲ್ಲಿ ಇಂತಹದ್ದೇ ಘಟನೆ ನಡೆದಿದೆ. ವ್ಯಕ್ತಿಯ ಫಿಂಗರ್‌ಪ್ರಿಂಟ್ ಅನ್ನು ದುರ್ಬಳಕೆ ಮಾಡಿಕೊಂಡು ಖಾತೆಯಿಂದ ಅಕ್ರಮವಾಗಿ ಹಣ ಹಿಂಪಡೆಯಲಾಗಿದೆ. ಆಧಾರ್ ಆ್ಯಪ್ ಮೂಲಕ ಬಯೋಮೆಟ್ರಿಕ್ ಮಾಹಿತಿಯನ್ನು ಲಾಕ್ ಮಾಡುವ ಮೂಲಕ ಅಧಿಕಾರಿಗಳು ವಂಚನೆಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
2022 ರಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಸೈಬರ್ ಅಪರಾಧಗಳ ನಡೆದಿದೆ. ಆಧಾರ್ ಸಕ್ರಿಯಗೊಳಿಸಿದ ಪಾವತಿ ಸೇವೆ (AePS) ವಂಚಕರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಮತ್ತು ಪಟ್ಟಣಗಳಲ್ಲಿ ಅನುಕೂಲಕರ ಸಾಧನವಾಗಿದೆ. ಕೇವಲ ಆಧಾರ್ ಕಾರ್ಡ್ ಮತ್ತು ಫಿಂಗರ್‌ಪ್ರಿಂಟ್‌ನೊಂದಿಗೆ, ಯಾವುದೇ ಹೆಚ್ಚುವರಿ ಮಾಹಿತಿಯಿಲ್ಲದೆ ಹಣವನ್ನು ವಿತ್‌ಡ್ರಾ ಮಾಡಬಹುದು.
ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಕಾರ, ಕೇವಲ ಆಧಾರ್ ಸಂಖ್ಯೆ ಮತ್ತು ಫಿಂಗರ್‌ಪ್ರಿಂಟ್‌ನ ಆಧಾರದ ಮೇಲೆ ಹಣವನ್ನು ವಿತ್‌ಡ್ರಾ ಮಾಡಬಹುದು. AePS ಮೂಲಕ ಕೇವಲ ಹಣ ವಿತ್‌ಡ್ರಾ ಮಾಡಲು ಮಾತ್ರವಲ್ಲ. ಹಣವನ್ನು ವಿತ್‌ಡ್ರಾ ಮಾಡಲು ಮತ್ತು ಖಾತೆಯ ವಿವರಗಳನ್ನು ಪರಿಶೀಲಿಸಲು ಕಾರ್ಯವನ್ನು ನೀಡುತ್ತದೆ.
ಆಧಾರ್ ದುರ್ಬಳಕೆ ತಡೆಯುವುದು ಹೇಗೆ?
1. ನೀವು ಎಲ್ಲ ಸೈಟ್‌ಗಳಲ್ಲಿ ಅಥವಾ ಫಾರ್ಮ್‌ಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸದಿರಿ. ಎಲ್ಲಿ ನಿಮ್ಮ ಗುರುತಿನ ಪುರಾವೆ ಮುಖ್ಯವಾಗಿರುತ್ತದೆಯೋ ಅಲ್ಲಿ ಆಧಾರ್ ಕಾರ್ಡ್ ಬದಲಾಗಿ ಬೇರೆ ಕಾರ್ಡ್‌ಗಳನ್ನು ಬಳಕೆ ಮಾಡಿ. ಅಂದರೆ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮೊದಲಾದವುಗಳನ್ನು ನಿಮ್ಮ ಗುರುತಿನ ಪುರಾವೆಯಾಗಿ ಬಳಕೆ ಮಾಡಿಕೊಳ್ಳಿ.
2. ಅಧಿಕೃತವಾದ ಅಧಿಕಾರಿಗಳಿಗೆ ಅಥವಾ ಅಧಿಕೃತವಾದ ಸಂಸ್ಥೆಗಳಿಗೆ ಮಾತ್ರ ನೀವು ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ನೀಡಿ. ಹಾಗೆಯೇ ನೀವು ಈ ದಾಖಲೆಗಳನ್ನು ನೀಡುವ ಸಂದರ್ಭದಲ್ಲಿ ದಾಖಲೆ ನೀಡಿದ ದಿನಾಂಕವನ್ನು ಉಲ್ಲೇಖಿಸಿ ಸಹಿ ಮಾಡಿ .
3. ಸಾಮಾಜಿಕ ಜಾಲತಾಣದಲ್ಲಿ, ಆನ್‌ಲೈನ್ ಪೋರ್ಟಲ್‌ಗಳಲ್ಲಿ ನಿಮ್ಮ ಪೂರ್ಣ ಹೆಸರನ್ನು ಹಾಕುವುದನ್ನು ತಪ್ಪಿಸಿ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನು ಹಾಕದಿರುವುದು ಉತ್ತಮ.
4. ಸರ್ಕಾರವು ಯಾವುದೇ ಒಂದು ದಾಖಲೆಗೆ ಅಥವಾ ಪೋರ್ಟಲ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಿಲ್ಲವಾದ್ದಲ್ಲಿ, ನೀವಾಗಿಯೇ ಎಲ್ಲಿಯೂ ಲಿಂಕ್ ಮಾಡಿಕೊಳ್ಳಬೇಡಿ ಯಾವುದೇ ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ, ಕೂಡಲೇ ಡಿ-ಲಿಂಕ್ ಮಾಡಿಕೊಳ್ಳಿ.
5. ನಿಮ್ಮ ಹೆಸರಲ್ಲಿ ಯಾವುದೇ ಕ್ರೆಡಿಟ್ ಕಾರ್ಡ್ ಅನ್ನು ನೀಡಲಾಗಿದೆಯೇ ಅಥವಾ ನಿಮ್ಮ ಹೆಸರಲ್ಲಿ ಯಾರಾದರೂ ಸಾಲವನ್ನು ಪಡೆದಿದ್ದಾರೆಯೇ ಎಂದು ತಿಳಿಯಲು ಕ್ರೆಡಿಟ್ ರಿಪೋರ್ಟ್ ಅನ್ನು ಆಗಾಗೆ ಪರಿಶೀಲನೆ ಮಾಡುವುದು ಮುಖ್ಯವಾಗುತ್ತದೆ.
6. ನಿಮ್ಮ ಮೊಬೈಲ್‌ನಲ್ಲಿ ಆಧಾರ್ ಕಾರ್ಡ್‌ನ ಫೋಟೋವನ್ನು ಇಟ್ಟುಕೊಳ್ಳುವುದು ಸುರಕ್ಷಿತವಲ್ಲ. ನಿಮ್ಮ ಫೋನ್ ಕಳೆದುಹೋದಲ್ಲಿ ನಿಮ್ಮ ಫೋನ್‌ನಲ್ಲಿರುವ ನಿಮ್ಮ ಪ್ರಮುಖ ದಾಖಲೆಗಳನ್ನು ಸುಲಭವಾಗಿ ದುರ್ಬಳಕೆ ಮಾಡಲು ಸಾಧ್ಯವಾಗಲಿದೆ.


Click it and Unblock the Notifications